Advertisement
ಸರ್ಕಾರ ಅಸ್ಥಿರಗೊಳಿಸುವ ಪ್ರಹಸನದಲ್ಲಿ ಜಿಲ್ಲೆಯ ಹೆಸರು ಪದೇಪದೆ ಕೇಳಿ ಬಂದಿದೆ. ಆರಂಭದಲ್ಲಿ ಕಾಂಗ್ರೆಸ್-ಜೆಡಿಎಸ್ ಬಹುಮತ ಸಾಬೀತಿಗೆ ಮುಂದಾದಾಗ ಜಿಲ್ಲೆಯ ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್‌ಗೌಡ ಪಾಟೀಲ ಆಪರೇಷನ್‌ಗೆ ತುತ್ತಾಗಿದ್ದಾರೆ ಎಂಬುದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಬಿಜೆಪಿ ಜತೆ ಅಷ್ಟು ಜನ ಶಾಸಕರಿದ್ದಾರೆ, ಇಷ್ಟು ಜನರಿದ್ದಾರೆಂಬ ಸುದ್ದಿ ಹರಿದಾಡಿತ್ತಾದರೂ ಬಯಲಾಗಿದ್ದ ಹೆಸರು ಪ್ರತಾಪಗೌಡ ಪಾಟೀಲರದ್ದು ಮಾತ್ರ. ಆದರೆ, ಆಪರೇಷನ್ ಫೇಲ್ ಆದ ಕಾರಣ ಕೊನೇ ಘಳಿಗೆಯಲ್ಲಿ ಸದನಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದರು.
Related Articles
2018ರ ವಿಧಾನಸಭೆ ಚುನಾವಣೆಗೆ 3 ತಿಂಗಳಿರುವಾಗಲೇ ಜಿಲ್ಲೆಯ ಇಬ್ಬರು ಶಾಸಕರು ರಾಜೀನಾಮೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಬಹುಶಃ ಅದು ಕೂಡ ರಾಜ್ಯ ದಲ್ಲಿಯೇ ಮೊದಲ ಚುನಾವಣೋತ್ತರ ರಾಜಕೀಯ ಬೆಳವಣಿಗೆ ಆಗಿತ್ತು. ಜೆಡಿಎಸ್ ಶಾಸಕ ರಾದ ಡಾ| ಶಿವರಾಜ ಪಾಟೀಲ, ಮಾನಪ್ಪ ವಜ್ಜಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಇಬ್ಬರಿಗೂ ಟಿಕೆಟ್ ನೀಡಿದ್ದ ಬಿಜೆಪಿ ಒಂದು ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಜಿಲ್ಲೆಯ ಶಾಸಕರ ಅಸ್ಥಿರ ನಡೆಯಿಂದ ಪಕ್ಷಗಳಿಗೇ ಆತಂಕವಿದೆ. ಈ ಮುಂಚೆ ಮೊದಲ ಬಾರಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ್ದ ದೇವದುರ್ಗದ ಕೆ.ಶಿವನಗೌಡ ನಾಯಕ ಗಣಿಧಣಿಗಳ ಆಪರೇಷನ್‌ಗೆ ತುತ್ತಾಗಿ ಕೆಲವೇ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಬಳಿಕ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ ಮೊದಲ ಬಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು, ಎರಡು ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಈಗ ಮತ್ತೆ ಬಿಜೆಪಿಯತ್ತ ಒಲವು ತೋರಿದ್ದರು. ಮಾನಪ್ಪ ವಜ್ಜಲ್ ಕೂಡ ಬಿಜೆಪಿಯಿಂದ ಜೆಡಿಎಸ್‌ಗೆ ಸೇರಿ ಪುನಃ ಬಿಜೆಪಿಗೆ ಬಂದಿದ್ದರು. ಶಿವರಾಜ ಪಾಟೀಲ ಕೂಡ ಒಮ್ಮೆ ಜೆಡಿಎಸ್‌ನಿಂದ ಗೆದ್ದು ಎರಡನೇ ಬಾರಿಗೆ ಬಿಜೆಪಿಯಿಂದ ಗೆಲುವು ದಾಖಲಿಸಿದ್ದಾರೆ. ಹೀಗೆ ಶಾಸಕರ ಅಸ್ಥಿರ ನಡೆ ಆಯಾ ಪಕ್ಷಗಳಿಗೆ ಅಚ್ಚರಿ ಮೂಡಿಸುವಂತಿದೆ.
– ಸಿದ್ಧಯ್ಯಸ್ವಾಮಿ ಕುಕನೂರ
Advertisement