Advertisement

ಮಕ್ಕಳಿರಲವ್ವಾ ಮನೆತುಂಬ ಎನ್ನುವ ಕಾಲ ಎಲ್ಲಿ ಹೋಯಿತು! 

12:30 AM Mar 03, 2019 | |

ಮಕ್ಕಳನ್ನು ಹುಟ್ಟಿಸಬಾರದಂತೆ!
ಮಹಿಳಾ ದಿನಕ್ಕೆ ಹೊಸಚಿಂತನೆಯಾಗಬಲ್ಲುದೆ?

Advertisement

ಮಕ್ಕಳು ಹೆತ್ತವರೊಂದಿಗೆ ಜೋರಾಗಿ ಜಗಳ ಮಾಡಿದಾಗ ನನ್ನನ್ನು ಹುಟ್ಟಿಸು ಎಂದು ನಾನೇನಾದರೂ ಕೇಳಿದ್ದೀನಾ?’ ಎಂದು ಕೋಪದಲ್ಲಿ ಪ್ರಶ್ನಿಸುವುದುಂಟು. ಕೆಲವರು ಇನ್ನೂ ರೂಕ್ಷವಾಗಿ, “ನಿಮ್ಮ ತೆವಲಿಗೆ ನಾನು ಹುಟ್ಟಿದ್ದೇನೆ ಅಷ್ಟೇ’ ಎಂದೂ ಹೆತ್ತವರ ಬಾಯಿ ಮುಚ್ಚಿಸುತ್ತಾರೆ. ಆದರೆ, ಸಮಸ್ಥಿತಿಯಿಂದ ಯೋಚಿಸಿದರೆ ಅರಿವಿಗೆ ಬರುತ್ತದೆ, ಮಕ್ಕಳ ಅನುಮತಿಯಿಲ್ಲದೆ ನಾವವರನ್ನು ಈ ಭೂಮಿಗೆ ತಂದಿದ್ದೇವೆ. ನಾವು ಕೂಡ ಹೀಗೆಯೇ ಹುಟ್ಟಿನ ಆಯ್ಕೆಯಿಲ್ಲದೆ ಈ ಜಗತ್ತಿಗೆ ಬಂದಿದ್ದೇವೆ. ಅದರ ಅರಿವೇ ಇಲ್ಲದೆ ನಾವು ಬದುಕುತ್ತಿದ್ದೇವೆ. ಆದರೆ, ಇಂದಿನ ಕೆಲವು ಯುವ ಮನಸುಗಳು ಇದನ್ನೊಂದು ತಾತ್ವಿಕ ಪ್ರಶ್ನೆಯಾಗಿಸಿ ಅದಕ್ಕೆ ಅಂದೋಲನದ ರೂಪವನ್ನು ಕೊಡುತ್ತಿದ್ದಾರೆ.

ವಿವಾಹಿತ ಸ್ತ್ರೀಯೊಬ್ಬಳು ತಾನು ಮಗುವನ್ನು ಹೆರಲಾರೆ ಎಂದು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವೇ? ಬಹುಶಃ ಸಾಧ್ಯವಿಲ್ಲ. ಮಕ್ಕಳನ್ನು ಹಡೆದು ವಂಶವನ್ನು ಮುಂದುವರಿಸುವುದೇ ಮದುವೆಯ ಮುಖ್ಯ ಉದ್ದೇಶ. ಆದರೆ, ಮದುವೆಯಾದ ದಂಪತಿ ತಾವು ಮಕ್ಕಳನ್ನು ಪಡೆಯುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರೆ? ಮಧ್ಯವಯಸ್ಸಿನ ಅಂಚಿನಲ್ಲಿ ನಿಂತು ಹಿಂದಿರುಗಿ ನೋಡಿದಾಗ ನನಗಾಗಿ, ನನ್ನವರಿಗಾಗಿ ಮತ್ತು ಸಮಾಜಕ್ಕಾಗಿ ಬದುಕಿದ ಕಾಲಾವಧಿಯನ್ನು  ಅವಲೋಕಿಸಿಕೊಂಡಾಗ ಒಂದು ಸಣ್ಣ ವ್ಯಥೆ ಆವರಿಸಿಕೊಳ್ಳುತ್ತದೆ. 

ಒಂದು ವೇಳೆ ನಾನು ಮದುವೆಯೇ ಆಗದಿರುತ್ತಿದ್ದರೆ? ಮದುವೆಯಾಗಿಯೂ ಮಕ್ಕಳನ್ನು ಹೊಂದಬಾರದು ಎನ್ನುವ ನಿರ್ಧಾರ ಮಾಡಿದ್ದರೆ? ನನ್ನ ಬದುಕು ಹೀಗಿರದೆ ಇನ್ಯಾವ ರೀತಿಯಲ್ಲಿರುತ್ತಿತ್ತು? ಈ “ರೇ’ ಸಾಮ್ರಾಜ್ಯದ ಹರವು ತುಂಬಾ ದೊಡ್ಡದು. ಅದು ಅನಂತ, ಅನೂಹ್ಯ. ಬಹುಶಃ ನನ್ನ ಬದುಕು ಈಗಿನಂತಿಲ್ಲದೆ ಬೇರ್ಯಾವುದೋ ರೀತಿಯಲ್ಲಿ ಇದ್ದಿದ್ದರೂ ಆಗಲೂ ನನ್ನ ಬದುಕು ಇದಲ್ಲ. ನಾನು ಇಲ್ಲಿಗೆ ಸೇರಿದವಳಲ್ಲ ಅಂತ ಅಂದುಕೊಳ್ಳುತ್ತ, ಕವಲು ಹಾದಿಯಲ್ಲಿ  ಖನ್ನಳಾಗಿ ನಿಂತಿರುತ್ತಿದ್ದೆನೇನೋ ಎನಿಸುತ್ತದೆ.

ನಿಜ, ಮಹಿಳೆ ಓದಬೇಕು, ತನ್ನ ಸ್ವಂತ ಕಾಲ ಮೇಲೆ ನಿಲ್ಲಬೇಕು, ಸ್ವಾಭಿಮಾನದಿಂದ ಬದುಕಬೇಕು, ಮದುವೆ ಅವಳದೇ ಆಯ್ಕೆಯಾಗಿರಬೇಕು, ಎಂಬುದು ನನ್ನ ಕಾಲಘಟ್ಟದ ಮಹಿಳೆಯ ಮುಖ್ಯ ಚಿಂತನೆಯಾಗಿತ್ತು. ಮದುವೆಯನ್ನು ನಿರಾಕರಿಸಿಯೂ  ಬದುಕಬಹುದಾದ ವಾತಾವರಣವೂ ಸಮಾಜದಲ್ಲಿತ್ತು. ಆದರೆ ಮದುವೆಯಾಗಿಯೂ ಮಕ್ಕಳನ್ನು ಹೊಂದದ ಬಗ್ಗೆ ನನ್ನ ಸ್ನೇಹವಲಯದಲ್ಲಿ ಚರ್ಚೆಯೇ ಆಗಿರಲಿಲ್ಲ. ಆದರೆ ಇಂದಿನ ತಲೆಮಾರು ಹಾಗಿಲ್ಲ. 

Advertisement

ಮದುವೆಯಿಂದ ನಿನಗೇನು ಸಿಕ್ಕಿತು?
ನಿಸರ್ಗಕ್ಕಿರುವ ಸೃಷ್ಟಿ ಸಾಮರ್ಥ್ಯ ಮತ್ತು ಪಾಲನೆಯ ವಿಸ್ಮಯಕ್ಕೆ ಬೆರಗಾಗುತ್ತ ನಾನೂ ಅದರಲ್ಲಿ ಭಾಗಿದಾರಳು ಎಂಬ ಅಮಲಿನಲ್ಲಿ ವಿವಾಹ ಬಂಧನದ ಮೊದಲ ದಶಕವನ್ನು ಕಳೆದಿದ್ದೆ. ಆಮೇಲಿನ ಖಾಲಿತನವನ್ನು ಯಾವ್ಯಾವುದೋ ಸೃಜನಶೀಲ ಚಟುವಟಿಕೆಗಳಲ್ಲಿ ತುಂಬಿಕೊಳ್ಳಲು ಹೆಣಗಾಡುತ್ತ ಇದ್ದಾಗಲೇ ಮಗಳು ಹರೆಯಕ್ಕೆ ಕಾಲಿಟ್ಟಾಗಿತ್ತು. ಮದುವೆಯ ಬಗೆಗೆ ಅವಳಿಗಿರಬಹುದಾದ ನಿರೀಕ್ಷೆ, ಕುತೂಹಲಗಳ ಬಗ್ಗೆ ಪ್ರಶ್ನಿಸಿದಾಗ ಸಿಡಿಗುಂಡಿನಂತೆ ಬಂದೆರಗಿದ ಪ್ರಶ್ನೆ. “ಮದುವೆಯಿಂದ ನಿನಗೇನು ಸಿಕ್ಕಿತು? ಎರಡು ಮಕ್ಕಳನ್ನು ಹೊತ್ತು, ಹೆತ್ತು ಸಲಹಿದ್ದು ಬಿಟ್ಟರೆ?’ ನಾನು ಉತ್ತರಿಸಲು ತಡಬಡಾಯಿಸುತ್ತಿದ್ದಾಗಲೇ ಅವಳಿಂದ ಮತ್ತೂಂದು ಪ್ರಶ್ನೆ ತೂರಿ ಬಂತು. “ನೀನು ಆ್ಯಂಟಿನಟಲಿಸಂ (Antinatalisum)  ಎಂಬ ಬಗ್ಗೆ ಕೇಳಿದ್ದೀಯಾ?’  ನನಗೆ ನಿಜವಾಗಿಯೂ ಗೊತ್ತಿರಲಿಲ್ಲ. “ಹಾಗೆಂದರೇನು?’ ಅಂದೆ. ಅವಳು ಎರಡು ವಾಕ್ಯದಲ್ಲಿ ಅದರ ಬಗ್ಗೆ ಹೇಳಿ “ಈಚvಜಿಛ ಆಛಿnಚಠಿಚrನ ಪುಸ್ತಕಗಳನ್ನು ಓದು’ ಅಂದಳು. ಅವಳು ಹಾಗೆಯೇ, ಆಗಾಗ ಅದನ್ನು ಓದು, ಇದನ್ನು ನೋಡು ಎಂದು ಹಲವಾರು ಸಲಹೆಗಳನ್ನು ಕೊಡುತ್ತಿರುತ್ತಾಳೆ. ನಾನು ಅದರ ಬಗೆಗೆಲ್ಲ ದಿವ್ಯ ನಿರ್ಲಕ್ಷ್ಯ ತಾಳುತ್ತ ನೆಟ್‌ಫ್ಲಿಕ್ಸ್ ನಲ್ಲಿ ಕೊರಿಯನ್‌ ಡ್ರಾಮಗಳಿಗೆ ಕಣ್ಣು ನೆಟ್ಟು ಕೂತಿರುತ್ತಿದ್ದೆ. ಆದರೆ, ಫೇಸ್‌ಬುಕ್‌ನಲ್ಲಿ ಸ್ಟಾಪ್‌ ಮೇಕಿಂಗ್‌ ಬೇಬಿಸ್‌ ಎಂಬ ಈವೆಂಟ್‌ಗೆ ಅಹ್ವಾನ ಬಂದಾಗ ಆ್ಯಂಟಿನಟಲಿಸಂ ಬಗ್ಗೆ ನಿಜವಾಗಿಯೂ ಕುತೂಹಲ ಹುಟ್ಟಿತು. 

ಈವೆಂಟ್‌ನಲ್ಲಿ ಭಾಗವಹಿಸಲು ಹೆಸರು ನೋಂದಾಯಿಸಿದೆ. ಈ ಬಗ್ಗೆ ನನ್ನ ಸ್ನೇಹವಲಯದಲ್ಲಿ ಪ್ರಸ್ತಾಪಿಸಿದೆ. ಮಹಿಳೆಯರು ಈ ಕಾನ್ಸೆಪ್ಟ್ ಬಗ್ಗೆ ಕುತೂಹಲ ತಾಳಿದರೆ ಪುರುಷರು “ಥತ್‌, ಇದೆಂಥ‌ ಯೋಚನೆ ಇವರಿಗೆಲ್ಲೋ ತಲೆ ಕೆಟ್ಟಿರಬೇಕು, ಹುಚ್ಚರು’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು. ಇಂತಹ ಪ್ರತಿಕ್ರಿಯೆ ಸಹಜವಾದುದೇ ! ಸ್ವಂತಿಕೆಯುಳ್ಳ ಮಹಿಳೆಗೆ ಗೊತ್ತಿರುತ್ತೆ; ತನ್ನ ಗುಣಾತ್ಮಕ ವಾದ ಬದುಕಿನ ಮುಕ್ಕಾಲು ಭಾಗ ತಾಯ್ತನ ಮತ್ತು ಕುಟುಂಬದ ಸಂಭಾಳಿಸುವಿಕೆಯಲ್ಲಿಯೇ ಕಳೆದು ಹೋಗಿರುತ್ತದೆ ಅಂತ. ಇದನ್ನು ಧಿಕ್ಕರಿಸಿ ಬದುಕಿದರೆ ಅವಳಿಗೆ ತಾನು ಯಾರು? ತನ್ನ ಸಾಮರ್ಥ್ಯವೇನು ಎಂಬುದನ್ನು ಅರಿತುಕೊಳ್ಳಲು ಸಮಯಾವಕಾಶ ದೊರೆಯುತ್ತದೆ. ಸಂಪೂರ್ಣ ಬದುಕನ್ನು ಅವಳು ಬಾಳಬಹುದು!

ಆ್ಯಂಟಿನಟಲಿಸ್ಟ್‌ ಎಂದರೆ ಹುಟ್ಟಿನ ಬಗ್ಗೆ  ವಿರೋಧ ಧೋರಣೆ ಹೊಂದಿರುವವರು. ಮಗುವಿಗೆ ಜನ್ಮ ನೀಡುವುದು ನೈತಿಕವಾಗಿ ತಪ್ಪು. ಸ್ಟಾಪ್‌ಮೇಕಿಂಗ್‌ ಬೇಬಿಸ್‌, ಚೈಲ್ಡ… ಫ್ರೀ ಇಂಡಿಯಾ ಎಂಬ ಹೆಸರಿನಡಿ ಚಚೆೆìಯಾಗುತ್ತಿರುವ ಹೀಗೊಂದು ವಾದಕ್ಕೆ ಪ್ರಚಾರ ಮತ್ತು ವೇಗ ಸಿಕ್ಕಿದ್ದು ಮೊನ್ನೆ ಮೊನ್ನೆ ಮುಂಬಯಿಯ ರಪೈಲ್‌ ಸಾಮ್ಯುವೆಲ್‌ ಎಂಬ ವ್ಯಕ್ತಿ ತನ್ನ ತಂದೆತಾಯಿಯರ ಮೇಲೆ, “ನನ್ನ ಒಪ್ಪಿಗೆಯಿಲ್ಲದೆ ನನ್ನನ್ನು ಈ ಭೂಮಿಗೆ ಯಾಕೆ ಕರೆತಂದಿರಿ?’ ಎಂದು ಕೋರ್ಟಿನಲ್ಲಿ ದಾವೆ ಹೂಡಲು ಮುಂದಾದಾಗಲೇ!  

ಸಂಕಷ್ಟಗಳಿಗೆ ಮಕ್ಕಳನ್ನು ದೂಡಬೇಕೇ?
ಡೇವಿಡ್‌ ಬೆನತರ್‌ ದಕ್ಷಿಣ ಆಫ್ರಿಕಾದ ಒಬ್ಬ ಫಿಲಾಸಫ‌ರ್‌ ಮತ್ತು ಬರಹಗಾರ. ಆತ ಹೇಳುತ್ತಾನೆ. “ಹುಟ್ಟು ಎನ್ನುವುದು ನಕರಾತ್ಮಕವಾದುದು. ಮಗುವಿಗೆ ಜನ್ಮ ನೀಡುವುದು ನೈತಿಕವಾಗಿ ತಪ್ಪು. ಹುಟ್ಟಿನಿಂದ ಮನುಷ್ಯ ಒಂದೇ ದೃಷ್ಟಿಯಲ್ಲಿ ಕೊಳೆಯುವ ಸ್ಥಿತಿಯತ್ತ ಜಾರುತ್ತ ಹೋಗುತ್ತಾನೆ. ಈ ಮಧ್ಯದಲ್ಲಿ ಆತ/ಅವಳು ಅನೇಕ ತರಹದ ದೈಹಿಕ ನೋವು, ಡಿಪ್ರಶನ್‌, ಅನ್ಯರ ದೂಷಣೆ, ಗಾಸಿಪ್‌, ಮೋಸ, ವಂಚನೆಗಳ ಕಾರಣದಿಂದಾಗಿ  ಮಾನಸಿಕ ಹಿಂಸೆಗೆ ತುತ್ತಾಗುತ್ತಾನೆ.  ಇದರಿಂದ ಪಾರಾಗಲು ಸಂಗೀತ, ಸಾಹಿತ್ಯ, ನೃತ್ಯ ಮುಂತಾದ ಸೃಜನಶೀಲ ಚಟುವಟಿಕೆಗಳ ಮೊರೆ ಹೋಗುತ್ತಾನೆ. ರಿಲಿಜಿಯನ್‌, ವಿಜ್ಞಾನ, ದೇವರು ಮುಂತಾದವುಗಳನ್ನು ರಕ್ಷಣಾತ್ಮಕವಾಗಿ ಬಳಸಿಕೊಳ್ಳುತ್ತಾನೆ. ಆದರೆ, ಇವೆಲ್ಲ ನೋವಿಗೆ ಹಚ್ಚುವ ಮುಲಾಮ್‌ಗಳಷ್ಟೇ. ಇವು ಆಳದ ನೋವನ್ನು ಶಮನಗೊಳಿಸಲಾರದು. ಇಂತಹ ಸಂಕಷ್ಟಗಳಿಗೆ ಮಕ್ಕಳನ್ನು ದೂಡಬೇಕೇ?’ 

ಸೋಜಿಗದ ವಿಷಯವೆಂದರೆ ಆ್ಯಂಟಿನಟಲಿಸಂಗೆ ಒಂದು ತಾತ್ವಿಕ ತಳಹದಿಯನ್ನು ತಂದುಕೊಟ್ಟ ಈ ಬೆನೆತರ್‌ ತನ್ನ ಖಾಸಗಿತನವನ್ನು ಬಲು ಜತನದಿಂದ ಕಾಪಾಡಿಕೊಂಡಿದ್ದಾನೆ. ಆತನ ಕೌಟುಂಬಿಕ ಬದುಕಿನ ಬಗ್ಗೆ ಹೊರಪ್ರಪಂಚಕ್ಕೆ ಏನೇನೂ ಗೊತ್ತಿಲ್ಲ. ಆತನ ಒಂದು ಭಾವಚಿತ್ರವೂ ಪ್ರಪಂಚಕ್ಕೆ ಬಿಡುಗಡೆಯಾಗಿಲ್ಲ. ಆತನ ಸಂದರ್ಶನ ಮಾಡಿದ್ದು ಬಹುಶಃ ಒಂದೇ ಒಂದು ಪತ್ರಿಕೆ, ಅದು The Newyorker. ಅದರಲ್ಲಿ ಪತ್ರಿಕೆ ಅವರನ್ನು ಪ್ರಪಂಚದ ಅತಿ ದೊಡ್ಡ ನಿರಾಶವಾದಿ ತತ್ವಜ್ಞಾನಿ ಎಂದು ಕರೆದಿದೆ. ಇದರ ಸರಿ-ತಪ್ಪುಗಳು ಏನೇ ಇರಲಿ, ಒಂದಷ್ಟು ಸಮಾನಮನಸ್ಕ ಮನಸ್ಸುಗಳು ಫೆಬ್ರವರಿ 10ರಂದು Stop making babies ಎಂಬ ಬ್ಯಾನರ್‌ನಡಿ ಬೆಂಗಳೂರಿನಲ್ಲಿ ಸಭೆ ಸೇರಿದ್ದಾರೆ! ಎರಡನೆಯ ಸಮಾವೇಶ ಫೆಬ್ರವರಿ 24ರಂದು ದೆಹಲಿಯಲ್ಲಿ ನಡೆದಿದೆ !

ಉಷಾ ಕಟ್ಟೇಮನೆ

Advertisement

Udayavani is now on Telegram. Click here to join our channel and stay updated with the latest news.

Next