ಬೆಂಗಳೂರು: ಪಾರದರ್ಶಕ ಆಡಳಿತ ಹಾಗೂ ಜನರಿಗೆ ಉತ್ತಮ ಸೇವೆ ನೀಡುವ ಮೂಲಕ ಗಳಿಸುವ ವಿಶ್ವಾಸವೇ ಕ್ರೆಡಿಟ್ ಕೋ-ಆಪರೇ ಟಿವ್ ಸೊಸೈಟಿ ಗಳನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತದೆ. ಹೀಗಾಗಿ ಗ್ರಾಹಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಭಾನುವಾರ ತಿಳಿಸಿದರು.
ಜೆ.ಪಿ.ನಗರದ 1ನೇ ಹಂತದ ಶಾಕಾಂಬರಿ ನಗರದಲ್ಲಿ ಕೆಂಪೇಗೌಡ ಕ್ರೆಡಿಟ್ ಕೋ-ಆಪರೇ ಟಿವ್ ಸೊಸೈಟಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಸ್ಥೆಯು ತನ್ನ ಹೊಣೆಗಾರಿಕೆ ಉಳಿಸಿಕೊಂಡರೆ ಮಾತ್ರ ಲಾಭದ ದಾರಿಯಲ್ಲಿ ಸಾಗಲು ಸಾಧ್ಯ.
ಆ ನಿಟ್ಟಿನಲ್ಲಿ ಸಾಗಲು ಪಾರದರ್ಶಕ ಆಡಳಿತ ತುಂಬಾ ಮುಖ್ಯವಾಗುತ್ತದೆ. 1999ರಲ್ಲಿ ಸ್ಥಾಪನೆಗೊಂಡ ಕೆಂಪೇಗೌಡ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಂದಿನಿಂದಲೂ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿದೆ. ಸಹಕಾರ- ಸಮೃದ್ಧಿ- ಸಹಬಾಳ್ವೆ ಎಂಬ ಧ್ಯೇಯ ವ್ಯಾಖ್ಯೆದೊಂದಿಗೆ ತನ್ನ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸೊಸೈಟಿ ಅಧ್ಯಕ್ಷ ಬಿ.ಕೃಷ್ಣಪ್ಪ ಮಾತ ನಾಡಿ, 18 ವರ್ಷದ ಬಳಿಕ ಸ್ವಂತ ಜಾಗದಲ್ಲಿ ಸೊಸೈಟಿಯು ಕಟ್ಟಡ ನಿರ್ಮಿಸಿಕೊಂಡಿದ್ದು, ಸದಸ್ಯರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು ಇದು ಸಹಕಾರಿಯಾಗಲಿದೆ. ರಾಮನಗರ, ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆ ಸೊಸೈಟಿ ಶಾಖೆ ಪ್ರಾರಂಭಿಸಲಾಗುವುದು.
ಜತೆಗೆ ಎಟಿಎಂ ಕೇಂದ್ರ ತೆರೆಯುವುದು, ಕಡಿಮೆ ಬಡ್ಡಿದರದಲ್ಲಿ ಸಕಾಲಕ್ಕೆ ಗರಿಷ್ಠ ಸಾಲ ನೀಡುವುದು ಸೇರಿದಂತೆ ಹಲವು ಗುರಿ ಹೊಂದಿದ್ದೇವೆ ಎಂದರು. ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ, ಸಂತೋಷ ಭಾರತಿ ಶ್ರೀಪಾದರು, ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಸಿ.ಡಿ.ಜವರೇಗೌಡ, ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್, ಶಾಕಾಂಬರಿನಗರ ವಾರ್ಡ್ ಪಾಲಿಕೆ ಸದಸ್ಯರಾದ ಮಾಲತಿ ಸೋಮಶೇಖರ್ ಹಾಜರಿದ್ದರು.