Advertisement

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

04:05 PM Apr 27, 2024 | Team Udayavani |

ಪ್ರಕೃತಿಯ ನಾನಾ ಬಗೆಯ ಸೌಂದರ್ಯಗಳಲ್ಲೊಂದು ಹೂಗಳು ಕೂಡ ಹೌದು. ಅಂತಹ ಹೂವುಗಳಲ್ಲಿ ಅದೆಷ್ಟೋ ಪುಷ್ಪಗಳು ವಿಧವಿಧವಾದ ಬಣ್ಣಗಳಿಂದ, ಆಕಾರಗಳಿಂದ ಮತ್ತು ಸುಗಂಧದಿಂದ ಕೂಡಿದ್ದು, ವಿಶೇಷವಾಗಿರುತ್ತದೆ. ಕೇಸರಿ ಬಣ್ಣದ ತೊಟ್ಟುಗಳು, ಬಿಳಿ ಬಣ್ಣದ ದಳಗಳು ಹಾಗೂ ಅತ್ಯಂತ ಸುವಾಸನೆಯನ್ನು ಬೀರುತ್ತಾ, ಅತ್ಯಂತ ವಿಶೇಷವನ್ನು ಹೊಂದಿರುವಂತಹ ಹೂಗಳಲ್ಲಿ ” ರಾತ್ರಿ ಸುಂದರಿ ” ಎಂದು ಕರೆಯಲ್ಪಡುವ ಈ ಹೂವಿನ ಹೆಸರು ಪಾರಿಜಾತ.

Advertisement

ಸಾಮಾನ್ಯವಾಗಿ ಎಲ್ಲಾ ಹೂಗಳಂತೆ ಮುಂಜಾನೆ ಅರಳಿ ಮುಸ್ಸಂಜೆ ಬಾಡುವುದಿಲ್ಲ. ಬದಲಾಗಿ ಇದು ಸೂರ್ಯ ಮುಳುಗಿದ ನಂತರ ಅರಳಿ ಸೂರ್ಯ ಹುಟ್ಟುವ ಮೊದಲೇ ಉದುರುತ್ತದೆ. ಇದರಿಂದಾಗಿ ಈ ಹೂವಿಗೆ ” ನೈಟ್ ಜಾಸ್ಮಿನ್ ” ಮತ್ತು “ಕೋರಲ್ ಜಾಸ್ಮಿನ್” ಎಂಬ ಹೆಸರಿದೆ.

ಪಾರಿಜಾತದ ಹೂಗಳು ಅತ್ಯಂತ ಮೃದುವಾದ ಎಸಳುಗಳನ್ನು ಹೊಂದಿರುತ್ತದೆ. ಇದರ ವೈಜ್ಞಾನಿಕ ಹೆಸರು ನಿಕ್ಟಾಂತಸ್ ಆರ್ಬೋ – ಟ್ರಿಸ್ಟಿಸ್. ಪಾರಿಜಾತವು ಎಲ್ಲಾ ಹೂವಿನಂತೆ ಸೂರ್ಯನ ಕಿರಣಗಳನ್ನು ತಡೆಯುವುದಿಲ್ಲ. ಇದರ ಹೂ, ಮರ ತುಂಬಾ ಸೂಕ್ಷ್ಮವಾಗಿರುವುದರಿಂದ ಇದಕ್ಕೆ “ಸೊರಗಿದ ಮರ” ಅಥವಾ “ಟ್ರಿ ಆಫ್ ಸ್ಯಾಡ್ನೆಸ್” ಎಂಬ ಹೆಸರು ಕೂಡ ಇದೆ.

ಆಧ್ಯಾತ್ಮಿಕ ಹಿನ್ನೆಲೆ

ಪಾರಿಜಾತದ ಮಹತ್ವವನ್ನು ನಾವು ಪುರಾಣದಲ್ಲಿಯೇ ಕಾಣಬಹುದು. ಒಮ್ಮೆ ನಾರದ ಮಹರ್ಷಿಗಳು ಸ್ವರ್ಗಲೋಕಕ್ಕೆ ತೆರಳುವ ಸಂದರ್ಭದಲ್ಲಿ ಉದ್ಯಾನವನದ ಬಳಿ ಅತ್ಯಂತ ಸುಂದರವಾದ ಪರಿಮಳವನ್ನು ಬೀರುತ್ತಿದ್ದ ಪಾರಿಜಾತ ಪುಷ್ಪವನ್ನು ನೋಡುತ್ತಾರೆ. ಅಲ್ಲಿನ ಅಪ್ಸರೆಯರು ಕೂಡ ವಿಶ್ರಾಂತಿ ತೆಗೆದುಕೊಳ್ಳಲು ಪಾರಿಜಾತ ಮರದ ಬಳಿ ಬರುತ್ತಿದ್ದರು. ಸುಂದರವಾದ ಪರಿಮಳವನ್ನು ಹೊಂದಿದ್ದ ಪಾರಿಜಾತಕ್ಕೆ ಮಾರು ಹೋದ ನಾರದರು ಇಂದ್ರ ದೇವರಲ್ಲಿ ಅನುಮತಿ ಪಡೆದು, ಪಾರಿಜಾತ ಹೂಗಳನ್ನು ಆರಿಸಿ, ಹೂವಿನ ಮಾಲೆಯನ್ನು ಹೆಣೆದು ಆ ಮಾಲೆಯನ್ನು ಶ್ರೀಕೃಷ್ಣನಿಗೆ ಅರ್ಪಿಸಲು ದ್ವಾರಕೆಗೆ ಹೋಗುತ್ತಾರೆ. ದ್ವಾರಕೆಯಲ್ಲಿ ಶ್ರೀಕೃಷ್ಣ ಮತ್ತು ರುಕ್ಮಿಣಿಯರು ಉಯ್ಯಾಲೆಯಲ್ಲಿ ಜೊತೆಯಾಗಿ ಕುಳಿತಿರುವಾಗ ಆಗಮಿಸಿದ ನಾರದರು ತಮ್ಮ ಕೈಯಾರೆ ಕಟ್ಟಿದ ಹೂವಿನ ಮಾಲೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸುತ್ತಾರೆ. ಶ್ರೀಕೃಷ್ಣನು ಆ ಮಾಲೆ ರುಕ್ಮಿಣಿಯ ಕೊರಳಿಗೆ ಹಾಕುತ್ತಾರೆ. ಅಷ್ಟರಲ್ಲಿ ಈ ವಿಚಾರ ಶ್ರೀಕೃಷ್ಣನ ಪ್ರೀತಿಯ ಮಡದಿ ಸತ್ಯಭಾಮೆಗೆ ತಿಳಿಯುತ್ತದೆ. ಆಕೆ ರುಕ್ಮಿಣಿಯನ್ನು ನೋಡಿ ಅಸೂಯೆ ಪಟ್ಟು ಶ್ರೀಕೃಷ್ಣನಲ್ಲಿ ಕೋಪಗೊಳ್ಳುತ್ತಾಳೆ, ಶ್ರೀಕೃಷ್ಣನ ಸಮಾಧಾನದ ಮಾತುಗಳನ್ನು ಕೂಡ ಸತ್ಯಭಾಮೆ ಕೇಳಿಸಿಕೊಳ್ಳುವುದಿಲ್ಲ. ಹೀಗಾಗಿ ಶ್ರೀಕೃಷ್ಣ ಆಕೆಗಾಗಿ ಸ್ವರ್ಗಲೋಕದಿಂದ ಪಾರಿಜಾತದ ಮರವನ್ನೇ ತಂದುಕೊಡುವುದಾಗಿ ಮಾತು ನೀಡುತ್ತಾನೆ. ಅದರಂತೆ ಶ್ರೀಕೃಷ್ಣ ಸ್ವರ್ಗ ಲೋಕಕ್ಕೆ ತೆರಳಿ ಇಂದ್ರದೇವನ ಬಳಿ, ಪಾರಿಜಾತದ ಮರವನ್ನು ತನಗೆ ನೀಡಬೇಕೆಂದು ಕೇಳಿಕೊಳ್ಳುತ್ತಾನೆ. ಆದರೆ ಇಂದ್ರದೇವ ಅದನ್ನು ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಇಂದ್ರ ದೇವನೊಂದಿಗೆ ಯುದ್ಧಕ್ಕೆ ಮುಂದಾಗುತ್ತಾನೆ. ಇದರಲ್ಲಿ ಶ್ರೀಕೃಷ್ಣ ಗೆದ್ದು ಮರವನ್ನು ಪಡೆಯುತ್ತಾನೆ. ಇಂದ್ರದೇವನು ಶ್ರೀಕೃಷ್ಣನಿಗೆ ಪಾರಿಜಾತ ಮರವನ್ನು ನೀಡಿದ ನಂತರ “ಪಾರಿಜಾತದ ಹೂಗಳು ರಾತ್ರಿ ಅರಳಲಿ ಮತ್ತು ಸೂರ್ಯೋದಯವಾಗುವ ಮೊದಲೇ ಬಾಡಿ ಹೋಗಲಿ” ಎಂದು ಶಾಪ ನೀಡುತ್ತಾರೆ.

Advertisement

ಸತ್ಯಭಾಮೆಗೆ ಬುದ್ಧಿ ಕಲಿಸಲು ಶ್ರೀಕೃಷ್ಣ ನೀಡಿದ ಮಾತಿನಂತೆ ಮರವನ್ನು ತಂದು ಆಕೆಯ ಮನೆಯಂಗಳದಲ್ಲಿ ನೆಡುತ್ತಾನೆ. ಆದರೆ ಇದರ ಹೂಗಳು ಮಾತ್ರ ರುಕ್ಮಿಣಿಯ ಮನೆಯಂಗಳದಲ್ಲಿ ಬೀಳುವಂತೆ ಮಾಡುತ್ತಾನೆ. ಹಾಗಾಗಿ ರುಕ್ಮಿಣಿಯು ಪಾರಿಜಾತದ ಹೂವನ್ನು ದೇವರ ಪೂಜೆಗೆ ಬಳಸುತ್ತಾಳೆ. ಸ್ವರ್ಗ ಲೋಕದಲ್ಲಿದ್ದಂತಹ ಪಾರಿಜಾತ ಪುಷ್ಪವೂ ನೆಲಕ್ಕೆ ಬಿದ್ದರೂ ಸಹ ಅದು ಶುದ್ಧವಾಗಿ ಉಳಿದು ದೇವರ ಪೂಜೆಗೆ ಯೋಗ್ಯವಾಗಿರುತ್ತದೆ ಎಂಬ ಉಲ್ಲೇಖವಿದೆ.

ಮತ್ತೊಂದು ಪುರಾಣದ ಪ್ರಕಾರ ಪಾರಿಜಾತವೆಂಬ ರಾಜಕುಮಾರಿಯೊಬ್ಬಳಿದ್ದಳು. ಆಕೆ ಸೂರ್ಯನನ್ನು ಕಂಡು ಮೋಹಗೊಳ್ಳುತ್ತಾಳೆ. ಈ ವಿಚಾರವನ್ನು ಸೂರ್ಯನ ಬಳಿ ಹೇಳಿಕೊಳ್ಳುತ್ತಾಳೆ. ಆದರೆ ಸೂರ್ಯನು ಆಕೆಯನ್ನು ನಿರಾಕರಿಸುತ್ತಾನೆ. ಹಾಗಾಗಿ ರಾಜಕುಮಾರಿ ತನ್ನ ಪ್ರಾಣವನ್ನು ತ್ಯಜಿಸುತ್ತಾಳೆ. ಆಕೆಯ ಚಿತಾಬೂದಿಯಿಂದ ಗಿಡ ಹುಟ್ಟಿ, ಚಿಗುರೊಡೆದು ರಾತ್ರಿಯ ಸಮಯದಲ್ಲಿ ಮಾತ್ರ ಸುಗಂಧಭರಿತ, ಸುವಾಸನೆಯುಳ್ಳ ಹೂ ಅರಳಿ ಸೂರ್ಯೋದಯವಾಗುತ್ತಿದ್ದಂತೆ ಬಾಡುತ್ತೇನೆಂದು ಶಪಥ ಮಾಡಿಕೊಂಡಿತು.

ಈ ಎರಡು ಪುರಾಣದ ಕಥೆಯ ಉಲ್ಲೇಖಗಳು ಬೇರೆ ಬೇರೆಯಾಗಿದ್ದರು ಕೂಡಾ, ಪಾರಿಜಾತ ಸೂರ್ಯೋದಯಕ್ಕೆ ಅರಳಿ ಸೂರ್ಯಾಸ್ತಕ್ಕೆ ಬಾಡಿ ಹೋಗುವ ವಿಚಾರ ಒಂದೇ ಆಗಿದೆ. ಹಾಗಾಗಿ ಪುರಾಣಗಳಲ್ಲಿ ಪಾರಿಜಾತ ಹೂವಿಗೆ ವಿಶೇಷ ಮನ್ನಣೆ ಇರುವುದಂತೂ ನಿಜ.

ಇನ್ನೊಂದು ದಂತಕತೆ ಪ್ರಕಾರ ಪಾರಿಜಾತದ ಹೂಗಳನ್ನು ದೇವತೆ ಮತ್ತು ರಕ್ಕಸರ ನಡುವಿನಲ್ಲಿ ನಡೆದ ಸಮುದ್ರ ಮಂಥನದ ಸಂದರ್ಭದಲ್ಲಿ ಕ್ಷೀರಸಾಗರ ಸಮುದ್ರದಲ್ಲಿ ಹುಟ್ಟಿದ 14 ರತ್ನಗಳಲ್ಲಿ, ಐದು ಪವಿತ್ರ ವೃಕ್ಷಗಳು ಜನಿಸಿದವು. ಆ ಐದು ಪವಿತ್ರ ವೃಕ್ಷಗಳಲ್ಲಿ ಪಾರಿಜಾತ ಒಂದು ಎಂಬ ಉಲ್ಲೇಖವಿದೆ. ಪಾರಿಜಾತದ ಹೂಗಳು ಸೀತೆಯ ವನವಾಸಕ್ಕೆ ಸಂಬಂಧಿಸಿದೆ. ಪವಿತ್ರವಾದ ಪಾರಿಜಾತದ ಹೂಗಳನ್ನು ಸೀತೆ ವನವಾಸದ ಸಂದರ್ಭದಲ್ಲಿ ಮಾಲೆ ಮಾಡಿ, ಉಪಯೋಗಿಸುತ್ತಿದ್ದಳು ಮಾತ್ರವಲ್ಲದೆ, ಲಕ್ಷ್ಮೀದೇವಿಗೆ ಈ ಹೂ ಅತ್ಯಂತ ಪ್ರಿಯ. ಲಕ್ಷ್ಮೀದೇವಿಗೆ ಈ ಹೂವಿಂದ ಪೂಜಿಸಿದರೆ ಲಕ್ಷ್ಮೀದೇವಿ ಸಂತೋಷಗೊಂಡು ಪ್ರಸನ್ನಳಾಗುತ್ತಾಳೆ ಎಂಬ ಪ್ರತೀತಿ ಇದೆ. ಶ್ರೀಕೃಷ್ಣ ದೇವಲೋಕದಿಂದ ಭೂಲೋಕಕ್ಕೆ ತಂದಂತಹ ಪಾರಿಜಾತ ಸನಾತನ ಧರ್ಮದಲ್ಲಿ ಪವಿತ್ರ ಹಾಗೂ ಶ್ರೇಷ್ಠವಾದ ಸ್ಥಾನಮಾನ ಪಡೆದುಕೊಂಡಿದೆ. ಈ ಹೂವನ್ನು “ಹರ ಸಿಂಗಾರ”, “ಶೃಂಗಾರ ಹಾರ”, ಮತ್ತು ” ಶಿವುಲಿ ” ಎಂದು ಕರೆಯುತ್ತಾರೆ. ಅಲ್ಲದೆ ಇದು ಪಶ್ಚಿಮ ಬಂಗಾಳದ ರಾಜ್ಯ ಪುಷ್ಪವಾಗಿದೆ.

ಆರೋಗ್ಯದ ಸಂಜೀವಿನಿ

ಆಯುರ್ವೇದವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಪಾರಿಜಾತ ಹೂವಿಗೆ ಆಯುರ್ವೇದದಲ್ಲೂ ಮಹತ್ವವಾದ ಸ್ಥಾನಮಾನವಿದೆ

* ಪಾರಿಜಾತದ ಎಲೆ, ಪುಷ್ಪ, ತೊಗಟೆ, ಬೀಜ ಎಲ್ಲವೂ ರೋಗ – ರುಜಿನಗಳನ್ನು ನಿವಾರಿಸಲು ಯೋಗ್ಯವಾಗಿದೆ.

* ಪಾರಿಜಾತವು ಯಕೃತ್ತಿನ ತೊಂದರೆಗಳಿಂದ ರಕ್ಷಿಸಿ, ಯಕೃತ್ತನು ಕಾಪಾಡುತ್ತದೆ.

* ಪಾರಿಜಾತ ತೊಗಟೆಯು ಶೀತ, ಜ್ವರ, ಕೆಮ್ಮನ್ನು ಗುಣಪಡಿಸುತ್ತದೆ ಮತ್ತು ಇದರ ಬೀಜಗಳು ಕಾಮಲೆ ರೋಗವನ್ನು ಶಮನಗೊಳಿಸುತ್ತದೆ.

* ಪಾರಿಜಾತವು ಜಂತುಹುಳ ನಿವಾರಕ ಹಾಗೂ ಇದು ಸಂಧಿವಾತಗಳನ್ನು ದೂರ ಮಾಡುತ್ತದೆ

* ಪಾರಿಜಾತವು ತಲೆ ಹೊಟ್ಟು, ಉರಿ, ಗಾಯ, ಊತಗಳನ್ನು ನಿವಾರಿಸುತ್ತದೆ ಮತ್ತು ಮೂಳೆಗಳಿಗೆ, ಕೀಲುಗಳಿಗೆ ಉಪಯುಕ್ತವಾಗಿದೆ ನಿವಾರಿಸುತ್ತದೆ.

* ಪಾರಿಜಾತವು ಮೂಲವ್ಯಾಧಿ, ಮಲಬದ್ಧತೆ ಹಾಗೂ ಚರ್ಮರೋಗ ಖಾಯಿಲೆಗಳನ್ನು ನಿವಾರಿಸುತ್ತದೆ.

* ಪಾರಿಜಾತವು ಕ್ಯಾನ್ಸರ್ ಅನ್ನು ದೂರ ಮಾಡುವುದಲ್ಲದೆ, ನಾನಾ ರೀತಿಯ ಖಾಯಿಲೆಗೆ ಈ ಹೂ ರಾಮಬಾಣವಾಗಿದೆ

ಪುರಾಣಗಳ ಕಥೆಗಳಲ್ಲಿ ಆರೋಗ್ಯ ವರ್ಧಕದಲ್ಲಿ ಈ ಹೂವಿನ ಮಹತ್ವದ ಉಲ್ಲೇಖ ಮಾತ್ರವಲ್ಲದೆ, ಪಾರಿಜಾತ ಪುಷ್ಪದಿಂದ ಪರಿಮಳಯುಕ್ತ ತೈಲ ಮತ್ತು ಸುಗಂಧ ಭರಿತವಾದ ದ್ರವ್ಯ ಹಾಗೂ ಬಣ್ಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ ಎಂಬ ಉಲ್ಲೇಖವಿದೆ.

ನಮ್ಮ ಪರಿಸರದಲ್ಲಿ ಇಂತಹ ಹಲವಾರು ಔಷಧಿಯ ಸಸ್ಯಗಳು ಸುಲಭವಾಗಿ ದೊರೆಯುತ್ತದೆ. ಇಂತಹ ಸಸ್ಯಗಳ ವೈಜ್ಞಾನಿಕವಾದ ಮಾಹಿತಿ, ಪುರಾಣದ ಮಹತ್ವ ಹಾಗೂ ಸಸ್ಯಗಳಿಂದಾಗುವ ಪ್ರಯೋಜನಗಳನ್ನೆಲ್ಲಾ ನಾವು ತಿಳಿದುಕೊಳ್ಳಬೇಕು ಮತ್ತು ನಮ್ಮ ಮುಂದಿನ ಪೀಳಿಗೆಗೂ ನಾವು ಇಂತಹ ಸಸ್ಯಗಳ ಮಹತ್ವ, ಸಸ್ಯಗಳ ಪುರಾಣದ ಮಹತ್ವ, ಹಾಗೆಯೇ ಪ್ರಯೋಜನಗಳನ್ನೆಲ್ಲಾ ತಿಳಿಸಿಕೊಡಬೇಕು.  ಅವರು ಕೂಡಾ, ಇಂತಹ ಸಸ್ಯಗಳನ್ನು ನೆಟ್ಟು, ಹಸಿರನ್ನು ಕಾಪಾಡಿ, ಜೀವ ಉಳಿಸಬೇಕು.

ವಿದ್ಯಾ ಪ್ರಸಾದ್

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next