Advertisement

ದುಂದು ವೆಚಕ್ಕೆ ವೇದಿಕೆ ಯಾಗಲಿದೆಯೇ ದಶಮಾನೋತ್ಕವ್ಸ ?

02:07 PM Jan 11, 2018 | |

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಸ್ವತಂತ್ರ ಜಿಲ್ಲೆಯಾಗಿ ಕಳೆದ ಆ.23ಕ್ಕೆ ದಶಕ ತುಂಬಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿರುವ ಮೂರು ದಿನಗಳ ದಶಮಾನೋತ್ಸವ ದುಂದು ವೆಚ್ಚಕ್ಕೆ ವೇದಿಕೆಯಾಗಲಿದೆಯೇ ಎಂಬ ಪ್ರಶ್ನೆ‌ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಬರಗಾಲದ ನೆಪವೊಡ್ಡಿ ಕಳೆದ ಆಗಸ್ಟ್‌ನಲ್ಲಿ ಜಿಲ್ಲಾಡಳಿತ ಆವರಣದಲ್ಲಿ ಸಸಿ ನೆಟ್ಟು ಸಾಂಕೇತಿಕವಾಗಿ ದಶಮಾನೋತ್ಸವ ಆಚರಿಸಿದ್ದ ಜಿಲ್ಲಾಡಳಿತ ಇದೀಗ ಫೆ. 2 ರಿಂದ 4 ರವರೆಗೂ 3 ದಿನಗಳ ಕಾಲ ಜಿಲ್ಲಾ ದಶಮಾನೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಆದ್ಧೂರಿ, ವೈಭವದಿಂದ ಆಚರಿಸಲು ತೀರ್ಮಾನಿಸಿದ್ದು, ಕಾರ್ಯಕ್ರಮಕ್ಕೆ ಕೋಟ್ಯಂತರ ರೂ. ವೆಚ್ಚ ಮಾಡುತ್ತಿರುವುದರಿಂದ ಜಿಲ್ಲಾಡಳಿತ ದಶಮಾನೋತ್ಸವದ ಹೆಸರಿನಲ್ಲಿ ದುಂದು ವೆಚ್ಚಕ್ಕೆ ಕೈ ಹಾಕಿದಿಯೇ ಎಂಬ ಅನುಮಾನ ಮೂಡಿದೆ. ಮೂಲಗಳ ಪ್ರಕಾರ ಜಿಲ್ಲಾಡಳಿತ 4 ಕೋಟಿ ರೂ. ಗೂ ಮೀರಿ ಹಣವನ್ನು ವೆಚ್ಚ ಮಾಡುತ್ತಿದೆ ಎಂದು ಆರೋಪಗಳು ಕೇಳಿ ಬರುತ್ತಿವೆ.

ಗುಟ್ಟು ಬಿಡದ ಜಿಲ್ಲಾಡಳಿತ: ದಶಮಾನೋತ್ಸವಕ್ಕೆ ಖರ್ಚು ಮಾಡುತ್ತಿರುವ ಒಟ್ಟಾರೆ ವೆಚ್ಚದ ಕುರಿತು ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕ ಮಾಹಿತಿ ದೊರೆಯಲಿಲ್ಲ. ಅಂದಾಜು ವೆಚ್ಚ ಎಷ್ಟು ಎಂಬ ಪ್ರಶ್ನೆಗೂ ಜಿಲ್ಲಾಡಳಿತದಿಂದ ಉತ್ತರ ಸಿಗಲಿಲ್ಲ. 

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ದಶಮಾನೋತ್ಸವಕ್ಕೆ ಖರ್ಚಾಗುತ್ತಿರುವ ಅಂದಾಜು ವೆಚ್ಚದ ಬಗ್ಗೆ ಇನ್ನೂ ನಿಖರ ಮಾಹಿತಿ ಗೊತ್ತಿಲ್ಲ. ಕಾರ್ಯಕ್ರಮಕ್ಕೆ ವಿಶೇಷ ಅನು ದಾನ ಬಿಡುಗಡೆ ಮಾಡುವಂತೆ ಕೋರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಮೂಲಕ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಲಾಂಛನ ರಚನೆಗೆ ಟೆಂಡರ್‌: ದಶಮಾನೋತ್ಸವಕ್ಕೆ ಲೋಗೋ ರಚಿಸಿಲು ಜಿಲ್ಲಾಡಳಿತ ಕಾರ್ಪೊರೇಟ್‌ ಕಂಪನಿಗೆ ವಹಿಸಿದೆ. ಇನ್ನೂ ಜಿಲ್ಲಾ ಕೇಂದ್ರದ ಜೊತೆಗೆ ಪ್ರತಿ ತಾಲೂಕಿನಲ್ಲಿಯೂ ಉತ್ಸವ ಆಚರಣೆಗೆ ಸಿದ್ಧತೆ ನಡೆಸುತ್ತಿರುವ ಜಿಲ್ಲಾಡಳಿತ ತರಾತುರಿಯಲ್ಲಿ ದಶಮಾನೋತ್ಸವ ಸ್ಮರಣ ಸಂಚಿಕೆಯನ್ನು ರೂಪಿಸುತ್ತಿದೆ. ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ಜಿಲ್ಲೆಯ ಸಂಘ, ಸಂಸ್ಥೆಗಳೊಂದಿಗೆ ಯಾವುದೇ ಸಭೆ ನಡೆಸಿಲ್ಲ. ಸಾಹಿತಿ, ಚಿಂತಕರನ್ನು ಪರಿಗಣಿಸಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ಮೂರು ದಿನಗಳ ಕಾಲ ದಶಮಾನೋತ್ಸವ ಆಚರಿಸುವ ಅವಶ್ಯಕತೆ ಏನು ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ

Advertisement

ಕನ್ನಡ, ಸಂಸ್ಕೃತಿ ಇಲಾಖೆಯಿಂದಲೇ 50 ಲಕ್ಷಕ್ಕೆ ಪ್ರಸ್ತಾವನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂದರಿಂದಲೇ ಜಿಲ್ಲಾ ದಶಮಾನೋತ್ಸವಕ್ಕೆ 50 ಲಕ್ಷ ರೂ.ಕೋರಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಉಳಿ ದಂತೆ ಜಿಲ್ಲೆಯ ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಮತ್ತಿತರ ಇಲಾಖೆಗಳ ಮೂಲಕ ಎಷ್ಟು ಮೊತ್ತದ ಅನುದಾನದ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರಬಹುದೆಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿದೆ.

ಯಾವ ಪುರುಷಾರ್ಥಕ್ಕೆ ದಶಮಾನೋತ್ಸವ?
ಚಿಕ್ಕಬಳ್ಳಾಪುರ ಜಿಲ್ಲೆ ಕಳೆದ 10 ವರ್ಷಗಳಿಂದ ಹೇಳಿಕೊಳ್ಳುವ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಬರೀ ಕಟ್ಟಡಗಳು ತಲೆ ಎತ್ತಿರುವುದು ಬಿಟ್ಟರೆ ಇಲ್ಲಿನ ಜನರ ಜೀವನ ಮಟ್ಟ ಸುಧಾರಣೆ ಆಗಿಲ್ಲ. ಬಡತನ, ಅಸ್ಪೃಶ್ಯತೆ ಹಾಗೆ ಇದೆ. ಹೊಸ ಜಿಲ್ಲೆಗಳಾಗಿ ರೂಪಗೊಂಡ ಬೇರೆ ಜಿಲ್ಲೆಗಳು ದಶಮಾನೋತ್ಸವ ಆಚರಣೆ ಮಾಡುತ್ತಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಮಾತ್ರ ದಶಮಾನೋತ್ಸವ ಆಚರಣೆ ಏಕೆ ಬೇಕು?, ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹೆಸರಿನಲ್ಲಿ ದುಂದು ವೆಚ್ಚ ಮಾಡುತ್ತಾರೆ. ಇದು ಮೊದಲು ನಿಲ್ಲಬೇಕು  ಜಿ.ವಿ.ಶ್ರೀರಾಮರೆಡ್ಡಿ, ಮಾಜಿ ಶಾಸಕ

„ ಕಾಗತಿ ನಾಗರಾಜ

Advertisement

Udayavani is now on Telegram. Click here to join our channel and stay updated with the latest news.

Next