ಉಡುಪಿ: “ನೀನು ಧರಿಸಿದಿ ಕಡೆಗೋಲು, ಪರಿಹರಿಸು ನಮ್ಮಯ ಗೋಳು. ನಿನ್ನ ಕೈಯಲ್ಲಿ ಪಾಂಚಜನ್ಯ ನಿನ್ನ ಭಜಿಸಿದವ ಧನ್ಯ’ ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಸ್ವರಚಿತ ಹನಿಗವನವನ್ನು ವಾಚಿಸುತ್ತಿದ್ದಂತೆ ಭಕ್ತ ಸಮುದಾಯದಿಂದ ಹರ್ಷೋದ್ಗಾರ ವ್ಯಕ್ತವಾಯಿತು. ಸಂದರ್ಭ ಸೆ. 11ರಿಂದ 17ರ ವರೆಗೆ ಶ್ರೀಕೃಷ್ಣ ಮಠದಲ್ಲಿ ಜರಗಲಿರುವ ಶ್ರೀಕೃಷ್ಣಾಷ್ಟಮೀ ಮಹೋತ್ಸವದ ಧಾರ್ಮಿಕ- ಸಾಂಸ್ಕೃತಿಕ ಉದ್ಘಾಟನ ಕಾರ್ಯಕ್ರಮ.
ಶ್ರೀಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಉದ್ಘಾಟಿಸಿ, ಶ್ರೀಕೃಷ್ಣನಿಂದ ಬಲ ಕಾರ್ಯ ಮತ್ತು ಜ್ಞಾನ ಕಾರ್ಯ ಅತ್ಯುತ್ತಮವಾಗಿ ನಡೆದಿವೆ. ಶ್ರೀ ವಾದಿರಾಜರು ರುಕ್ಮಿಣೀಶ ವಿಜಯದಲ್ಲಿ ಸಂಸ್ಕೃತದಲ್ಲಿ ವರ್ಣಿಸಿದ್ದರು. ಅದನ್ನು ಕನ್ನಡ ಕವಿಗಳು ಅತ್ಯಂತ ಸರಳವಾಗಿ ಜನರಿಗೆ ಮುಟ್ಟಿಸುತ್ತಿದ್ದಾರೆ ಎಂದರು.
“ಕವಿಗಳು ಕಂಡ ಶ್ರೀಕೃಷ್ಣ’ ವಿಷಯದಲ್ಲಿ ಕವನ ಗಳಿಂದಲೇ ಮನರಂಜಿಸಿದ ಕವಿ ಡುಂಡಿರಾಜ್ ಅವರು ಶ್ರೀಕೃಷ್ಣನನ್ನು ದಾಸವರೇಣ್ಯರು, ಪುತಿನ, ಕೆಎಸ್‌ನ, ಸು.ರಂ. ಎಕ್ಕುಂಡಿ, ಕೆ.ಎಸ್. ನಿಸಾರ್ ಅಹ್ಮದ್, ಜಿಎಸ್‌ಎಸ್, ಎಚ್.ಎಸ್. ವೆಂಕಟೇಶಮೂರ್ತಿ ಅವರ ಪದಗಳಲ್ಲಿ ವರ್ಣಿಸಿದರು. 1985ರಲ್ಲಿ ತಮ್ಮ ಪ್ರಥಮ ಸಂಕಲನದಲ್ಲಿ ಬರೆದ ಕವಿತೆಯಿಂದ ಆರಂಭಿಸಿ ಪ್ರಸ್ತುತ ವರ್ಷದಲ್ಲಿ ಬಿಡುಗಡೆಗೊಂಡ ಕನಕನ ಕಿಂಡಿ ಸಂಕಲನದಲ್ಲಿ ಶ್ರೀಕೃಷ್ಣನ ಕುರಿತಾಗಿ ತಾವು ಬರೆದ ಕವಿತೆಗಳನ್ನು ವಾಚಿಸಿ ಜನರಿಗೆ ರಂಜನೆಯನ್ನು ನೀಡಿದರು. ಇಷ್ಟೆಲ್ಲಾ ಶ್ರೀಕೃಷ್ಣನನ್ನು ವರ್ಣಿಸಿದರೂ ಅದು ಕುರುಡರು ಆನೆಯನ್ನು ಕಂಡಂತೆ ಎಂದು ಹೇಳಿದರು.
ಶ್ರೀ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸಾಗರಕಟ್ಟೆ ಸ್ವಾಮಿಗಳು ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲರಾದ ಪ್ರೊ| ಎಂ.ಎಲ್. ಸಾಮಗ ಸ್ವಾಗತಿಸಿ, ವಂದಿಸಿದರು.