ಹೊಸದುರ್ಗಕ್ಷೇತ್ರದಿಂದ ಸ್ಪರ್ಧಿಸಲಿರುವ ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್.
Advertisement
ಹೀಗೆ ಆಶ್ಚರ್ಯಾಘಾತ ಉಂಟಾಗಲು ಕಾರಣವಿಲ್ಲದೆ ಇಲ್ಲ. 2010ರ ಅಕ್ಟೋಬರ್ 11ರಂದು ವಿಧಾನಸಭೆಯಲ್ಲಿ ರೌಡಿತನದ ಮಹಾವತಾರವನ್ನು ಮೆರೆದವರು ಈ ಗೂಳಿಹಟ್ಟಿ. ಆ ದಿನ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಸದನದಲ್ಲಿ ವಿಶ್ವಾಸ ಮತ ಯಾಚಿಸಲು ಮುಂದಾಗಿತ್ತು. ಕೆಲ ಬಿಜೆಪಿ ಶಾಸಕರು ಹಾಗೂ ಪಕ್ಷೇತರ ಶಾಸಕರು ಮುಖ್ಯಮಂತ್ರಿಯ ಮೇಲೆ ತಮಗೆ ವಿಶ್ವಾಸವಿಲ್ಲವೆಂದೂ, ಪಕ್ಷದ ನಾಯಕತ್ವ ಬದಲಾಗಬೇಕಿದೆಯೆಂದೂ ವಿನಂತಿಸುವ ಪತ್ರವನ್ನು ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಆಗಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ವಿಶ್ವಾಸಮತ ಕೋರುವಂತೆ ಸರಕಾರಕ್ಕೆ ಸೂಚಿಸಿದ್ದರು. ರಾಜ್ಯಪಾಲರಿಗೆ ಪತ್ರ ಬರೆದಿದ್ದ ಕಾರಣಕ್ಕಾಗಿ ಗೂಳಿಹಟ್ಟಿ ಶೇಖರ್ ಸಹಿತ 11 ಶಾಸಕರನ್ನು ಆಗಿನ ಸ್ಪೀಕರ್ ಅನರ್ಹಗೊಳಿಸಿದ್ದರು. ಪಕ್ಷಾಂತರ ಪ್ರಸಂಗಕ್ಕೆ ಸಂಬಂಧಿಸಿದಂತೆ ಪಕ್ಷೇತರ ಶಾಸಕರ ಸದಸ್ಯತ್ವವನ್ನು ರದ್ದು ಮಾಡಿದ್ದ ಕ್ರಮವನ್ನು ಸರ್ವೋಚ್ಚ ನ್ಯಾಯಾಲಯ ಮುಂದೆ ರದ್ದು ಪಡಿಸಿತು;ಅದು ಬೇರೆಯೇ ಕತೆ.
ಮೇಲೆ ಹತ್ತಿ ಎದೆ ಎದೆ ಬಡಿದುಕೊಂಡರು; ತೊಟ್ಟಿದ್ದ ಶರಟನ್ನು ಹರಿದುಕೊಂಡು ಕಿರುಚಾಡಿದರು. ನೆನಪಿರಲಿ, ಇದಕ್ಕೆ ಪೂರ್ವದಲ್ಲಿ ಅವರು ಬಿಜೆಪಿ ಸರಕಾರದಲ್ಲಿ ಮಂತ್ರಿಯಾಗಿದ್ದವರು. ಆಗಿನ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸುವಲ್ಲಿ ಬಿಜೆಪಿ ವಿಫಲವಾದುದರಿಂದ, ಪಕ್ಷವು ಆರುಮಂದಿ ಪಕ್ಷೇತರರ ಬೆಂಬಲವನ್ನು ದಕ್ಕಿಸಿಕೊಂಡು ಗೌರವಾನ್ವಿತ ಗೂಳಿಹಟ್ಟಿ ಸಹಿತ ಎಲ್ಲ ಪಕ್ಷೇತರರನ್ನು ಕ್ಯಾಬಿನೆಟ್ ಮಂತ್ರಿಗಳನ್ನಾಗಿ ಮಾಡಿತು. ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಸರಕಾರಕ್ಕೆ ಅಂದು ಅಪಕೀರ್ತಿ ಉಂಟಾಗಲು ಕಾರಣ ಇಂಥ ಆಮದಿತ ಸಚಿವರ ಗುಂಪು; ಜತೆಗೆ ಜಿ. ಜನಾರ್ದನ ರೆಡ್ಡಿಯವರ ನಡವಳಿಕೆ ಹಾಗೂ ಖುದ್ದು ಯಡಿಯೂರಪ್ಪನವರ ಪ್ರಮಾದಗಳು. ಈಗ, ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಹಠದಲ್ಲಿ ಹೋರಾಡುತ್ತಿರುವ ಬಿಜೆಪಿ ಗೂಳಿಹಟ್ಟಿಯವರ ಅಂದಿನ ಆಟಾಟೋಪಗಳನ್ನು ಹಾಗೂ ಮಂತ್ರಿಯಾಗಿ ಅವರು ತೋರಿದ್ದ ಕಳಪೆ ನಿರ್ವಹಣೆಯನ್ನು ದೊಡ್ಡ ಮನಸ್ಸಿನಿಂದ ಕ್ಷಮಿಸಿಬಿಟ್ಟಿದೆ. ಬಿಜೆಪಿಯ ಮಾಜಿ ಕಾನೂನು ಸಚಿವ ಎಸ್. ಸುರೇಶ್ ಕುಮಾರ್ ಅವರೇ ಆಗಾಗ ಹೇಳುವಂತೆ, “ಇಂದು ಸರಕಾರಗಳಿಗೆ ಬೇಕಾಗಿರುವುದು ನಂಬರ್‌ಗಳಷ್ಟೆ; ಮೆಂಬರ್‌ಗಳಲ್ಲ.’ ಸರಕಾರಗಳು ಎಂಎಲ್‌ಎಗಳ ಬೆಂಬಲದ ಆಶ್ವಾಸನೆಯನ್ನು ಬಯಸುತ್ತವೆಯೇ ಹೊರತು ಅವರ ಅರ್ಹತೆಯ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎನ್ನುವುದೇ ಬಹುಶಃ ಅವರ ಮಾತಿನ ಅರ್ಥ.
Related Articles
Advertisement
ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿಗೆ ಯಾಕೆ ಅಭ್ಯರ್ಥಿಗಳ ಕೊರತೆ ಕಂಡು ಬಂದಿದೆ ಎಂಬುದೇ ಅಚ್ಚರಿ. ಗಮನಿಸಿ, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಚಿತ್ರದುರ್ಗ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು; ಹೊಸದುರ್ಗದಲ್ಲಿ ಗೂಳಿಹಟ್ಟಿಯನ್ನು ಬಿಟ್ಟರೂ ಅಂಥದೇ ವಿಜಯ ಸಾಧಿಸುವುದು ಪಕ್ಷಕ್ಕೆ ಸಾಧ್ಯ. ವಸ್ತುಸ್ಥಿತಿ ಇದು – ಗೂಳಿಹಟ್ಟಿಯಂಥವರು ಚಿತ್ರದುರ್ಗ ಜಿಲ್ಲೆಯ ಮರ್ಯಾದೆಗೆ ಕುಂದು ತಂದಿದ್ದಾರೆ; ಈ ಹಿಂದೆ ಎಸ್. ನಿಜಲಿಂಗಪ್ಪ ಹಾಗೂ ಜೆ.ಎಂ. ಇಮಾಮ್‌ರಂಥ ಉನ್ನತ ವ್ಯಕ್ತಿತ್ವದ ನೇತಾರರನ್ನು ಜತೆಗೆ ನಮ್ಮ ಸಮಕಾಲೀನರೇ ಆದ ಕೆ.ಎಚ್. ರಂಗನಾಥ್‌ರಂಥ ಉತ್ತಮ ನಾಯಕರನ್ನು ಈ ಜಿಲ್ಲೆ ಕೊಟ್ಟಿದೆ. ಒಂದು ವೇಳೆ ಈ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬಂದರೆ ರಾಜ್ಯದಲ್ಲಿರುವ ಆರು ಕೋಟಿ ಕನ್ನಡಿಗರು ಮತ್ತಿತರ ಭಾಷಿಗರಿಗೆ ಅದು ಮಾಡಬೇಕಾದ ಅತ್ಯುತ್ತಮ ಉಪಕಾರವೆಂದರೆ ಗೂಳಿಹಟ್ಟಿಯಂಥವರಿಗೆ ಮತ್ತೆ ಮಂತ್ರಿಗಿರಿ ದಯಪಾಲಿಸುವ ಪ್ರಮಾದವನ್ನು ಎಸಗದಿರುವುದೇ ಆಗಿದೆ.
ಏನಿದ್ದರೂ ಇದು ಅವರು ಆಯ್ಕೆಯಾಗುವುದೋ ಇಲ್ಲವೋ ಎಂಬುದರ ಮೇಲೆ ಅವಲಂಬಿತವಾಗಿದೆಯೆನ್ನಿ. ಬಿಜೆಪಿಯ ಪಾಲಿಗೆ ರಾಜಕೀಯ ಅನಿವಾರ್ಯತೆ ಅಥವಾ ಒತ್ತಡವೆಂಬುದು ಎಷ್ಟೇ ಇದ್ದರೂ ಗೂಳಿಹಟ್ಟಿಯವರಂಥ ಶಾಸಕರು ಹಾಗೂ ಮಂತ್ರಿಗಳಿಲ್ಲದೆಯೂ ಕರ್ನಾಟಕ ಉಳಿದು ಬಾಳೀತು ಎಂಬ ಸತ್ಯವನ್ನು ಅದು ಮರೆಯಕೂಡದು.
ಕೇವಲ ಶಾಸಕರ ಸಂಖ್ಯೆಯಷ್ಟೇ ಮುಖ್ಯ ಹೊರತು ಅರ್ಹ ಸದಸ್ಯರಲ್ಲ ಎಂಬ ಸಿದ್ಧಾಂತಕ್ಕೆ ಕಟ್ಟುಬಿದ್ದಂತಿರುವ ಬಿಜೆಪಿ, ಬೇರೆ ಪಕ್ಷಗಳಿಂದ ಹಾರಿ ಬಂದಿರುವವರನ್ನೂ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವಂಥ ದುಡುಕಿನ ಕ್ರಮಕ್ಕೆ ಮುಂದಾಗಿದೆ. ಜನತಾದಳ, ಕಾಂಗ್ರೆಸ್ ಹಾಗೂ ಬಿಜೆಪಿ ಹೀಗೆ ಮೂರೂ ಪಕ್ಷಗಳ ಒಳಹೊರಗನ್ನು ಕಂಡಿರುವ ಮಾಲೀಕಯ್ಯ ಗುತ್ತೇದಾರ್ ಅವರನ್ನು ಗುಲ್ಬರ್ಗ ಜಿಲ್ಲೆಯ ಅಫjಲ್‌ಪುರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಅವರಷ್ಟು ಸಮೃದ್ಧ ರಾಜಕೀಯ ಅನುಭವ ಹೊಂದಿರುವವರು ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ಅತ್ಯಂತ ಸಮರ್ಥ ವ್ಯಕ್ತಿಯೆಂದು ಪರಿಗಣಿತರಾಗಿರುವ ಅವರಲ್ಲಿ ಇನ್ನೂ ಬೇರೆ ಕೆಲವು ಯೋಗ್ಯತೆಗಳಿವೆ.
14ನೆಯ ಕರ್ನಾಟಕ ವಿಧಾನಸಭೆಯ ಅವಧಿ ಪೂರ್ಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಸದನದ ಶಾಸಕರನ್ನು ಅಭಿನಂದಿಸುವುದು ಅಷ್ಟೇನೂ ಅನುಚಿತವೆನ್ನಿಸಲಾರದು! ಸದನದಲ್ಲಿ ಸದಸ್ಯರು ಈ ಬಾರಿಯೂ ಪ್ರತಿಭಟನೆಗೆ ಇಳಿದಿರಬಹುದು; ಪ್ರತಿಭಟನೆಯ ಹೆಸರಲ್ಲಿ ಸದನದ ಅಂಗಣಕ್ಕೆ ಧುಮುಕಿ ಕಲಾಪಕ್ಕೆ ಅಡ್ಡಿತಂದಿರಬಹುದು. ಆದರೆ ಗೂಳಿಹಟ್ಟಿ ಮಾದರಿಯ ಪ್ರತಿಭಟನೆಯ ಪುನರಾವರ್ತನೆಯಾಗಿಲ್ಲ. ಸದನದ ಚರ್ಚೆಗಳಲ್ಲಿ ಭಾಗವಹಿಸಬೇಕೆಂಬ ಆಸಕ್ತಿಯುಳ್ಳ ಶಾಸಕರ ದುರದೃಷ್ಟವೆಂಬಂತೆ ಸದನ ಸರಾಸರಿ ಒಂದು ವರ್ಷದಲ್ಲಿ 44 ದಿನ ಮಾತ್ರ ಬೈಠಕ್ ನಡೆಸಿದಂತಾಗಿದೆ. ಕಳೆದ ಐದು ವರ್ಷಗಳಲ್ಲಿ ಸದನ 216 ದಿನಗಳಲ್ಲಷ್ಟೆ ಬೈಠಕ್ ನಡೆಸಿದೆ. ತಮ್ಮ ಸಾಧನೆಗಳ ಆಧಾರದಲ್ಲಿ ಈಗ ಪುನರಾಯ್ಕೆ ಬಯಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಮಂತ್ರಿಗಳು ಶಾಸನ ಸಭಾ ಕಲಾಪಗಳ ವಿಷಯದಲ್ಲಿ ಮಾಡಿರುವ ಸಾಧನೆ ಕಳಪೆಯಾಗಿದೆ ಎಂದೇ ಹೇಳಬೇಕಾಗಿದೆ.
ಸರಕಾರಗಳು ಶಾಸಕರನ್ನು ಶಾಸಕಾಂಗದ ಕಾರ್ಯಕಲಾಪಗಳಲ್ಲಿ ನಿರತರಾಗುವಂತೆ ನೋಡಿಕೊಳ್ಳಬೇಕು. ಇದು ಸಾಧ್ಯವಾಗದಿದ್ದಾರೆಅವರು ಸದನೇತರ ಚಟುವಟಿಕೆಗಳಲ್ಲಿ ಮುಳುಗಿ ಸಾರ್ವಜನಿಕರ ಹಣ ಹಾಗೂ ಸಮಯವನ್ನು ಪೋಲು ಮಾಡುತ್ತಾರೆಂದೇ ಅರ್ಥ. ಅರ್ಥಾತ್ ಎಲ್ಲವನ್ನೂ ರಾಜಕೀಯಗೊಳಿಸುವುದು, ಸರಕಾರದ ವ್ಯವಹಾರಗಳಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ಗುತ್ತಿಗೆಗಳ ಬಟವಾಡೆಯಲ್ಲಿ ಮೂಗು ತೂರಿಸುವುದು, ಹಣ ಸಂಗ್ರಹದಂಥ ಅಕ್ರಮದಲ್ಲಿ ವ್ಯಸ್ತವಾಗಿರುವುದು ಇಂಥವೇ ಕೆಲ ಲೀಲೆಗಳಲ್ಲಿ ನಿರತರಾಗಿರುತ್ತಾರೆಂದರ್ಥ. ಏಳು ವರ್ಷಗಳ ಹಿಂದೆ ನಡೆದ ಗೂಳಿಹಟ್ಟಿ ಶೇಖರ್ ಅವರ ಅಭಾಸಕರ ಪ್ರಸಂಗದ ಬಗ್ಗೆ ಇಷ್ಟು ಸುದೀರ್ಘವಾಗಿ ಬರೆದಿರುವುದಕ್ಕೆ ಕಾರಣವಿದೆ. ಈ ಬಾರಿಯ ಬಜೆಟ್ ಅಧಿವೇಶನ ಎಷ್ಟೊಂದು ಅಭಾಸಕರ ರೀತಿಯಲ್ಲಿ ವಿಫಲಗೊಂಡಿತೆಂಬುದನ್ನು ಗಮನಿಸಿ. ಜಂಟಿ ಅಧಿವೇಶನದಲ್ಲಿ ಅರುಣ್ ಜೇತ್ಲಿಯವರು 2018-19ನೆಯ ಸಾಲಿನ ಬಜೆಟ್ ಮಂಡನೆ ಮಂಡಿಸಿದರಷ್ಟೇ ಕಲಾಪಕ್ಕೆ 89.25 ಲಕ್ಷ ರೂ.ಗಳಷ್ಟು ಸಾರ್ವಜನಿಕ ಹಣ ಖರ್ಚಾಗಿದೆ. ಆದರೆ ಲೋಕಸಭೆ ಸಮಾವೇಶಗೊಂಡ ಬಳಿಕ ಹೆಚ್ಚಿನ ದಿನಗಳಲ್ಲಿ ಸದನದಲ್ಲಿ ಶಿಸ್ತಿನ ಗಂಧಗಾಳಿಯೆಂಬುದು ಕಿಂಚಿತ್ತೂ ಇಲ್ಲದೆ ಹೋದುದರಿಂದ ಬಜೆಟ್ ಬಗ್ಗೆ ಚರ್ಚೆ ನಡೆಸದೆಯೇ ಅದನ್ನು ಅನುಮೋದಿಸಬೇಕಾಯಿತು. ವಿವಿಧ
ಸಚಿವಾಲಯಗಳ ಅನುದಾನ ಕುರಿತ ಬೇಡಿಕೆಗಳ ಬಗೆಗಿನ ಚರ್ಚೆಯೂ ನಡೆಯಲಿಲ್ಲ. ಕಲಾಪ ಅಸ್ತವ್ಯಸ್ತಗೊಂಡಿರುವುದಕ್ಕೆ ಸರಕಾರ ಕಾರಣವೆಂಬ ಆರೋಪವನ್ನು ಅದು ತನ್ನ ಹೆಗಲಿಂದ ಕೊಡವಿಕೊಳ್ಳುವಂತಿಲ್ಲ. ಕೇಂದ್ರ ಸರಕಾರ ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಲಿಲ್ಲವೆಂಬ ಕೋಪದಿಂದ ತೆಲುಗುದೇಶಂ ಸದಸ್ಯರು ಸರಕಾರದಿಂದ ಬೆಂಬಲ ಹಿಂದೆಗೆದುಕೊಂಡು ಕಲಾಪಕ್ಕೆ ಅಡ್ಡಿ ಪಡಿಸಿದ್ದೂ ಆಯಿತು. ಹಾಗೆ ನೋಡಿದರೆ ಆಂಧ್ರ ಪ್ರದೇಶಕ್ಕೆ ರಾಜ್ಯ ವಿಭಜನೆಯ ಬಳಿಕ ಹಲವು ನಷ್ಟಗಳುಂಟಾಗಿವೆ; ಎಲ್ಲ ರೀತಿಯಿಂದಲೂ ಪ್ರಾಮುಖ್ಯ ಪಡೆದಿರುವ ನಗರವಾದ ಹೈದರಾಬಾದನ್ನೂ ಅದು ಕಳೆದುಕೊಂಡಿದೆ. ಜೈರಾಂ ರಮೇಶ್ ಹಿತವಚನ
ಕೇಂದ್ರ ಸರಕಾರ ಈಗ ಕಾಂಗ್ರೆಸ್ ಸಂಸದ ಮಾಜಿ ಕೇಂದ್ರ ಸಚಿವ ಜೈರಾಂ ರಮೇಶ್ ಅವರ “ಹಿತವಚನ’ಕ್ಕೆ ಕಿವಿಗೊಡಬೇಕು. ಸಂಸತ್ತಿನ ಕಲಾಪಗಳಿಗೆ ಅಡ್ಡಿಯಾಗಿದೆ; ಜ್ವಲಂತ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಮಸ್ಯೆಗಳ ಬಗೆಗಿನ ಚರ್ಚೆಗಾಗಿ, ಅದೇ ರೀತಿ
ಪರಿಶೀಲನೆಗೆ ಬಾಕಿಯಿರುವ ತುಂಬ ಮುಖ್ಯವಾದ ಮಸೂದೆಗಳ ಬಗೆಗಿನ ಚರ್ಚೆಗಾಗಿ ಎರಡು ವಾರಗಳ ವಿಶೇಷ ಅಧಿವೇಶನ ಕರೆಯಬೇಕು ಎನ್ನುವುದು ಜೈರಾಂ ರಮೇಶ್ ಅವರ ಸಲಹೆ. ಸಂಸತ್ತಿನ ಕಲಾಪಗಳಿಗೆ ಭಂಗ ಉಂಟಾಗಿರುವುದು ಅದರ ಘನತೆಗೇ ಕುಂದುಂಟು ಮಾಡಿರುವ ಸಂಗತಿ. ಬೆಂಗಳೂರು ಮೂಲದವರಾದ ಜೈರಾಂ ರಮೇಶ್ ಅವರಿಂದ ಈ ಸಲಹೆ ಬಂದಿರುವುದು ಈ ಹಿನ್ನೆಲೆಯಲ್ಲಿ. ಹೀಗೆ ಕಲಾಪ ಮೂರಾಬಟ್ಟೆಯಾಗಿರುವ ವಿದ್ಯಮಾನ ಒಂದು ಸಾಮೂಹಿಕ ವೈಫಲ್ಯ; ಇದರಲ್ಲಿ ಸರಕಾರ ಕೂಡ ಸೇರಿಕೊಂಡಂತಾಗಿದೆ ಎಂದಿದ್ದಾರೆ ರಾಜ್ಯ ಸಭಾಧ್ಯಕ್ಷರಾದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು. ರಾಜ್ಯಸಭೆಯ ಉಪಸಭಾಪತಿ ಪಿ.ಜೆ. ಕುರಿಯನ್ ಅವರು ತಮ್ಮ ವಿದಾಯ ಭಾಷಣದಲ್ಲಿ, ಕಳೆದ 30 ವರ್ಷಗಳ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಗುಣಮಟ್ಟ, ಕುಸಿಯುತ್ತ ಬಂದಿರುವುದನ್ನು ಉಲ್ಲೇಖೀಸಿದ್ದಾರೆ. ಹಿಂದಿನ ಕಾಲದಲ್ಲಿ ವಿಪಕ್ಷೀಯ ಸದಸ್ಯರು ಸಭಾತ್ಯಾಗ ಮಾಡಿದರೆ, ಅದೇ ದೊಡ್ಡ ರೀತಿಯ ಪ್ರತಿಭಟನೆ ಎಂದು ಪರಿಗಣಿಸಲ್ಪಡುತ್ತಿತ್ತು. ಇಂದು ಇದರ ಬದಲಿಗೆ ಸದನದ ಅಂಗಣಕ್ಕೆ ಧುಮುಕುವುದು, ಘೋಷಣೆಗಳನ್ನು ಮೊಳಗಿಸಿ ಕಲಾಪಕ್ಕೆ ಅಡ್ಡಿ ಪಡಿಸುವುದು, ಕಾಗದ ಪತ್ರಗಳನ್ನು ಹರಿದು ಚೆಲ್ಲಾಡುವುದು. ಮುಂತಾದ ಅಬ್ಬರದ ವರ್ತನೆಗಳು ಪ್ರತಿಭಟನೆಯ ಹೆಸರಿನಲ್ಲಿ ನಡೆಯುತ್ತಿವೆ. ಸದನ ಸಭಾಧ್ಯಕ್ಷರು/ಸಭಾಪತಿಗಳು ಕಟ್ಟುನಿಟ್ಟಾಗಿ ನಡೆದುಕೊಳ್ಳಬೇಕು; ಪ್ರತಿಭಟನೆ ನಡೆಸುವ ಸದಸ್ಯರನ್ನು ಹೊರಹಾಕುವಂತೆ ಮಾರ್ಷಲ್‌ಗಳಿಗೆ ಆದೇಶ ನೀಡಬೇಕು ಎಂದು ಹೇಳುವವರಿದ್ದಾರೇನೋ ನಿಜ. ಆದರೆ ಇಲ್ಲೂ ಸಮಸ್ಯೆಗಳಿವೆ. ಎಲ್ಲೋ ಕೆಲವು ಮಂದಿ ನಿಯಮ ಭಂಗಿಸಿ ಬೇಕಾಬಿಟ್ಟಿ ವರ್ತಿಸಿದರೆ, ಅವರನ್ನು ಹೊರಗಟ್ಟುವುದು ಸುಲಭ. ಆದರೆ ಇಡೀ ವಿಪಕ್ಷವೇ ಒಟ್ಟಾಗಿ ಪ್ರತಿಭಟಿಸಿದರೆ, ಅವರನ್ನು ನಿಭಾಯಿಸುವುದು ಕಷ್ಟ ಸಾಧ್ಯ, ಸಂಸತ್ತೆಂಬುದು ಅಸ್ತಿತ್ವದಲ್ಲಿರುವುದು ಚರ್ಚೆ – ಸಂವಾದ ನಡೆಸುವ
ಸಲುವಾಗಿಯೇ ವಿನಾ ನೈಜ ಅಥವಾ ನಕಲಿ ಕೋಪದ ಪ್ರದರ್ಶನಕ್ಕಲ್ಲ ಎಂಬ ಏಕಾಭಿಪ್ರಾಯವನ್ನು ಕೇಂದ್ರ ಸರಕಾರ ಹಾಗೂ ವಿರೋಧಪಕ್ಷಗಳೆರಡೂ ತಳೆಯಬೇಕಾದ ಅಗತ್ಯವಿದೆ; ಇಂಥ ಏಕಾಭಿಪ್ರಾಯ ತಳೆಯಲು ಇದೇ ಸೂಕ್ತ ಕಾಲ.