Advertisement

ಆ್ಯಪ್‌ ಟಾಪ್‌

09:46 AM Apr 05, 2019 | mahesh |

ಸ್ಮಾರ್ಟ್‌ಪೋನ್‌ ಅಂದಮೇಲೆ ಅದಕ್ಕಾಗಿ ಅಸಂಖ್ಯ ಆ್ಯಪ್‌ಗ್ಳು ತಯಾರಾಗಿರುತ್ತವೆ. ಅಷ್ಟೆಲ್ಲ ಆ್ಯಪ್‌ಗ್ಳಲ್ಲಿ ಅನಿವಾರ್ಯವಾದವು, ಉಪಯುಕ್ತವಾದವು, ಕೆಲಸಕ್ಕೆ ಬಾರದವು, ಅಪಾಯಕಾರಿಯಾದವು ಎಲ್ಲವೂ ಇರುತ್ತವೆ. ಈ ಪೈಕಿ ನಮ್ಮ ಫೋನಿನಲ್ಲಿ ಇರಬಹುದಾದ, ಇರಲೇಬೇಕಾದ ಕೆಲವು ಆ್ಯಪ್‌ಗ್ಳು ಯಾವುವು?

Advertisement

ನಾಳೆ (ಏ.3) ಮೊಬೈಲ್‌ ಫೋನಿನ ಹುಟ್ಟುಹಬ್ಬ. ನಲವತ್ತಾರು ವರ್ಷಗಳ ಹಿಂದೆ ಆವಿಷ್ಕಾರವಾದ ಈ ಮೊಬೈಲು ನಮ್ಮ ಬದುಕನ್ನು ಅತ್ಯಂತ ಗಾಢವಾಗಿ ಪ್ರಭಾವಿಸಿರುವ ಸಾಧನಗಳಲ್ಲೊಂದು. ಮೊಬೈಲ್‌ ಫೋನು “ಸ್ಮಾರ್ಟ್‌’ ಆದಮೇಲಂತೂ ನಾವೆಲ್ಲ ಅದನ್ನು ಇನ್ನಷ್ಟು ಹಚ್ಚಿಕೊಂಡು ಒಂದು ಕ್ಷಣವೂ ಬಿಟ್ಟಿರುವುದು ಕಷ್ಟ ಎನ್ನುವ ಸ್ಥಿತಿಗೆ ಬಂದಿದ್ದೇವೆ.

ಸ್ಮಾರ್ಟ್‌ಪೋನ್‌ ಅಂದಮೇಲೆ ಅದಕ್ಕಾಗಿ ಅಸಂಖ್ಯ ಆ್ಯಪ್‌ಗ್ಳು ತಯಾರಾಗಿರುತ್ತವೆ. ಅಷ್ಟೆಲ್ಲ ಆ್ಯಪ್‌ಗ್ಳಲ್ಲಿ ಅನಿವಾರ್ಯವಾದವು, ಉಪಯುಕ್ತವಾದವು, ಕೆಲಸಕ್ಕೆ ಬಾರದವು, ಅಪಾಯಕಾರಿಯಾದವು ಎಲ್ಲವೂ ಇರುತ್ತವೆ. ಈ ಪೈಕಿ ನಮ್ಮ ಫೋನಿನಲ್ಲಿ ಇರಬಹುದಾದ, ಇರಲೇಬೇಕಾದ ಕೆಲವು ಆ್ಯಪ್‌ಗ್ಳು ಯಾವುವು? ಈ ಪ್ರಶ್ನೆಗೆ ಉತ್ತರಿಸುವ ಒಂದು ಪ್ರಯತ್ನ ಇಲ್ಲಿದೆ. ಈ ಪಟ್ಟಿಯಲ್ಲಿರುವ ಆಂಡ್ರಾಯ್ಡ್ ಆ್ಯಪ್‌ಗ್ಳಲ್ಲಿ ಎಷ್ಟು ನಿಮ್ಮ ಫೋನಿನಲ್ಲಿವೆ ನೋಡಿ.

ಮೊಬೈಲಿನಲ್ಲಿ ಕನ್ನಡ
ತಂತ್ರಜ್ಞಾನ ಯಾವುದೇ ಆಗಲಿ, ಅದು ಹೆಚ್ಚು ಆಪ್ತವೆನಿಸುವುದು ನಮ್ಮ ಭಾಷೆಯಲ್ಲಿ ಸಿಕ್ಕಿದಾಗ ಮಾತ್ರ. ಸ್ಮಾರ್ಟ್‌ಫೋನ್‌ಗಳಿಗೆ ಕನ್ನಡ ಕಲಿಸಲು ಬೇಕಾದ ಆ್ಯಪ್‌ಗ್ಳು ಇದೀಗ ಸಾಕಷ್ಟು ಸಂಖ್ಯೆಯಲ್ಲಿ ದೊರಕುತ್ತವೆ. ಕನ್ನಡ ಅಕ್ಷರಗಳನ್ನು ಮೂಡಿಸಲು ಕೀಲಿಮಣೆ ತಂತ್ರಾಂಶವಾಗಿ “Google Indic Keyboard’, “Just Kannada Keyboard’ ಮುಂತಾದವನ್ನು ಬಳಸಬಹುದು. ಗೂಗಲ್‌ನ ಜನಪ್ರಿಯ ಕೀಲಿಮಣೆ ತಂತ್ರಾಂಶವಾದ Gboard & the Google Keyboard’ ಬಳಸಿದರಂತೂ ಮೊಬೈಲಿಗೆ ಉಕ್ತಲೇಖನ ಕೊಟ್ಟು ಬರೆಸುವುದು (ವಾಯ್ಸ… ಟೈಪಿಂಗ್‌) ಹಾಗೂ ಪರದೆಯ ಮೇಲೆ ಅಕ್ಷರಗಳನ್ನು ಬರೆದು ಅರ್ಥಮಾಡಿಸುವುದು (ಹ್ಯಾಂಡ್‌ರೈಟಿಂಗ್‌) ಕೂಡ ಸಾಧ್ಯವಾಗುತ್ತದೆ.

ಭಾಷೆಗಳ ನಡುವೆ ಆ್ಯಪ್‌ ಸೇತುವೆ
ಬೇರೆಬೇರೆ ಭಾಷೆ ಹಾಗೂ ಸಂಸ್ಕೃತಿಗಳೊಡನೆ ವ್ಯವಹರಿಸುವುದು ಈಗ ತೀರಾ ಸಾಮಾನ್ಯವಾಗಿದೆ. ಇಂಥ ಸನ್ನಿವೇಶಗಳಲ್ಲಿ ಅನೇಕ ಆ್ಯಪ್‌ಗ್ಳು ನಮ್ಮ ನೆರವಿಗೆ ಬರಬಲ್ಲವು. ಇತರ ಭಾಷೆಗಳ ಪಠ್ಯ, ಧ್ವನಿ ಅಥವಾ ಪಠ್ಯದ ಚಿತ್ರವನ್ನು ನಮಗೆ ಬೇಕಾದ ಭಾಷೆಗೆ ಅನುವಾದಿಸಿಕೊಡುವ “Google Translate’ ಇಂಥ ಆ್ಯಪ್‌ಗ್ಳಿಗೊಂದು ಉದಾಹರಣೆ. “Hello English: Learn English’ ಬಳಸಿಕೊಂಡು ಕನ್ನಡ ಭಾಷೆಯ ಮೂಲಕವೇ ಇಂಗ್ಲಿಷ್‌ ಕಲಿಯುವುದು ಸಾಧ್ಯ. ವಿದೇಶಿ ಭಾಷೆಗಳನ್ನೂ ಕಲಿಯುವ ಆಸಕ್ತಿಯಿದೆ ಎನ್ನುವುದಾದರೆ “Duolingo: Learn Languages Free’, “Learn Languages with Memrise’, “Rosetta Stone: Learn Languages’ ಮುಂತಾದವನ್ನು ಬಳಸಬಹುದು.

Advertisement

ವ್ಯವಸ್ಥಿತರಾಗಿರಲು ಆ್ಯಪ್‌ ನೆರವು
ಮಾಹಿತಿ ಮಹಾಪೂರದ ಈ ದಿನಗಳಲ್ಲಿ ನಮ್ಮ ಸಂಪರ್ಕಕ್ಕೆ ಬರುವ ಮಾಹಿತಿಯನ್ನು ಸಮರ್ಪಕವಾಗಿ ನಿಭಾಯಿಸುವುದು ಬಹಳ ಕಷ್ಟ. ಇತರ ಅನೇಕ ಉದ್ದೇಶಗಳಂತೆ ಇಲ್ಲೂ ಮೊಬೈಲ್‌ ಆ್ಯಪ್‌ಗ್ಳ ಸಹಾಯ ಪಡೆದುಕೊಳ್ಳುವುದು ಸಾಧ್ಯ. ವಿವಿಧ ಜಾಲತಾಣಗಳಲ್ಲಿ ನಾವು ನೋಡುವ, ಮತ್ತೂಮ್ಮೆ ಬೇಕಾಗಬಹುದು ಅನ್ನಿಸುವ ಮಾಹಿತಿಯನ್ನು ಉಳಿಸಿಟ್ಟುಕೊಂಡು ಬೇಕಾದಾಗ ಬಳಸಲು “Pocket: Save. Read. Grow.’ ಆ್ಯಪ್‌ ಅನ್ನು ಬಳಸಬಹುದು. ಡಿಜಿಟಲ್‌ ಕಡತಗಳ ಜೊತೆ ಭೌತಿಕ ಕಡತಗಳೂ ಇರುತ್ತವಲ್ಲ, ಅವನ್ನೆಲ್ಲ ಡಿಜಿಟಲ್‌ ರೂಪಕ್ಕೆ ತಂದು ಜೋಡಿಸಿಟ್ಟುಕೊಳ್ಳಲು “CamScanner & Phone PDF Creator’ ಆ್ಯಪ್‌ ನೆರವಾಗುತ್ತದೆ.

ಜಾಗ ಇಲ್ಲ ಅನ್ನಬೇಡಿ!
ನಾವು ಬಳಸುವ, ಉಳಿಸಿಡುವ ಮಾಹಿತಿಯ ಪ್ರಮಾಣ ಹೇಗೆ ಜಾಸ್ತಿಯಾಗುತ್ತಿದೆಯೆಂದರೆ ಮೊಬೈಲಿನಲ್ಲಿ ಎಷ್ಟು ಜಾಗವಿದ್ದರೂ ಸಾಕಾಗುವುದೇ ಇಲ್ಲ. ಈ ಪರಿಸ್ಥಿತಿ ತಪ್ಪಿಸಲು “Google Drive’, “Dropbox’, “Amazon Drive’ ಮುಂತಾದ ಕ್ಲೌಡ್‌ ಸ್ಟೋರೇಜ್‌ ಆ್ಯಪ್‌ಗ್ಳನ್ನು ಬಳಸಬಹುದು. ಅವುಗಳ ಮೂಲಕ ಉಳಿಸುವ ಮಾಹಿತಿ ಅಂತರಜಾಲದಲ್ಲಿರುವುದರಿಂದ ಬೇರೆ ಸಾಧನಗಳ ಮೂಲಕವೂ ನಾವು ಅದನ್ನು ಪಡೆದುಕೊಳ್ಳಬಹುದು. ಉಚಿತವಾಗಿ ಕೊಟ್ಟ ಸ್ಥಳಾವಕಾಶ ಮುಗಿದುಹೋದರೆ ಹೆಚ್ಚುವರಿ ಸ್ಥಳಾವಕಾಶವನ್ನು ಖರೀದಿಸುವುದೂ ಸಾಧ್ಯ. ಮೊಬೈಲಿನಲ್ಲಿ ಸೇರಿಕೊಂಡಿರುವ ಅನಗತ್ಯ ಕಡತಗಳನ್ನು ಅಳಿಸಿ ಜಾಗ ಮಾಡಿಕೊಳ್ಳುವುದಾದರೆ ಅದಕ್ಕೆ “Files by Google: Clean up space on your phone’ ಬಳಸಬಹುದು.

ಕ್ಲಿಕ್‌ ಮಾಡಿ ನೋಡಿ
ಸಾಂಪ್ರದಾಯಿಕ ಕ್ಯಾಮೆರಾಗಳನ್ನೇ ಹಿಂದಿಕ್ಕುವ ಮಟ್ಟಿಗೆ ಮೊಬೈಲ್‌ ಕ್ಯಾಮೆರಾಗಳು ಈಗ ಜನಪ್ರಿಯವಾಗಿವೆ. ಮೊಬೈಲ್‌ ಫೋನುಗಳಲ್ಲಿರುವ ಕ್ಯಾಮೆರಾ ಗುಣಮಟ್ಟವೂ ದಿನೇದಿನೇ ಜಾಸ್ತಿಯಾಗುತ್ತಿದೆ. ಮೊಬೈಲಿನಲ್ಲಿ ಸೆರೆಹಿಡಿದ ಚಿತ್ರಗಳನ್ನು ಎಡಿಟ್‌ ಮಾಡುವ, ಇನ್ನಷ್ಟು ಚೆಂದಗಾಣಿಸುವ ಕೆಲಸವನ್ನೂ ಮೊಬೈಲ್‌ ಆ್ಯಪ್‌ಗ್ಳೇ ಮಾಡಿಕೊಡುತ್ತವೆ. ಇಂತಹ ಆ್ಯಪ್‌ಗ್ಳ ಪೈಕಿ “Snapseed’ ಹಾಗೂ “Adobe Photoshop Express: Photo Editor Collage Maker’ ಗಮನಾರ್ಹ ಹೆಸರುಗಳು. ಸೆರೆಹಿಡಿದ ಚಿತ್ರಗಳನ್ನು ಬೇಕಾದಂತೆ ಬದಲಿಸಲು, ಅವನ್ನೆಲ್ಲ ಜೋಡಿಸಿ ಕೊಲಾಜ್‌ ಮಾಡಿ ಹಂಚಿಕೊಳ್ಳಲು ಈ ಆ್ಯಪ್‌ಗ್ಳು ನೆರವಾಗಬಲ್ಲವು.

ಓದುವ- ಕೇಳುವ ಸಮಯ
ಮೊಬೈಲಿನಲ್ಲಿ ಹಾಡು ಕೇಳುವುದು, ವೀಡಿಯೋಗಳನ್ನು, ಟೀವಿ ಕಾರ್ಯಕ್ರಮಗಳನ್ನು ವೀಕ್ಷಿಸುವುದು ನಮಗೆಲ್ಲ ಗೊತ್ತೇ ಇದೆ. ಇದರ ಜೊತೆಗೆ ಪುಸ್ತಕಗಳನ್ನು ಓದಲು, ಧ್ವನಿರೂಪದ ಮಾಹಿತಿ ಕೇಳಲೂ ಮೊಬೈಲನ್ನು ಬಳಸಬಹುದು. ಪುಸ್ತಕಗಳಿಗಾಗಿ “Amazon Kindle’ನಂಥ ಖಾಸಗಿ ಆ್ಯಪ್‌ಗ್ಳ ಜೊತೆಗೆ “National Digital Library of India’ನಂತಹ ಸಂಪೂರ್ಣ ಉಚಿತ ಸವಲತ್ತುಗಳೂ ಇವೆ. ಇದೇರೀತಿ “Bharatavani’ ಆಪ್‌ ಮೂಲಕ ಹಲವು ನಿಘಂಟುಗಳನ್ನು ಬಳಸಬಹುದು. ಕನ್ನಡವೂ ಸೇರಿ ಹಲವು ಭಾಷೆಗಳಲ್ಲಿ ಧ್ವನಿರೂಪದ ಕಾರ್ಯಕ್ರಮಗಳನ್ನು (ಪಾಡ್‌ಕಾಸ್ಟ್‌) ಕೇಳಲು “Google Podcasts: Discover free trending podcasts’ ಒಳ್ಳೆಯ ಆಯ್ಕೆ.

ಮೊಬೈಲಿನೊಳಗೆ ನೋಟ್‌ಬುಕ್ಕು
ನೂರೆಂಟು ಕೆಲಸಗಳಲ್ಲಿ ಬಿಜಿಯಾಗಿರುವವರಿಗೆ ಎಲ್ಲ ವಿವರಗಳನ್ನೂ ಸರಿಯಾಗಿ ನೆನಪಿಟ್ಟುಕೊಳ್ಳುವುದೇ ಒಂದು ದೊಡ್ಡ ಕೆಲಸ. ಕಾಲೇಜಿನ ಮನೆಗೆಲಸದಿಂದ ಮನೆಗೆ ತರಬೇಕಾದ ದಿನಸಿಯವರೆಗೆ ನೂರೆಂಟು ವಿಷಯಗಳನ್ನು ಮೊಬೈಲಿನಲ್ಲಿ ಬರೆದಿಟ್ಟುಕೊಳ್ಳಲು ನೋಟ್‌ಪುಸ್ತ¤ಕದಂತೆ ಕೆಲಸಮಾಡುವ ಹಲವು ಆ್ಯಪ್‌ಗ್ಳಿವೆ. ಇಂತಹ ಆ್ಯಪ್‌ಗ್ಳಿಗೆ “Google Keep & Notes and Lists’ ಹಾಗೂ “Evernote’ ಎರಡು ಉದಾಹರಣೆಗಳು.

ಫೋನ್‌ ಬಳಕೆ ಮಿತಿಮೀರದಿರಲಿ
ನಮ್ಮ ಹಲವು ಕೆಲಸಗಳನ್ನು ಸುಲಭಮಾಡುವಲ್ಲಿ ಮೊಬೈಲಿನ ಪಾತ್ರ ಮಹತ್ವದ್ದು. ಹಾಗೆಂದು ಮೊಬೈಲಿನ ವಿಪರೀತ ಬಳಕೆಯೂ ಒಳ್ಳೆಯದೇನಲ್ಲ. ದಿನವೂ ನಾವು ಮೊಬೈಲನ್ನು ಎಷ್ಟುಹೊತ್ತು ಬಳಸುತ್ತಿದ್ದೇವೆ, ಯಾವ ಆ್ಯಪ್‌ನಲ್ಲಿ ಎಷ್ಟು ಸಮಯ ಕಳೆಯುತ್ತಿದ್ದೇವೆ ಎನ್ನುವುದನ್ನು ತಿಳಿದುಕೊಳ್ಳಲು ನಮಗೆ “AntiSocial: phone addiction’ನಂಥ ಆ್ಯಪ್‌ಗ್ಳು ನೆರವಾಗಬಲ್ಲವು. ಪೂರ್ವನಿರ್ಧಾರಿತ ಅವಧಿಗಿಂತ ಹೆಚ್ಚು ಸಮಯ ಬಳಸಿದರೆ ಎಚ್ಚರಿಕೆ ನೀಡುವ ಸೌಲಭ್ಯ ಕೂಡ ಫೇಸ್‌ಬುಕ್‌, ಇನ್‌ಸ್ಟಗ್ರಾಮ್‌ ಹಾಗೂ ಯೂಟ್ಯೂಬ್‌ ಆ್ಯಪ್‌ಗ್ಳಲ್ಲಿದೆ. ಇದನ್ನೆಲ್ಲ ಬಳಸಿಕೊಂಡು ನಮ್ಮ ಮೊಬೈಲ್‌ ಬಳಕೆಯ ಮೇಲೆ ಸ್ವನಿಯಂತ್ರಣ ಸಾಧಿಸಿಕೊಳ್ಳುವುದು ನಿಜಕ್ಕೂ ಒಳ್ಳೆಯದು.

ವ್ಯಾಯಾಮ ಮಾಡಿಸುವ “ಆ್ಯಪ್ತಮಿತ್ರ’
ಮೊಬೈಲಿನಿಂದ ಜನ ಸೋಮಾರಿಯಾದರು ಎನ್ನುವ ಅಪವಾದವಿದೆಯಲ್ಲ, ಅದನ್ನು ಹೋಗಲಾಡಿಸಲೂ ಮೊಬೈಲನ್ನೇ ಬಳಸಿಕೊಳ್ಳುವುದು ಸಾಧ್ಯ. ಓಡುವುದಿರಲಿ, ಸೈಕಲ್‌ ಹೊಡೆಯುವುದೇ ಇರಲಿ – ವ್ಯಾಯಾಮ ಮಾಡುವ ಆಸಕ್ತಿಯಿರುವವರಿಗೆ ನೆರವಾಗುವ ಅನೇಕ ಆ್ಯಪ್‌ಗ್ಳು ಪ್ಲೇಸ್ಟೋರಿನಲ್ಲಿ ಸಿಗುತ್ತವೆ. ಓಡುವುದನ್ನು ಕ್ರಮವಾಗಿ ಅಭ್ಯಾಸಮಾಡಿಕೊಳ್ಳಲು “Nike Run Club’ನಂಥ ಆ್ಯಪ್‌ಗ್ಳು ನೆರವಾದರೆ ನಾವು ಎಷ್ಟು ಸೈಕಲ್‌ ಹೊಡೆಯುತ್ತಿದ್ದೇವೆ ಎನ್ನುವುದರ ಲೆಕ್ಕ ಇಡಲು “Strava Training: Track Running, Cycling Swimming’ ಸಹಾಯ ಮಾಡುತ್ತದೆ.

ಡೌನ್‌ಲೋಡ್‌ಗೂ ಮುನ್ನ…
 1. ಮೊಬೈಲ್‌ ಆ್ಯಪ್‌ಗ್ಳು ಸರಿಯಾಗಿ ಕೆಲಸಮಾಡಬೇಕಾದರೆ ಅವಕ್ಕೆ ನಾವು ಹಲವು ಬಗೆಯ ಅನುಮತಿಗಳನ್ನು ನೀಡಬೇಕಾಗುತ್ತದೆ. ನೀವು ಬಳಸಲು ಹೊರಟಿರುವ ಆ್ಯಪ್‌ ಏನೆಲ್ಲ ಅನುಮತಿ ಕೇಳುತ್ತಿದೆ ಎನ್ನುವುದನ್ನು ಸರಿಯಾಗಿ ಗಮನಿಸಿಕೊಳ್ಳುವುದು ಒಳ್ಳೆಯ ಅಭ್ಯಾಸ.

2. ಮೊಬೈಲ್‌ ಆ್ಯಪ್‌ಗ್ಳನ್ನು ಪ್ಲೇ ಸ್ಟೋರಿನಿಂದ ಮಾತ್ರವೇ ಡೌನ್‌ಲೋಡ್‌ ಮಾಡಿಕೊಳ್ಳುವುದು ಒಳ್ಳೆಯದು. ಇತರ ಮೂಲಗಳಿಂದ ಪಡೆದ ಆ್ಯಪ್‌ಗ್ಳನ್ನು ನಿಮ್ಮ ಫೋನಿನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಕುತಂತ್ರಾಂಶಗಳಿಗೆ ಮುಕ್ತ ಆಹ್ವಾನ ನೀಡಿದಂತೆ ಎನ್ನುವುದು ಯಾವಾಗಲೂ ನಮ್ಮ ಗಮನದಲ್ಲಿರಬೇಕು.

ಟಿ.ಜಿ. ಶ್ರೀನಿಧಿ

Advertisement

Udayavani is now on Telegram. Click here to join our channel and stay updated with the latest news.

Next