Advertisement
ಹನಿ ಕೂಡಿ ಹಳ್ಳ ತೆನೆ ಕೂಡಿ ಕಣಜ ಎಂಬ ಮಾತಿಗೆ ಅನುಗುಣವಾಗಿ ಬದುಕಿನಲ್ಲಿ ಉಳಿತಾಯಕ್ಕೆ ಪ್ರಾಧಾನ್ಯ ನೀಡುವ ಬುದ್ಧಿವಂತ ಮತ್ತು ದೂರದೃಷ್ಟಿಯ ಹಲವರಲ್ಲಿ ಸಹಜವಾಗಿಯೇ ಉಳಿಸಿದ ಹಣ ಬೆಳೆಯುತ್ತಿರುತ್ತದೆ. ಆದರೆ ಹೀಗೆ ಉಳಿಸಿದ ಹಣ ಒಂದು ಲಕ್ಷ ರೂಪಾಯಿ ಆದಾಗ ಅದನ್ನು 1 ವರ್ಷಕ್ಕಿಂತ ಕಡಿಮೆ ಅವಧಿಗೆ ಲಾಭದಾಯಕವಾಗಿ ಎಲ್ಲಿ ಇಡೋಣ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಏಕೆಂದರೆ 1 ಲಕ್ಷ ರೂ.ಗಳನ್ನು ಹಾಗೆಯೇ ಎಸ್ ಬಿ (ಉಳಿತಾಯ) ಖಾತೆಯಲ್ಲಿ ಇರಿಸಿದರೆ ಸಿಗುವ ಬಡ್ಡಿ ಕೇವಲ ಶೇ.ನಾಲ್ಕು. ಅಂತಿರುವಾಗ ಇದಕ್ಕಿಂತ ಹೆಚ್ಚಿನ ಬಡ್ಡಿಗೆ, ಆದರೆ ನೆನಪಿಡಿ – ಸುರಕ್ಷಿತವಾಗಿ, ಎಲ್ಲಿ ಇರಿಸೋಣ ಎಂಬುದನ್ನು ನಾವು ತಿಳಿಯಬೇಕಾಗುತ್ತದೆ.
Related Articles
Advertisement
ಪೋಸ್ಟ್ ಆಫೀಸ್ ಅವಧಿ ಠೇವಣಿಗಳು : ಇವುಗಳು 1, 2, 3, ಮತ್ತು 5 ವರ್ಷಗಳದ್ದಾಗಿರುತ್ತವೆ. ಕಿರು ಅವಧಿಯ ಉದ್ದೇಶಕ್ಕಾದರೆ ಒಂದು ವರ್ಷದ ಅವಧಿಯನ್ನು ಆಯ್ಕೆ ಮಾಡಬಹುದು. ಒಂದು ವರ್ಷದ ಅವಧಿಯ ಠೇವಣಿಯ ಮೇಲೆ ವಾರ್ಷಿಕ ಬಡ್ಡಿ ನೀಡಲಾಗುತ್ತದೆ; ಹಾಗಿದ್ದರೂ ಇದನ್ನು ತ್ತೈಮಾಸಿಕವಾಗಿ ಲೆಕ್ಕ ಹಾಕಲಾಗುತ್ತದೆ.
ಅತ್ಯಂತ ಸುರಕ್ಷಿತವಾಗಿರುವ ಕಾರಣಕ್ಕೆ ನಾವು ಪೋಸ್ಟ್ ಆಫೀಸ್ ಠೇವಣಿಗಳ ಬಗ್ಗೆ ಮತ್ತು ಅವುಗಳಿಗೆ ಸಿಗುವ ಬಡ್ಡಿ ಪ್ರಮಾಣವನ್ನು ತಿಳಿಯುವುದು ಅಗತ್ಯ. ಒಂದು ವರ್ಷದ ಪೋಸ್ಟ್ ಆಫೀಸ್ ಠೇವಣಿಗೆ ಶೇ.6.6, ಎರಡು ವರ್ಷದ ಠೇವಣಿಗೆ ಶೇ.6.7, ಮೂರು ವರ್ಷದ ಠೇವಣಿಗೆ ಶೇ.6.9 ಮತ್ತು ಐದು ವರ್ಷಗಳ ಠೇವಣಿಗೆ ಶೇ.7.4 ದರದಲ್ಲಿ ಪ್ರಕೃತ ಬಡ್ಡಿ ಇದೆ. ಬಡ್ಡಿಯನ್ನು ತ್ತೈಮಾಸಿಕ ನೆಲೆಯಲ್ಲಿ ಲೆಕ್ಕ ಹಾಕಲಾಗುತ್ತದೆ. ಯಾವುದೇ ಮೊತ್ತದ ಠೇವಣಿಗೆ ಇಲ್ಲಿ ಅವಕಾಶವಿದೆ.
ಹಿರಿಯ ನಾಗರಿಕರಿಗೆ ಅತ್ಯಂತ ಸುಭದ್ರವೆನಿಸುವ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ಸ್ ಅಕೌಂಟ್ನಲ್ಲಿ ಗರಿಷ್ಠ 15 ಲಕ್ಷ ರೂ. ಇಡಬಹುದು; ಬಡ್ಡಿ ದರ ಶೇ.8.30 ಇದೆ. ಸೆ.80ಸಿ ಅಡಿ ತೆರಿಗೆ ರಿಯಾಯಿತಿ ಸೌಕರ್ಯವೂ ಇದೆ.
ಪೋಸ್ಟ್ ಆಫೀಸ್ನ ಐದು ವರ್ಷ ಅವಧಿಯ ಎಂ ಐ ಎಸ್ (ಮಂತ್ಲೀ ಇಂಟರೆಸ್ಟ್ ಸ್ಕೀಮ್) ನಲ್ಲಿ ಜಂಟಿ ಹೆಸರಲ್ಲಿ 9 ಲಕ್ಷ ರೂ. ಠೇವಣಿ ಇಡುವುದಕ್ಕೆ ಅವಕಾಶವಿದೆ; ಒಂಟಿ ಹೆಸರಲ್ಲಾದರೆ ಗರಿಷ್ಠ 4.5 ಲಕ್ಷ ರೂ. ಇಡಬಹುದು. ತಿಂಗಳು-ತಿಂಗಳು ಬಡ್ಡಿ ಪಡೆಯುವುದು ಬೇಕಾಗಿಲ್ಲವೆಂದರೆ ಈ ಠೇವಣಿ ಆರಂಭಿಸಿದೊಡನೆಯೇ ಇದರ ಬಡ್ಡಿಗೆ ಅನುಗುಣವಾಗಿ ಐದು ವರ್ಷದ ಒಂದು ಆರ್ ಡಿ (ರಿಕರಿಂಗ್ ಡೆಪಾಸಿಟ್) ಓಪನ್ ಮಾಡಿದರೆ ಐದು ವರ್ಷ ಮುಗಿದಾಗ ಅತ್ತ ಠೇವಣಿ ಮೊತ್ತ ಮತ್ತು ಇತ್ತ ಆರ್ ಡಿ ಮೆಚ್ಯುರಿಟಿ ಮೊಡ್ಡ ಸೇರಿ ಉಳಿತಾಯದ ಗಂಟು ಬಹಳಷ್ಟು ದೊಡ್ಡದಾಗುವುದನ್ನು ಕಾಣಬಹುದು – ಇದೇನೂ ಮ್ಯಾಜಿಕ್ ಅಲ್ಲ; ವಾಸ್ತವ !
ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ
ಸೆ.80ರ ಅಡಿ ತೆರಿಗೆ ವಿನಾಯಿತಿ ಸೌಕರ್ಯದೊಂದಿಗೆ ಆತ್ಯಾಕರ್ಷಕ ಹಣ ಹೂಡಿಕೆಗೆ 20 ವರ್ಷ ಅವಧಿಯ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಖಾತೆ) ಆರಂಭಿಸಬಹುದು.ಇದರ ಮೇಲಿನ ಬಡ್ಡಿ ಶೇ.7.6ರ ಪ್ರಮಾಣದಲ್ಲಿದೆ.
ಕಿಸಾನ್ ವಿಕಾಸ್ ಪತ್ರದಲ್ಲಿ ಹಣ ಇಟ್ಟರೆ ವರ್ಷಕ್ಕೆ ಶೇ.7.3ರ ಬಡ್ಡಿ ಇದೆ. ಮಕ್ಕಳ ಶ್ರೇಯೋಭಿವೃದ್ಧಿಗಾಗಿರುವ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆದರೆ ಅದರಲ್ಲಿ ಇರಿಸುವ ಹಣಕ್ಕೆ ಶೇ.8.10 ಬಡ್ಡಿ ಇದೆ.
ಪಿಪಿಎಫ್, ಕೆವಿಪಿ, ಸುಕನ್ಯಾ ಖಾತೆಗೆ ಸಂಬಂಧಿಸಿ ವಾರ್ಷಿಕ ನೆಲೆಯಲ್ಲಿ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.
ಇದೇ ವೇಳೆ ಇನ್ನೊಂದು ವಿಷಯವನ್ನು ಹೇಳಲೇಬೇಕು : ಒಂದು ವರ್ಷದ ಬಳಿಕದಲ್ಲಿ ಯಾವುದೋ ಒಂದು ನಿರ್ದಿಷ್ಟ ಉದ್ದೇಶಕ್ಕೆ ಒಂದು ನಿರ್ದಿಷ್ಟ ಮೊತ್ತದ ಹಣದ ಗಂಟು ನಿಮಗೇ ಬೇಕೇ ಬೇಕು ಎಂದು ಅನ್ನಿಸಿದಲ್ಲಿ ಈಗಿಂದೀಗಲೇ ಯಾವುದೇ ಬ್ಯಾಂಕಿನಲ್ಲಿ ಆನ್ಲೈನ್ ಮೂಲಕ ಒಂದು ಆರ್ ಡಿ ಓಪನ್ ಮಾಡಿ.
ಉಳಿತಾಯದ ಶಿಸ್ತನ್ನು ರೂಢಿಸಿಕೊಳ್ಳುವುದರೊಂದಿಗೆ ನಿರ್ದಿಷ್ಟ ಉದ್ದೇಶದ ಸಾಧನೆ ಸುಲಭವಾಗುತ್ತದೆ. ಒಂದು ವರ್ಷದ ಬಳಿಕ ಕೈವಶವಾಗುವ ಈ ಉಳಿತಾಯದ ಗಂಟನ್ನು ಅತ್ಯಂತ ಸಮರ್ಪಕ ಉದ್ದೇಶಕ್ಕೆ ಬಳಸುವ ಆಯ್ಕೆ ನಿಮ್ಮದಾಗಿರುತ್ತದೆ. ಆದುದರಿಂದ ಸಾಲದ ಹಣದಿಂದ ಈಡೇರಿಸಿಕೊಳ್ಳಬೇಕೆಂದಿದ್ದ ಯಾವುದೋ ಒಂದು ನಿರ್ದಿಷ್ಟ ಉದ್ದೇಶವನ್ನು ಒಂದು ವರ್ಷದ ಮಟ್ಟಿಗೆ ಪೋಸ್ಟ್ ಪೋನ್ ಮಾಡಿ; ಆ ಮೂಲಕ ಸಾಲವನ್ನು ತಪ್ಪಿಸಿ; ಉಳಿತಾಯದ ಬಲದಲ್ಲೇ ನಿಮ್ಮ ಉದ್ದೇಶ ಸಾಧಿತವಾಗುವ ಸಂತಸವನ್ನು ಎಂಜಾಯ್ ಮಾಡಿ !