Advertisement

Ayodhya: ಅಂತಿಮಗೊಂಡ ರಾಮಲಲ್ಲಾ ವಿಗ್ರಹ ಯಾವುದು? ಜ.17ರಂದು ಬಹಿರಂಗ!

12:32 AM Jan 03, 2024 | Team Udayavani |

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮ ಲಲ್ಲಾನ ಮೂರ್ತಿಯನ್ನು ಡಿ.29ರಂದೇ ಆಯ್ಕೆ ಮಾಡಲಾಗಿದೆ. ಆದರೆ ಜ.17ರಂದು ಅಯೋಧ್ಯೆಯಲ್ಲಿ ನಡೆಯುವ “ನಗರ ಯಾತ್ರೆ’ಯ ದಿನವೇ ಅಂತಿಮಗೊಂಡ ವಿಗ್ರಹದ ಕುರಿತು ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

Advertisement

ಮೈಸೂರಿನ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು ಕೆತ್ತಿರುವ ವಿಗ್ರಹವೇ ಅಂತಿಮಗೊಂಡಿದೆ ಎಂಬ ಸುದ್ದಿಗಳು ಹರಿದಾಡಿದ ಬೆನ್ನಲ್ಲೇ ಟ್ರಸ್ಟ್‌ನಿಂದ ಈ ಸ್ಪಷ್ಟನೆ ಹೊರಬಿದ್ದಿದೆ.

“ಡಿ.29ರಂದು ಟ್ರಸ್ಟ್‌ನ ಎಲ್ಲ 11 ಸದಸ್ಯರು ಸಭೆ ಸೇರಿ, ಮತದಾನದ ಮೂಲಕ ಮೂರ್ತಿಯನ್ನು ಅಂತಿಮಗೊಳಿಸಿದ್ದೇವೆ. ಪ್ರತಿಯೊಬ್ಬರು ತಮ್ಮ ಆಯ್ಕೆಯನ್ನು ಲಿಖೀತ ರೂಪದಲ್ಲಿ ಟ್ರಸ್ಟ್‌ನ ಅಧ್ಯಕ್ಷ ಮಹಾಂತ್‌ ನೃತ್ಯ ಗೋಪಾಲ್‌ ದಾಸ್‌ ಅವರಿಗೆ ಸಲ್ಲಿಸಿದ್ದಾರೆ’ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಮತ್ತು ಇತರ ಸಂತರ ಜತೆ ಸಮಾಲೋಚನೆ ನಡೆಸಿ ವಿಗ್ರಹದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮತ್ತೂಂದು ಮೂಲಗಳು ತಿಳಿಸಿವೆ.

ನಗರ ಯಾತ್ರೆವರೆಗೆ ಈ ವಿಗ್ರಹದ ಫೋಟೋ ಅಥವಾ ವೀಡಿಯೋ ಬಹಿರಂಗಪಡಿಸುವುದಿಲ್ಲ. ಅಲ್ಲದೇ ಮೂರು ವಿಗ್ರಹಗಳ ಪೈಕಿ ಯಾವ ವಿಗ್ರಹ ಆಯ್ಕೆ ಆಗಿದೆ ಎಂಬುದನ್ನು ಕೂಡ ಬಹಿರಂಗಪಡಿಸುವುದಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ವಕ್ತಾರ ವಿನೋದ್‌ ಬನ್ಸಾಲ್‌ ಹೇಳಿದ್ದಾರೆ.

ರಾಮರಾಜ್ಯ ಉದಯವಾಗಲಿದೆ: ಪ್ರಧಾನ ಅರ್ಚಕ ದಾಸ್‌ ಭವಿಷ್ಯ

Advertisement

“2024 ಇಸವಿಯು ತುಂಬ ವಿಶೇಷ. ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆಯುತ್ತಿದೆ. ಎಲ್ಲೆಡೆ ದುಃಖ, ನೋವು ಕಡಿಮೆಯಾಗಿ, ಆನಂದ ತುಂಬಲಿದೆ. ಶಾಂತಿಯ ಜತೆಗೆ ರಾಮರಾಜ್ಯ ಉದಯವಾಗಲಿದೆ. 2024ರಲ್ಲಿ ಸಾರ್ವತ್ರಿಕ ಚುನಾವಣೆ ಕೂಡ ನಡೆಯುತ್ತಿದೆ. ರಾಮ ಮಂದಿರ ಲೋಕಾರ್ಪಣೆ ಮತ್ತು ಚುನಾವಣೆ ಎರಡೂ ಶುಭವಾಗಲಿದೆ’ ಎಂದು ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಭವಿಷ್ಯ ನುಡಿದಿದ್ದಾರೆ.

ಮಂದಿರದ ಪ್ರತಿರೂಪಕ್ಕೆ ಭಾರೀ ಬೇಡಿಕೆ

ಮರದಲ್ಲಿ ತಯಾರಿಸಲಾದ ರಾಮ ಮಂದಿರದ ಪ್ರತಿರೂಪಕ್ಕೆ ದೇಶ-ವಿದೇಶಗಳಿಂದ ಬೇಡಿಕೆ ಹೆಚ್ಚಿದೆ. ಅಮೆರಿಕ, ನ್ಯೂಜಿಲ್ಯಾಂಡ್‌ನಿಂದಲೂ ಆರ್ಡರ್‌ಗಳು ಬರುತ್ತಿವೆ. ಭವ್ಯ ಮಂದಿರದ ಮಾದರಿಯನ್ನು ಮರದಲ್ಲಿ ತಯಾರಿಸಲಾಗಿದೆ. ಇದರ ಮೇಲೆ ಹಿಂದಿಯಲ್ಲಿ “ಶ್ರೀ ರಾಮ ಮಂದಿರ್‌ ಆಯೋಧ್ಯೆ’ ಅಥವಾ “ಶ್ರೀ ರಾಮಜನ್ಮಭೂಮಿ ಮಂದಿರ್‌ ಅಯೋಧ್ಯೆ’ ಎಂದು ನಾಮಫ‌ಲಕ ಅಂಟಿಸಲಾಗಿದೆ. ಈ ಪ್ರತಿರೂಪಕ್ಕೆ ಈಗ ಭಾರೀ ಬೇಡಿಕೆ ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next