Advertisement

Life: ಬದುಕಿನ ಮುಂದಿನ ನಿಲ್ದಾಣ ಎಲ್ಲಿಗೊ…

03:25 PM May 23, 2024 | Team Udayavani |

ಬದುಕು ಅಂದ್ರೆನೆ ಹಾಗೆ ಅನಿಶ್ಚಿತ ತಿರುವುಗಳು, ಎದುರಾಗುವ ಸಮಸ್ಯೆಗಳು, ಕೇಳದೆ ಬಂದು, ಹೇಳದೆ ಹೋಗುವ ಅನಿರೀಕ್ಷಿತ ಸಂಬಂಧಗಳು, ಗೋಚರಿಸದ ಬದುಕಿನ ಮಾರ್ಗ. ಹೀಗೆ ಮಾನವನ ಜೀವನ ನೂರೆಂಟು ತಿರುವು, ಜಜಾಂಟಗಳಿಂದ ಸಾಗುವ ದಾರಿಯು ಕಲ್ಲು ಮುಳ್ಳುಗಳಂತೆ ಕಾಣಿಸುತ್ತದೆ.

Advertisement

ಮನುಷ್ಯ ಬಾಲ್ಯದಲ್ಲಿ ಮಾತ್ರ ಮಾನವ ಜೀವನವನ್ನು ಸಂತೃಪ್ತಿಯಾಗಿ ಅನುಭವಿಸಲು ಸಾಧ್ಯ. ಬಾಲ್ಯದಲ್ಲಿ ಮನುಷ್ಯನಿಗೆ ಮುಂದೆ ಏನು ಎಂಬ ಪರಿಕಲ್ಪನೆ ಇಲ್ಲದೆ, ವಾಸ್ತವದಲ್ಲಿ ಜೀವಿಸಿ ಬೆಳೆದು ದೊಡ್ಡವನಾಗುತ್ತಾನೆ. ಬಾಲ್ಯದಲ್ಲಿ ಕಷ್ಟ- ಸುಖ, ನೋವು, ಆಸೆ, ನಾನು-ನನ್ನದು ಎಂಬ ಯಾವುದರ ಪರಿವೇ ಇಲ್ಲದೆ ಮುಗ್ಧ, ನಿಷ್ಕಲ್ಮಶ ಮನೋಭಾವದಿಂದ ಎಲ್ಲರೊಳಗೊಂದಾಗಿ ಬದುಕುತ್ತಾನೆ. ಬದುಕಿನ ಬಗ್ಗೆ ಮುಂದಾಲೋಚನೆ ಇಲ್ಲದಿರುವ ವಯಸ್ಸದು.

ಯಾವಾಗ ಮನುಷ್ಯ ಬಾಲ್ಯದಿಂದ ಯೌವ್ವನಾವಸ್ಥೆಗೆ ಬರುತ್ತಾನೋ, ಆಗ ಬದುಕಿನ ನಿಜವಾದ ಸವಾಲುಗಳನ್ನು ಎದುರಾಗುತ್ತವೆ. ಈ ಸಮಯದಲ್ಲಿ ಯುವಕರಿಗೆ ಪ್ರೀತಿ-ಪ್ರೇಮ, ಮೋಜು ಮಸ್ತಿ, ಇನ್ನಿಲ್ಲದ ಆಕರ್ಷಣೆಗಳು, ಕಂಡದ್ದೆಲ್ಲ ಪಡೆದುಕೊಳ್ಳಬೇಕೆಂಬ ಹಂಬಲ, ಇವುಗಳು ಯುವಕರ ಮನಸ್ಸುಗಳಲ್ಲಿ ಚಂಚಲತೆ ಸೃಷ್ಟಿಸುತ್ತವೆ. ಯೌವ್ವನಾವಸ್ಥೆ ಯುವಕರ ಜೀವನದ ಬಹುದೊಡ್ಡ ಘಟ್ಟ, ತಮ್ಮ ಜೀವನವನ್ನು ಉಜ್ವಲಗೊಳ್ಳಿಸುವ ಅಥವಾ ಹಾಳು ಮಾಡಿಕೊಳ್ಳುವ ಎರಡು ದಾರಿಗಳು ಅವರ ಮುಂದೆ ಇರುತ್ತವೆ ಅವುಗಳಲ್ಲಿ ಸರಿಯಾದದ್ದನ್ನು ಆಯ್ಕೆ ಮಾಡಿಕೊಳ್ಳುವುದು ಅವರ ಕೈಯಲ್ಲೇ ಇದೆ

ಒಂದು ನಿರ್ದಿಷ್ಟ ವಯೋಮಿತಿಗೆ ಬಂದ ಅನಂತರ ಮನುಷ್ಯನಿಗೆ ಮದುವೆ, ಮಕ್ಕಳು, ಸಂಸಾರ, ಕೌಟುಂಬಿಕ ಜವಾಬ್ದಾರಿ ಹೀಗೆ ನಾನಾ ರೀತಿಯ ಜವಾಬ್ದಾರಿಯ ನೇಗಿಲು ಅವನ ಬೆನ್ನ ಮೇಲಿರುತ್ತದೆ. ತನ್ನ ಸುಖ-ಸಂತೋಷಕ್ಕಿಂತ, ತನ್ನ ನಂಬಿದವರ ಸುಖ-ಸಂತೋಷಕ್ಕೆ ಶ್ರಮಿಸುತ್ತಾನೆ. ಇಷ್ಟರಲ್ಲೇ ತನ್ನ ಜೀವನವನ್ನು ದೂಡುತ್ತಾ, ಮುಪ್ಪಿನ ಅವಧಿಯಲ್ಲಿ ತನ್ನ ಕೊನೆಯ ದಿನಗಳ ಕಳೆಯುತ್ತ ಜೀವಿಸುತ್ತಾನೆ. ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡು, ಕೇಳದೆ ಬಂದು, ಹೇಳದೆ ಹೋಗುವ ಎಷ್ಟೋ ಸಂಬಂಧಗಳನ್ನು ಕಾಣುತ್ತಾನೆ.

ಮಾನವನ ಜೀವನ ಒಂದು ಬಸ್‌ ಇದ್ದ ಹಾಗೆ, ತನ್ನ ಪ್ರಾರಂಭದ ಹಂತದಿಂದ, ತಾನು ತಲುಪಬೇಕಾದ ನಿರ್ದಿಷ್ಟ ಪ್ರದೇಶದವರೆಗೂ ಸಾಕಷ್ಟು ಪ್ರಯಾಣಿಕರು ಹತ್ತಿ, ತಮ್ಮ ನಿಲ್ದಾಣ ಬಂದ ತಕ್ಷಣ ಇಳಿದು ಹೋಗುತ್ತಾರೆ. ಬಸ್‌ ಸಂಚರಿಸುವ ದಾರಿ ಒಂದೇ ರೀತಿಯಾಗಿರುವುದಿಲ್ಲ.

Advertisement

ಕೆಲವು ಒಳ್ಳೆಯ ರಸ್ತೆಗಳಾದರೆ, ಇನ್ನೂ ಕೆಲವು ಕೆಟ್ಟ ರಸ್ತೆಗಳು ಇರುತ್ತವೆ ಅವುಗಳನ್ನ ಎದುರಿಸಿ, ಬಸ್‌ ತಾನು ತಲುಪಬೇಕಾದ ನಿಲ್ದಾಣವನ್ನು ಸೇರುತ್ತದೆ. ಹಾಗೆ ಬಾಲ್ಯದಿಂದ ಹಿಡಿದು ಮುಪ್ಪಿನಅವಸ್ಥೆಯವರೆಗೂ ಮನುಷ್ಯನ ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡು ಇರುತ್ತದೆ ಎಲವುಗಳನ್ನು ಸರಿಯಾಗಿ ನಿಭಾಯಿಸಿಕೊಂಡು ಹೋದಾಗ ಮಾತ್ರ ತಾನು ಸೇರಬೇಕಾದ ನಿಲ್ದಾಣವನ್ನು ಸೇರುತ್ತಾನೆ.

ಜೀವನದಲ್ಲಿ ಬರುವ ಕಷ್ಟ, ಸವಾಲುಗಳನ್ನು ಸ್ವೀಕರಿಸಿ, ಸಾಧಿಸುವ ದಾರಿಯನ್ನು ಕಂಡುಕೊಳ್ಳಬೇಕು. ಮಧ್ಯದಲ್ಲಿ ಬಂದು ಹೋಗುವ ಸಂಬಂಧಗಳಿಗಾಗಲಿ ಅಥವಾ ಆಕರ್ಷಣೆಗಳಿಗೆ ಒಳಗಾಗದೆ ತಾನು ಸೇರಬೇಕಾದ ಸಾಧನೆಯ ನಿಲ್ದಾಣದ ಬಗ್ಗೆ ಮಾತ್ರ ಯೋಚಿಸಬೇಕು. ಇಷ್ಟಾಗಿಯೂ ಮಾನವ ತನ್ನ ಶಾಶ್ವತ ನಿಲ್ದಾಣವನ್ನು ಸೇರಲು ಸಾಧ್ಯವೇ?

ಇಲ್ಲ. ಮಾನವ ಮರಣ ಹೊಂದಿದರೆ ಅಲ್ಲಿಗೆ ಅವನ ಜೀವನದ ಪ್ರಯಾಣ ಮುಗಿಯಿತು ಅಂತ ಅಂದುಕೊಳ್ಳಬಹುದು. ದೇಹಕ್ಕೆ ಸಾವಿದೆ ಹೊರತು, ಆತ್ಮಕ್ಕೆ ಅಲ್ಲ. ದೇಹ ಮಣ್ಣಾದರು, ಆತ್ಮ ಇನ್ನೊಂದು ದೇಹವನ್ನು ಅರಸಿ ಹೊಸ ಪ್ರಯಾಣವನ್ನು ಪ್ರಾರಂಭಿಸಿ, ತನ್ನ ನಿಲ್ದಾಣ ಬರುವವರೆಗೆ ಸಂಚರಿಸುತ್ತದೆ. ಇದು ಜೀವನ ಚಕ್ರ ಯಾವತ್ತೂ ಸ್ಥಿರವಾಗಿ ನಿಲ್ಲದೇ ಸಂಚರಿಸುತ್ತದೆ.

-ಶಂಕರ ಸನ್ನಟ್ಟಿ

ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next