ದಾವಣಗೆರೆ: ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಫೆ. 14 ಮತ್ತು 15 ರಂದು ನಡೆಯಲಿರುವ ಶ್ರೀ ಸಂತ ಸೇವಾಲಾಲ್ ಮಹಾರಾಜರ 278 ನೇ ಜನ್ಮ ದಿನಾಚರಣೆ ಸಂಬಂಧ ಅಗತ್ಯ ಮೂಲಭೂತ ಸೌಕರ್ಯಹಾಗೂ ಭದ್ರತಾ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಗುರುವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಸೇವಾಲಾಲ್ ಮಹಾರಾಜರ 278 ನೇ ಜಯಂತಿ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೇದಿಕೆ ಕಾರ್ಯಕ್ರಮದಲ್ಲಿ ನಾಡಗೀತೆ, ಸ್ವಾಗತ ಮತ್ತು ನಿರೂಪಣೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ವೇದಿಕೆಯಲ್ಲಿ ಆಸನಗಳ ವ್ಯವಸ್ಥೆ ಹಾಗೂ ಕಾರ್ಯಕ್ರಮ ಶಿಷ್ಟಾಚಾರದಂತೆ ಆಗಬೇಕು ಹಾಗೂ ವೇದಿಕೆ ಮುಂದೆ ಜನಸಂದಣಿ ಆಗದಂತೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಎರಡು ದಿನಗಳ ಕಾಲ ನಡೆಯುವ ಉತ್ಸವಕ್ಕೆ ಲಕ್ಷಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದ್ದು, ಸಾರಿಗೆ ಮತ್ತು ಪಾರ್ಕಿಂಗ್ ವ್ಯವಸ್ಥೆ, ಊಟ, ನೀರು, ವಿದ್ಯುತ್, ಶೌಚಾಲಯ, ಸ್ವತ್ಛತೆ, ಸ್ವಯಂ ಸೇವಕರ ನಿಯೋಜಿಸಬೇಕು. ಉತ್ಸವದಲ್ಲಿ ಯಾವುದೇ ಲೋಪ ಬಾರದಂತೆ ಸುಗಮ ನಿರ್ವಹಣೆಗೆ ಸಂಬಂಧಿಧಿಸಿದಂತೆ ಪೊಲೀಸ್ ಇಲಾಖೆ, ನಿರ್ಮಿತಿ ಕೇಂದ್ರ, ಬೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆಗಳು ಸೇವಾಲಾಲ್ ಸಮಿತಿಯ ಜೊತೆ ಸಮನ್ವಯದೊಂದಿಗೆ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ನಿರ್ಮಿತಿ ಕೇಂದ್ರದವರು ಉತ್ಸವದ ದಿನಗಳಂದು ಊಟ, ಬ್ಯಾರಿಕೇಡ್, ಸ್ಟೋರ್‌ರೂಂ ವ್ಯವಸ್ಥೆ ನೋಡಿಕೊಳ್ಳಬೇಕಿದ್ದು, ಜನಸಂದಣಿ ಹೆಚ್ಚಿರುವ ಕಾರಣ ಹಲವು ಊಟದ ಕೌಂಟರ್ ತೆರೆಯಬೇಕು. ಅಲ್ಲಿ ನೂಕು ನುಗ್ಗಲು ಆಗದ ರೀತಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ, ಊಟದ ವ್ಯವಸ್ಥೆ ಮಾಡಬೇಕು. ಬರದ ಹಿನ್ನೆಲೆಯಲ್ಲಿ ಸಮರ್ಪಕ ನೀರು ಸರಬರಾಜಿಗೆ 30 ಟ್ಯಾಂಕರ್ ಮೂಲಕ ನೀರನ್ನು ಒದಗಿಸಲು ಹಾಗೂ 2-3 ಸ್ಥಿರ ಟ್ಯಾಂಕರ್ ವ್ಯವಸ್ಥೆಗೆ ಸಂಬಂಧಿತ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಉಪ ವಿಭಾಗಾಧಿಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಗ್ರಾಮಸ್ಥರಿಂದ ಭೂಮಿ ಬಾಡಿಗೆ ಪಡೆದು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ರಸ್ತೆ ವ್ಯವಸ್ಥೆ ಸುಗಮಗೊಳಿಸಲಾಗಿದೆ. ಉತ್ಸವ ಪ್ರದೇಶ ಪರಿಶೀಲಿಸಲಾಗಿದೆ. ಪಾರ್ಕಿಂಗ್ ಮತ್ತು ಸ್ವತ್ಛತೆಯ ಜವಾಬ್ದಾರಿಯನ್ನು ಸೇವಾಲಾಲ್ ಸಮಿತಿ ವಹಿಸಿಕೊಂಡಿದೆ ಎಂದರು. ಅಲ್ಲಲ್ಲಿ ಸೂಚನಾ ಫಲಕ, ಸಮಿತಿ ಸದಸ್ಯರ ಸಂಪರ್ಕ ಸಂಖ್ಯೆಗಳನ್ನು ಹಾಕಬೇಕು.
ಊಟ ಆದ ನಂತರ ತಟ್ಟೆಗಳನ್ನು ಅಲ್ಲಿ ಇರಿಸಲಾದ ಡಸ್ಟ್‌ಬಿನ್ ಗಳಿಗೆ ಹಾಕುವಂತೆ ಸ್ವಯಂಸೇವಕರು ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯು 108 ಆಂಬುಲೆನ್ಸ್ ಹಾಗೂ ಎರಡು 24-7 ತಾತ್ಕಾಲಿಕ ಆರೋಗ್ಯ ತಪಾಸಣಾ ಕೌಂಟರ್ ತೆರೆಯಬೇಕು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ತಲಾ 25 ಮೊಬೈಲ್ ಶೌಚಾಲಯಗಳನ್ನು ನಿರ್ಮಿತಿ ಕೇಂದ್ರದವರು ವ್ಯವಸ್ಥೆ ಮಾಡಲಿದ್ದು, ಇದರೊಂದಿಗೆ ನೀರಿನ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಡಾ| ಭೀಮಾಶಂಕರ್ ಎಸ್. ಗುಳೇದ್ ಮಾತನಾಡಿ, ಊಟ, ನೀರು, ಭದ್ರತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಜಿಲ್ಲಾಡಳಿತ ಮತ್ತು ಸೇವಾಲಾಲ್ ಮಿತಿಗಳು ಸಮನ್ವಯದೊಂದಿಗೆ ಕೆಲಸ ಮಾಡಬೇಕಿದೆ ಎಂದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕುಮಾರ್ ಹನುಮಂತಪ್ಪ, ಹೊನ್ನಾಳಿ ತಹಶೀಲ್ದಾರ್ ಹೀರ್ಯಾನಾಯ್ಕ, ನಿರ್ಮಿತಿ ಕೇಂದ್ರದ ರವಿಕುಮಾರ್, ಬೆಸ್ಕಾಂ ಇಲಾಖೆಯ ಜಯಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಡಾ| ಜಿ.ಡಿ. ರಾಘವನ್, ಜಿಲ್ಲಾ ಮಟ್ಟದ ಇತರೆ ಅಧಿಧಿಕಾರಿಗಳು ಸಭೆಯಲ್ಲಿದ್ದರು.