ನನ್ನೊಲವೇ
ನೀನು ನಿನ್ನ ದನಿಗೆ ಜೇನು ಬೆರೆಸಿಕೊಂಡೇ ನನ್ನನ್ನ ಗೂಬೆ ಅಂದೆಯಲ್ಲ , ಆ ಮಾತಿಗೆ ಅಪಚಾರ ಆಗದಿರಲಿ ಎಂದು ನಾನು ಈ ಅಪರಾತ್ರಿಯಲ್ಲಿ ನಿನ್ನ ನೆನಪುಗಳ ಓಣಿಯಲ್ಲಿ ಒಬ್ಬಂಟಿ ಅಲೆದು, ಆ ಹೆಸರಿಗೆ ನ್ಯಾಯ ಒದಗಿಸಿದ್ದೇನೆ . ಇದನ್ನ ನಾ ಬರೆಯೋ ಹೊತ್ತಿಗೆ, ಗಾಢ ನಿಲ್ಲೆಯ ನಡುವೆಯೇ ನನ್ನ ನೆನಪಾಗಿ ಸಣ್ಣಗೆ ನಕ್ಕಿರುತ್ತೀಯ!
ಏಕೊ ಏನೋ ನಿಲ್ಲುತೇನೆ ಕನ್ನಡಿಯ ಮುಂದೆ
ಆದರೂನು ಅಲ್ಲಿ ಕೂಡ ನಿನ್ನನೇ ಕಂಡೆ !!
ಇಷ್ಟಾದರೂ ಒಮ್ಮೊಮ್ಮೆ ನಮ್ಮ ಸಂಭ್ರಮಗಳ ಕಡಲಲ್ಲಿ ಆತಂಕದ ಅಲೆಗಳೆದ್ದು ಬಿಡುತ್ತವೆ. ಬದುಕು ನಮ್ಮ ನಂಬಿಕೆಯನ್ನು ನಿಸ್ಸಹಾಯಕತೆಗೆ ತಳ್ಳಿ, ನಗುತ್ತಾ ನಿಂತುಬಿಡುತ್ತದೆ. ನಂಗೊತ್ತು; ನಿಂಗೆ ಅಪ್ಪ ಅಮ್ಮ ಅಂದ್ರೆ ಎಷ್ಟೊಂದು ಇಷ್ಟ ಅಂತ. ನಿನ್ನಿಷ್ಟದಂತೆಯೇ ಬದುಕು ಕಟ್ಟಿಕೊಳ್ಳಲು ನೆರವಾದವರು ಅವರು. ಆದ್ರೆ ಈ ಪ್ರೀತಿ ವಿಚಾರ ಬಂದಾಗ ಅವರಿಬ್ಬರೂ ಕೆಂಡಾಮಂಡಲ.
ನಿನ್ನ ಆತಂಕ ನಂಗೆ ಅರ್ಥವಾಗುತ್ತೆ. ನಮ್ಮ ಪ್ರೀತಿಯ ಮಾತುಗಳು ಮದುವೆಯ ಸಂಭ್ರಮದ ಕಡೆ ವಾಲಿದಂತೆಲ್ಲಾ, ನಿನ್ನ ಮುಖ ಕಪ್ಪಿಡುತ್ತೆ. ಬೆಳದಿಂಗಳಂಥ ಮುಖ ಕಳಾಹೀನವಾಗಿ ಕುಂದಿ ಹೋಗುತ್ತೆ. ಆಗೆಲ್ಲಾ ನಿನ್ನ ಮನದೊಳಗೆ ಅಪ್ಪ ಅಮ್ಮನ ನಿರಾಕರಣೆಯ ನೋವು ಕಾಡುತ್ತದೆ. ಅವರನ್ನ ಕನ್ವಿನ್ಸ್ ಮಾಡೋ ದಾರಿ ಕಾಣದೇ ಗಟ್ಟಿಯಾಗಿ ಅಪ್ಪಿಕೊಂಡು ನನ್ನ ಹೆಗಲು ತೋಯಿಸುತ್ತೀಯ.
ಯಾಕೆ ಏನಾಯ್ತು ಅಂತ ಕೇಳಿದರೆ, ನೋವನ್ನೆಲ್ಲಾ ನುಂಗಿಕೊಂಡು ಪಕ್ಕನೆ ನಕ್ಕು ಬಿಡುತ್ತೀಯಲ್ಲೆ? ಈ ಗೂಬೆಗೆ ಅದೆಲ್ಲಾ ಅರ್ಥ ಆಗುತ್ತೆ ಕಣೆ. ಪ್ಲೀಸ್, ನನಗೊಮ್ಮೆ ನಿನ್ನ ಅಪ್ಪ ಅಮ್ಮನನ್ನು ಭೇಟಿ ಮಾಡಿಸು. ಉಸಿರಿರುವ ತನಕ ನಿನ್ನನ್ನು ಜತನದಿಂದ ಕಾಯ್ದುಕೊಳ್ಳುವ ನಂಬಿಕೆಯನ್ನ ಅವರಲ್ಲಿ ತುಂಬುತ್ತೇನೆ. ಅವರಿಗೆ ಅಷ್ಟಲ್ಲದೇ ಮತ್ತೂಂದು ಹಂಬಲ ಇರಲಾರದು. ನೀ ಆತಂಕವ ಬಿಡು ಮಾರಾಯ್ತಿ.
ಈಗ ನನ್ ಕಥೆ ಕೇಳು: ನಿನ್ನೆ ಸಂಜೆ ಆಕಾಶ ಕೆರಳಿ ಇಳೆ ತಣಿಯುವಂತೆ ಮಳೆ ಬಿತ್ತಲ್ಲ, ನೀ ಎಷ್ಟು ನೆನಪಾದೆ ಗೊತ್ತಾ? ನೀ ಬರೋದಿಲ್ಲ ಅಂತ ಗೊತ್ತಿದ್ದೂ ಹುಚ್ಚನಂತೆ ನಿನ್ನ ದಾರಿ ಕಾಯುತ್ತಲೇ ಇಲ್ಲೆ. ಲೋ, ಇಲ್ಲಿ ಮಳೆ ಬರ್ತಿದೆ ಕಣೋ. ಅಲ್ಲೂ ಮಳೇನಾ, ನಾ ಇದ್ದಿದ್ರೆ ಬಿಸ್ಸಿ ಬಿಸ್ಸಿ ಕಾಫಿ ಮಾಡಿಕೊಡ್ತಾಯಿಲ್ಲೆ ಅನ್ನೋ ನಿನ್ನ ಮೆಸೇಜ್ ನೋಡಿ ಕಾಯದೇ ಹೇಗೆ ಉಳಿಯಲಿ ಹೇಳು?
ಭಾವಬುತ್ತಿ ಹಂಚುವಾಗ ಜೀವವೇ ಹೂವು
ನೀನು ಬಂದು ಹೋದಲ್ಲೆಲ್ಲ ಪ್ರೀತಿಯ ಕಾವು !!
ನಿನಗಾಗಿ ಕಾಯದ ಹೊರತು ಮತ್ತೇನು ಮಾಡಲಿ?
-ನಿನ್ನ ಗೂಬೆ
* ಜೀವ ಮುಳ್ಳೂರು