Advertisement

ಅಫಜಲಪುರದಲ್ಲಿ ಎಲ್ಲೆಂದರೆಲ್ಲಿ ಕೊಳಕು

09:53 AM Jul 30, 2019 | Team Udayavani |

ಅಫಜಲಪುರ: ಅಫಜಲಪುರ ಪಟ್ಟಣ ಅಭಿವೃದ್ಧಿಯಲ್ಲಿ ಮಾತ್ರ ಇನ್ನೂ ಹಿಂದೆ ಉಳಿದಿದೆ. ಕಿರಿದಾದ ರಸ್ತೆಗಳು, ಮುಖ್ಯ ರಸ್ತೆ ಮೇಲೆ ಚರಂಡಿ ನೀರು, ಎಲ್ಲೆಂದರಲ್ಲಿ ಕೊಳಕು ಕಸ, ಗಬ್ಬು ವಾಸನೆ ಇಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.

Advertisement

ಪುರಸಭೆಯಿಂದಲೇ ಮೊದಲು ಪಟ್ಟಣದ ಅಭಿವೃದ್ಧಿಯಾಗಬೇಕು. ಆದರೆ ಪುರಸಭೆ ಇಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ. ಹೀಗಾಗಿ ಅಫಜಲಪುರ ಅನಾಥ ವಾಗಿದೆ. ಪಟ್ಟಣ ಹೀಗಿರಬೇಕು ಎನ್ನುವ ದೂರದೃಷ್ಟಿ ಜನಪ್ರತಿನಿಧಿಗಳಿಗಿಲ್ಲ. ಹೀಗಾಗಿ ಪಟ್ಟಣದಲ್ಲಿ ಯಾವುದೇ ಕಾಮಗಾರಿ ಗಳು ಅಪೂರ್ಣ, ಅದ್ವಾನ, ಅವೈಜ್ಞಾನಿಕ ಅಥವಾ ಅವ್ಯವಹಾರಗಳಾಗಿ ಹೋಗುತ್ತಿವೆ. ಪಟ್ಟಣಕ್ಕೆ ತುರ್ತಾಗಿ ಹೊರ ವರ್ತುಲ ರಸ್ತೆ ಮತ್ತು ಮಾಸ್ಟರ್‌ ಪ್ಲಾನ್‌ ಅವಶ್ಯಕತೆ ಇದೆ. ಸುಮಾರು ಬಾರಿ ಮಾಸ್ಟರ್‌ ಪ್ಲಾನ್‌ ಬಗ್ಗೆ ಅನೇಕರು ಮಾತನಾಡಿದ್ದಾರೆ ವಿನಃ ಕಾರ್ಯಗತಗೊಳಿಸಿಲ್ಲ. ಅಲ್ಲದೆ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಹೀಗಾಗಿ ಹೊರ ವರ್ತುಲ ರಸ್ತೆ ಅವಶ್ಯವಾಗಿದೆ ಎಂಬ ಆಗ್ರಹ ಕೇಳಿ ಬಂದಿದೆ.

ಪಟ್ಟಣದಲ್ಲಿ ಸಾಕಷ್ಟು ಅವಗಡಗಳು ಸಂಭವಿಸಿ ಜೀವ ಹಾನಿಯಾಗುತ್ತಿದೆ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗೂಡಂಗಡಿಗಳ ಕಾಟ ಮತ್ತು ಕಿರಿದಾದ ರಸ್ತೆಗಳಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನಗಳ ಅಡ್ಡಾದಿಡ್ಡಿ ನಿಲುಗಡೆ ಕೂಡ ಇದಕ್ಕೆ ಕಾರಣವಾಗಿದೆ. ಇಲ್ಲಿನ ತಹಶೀಲ್ದಾರ್‌ ಕಚೇರಿ ಮುಂದಿರುವ ಸರ್ಕಾರಿ ಶಾಲೆ ಹಿಂದಿನ ಮೈದಾನ ಬಯಲು ಶೌಚ ಸ್ಥಳವಾಗಿದೆ. ಪುರಸಭೆ ವತಿಯಿಂದ ನಿರ್ಮಾಣವಾದ ಶೌಚಾಲಯಗಳು ಉಪಯೋಗಕ್ಕೆ ಬರುತ್ತಿಲ್ಲ. ಇನ್ನೂ ಕೆಲವು ಕಡೆ ಜನದಟ್ಟಣೆ ಹೆಚ್ಚಾಗಿ ಶೌಚಾಲಯ ಕಮ್ಮಿಯಾಗಿದ್ದರಿಂದ ಶಾಲಾ ಮೈದಾನವನ್ನೇ ಸಾರ್ವಜನಿಕರು ಶೌಚಕ್ಕೆ ಬಳಿಸಿಕೊಳ್ಳುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೆ ಶಾಲೆಗೆ ಹೊಂದಿಕೊಂಡು ಸಾರ್ವಜನಿಕರ ಮನೆಗಳು, ಪ್ರವಾಸಿ ಮಂದಿರ, ಬಸ್‌ ನಿಲ್ದಾಣ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿವೆ. ಇಂತಹ ಸ್ಥಳದಲ್ಲಿ ಶೌಚಕ್ಕೆ ಹೋಗುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಪಟ್ಟಣದಲ್ಲಿ ಎಲ್ಲಿ ನೋಡಿದರೂ ಸರಿಯಾದ ಸಿಸಿ ರಸ್ತೆಗಳಿಲ್ಲ. ಚರಂಡಿ ವ್ಯವಸ್ಥೆ ಇಲ್ಲ. ನೈರ್ಮಲ್ಯ ಸಮಸ್ಯೆ ಕಾಡುತ್ತಿದೆ. ಸರಿಯಾಗಿ ಚರಂಡಿ ಇಲ್ಲದ್ದರಿಂದ ಕೊಳಕು ನೀರು ರಸ್ತೆಗಳ ಮೇಲೆ ಹರಿಯುತ್ತ್ತದೆ. ಚರಂಡಿಗಳಿರುವ ಕಡೆ ಕಸ ಕಡ್ಡಿ ತುಂಬಿಕೊಂಡು ಗಬ್ಬು ನಾತ ಬೀರುತ್ತಿದೆ. ಸಿಸಿ ರಸ್ತೆ, ಚರಂಡಿಗಳು, ಉಪಯೋಗಕ್ಕೆ ಬಾರದಂತಾಗಿವೆ. ಮಳೆ ಬಂದರೆ ಸಾಕು ಅಫಜಲಪುರ ಪಟ್ಟಣ ಹೊಳೆಯಂತೆ ಕಾಣುತ್ತದೆ. ಅಲ್ಲದೆ ಮನೆಗಳಿಗೆಲ್ಲ ನೀರು ಹೊಕ್ಕು ಸಮಸ್ಯೆಯಾಗುತ್ತಿದೆ. ಕೊಳಚೆ ಪ್ರದೇಶದಂತಾಗಿ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗುತ್ತಿದೆ. ಅಫಜಲಪುರ ಪಟ್ಟಣದ ಅಭಿವೃದ್ಧಿ ಯಾರು ಮಾಡುವವರಿಲ್ಲ. ಬಂದವರೆಲ್ಲ ಅಕ್ರಮ ಮಾಡಿ ಹಣ ದೋಚುವವರೇ ಇದ್ದಾರೆ. ನಮ್ಮ ಸಮಸ್ಯೆಗಳನ್ನು ಹೇಳಿಕೊಂಡರೂ ಪ್ರಯೋಜನವಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಅಫಜಲಪುರ ಪಟ್ಟಣದ ಸಮಸ್ಯೆಗಳ ಕುರಿತು ಸಂಪೂರ್ಣ ಮಾಹಿತಿ ಪಡೆದು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಯೋಜನೆ ರೂಪಿಸಲಾಗುತ್ತದೆ. ಹೊರ ವರ್ತುಲ ರಸ್ತೆ ನಿರ್ಮಾಣದ ಬಗ್ಗೆ ಗೊತ್ತಿಲ್ಲ. ಮೊದಲು ಕಲಬುರಗಿ ನಗರದ ವರ್ತುಲ ರಸ್ತೆ ಮುಗಿದ ಬಳಿಕ ಇಲ್ಲಿಯದರ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ.•ಸುಬೋಧ ಯಾದವ್‌,ಪ್ರಾದೇಶಿಕ ಆಯುಕ್ತರು ಕಲಬುರಗಿ

Advertisement

 

 

 

•ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next