Advertisement

Desi swara ಎಲ್ಲಿದ್ದರೂ ನಾವು ಕನ್ನಡಿಗರೇ ಆಗಿರುವುದು ನಿತ್ಯ ಸತ್ಯ!

07:33 PM Nov 25, 2023 | Team Udayavani |

ತಾಯ್ನಾಡು, ಮಾತೃಭಾಷೆ ಎಂಬುದು ಎಂದಿಗೂ ಜೀವಂತವಾಗಿರುವ ಭಾವ. ಓದುವ ಸಮಯದಲ್ಲಿ ಮನೆಯನ್ನು ಬಿಟ್ಟು ಬೇರೆ ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಕೊಂಡಾಗ ಮನೆ ಹಾಗೂ ನಮ್ಮವರ ನೆನಪು ಸದಾ ಸೆಳೆಯುತ್ತಿರುತ್ತದೆ. ಅದೇ ಮುಂದೆ ಹುಟ್ಟಿದ ಊರನ್ನು ಬಿಟ್ಟು ಎಷ್ಟೋ ಮೈಲಿಗಳಾಚೆ ಜೀವನದ ನೆಲೆಯನ್ನು ಕಂಡುಕೊಳ್ಳಬೇಕಾದ ಸಮಯ ಬಂದಾಗ ಈ ಭಾವ ನಿತ್ಯ ಸತ್ಯವಾಗುತ್ತದೆ. ಹೀಗೆ ಕನ್ನಡ ನೆಲೆಯಿಂದ ದೂರ, ಪರದೇಶದಲ್ಲಿರುವ ಕನ್ನಡಿಗರು ದಿನಾ ಸ್ಮರಿಸುವುದು ಕನ್ನಡ ತಾಯಿಯನ್ನು, ತಾವು ಹುಟ್ಟಿ ಬೆಳೆದ ಈ ಕನ್ನಡ ನಾಡಿನ ಮಣ್ಣನ್ನು. ತಾಯ್ನಾಡಿನಲ್ಲಿ ” ಅನಿವಾಸಿ ಕನ್ನಡಿಗರು ‘ ಎಂಬ ಗುರುತು ಸಿಕ್ಕಿದರೂ, ” ಕನ್ನಡಿಗರು ‘ ಎಂಬುದು ಸದಾ ಹಸುರು.

Advertisement

ಕನ್ನಡಕ್ಕೆ ವಿದೇಶೀ ನೆಲೆಗಳು ಬೇಕೋ ಬೇಡವೋ ಗೊತ್ತಿಲ್ಲ. ಆದರೆ ಅನಿವಾಸೀ ಕನ್ನಡಿಗರಿಗೆ ಮಾತೃಭಾಷೆಯಾದ ಕನ್ನಡವಂತೂ ಬೇಕೇ ಬೇಕು.

ಕನ್ನಡನಾಡಲ್ಲಿ ಹುಟ್ಟಿ ಬೆಳೆಯುವಾಗ “ನಾವು ಕನ್ನಡಿಗರು’ ಎಂಬ ವಿಚಾರ ಅರಿವಿನ ಮೇಲ್ಪದರಕ್ಕೆ ಬರುವ ಅಗತ್ಯವಿಲ್ಲದೆ ಸುಪ್ತ ಪ್ರಜ್ಞೆಯ ಆಳದಲ್ಲೆಲ್ಲೋ ಮಲಗಿ ವಿರಮಿಸುತ್ತಿರುತ್ತದೆ. ಹಾಗಾಗಿ ಈ ಕನ್ನಡ ಪ್ರಜ್ಞೆ ನಾಡಿಗರಿಗಿಂತ, ಹೊರನಾಡಿನವರಲ್ಲೇ ಹೆಚ್ಚು ಜಾಗೃತವಾಗಿರುತ್ತದೆ ಎನ್ನಬಹುದು.

ವಾಸ್ತವದಲ್ಲಿ, “ನಾವು ಕನ್ನಡಿಗರು’ ಎಂದು ಗುರುತಿಸಿಕೊಳ್ಳಬೇಕಾದ ಆವಶ್ಯಕತೆ ನಾವು ಆ ನಾಡನ್ನು ಬಿಟ್ಟು ಹೊರಬಂದ ಕೂಡಲೇ ದಟ್ಟವಾಗುತ್ತ ಹೋಗುತ್ತದೆ. ಹೊರನಾಡಿಗೆ ಹೋಗುವವರಿಗೆ ಕನ್ನಡಿಗರೆಂದು ಗುರುತಿಸಿಕೊಳ್ಳುವ ಸಂದರ್ಭಗಳು ಎದುರಾದರೆ, ವಿದೇಶದಲ್ಲಿರುವವರಿಗೆ ತಾನು ಭಾರತೀಯನೆಂದು ಗುರುತಿಸಿಕೊಳ್ಳುವ ಪ್ರಾಥಮಿಕ ಅವಶ್ಯಕತೆ ಪದೇ ಪದೇ ಉಂಟಾಗುತ್ತದೆ. ಅನಂತರ ಅವರು ತಮ್ಮ ಮಾತೃಭಾಷೆಯ ಅಸ್ಮಿತೆಯನ್ನು ಮುಂದಿಡುತ್ತಾರೆ.

ಇನ್ನು ಭಾರತೀಯರು ಎಂದ ಕೂಡಲೇ ಭಿನ್ನತೆಯೂ ಅವರ ಗುರುತೇ ಆಗಿಬಿಡುತ್ತದೆ. ಪ್ರತೀ ಇನ್ನೊಬ್ಬ ಭಾರತೀಯನಿಗೆ ತನ್ನದೇ ಭಾಷೆ, ಸಂಸ್ಕೃತಿ, ಆಚಾರ -ವಿಚಾರಗಳಿರುವುದು. ಇದು ವಿದೇಶಗಳ ಮೂಲ ನಿವಾಸಿಗಳಿಗೆ ಬಹಳ ಆಶ್ಚರ್ಯದ ಸಂಗತಿ. ಒಬ್ಬ ಭಾರತೀಯ ಇನ್ನೊಬ್ಬನೊಡನೆ ಮಾತಾಡಲು ಆಂಗ್ಲ ಭಾಷೆಯ ಮೊರೆ ಹೋಗುವುದು ಅವರಿಗೆ ಮತ್ತೂಂದು ಅಚ್ಚರಿ. ಇನ್ನು ನಮ್ಮ ಮಾತೃಭಾಷೆಯಲ್ಲಿ ಮಾತಾಡುವಾಗ ನಡು-ನಡುವೆ ಆಂಗ್ಲ ಪದಗಳನ್ನು ಬೆರೆಸಿ ಮಾತಾಡುವುದನ್ನು ಅವರು ಒಂದು ಅದ್ಭುತವೆಂಬಂತೆ ನೋಡುತ್ತಾರೆ.
ಬೇರೊಂದು ಜಾಗಕ್ಕೆ ಸ್ಥಾನ ಪಲ್ಲಟಗೊಂಡ ಕೂಡಲೇ ಮನುಷ್ಯ ತನ್ನ ಅಸ್ಮಿತೆಯನ್ನು ಮತ್ತೆ ಕಂಡುಕೊಳ್ಳಲು ತವಕಿಸುವುದು ಅತ್ಯಂತ ಸಹಜ ಮತ್ತು ಸಾಮಾನ್ಯ ವಿಚಾರ. ಆದರೆ ಅವರಿಗೆ ಎರಡು ಗುರುತುಗಳು ಹುಟ್ಟಿಕೊಳ್ಳುತ್ತವೆ. ಸ್ವದೇಶೀ ನೆಲದಲ್ಲಿ ಅವರು “ವಿದೇಶಿಗ ಕನ್ನಡಿಗ’, “ಹೊರನಾಡ ಕನ್ನಡಿಗ’ ರೆಂದು ಹೊಸದಾಗಿ ನಾಮಕರಣಗೊಳ್ಳುತ್ತಾರೆ. ಇನ್ನು ವಿದೇಶದಲ್ಲಿ “ವಲಸಿಗ ಭಾರತೀಯ’, “ವಿದೇಶೀ ಪ್ರಜೆ’ ಎನಿನಿಸಿಕೊಳ್ಳುತ್ತಾರೆ. ವಿಪರ್ಯಾಸದ ಸಂಗತಿಯೆಂದರೆ ಎರಡೂ ಕಡೆ ಅವರು ತಮ್ಮ ಪ್ರಾಥಮಿಕ ಅಸ್ಮಿತೆಯನ್ನು ಕಳೆದುಕೊಳ್ಳುವುದು.
ಇಂತಹ ಅತಂತ್ರದ ಸ್ಥಿತಿ ಮೊದಲ ಬಾರಿಗೆ ಎದುರಾದಾಗ ನನಗೆ ಅಚ್ಚರಿಯೂ, ವಿಷಾದವೂ, ಕೋಪ ಮತ್ತು ನಗು ಎಲ್ಲವೂ ಒತ್ತಟ್ಟಿಗೆ ಬಂದಿದ್ದವು. “ಅನಿವಾಸಿ ಭಾರತೀಯೆ’ ಎಂಬ ಪದವನ್ನು ಸ್ವದೇಶದಲಿದ್ದಾಗ ಮತ್ತು “ಬ್ರಿಟಿಷ್‌ ಇಂಡಿಯನ್‌’ ಎಂದು ವಿದೇಶದಲ್ಲಿದ್ದಾಗ ಯಾವ ಭಾವಗಳೂ ಇಲ್ಲದೆ ಒಪ್ಪಿಕೊಳ್ಳುವ ಹೊತ್ತಿಗೆ ವ್ಯವಸ್ಥೆಗಳ ವರ್ಗೀಕರಣಗಳ ಮಹತ್ವದ ಅರಿವಿನ ಜತೆಗೆ ನನ್ನ ಇತರೆ ಎಲ್ಲ ಭಾವನೆಗಳೂ ಮಾಸಿದ್ದವು, ಹಲವು ವರ್ಷಗಳೂ ಕಳೆದಿದ್ದವು. ಆಶ್ಚರ್ಯವೆಂದರೆ ಇದೀಗ “ಅನಿವಾಸಿ ಕನ್ನಡತಿ’ ಎಂಬ ಈ ಹೊಸ ಅಸ್ಮಿತೆಯನ್ನು ಗೌರವಿಸುವುದನ್ನು ಕೂಡ ನಾನು ಕಲಿತುಕೊಂಡಿದ್ದೇನೆ.

Advertisement

ದೇಶವನ್ನು ಬಿಟ್ಟು ಅವಕಾಶಗಳನ್ನರಸಿ ಜಗತ್ತಿನ ಯಾವ ಮೂಲೆಯಲ್ಲಿ ನೆಲೆಸಿದ್ದರೂ ಆತ್ಮದಲ್ಲಿ ನಾವು ಅಪ್ಪಟ ಭಾರತೀಯರೇ ಆಗಿರುತ್ತೇವೆ. ಇನ್ನು ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಅಸಲಿ ಕನ್ನಡಿಗರೇ ಆಗಿರುವುದು ನಿತ್ಯ ಸತ್ಯ. ಏಕೆಂದರೆ ಭಾಷೆಯೆನ್ನುವುದು ಬರೀ ಒಂದು ಮಾಧ್ಯಮವಲ್ಲ. ಅದರ ನೆರಳಿನಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ ಮತ್ತು ಒಂದಿಡೀ ಸಮುದಾಯದ ಅಸ್ಮಿತೆ ಗಳು ಮನೆಮಾಡಿಕೊಂಡಿರುತ್ತವೆ. ಪ್ರತೀ ಭಾಷೆ ಆಯಾ ಸಮುದಾಯಗಳನ್ನು ಕೂಡಿಸುವ ಒಂದು ಪ್ರಬಲ ಅಸ್ತ್ರವೂ ಆಗಿಬಿಡುತ್ತದೆ. ಗಡಿಗಳನ್ನು ದಾಟಿ, ದೂರ ದೇಶಗಳಲ್ಲಿ ಮನೆಮಾಡಿಕೊಂಡಿರುವ ಜನರಿಗಂತೂ ಮಾತೃಭಾಷೆಯೆನ್ನುವುದು ತಾಯ್ನಾಡಿನ ನೆನಪನ್ನು ಜೀವಂತವಾಗಿಡುವ ಸಂಜೀವಿನಿ.

ಸಮೃದ್ಧ ಇತಿಹಾಸ, ಶ್ರೀಮಂತ ಸಂಸ್ಕೃತಿ ಮತ್ತು ವಿಸ್ತಾರ ಪ್ರಕಾರಗಳಲ್ಲಿನ ಸಾಹಿತ್ಯಿಕ ಪರಂಪರೆಯನ್ನು ಹೊಂದಿದ ಕನ್ನಡ ಭಾಷೆ ಜಗತ್ತಿನಾದ್ಯಂತ ಹರಡಿದ್ದು, ಅನಿವಾಸೀ ಕನ್ನಡಿಗರ ಮೂಲಕ ಎಲ್ಲೆಡೆ ಮನೆಮಾಡಿಕೊಂಡಿದೆ. ಸಂಘ-ಸಂಸ್ಥೆಗಳ ಮೂಲಕ ಕನ್ನಡ ಕಾರ್ಯಗಳನ್ನು ಹಮ್ಮಿಕೊಂಡ ಅನಿವಾಸೀ ಕನ್ನಡಿಗರು ವಿದೇಶಗಳಿಗೂ-ಕರ್ನಾಟಕಕ್ಕೂ ಸೇತುವೆಯನ್ನು ನಿರ್ಮಿಸಿದ್ದಾರೆ. ಅದಕ್ಕೆ ಕಾರಣ ಕನ್ನಡದ ಮೇಲಿನ ಅವರ ಅಭಿಮಾನವೇ ಆಗಿದೆ.
ಆದರೆ ಅನಿವಾಸಿಗಳಾಗಿ ನಮ್ಮಲ್ಲಿ ಕ್ರಮೇಣ ಒಂದಿಷ್ಟು ಬದಲಾವಣೆಗಳೂ ಆಗುತ್ತವೆ.

ಹೊರದೇಶಗಳಲ್ಲಿ ಬದುಕುವ ಮೂಲಕ ನಮ್ಮಲ್ಲಿ ಭಾರತವನ್ನು ಇಡಿಯಾಗಿ ಹೊರಗಿನಿಂದ ನೋಡುವ ಆಂತರ್ಯ ಬೆಳೆಯುತ್ತದೆ. ಅಂತೆಯೇ ಕರ್ಮಭೂಮಿಯ ಬಗ್ಗೆ ಒಂದಿಷ್ಟು ಆಸ್ಥೆಯೂ ಬೆಳೆಯುತ್ತದೆ. ಇದರ ಜತೆಗೆ ಇಡೀ ಪ್ರಪಂಚವನ್ನು ನಾವು ಕಾಣುವ ಸ್ಥೂಲ ರೀತಿಯಲ್ಲಿ ಒಂದು ರೀತಿಯ ಮಾಧುರ್ಯ ಮೂಡುತ್ತದೆ. “ವಸುಧೈವ ಕುಟುಂಬಕಂ’ ಎನ್ನುವ ಅಂಬೋಣದ ಮಹತ್ವದ ಅರಿವಾಗುತ್ತದೆ.

ಈ ಹೊಸ ಅಸ್ಮಿತೆಯ ಜನರು, ವಿದೇಶಗಳಲ್ಲಿ ಕರ್ಮಿಗಳಾದರೆ, ಸ್ವದೇಶಕ್ಕೆ ವಿದೇಶೀ ವಿನಿಮಯ ನೀಡುವ ಮುಖ್ಯವಾಹಿನಿಗಳಾಗುತ್ತಾರೆ. ಸ್ವದೇಶ-ಮತ್ತು ವಿದೇಶಗಳಿಗೆ ತಮ್ಮ ಕುಟುಂಬ, ಸ್ನೇಹಿತರು ಮತ್ತು ಸೆಲೆಬ್ರಿಟಿಗಳನ್ನು ಓಡಿಯಾಡಿಸುವ ಮೂಲಬಿಂದುಗಳಾಗುತ್ತಾರೆ. ಕನ್ನಡ ಸಾಹಿತ್ಯ, ಸಂಸ್ಕೃತಿ , ಸಂಗೀತ, ಇತರೆ ಆಚರಣೆಗಳ ವಿನಿಮಯಕ್ಕೆ ಮಾಧ್ಯಮಗಳಾಗುತ್ತಾರೆ. ವಿದೇಶೀ ಮೂಲ ವಾಸಿಗಳಿಗೆ ಭಾರತೀಯತೆಯನ್ನು ಪರಿಚಯಿಸುವ ನಿಜವಾದ ರಾಯಭಾರಿಗಳಾಗಿ ಕೆಲಸ ಮಾಡುತ್ತಾರೆ. ವೈಮಾನಿಕ ಉದ್ಯಮ, ಆಮದು -ರಫ್ತುಗಳಂತಹ ವಾಣಿಜ್ಯ ವಾರ್ತೆಗಳಿಗೆ ಇವರೇ ಆಕರಗಳಾಗಿದ್ದಾರೆ. ಸ್ವದೇಶದಲ್ಲಿ ನೆಲದ ಬೆಲೆಯನ್ನು ನಿಯಂತ್ರಿಸುವಂತಹ, ವಿದೇಶಗಳ ನಾಯಕರುಗಳನ್ನು ಗೆಲ್ಲಿಸುವ, ಸೋಲಿಸುವಂತಹ ವಿಶೇಷ ಶಕ್ತಿಯನ್ನು ಪಡೆದಿದ್ದಾರೆ. ಇನ್ನೂ ಹೇಳಬೇಕೆಂದರೆ ಭಾರತದ ತುಣುಕುಗಳನ್ನು ಪ್ರಪಂಚದಾದ್ಯಂತ ಚೆಲ್ಲಿ ಆ ಮೂಲಕ ಭಾರತದ ಪ್ರತಿನಿಧಿಗಳಾಗಿ ಈ ಅನಿವಾಸಿಗಳು ಕೆಲಸ ಮಾಡುತ್ತಿದ್ದಾರೆ.

“ಕರ್ನಾಟಕದಲ್ಲಿ, ಕನ್ನಡತನ ಉಳಿಯಲಿ’ ಎಂದು ನಾವೆಲ್ಲರೂ ಮನಸಾ ಆಶಿಸುತ್ತೇವೆ. ವಿದೇಶಗಳಲ್ಲಿ ಕನ್ನಡ ಬೆಳೆದೀತೇ? “ಕನ್ನಡ’ ಎಂಬ ಒಂದು ಭಾಷೆಯಿದೆ. ಆ ಭಾಷೆಯನ್ನು ಆಡುವ ಜನರು ಈ ಭೂಮಿಯ ಮೇಲಿದ್ದಾರೆ ಎಂದು ವಿದೇಶಿಗರಿಗೆ ತಿಳಿಯುವುದೇ ಅನಿವಾಸೀ ಕನ್ನಡಿಗರ ಮೂಲಕ. ಆಡುವ ಭಾಷೆಯ ಜತೆಗೆ ಕರ್ನಾಟಕದ ಕಲೆ, ಜಾನಪದ, ನೃತ್ಯ, ಸಂಗೀತ ಮತ್ತು ಸಾಹಿತ್ಯಗಳು ಪ್ರಪಂಚದ ಎಲ್ಲೆಡೆ ಇಂದು ಕೇಳುತ್ತಿವೆಯೆಂದರೆ ಅದು ಅನಿವಾಸೀ ಕನ್ನಡಿಗರ ಮೂಲಕ. ಇಲ್ಲಿಗೆ ಕರ್ನಾಟಕದಿಂದ ಬರುವ ಅದೆಷ್ಟೋ ಸೆಲೆಬ್ರಿಟಿಗಳು ವಿದೇಶಗಳಲ್ಲಿ ಉಳಿದಿರುವಷ್ಟು ಕನ್ನಡ ಪ್ರೇಮ ತವರಿನಲ್ಲಿ ಉಳಿಯದೆ ಕಮರಿಹೋಗುತ್ತಿರುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಮೊದಲೆಲ್ಲ ವಿದೇಶಿಗನೊಬ್ಬ ತನ್ನ ನಾಡನ್ನು ಅವನದ್ದೇ ಭಾಷೆಯಲ್ಲಿ ವರ್ಣಿಸಿ ಬರೆದಿದ್ದರೆ ಅನುವಾದವನ್ನು ಓದಿ ಜೀರ್ಣಿಸಿಕೊಳ್ಳಲು ಜನರು ಕಷ್ಟಪಡುತ್ತಿದ್ದರು. ಆದರೆ ಇದೀಗ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕಂಡ ವಿಚಾರಗಳನ್ನು ತಾಯ್ನಾಡಿಗರ ಕನ್ನಡದಲ್ಲೇ ಓದಲು ಸಾಧ್ಯವಾಗಿದೆ. ಮೊದಲೆಲ್ಲ “ವಿದೇಶ ವಾರ್ತೆ’ ಎಂದು ದಿನಪತ್ರಿಕೆಗಳ ಮೂಲೆಯಲ್ಲೆಲ್ಲೋ ಇರುತ್ತಿದ್ದ ವಿದ್ಯಮಾನಗಳು ಇದೀಗ ಅನಿವಾಸಿ ಭಾರತೀಯರ ವಿಶೇಷ ಸಾಪ್ತಾಹಿಕವಾಗಿ ಪ್ರಕಟಗೊಳ್ಳುತ್ತಿವೆ. ವಾಣಿಜ್ಯ ಆಸಕ್ತಿಗಳು ಕರ್ನಾಟಕವನ್ನು ಮೀರಿ ವಿದೇಶೀ ಕನ್ನಡಿಗರ ಮನೆ – ಮನಗಳನ್ನು ತಟ್ಟುತ್ತಿವೆ.

ದೇಶೀ ಕಥೆ ಅಥವಾ ವಿದೇಶೀ ಕಥೆಗಳೆಂಬ ವರ್ಗಗಳು ಇದ್ದ ಕಡೆ ಈಗ ದೇಶೀ ಜನರ ಅನಿವಾಸೀ ಕಥೆಗಳು ಸೇರ್ಪಡೆಗೊಂಡು ಒಂದು ವಿಶಿಷ್ಟ ಸಾಹಿತ್ಯ ಪ್ರಕಾರವನ್ನೇ ಸೃಷ್ಟಿಸಿಬಿಟ್ಟಿವೆ. ಸಂಗೀತ ಮತ್ತು ವಾದ್ಯಗಳ ಸಮ್ಮಿಶ್ರ ಸಂಯೋಜನೆಗಳು ರೂಪುಗೊಂಡಿದ್ದರೆ, ಎರಡೂ ಸಂಸ್ಕೃತಿಗಳ ಮಿಲನದ ಕಾರಣ ಫ್ಯೂಷನ್‌ ನೃತ್ಯಪ್ರಕಾರಗಳು ಹುಟ್ಟಿಕೊಂಡಿವೆ. ಒಟ್ಟಾರೆ ಸಂಸ್ಕೃತಿಗಳು ಬೆರೆತು ಹಲವು ಕಲಿಕೆ, ಲಾಭ ಮತ್ತು ಬೆಳವಣಿಗೆಗಳನ್ನು ಕಾಣುತ್ತಿವೆ. ಮೊದಲು ಇದಕ್ಕೆಂದು ಸರಕಾರದ ನೆರವು ಬೇಕಾಗಿತ್ತು. ಇದಕ್ಕೆ ಹೆಚ್ಚು ಸಮಯವು ಹಿಡಿಯುತ್ತಿತ್ತು, ಅವಕಾಶಗಳು ಬಹಳ ಕಡಿಮೆಯಿದ್ದವು. ಆದರೆ ಇಂದು ಕನ್ನಡದ ಪ್ರಸರಣ, ಹಂಚಿಕೆ, ಅರ್ಥೈಸುವಿಕೆ ಅತ್ಯಂತ ಸರಳವಾಗಿ, ಅನಿವಾಸೀ ಕನ್ನಡಿಗರ ಮೂಲಕ ಆರಾಮವಾಗಿ ನಡೆಯುತ್ತಿದೆ.

ಕರ್ನಾಟಕದಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳು ಅದೇ ದಿನ ವಿದೇಶಗಲ್ಲಿಯೂ ತೆರೆಯನ್ನು ಕಾಣುತ್ತಿದ್ದರೆ ಅದಕ್ಕೆ ಅನಿವಾಸೀ ಕನ್ನಡಿಗರೇ ಕಾರಣ. ಅನಿವಾಸೀ ಕನ್ನಡಿಗರು ಹಣ ಹೂಡಿ ನಿರ್ಮಿಸಿರುವ ಚಿತ್ರಗಳಿಗೂ ಇಂದು ಬರವಿಲ್ಲ. ಅನಿವಾಸೀ ನೆಲಗಳಲ್ಲಿ ಚಲನಚಿತ್ರದ ಶೂಟಿಂಗ್‌ ನಡೆಯುವಾಗ ಅವರಿಗೆ ಇಲ್ಲಿನ ಕನ್ನಡಿಗರಿಂದ ಹಲವು ರೀತಿಯ ಸಹಾಯಗಳಾಗುತ್ತಿವೆ. ವಿದೇಶಗಳಿಗೆ ಮಕ್ಕಳನ್ನು ಓದಲು ಕಳಿಸುವ ನಮ್ಮ ನೆಲದ ತಂದೆ-ತಾಯಿಯರು ವಿದೇಶೀ ನೆಲದಲ್ಲಿ ವಾಸ್ತವ್ಯ ಹೂಡಿರುವ ಜನರ ವಾಟ್ಸ್‌ ಆ್ಯಪ್‌ ಗುಂಪುಗಳು, ಕನ್ನಡ ಸಂಘಗಳ ನೆರವಿನಿಂದ ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಸಾಧ್ಯವಾಗಿದೆ. ಆಪತ್ತು ಒದಗಿದ ಸಂದರ್ಭದಲ್ಲಿ ಇಂತಹ ವಿದ್ಯಾರ್ಥಿಗಳ ನೆರವಿಗೆ “ನಮ್ಮ ಕನ್ನಡದವರು’ ಎಂಬ ಅಪ್ಯಾಯಮಾನತೆಯಿಂದ ಹಲವಾರು ಬಾರಿ ನೆರವು ದೊರಕಿದೆ.

“ಇಂಗ್ಲೆಂಡಿನ ರಾಣಿ ಸತ್ತು ಹೋದಳಂತೆ? ಈಗ ಅಲ್ಲಿನ ವಾತಾವರಣ ಹೇಗಿದೆ?’, “ಕೋವಿಡ್‌ ಬಗ್ಗೆ ಅಲ್ಲಿ ಸಿಗುತ್ತಿರುವ ಹೆಚ್ಚಿನ ಮಾಹಿತಿಗಳೇನು?’, “ಅಲ್ಲಿಯ ಜನರ ಸರಾಸರಿ ವರಮಾನವೇನು?’, “ರಿಷಿ ಸುನಕ್‌ನ ನೇತೃತ್ವದ ಬಗ್ಗೆ ಅಪ್ಪಟ ಬ್ರಿಟಿಷರ ಅಭಿಪ್ರಾಯಗಳೇನು?’ ಎಂದು ಇಲ್ಲಿನ ಕನ್ನಡಿಗರ ಮೂಲಕ ಕರ್ನಾಟಕದ ಮಾಧ್ಯಮಗಳಿಗೆ, ಜನರಿಗೆ ತಿಳಿಯುವುದು ಇಂದು ಕ್ಷಣಾರ್ಧದಲ್ಲಿ ಸಾಧ್ಯವಾಗಿದೆ.

ಇವೆಲ್ಲವೂ ಕನ್ನಡ ಸಂಸ್ಕೃತಿ, ಸಾಹಿತ್ಯ, ನೃತ್ಯ, ಕಲೆ, ಮಾಧ್ಯಮ, ವಾಣಿಜ್ಯ, ರಾಜಕೀಯ ಮತ್ತು ವೈಚಾರಿಕ ನೆಲೆಗಳಿಗೆ ವಿದೇಶೀ ಕನ್ನಡಿಗರ ನೆಲೆಗಳಿಂದ ದೊರಕಿರುವ ನೆರವುಗಳೇ ಆಗಿವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಗಳ ಬೆಳವಣಿಗೆಯಲ್ಲಿ ಇಂದು ವಿಶ್ವದಾದ್ಯಂತದ ಅನಿವಾಸೀ ಕನ್ನಡಿಗರು ಗುರುತರ ಪಾತ್ರವನ್ನು ವಹಿಸುತ್ತಿದ್ದಾರೆ. ಆದರೆ ಕನ್ನಡ ಭಾಷೆ ಮೂಲದಲ್ಲಿ ಉಳಿಯಬೇಕಾದ್ದು ಎಲ್ಲಕ್ಕಿಂತ ಹೆಚ್ಚು ಆವಶ್ಯಕ.

ಡಾ| ಪ್ರೇಮಲತ ಬಿ., ಲಿಂಕನ್‌

 

Advertisement

Udayavani is now on Telegram. Click here to join our channel and stay updated with the latest news.

Next