ಮುಂಬೈ : ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರನ್ನು, ಸಚಿವರ ವಿರುದ್ಧದ ಆರೋಪದ ಮೇಲೆ ಏಕೆ ಎಫ್ ಐ ಆರ್ ದಾಖಲಿಸಲಿಲ್ಲ ಎಂದು ಪದೇ ಪದೇ ಪ್ರಶ್ನೆ ಮಾಡಿದೆ.
ಓದಿ : ಆಮಿಷ ಪ್ರಕರಣ : ಯಡಿಯೂರಪ್ಪ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ
ವಿಚಾರಣೆ ವೇಳೆ ಮಾತನಾಡಿದ ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಸಿಜೆ ದತ್ತಾ, ನೀವೊಬ್ಬರು ಪೊಲೀಸ್ ಆಯುಕ್ತರು. ಕಾನೂನನ್ನು ನಿಮಗಾಗಿ ಏಕೆ ಮೀಸಲಿಡಬೇಕು..? ಪೊಲೀಸರು, ಸಚಿವರು, ರಾಜಕಾರಣಿಗಳು ಕಾನೂನಿಗಿಂತ ಮಿಗಿಲೆಂದು ಭಾವಿಸಿದ್ದೀರಾ..? ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇತ್ತೀಚೆಗೆ ತನ್ನ ಹುದ್ದೆಯಿಂದ ಕೆಳಗಿಳಿದಿದ್ದ ಪರಮ್ ಬೀರ್ ಸಿಂಗ್ ರನ್ನು ಗೃಹ ರಕ್ಷಕ ದಳಕ್ಕೆ ವರ್ಗಾಯಿಸಲಾಗಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ, ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರಿಗೆ ಪ್ರತಿ ತಿಂಗಳು 100 ಕೋಟಿ ರೂಗಳನ್ನು ರೆಸ್ಟೋರೆಂಟ್ ಹಾಗೂ ಬಾರ್ ಗಳಿಂದ ವಸೂಲಿ ಮಾಡಬೇಕೆಂದು ಗೃಹ ಸಚಿವ ಅನಿಲ್ ದೇಶ್ ಮುಖ್ ಹೇಳಿದ್ದಾರೆಂದು ಆರೋಪಿಸಿದ್ದರು.
ಭ್ರಷ್ಟಾಚಾರ ಆರೋಪದ ಪ್ರಕರಣಗಳನ್ನು ತನಿಖೆ ನಡೆಸಬೇಕಾದರೇ, ಎಫ್ ಐ ಆರ್ ದಾಖಲಾಗಿರಬೇಕು. ಎಫ್ ಐ ಆರ್ ಐ ಇಲ್ಲದೇ ಯಾವ ಪ್ರಕರಣದ ತನಿಖೆ ನಡೆಸಲಾಗುವುದಿಲ್ಲ. ನೀವು ಈ ಪ್ರಕರಣವನ್ನು ಸಿಬಿಐ ಗೆ ಹಸ್ತಾಂತರಿಸಬೇಕೆಂದು ಕೇಳಿದ್ದೀರಿ, ಎಫ್ ಐ ಆರ್ ಎಲ್ಲಿದೆ..? ಎಫ್ ಐ ಆರ್ ದಾಖಲಿಸುವುದನ್ನು ತಡೆಯುವವರು ಯಾರು..? ಮೇಲ್ನೋಟಕ್ಕೆ ಅರ್ಜಿಗೆ ಯಾವುದೇ ಆಧಾರವಿಲ್ಲ ಎಂದು ಹೇಳಿದ ನ್ಯಾಯಾಲಯ, “ಎಫ್ಐಆರ್ ಇಲ್ಲದೆ ಪ್ರಕರಣದ ಬಗ್ಗೆ ಮುಂದುವರಿಯಲು ನಮಗೆ ಅವಕಾಶ ಎಲ್ಲಿದೆ ?” ಎಂದು ಪುಂಖಾನುಪುಂಖವಾಗಿ ಸಿಂಗ್ ಅವರನ್ನು ಪ್ರಶ್ನೆ ಮಾಡಿದೆ.
ಓದಿ : ಬೇಂದ್ರೆಯವರ ಕಾವ್ಯ ಸ್ಪರ್ಶದ ಸೃಜನಾತ್ಮಕ ಪ್ರಿ ವೆಡ್ಡಿಂಗ್ ಶೂಟ್ಸ್ ಸಖತ್ ವೈರಲ್ ..!