ಮುದ್ದೇಬಿಹಾಳ: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಮತ್ತು ಪುರುಷರಿಗಾಗಿ ನಿರ್ಮಿಸಿರುವ ಮೂತ್ರಾಲಯದ ಮಲಿನ ನೀರು ಪ್ರಯಾಣಿಕರು, ಸಾರ್ವಜನಿಕರು ಸಂಚರಿಸುವ ಪಾದಚಾರಿ ಕಿರು ರಸ್ತೆಯ ಮೇಲೆ ಹರಿದಾಡಿ ಸುಗಮ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಉಂಟು ಮಾಡಿದ್ದು ಸಾರ್ವಜನಿಕರು ಮತ್ತು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಸ್ ನಿಲ್ದಾಣ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಬರುತ್ತದೆ. ಈಚೆಗೆ ನಿಲ್ದಾಣವನ್ನು ಹೊಸದಾಗಿ ನಿರ್ಮಿಸಲಾಗಿದೆ. ಆದರೆ ಇದುವರೆಗೂ ಮೂಲಸೌಕರ್ಯ ಸರಿಯಾಗಿ ಒದಗಿಸಿಲ್ಲ. ಹೀಗಾಗಿ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಮತ್ತು ನಿಲ್ದಾಣದ ಪ್ರವೇಶ ದ್ವಾರದಲ್ಲಿರುವ ಪುರುಷರ ಮೂತ್ರಾಲಯದ ಮಲಿನ ನೀರು ರಸ್ತೆಯಲ್ಲೆಲ್ಲಾ ಹರಿದು ಸಂಚಾರಕ್ಕೆ ಸಾಕಷ್ಟು ಆತಂಕ ತಂದೊಡ್ಡಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಮೂತ್ರಾಲಯದಿಂದ ಮೂತ್ರ ಹರಿದು ಹೋಗಲು ಚರಂಡಿ ನಿರ್ಮಿಸಿದ್ದರೂ ಆ ಚರಂಡಿ ಇನ್ನೊಂದು ಬದಿ ಪಾದಚಾರಿ ರಸ್ತೆಯಲ್ಲಿ ತೆರೆದುಕೊಳ್ಳುತ್ತದೆ. ಇದನ್ನು ದೊಡ್ಡ ಚರಂಡಿಗೆ ಸಂಪರ್ಕಿಸಿದ್ದರೆ ಸಮಸ್ಯೆಆಗುತ್ತಿರಲಿಲ್ಲ. ದೊಡ್ಡ ಚರಂಡಿಗೆ ಸಂಪರ್ಕಿಸದಿರುವುದು ಮಲೀನ ನೀರು ರಸ್ತೆ ಮೇಲೆ ಹರಿದು, ಕೆಲವೆಡೆ ಮಡುಗಟ್ಟಿ ನಿಂತು ನಿಲ್ದಾಣಕ್ಕೆ ಹೋಗಿ ಬರುವ ಪ್ರಯಾಣಿಕರು ಮೂಗಿಗೆ ಕರವಸ್ತ್ರ ಹಿಡಿದುಕೊಂಡು ಸಂಚರಿಸುವ ಅನಿವಾರ್ಯತೆ ಇಲ್ಲಿದೆ. ಇದರೊಂದಿಗೆ ಸಾರ್ವಜನಿಕ ಶೌಚಾಲಯದ ಮಲೀನ ನೀರು ಕೂಡ ಮಡುಗಟ್ಟಿ ನಿಂತು ಮಳೆ ಬಂದಾಗ ಮೂತ್ರಾಲಯದ ಮಲೀನ ನೀರಿನ ಜೊತೆ ಸೇರಿಕೊಂಡು ಸಣ್ಣ ಹೊಂಡದ ರೂಪವನ್ನು ರಸ್ತೆ ತಾಳುತ್ತದೆ. ಆಗ ಪ್ರಯಾಣಿಕರು ಕಾಂಪೌಂಡ್ ಮೇಲೆ ಇಲ್ಲವೆ, ಅಲ್ಲಲ್ಲಿ ಕಲ್ಲುಗಳನ್ನು ಇಟ್ಟು ಕಲ್ಲುಗಳ ಮೇಲಿಂದಲೇ ಮಲಿನ ನೀರು ದಾಟಿಕೊಂಡು ಹೋಗಬೇಕಾಗುತ್ತದೆ. ಶೌಚಾಲಯ ಮತ್ತು ಮೂತ್ರಾಲಯದ ಮಲಿನ ನೀರು ನಿಲ್ದಾಣದ ಪಕ್ಕದಲ್ಲಿರುವ ಘಟಕದ ಕಾಂಪೌಂಡ್‌ಗೆ ಹೊಂದಿಕೊಂಡಂತಿರುವ ವ್ಯಾಪಾರಿ ಮಳಿಗೆ ಮತ್ತು ಆಸ್ಪತ್ರೆಗಳಿಗೆ ಆಗಮಿಸುವ ಸಾರ್ವಜನಿಕರಿಗೂ ತೊಂದರೆ ಕೊಡತೊಡಗಿದೆ. ಕಟುವಾಸನೆ ಸಹಿಸಲಾಗದೆ ಅನೇಕರು ಘಟಕದ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ನಿಲ್ದಾಣ ಮತ್ತು ಬಜಾರಕ್ಕೆ ಹೋಗಿ ಬರಲು ಈ ಕಿರು ಪಾದಚಾರಿ ಮಾರ್ಗ ಅತ್ಯಂತ ಸಮೀಪದ ರಸ್ತೆ ಎನ್ನಿಸಿಕೊಂಡಿದೆ. ಹೀಗಾಗಿ ಜನತೆ ಈ ರಸ್ತೆ ಬಳಸುವುದು ಅನಿವಾರ್ಯ. ಈ ರಸ್ತೆ ಸಂಚಾರ ಬಂದ್ ಆದಲ್ಲಿ ಅಂದಾಜು ಒಂದು ಕಿ.ಮೀ. ಸುತ್ತುಬಳಸಿ ನಿಲ್ದಾಣ ಮತ್ತು ಬಜಾರಕ್ಕೆ ಹೋಗಿ ಬರಬೇಕಾಗುತ್ತದೆ. ಹೀಗಾಗ ಕಿರು ಪಾದಚಾರಿ ರಸ್ತೆಯಲ್ಲಿ ಮಲೀನ ನೀರು ನಿಲ್ಲದಂತೆ ನೋಡಿಕೊಳ್ಳುವ ಹೊಣೆಯನ್ನು ಸಾರಿಗೆ ಸಂಸ್ಥೆಯವರು ನೋಡಿಕೊಳ್ಳಬೇಕು ಎಂದು ಜನತೆ ಒತ್ತಾಯಿಸಿದ್ದಾರೆ. ಹಲವು ಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿ ಮಲೀನ ನೀರು ಪಾದಚಾರಿ ರಸ್ತೆ ಮೂಲಕ ಹರಿದು ಬರದಂತೆ ಕ್ರಮ ಕೈಗೊಳ್ಳಿ ಎಂದರೂ ಪ್ರಯೋಜನ ಆಗಿಲ್ಲ. ಈಗಲಾದರೂ ಸಾರಿಗೆ ಸಂಸ್ಥೆ ಅಧಿಕಾರಿಗಳು ಎಚ್ಚೆತ್ತುಕೊಂಡು ಪಾದಚಾರಿ ಮಾರ್ಗದಲ್ಲಿ ಮಲೀನ ನೀರು ಹರಿದು ಬರದಂತೆ ಸೂಕ್ತ ಕ್ರಮ ಕೈಗೊಂಡು ಜನರ
ಪರದಾಟ ತಪ್ಪಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮುಂದುವರಿದಲ್ಲಿ ಮಲೀನ ನೀರು ಹರಿಯುವುದು ಬಂದ್ ಆಗದಿದ್ದಲ್ಲಿ ಜನರೊಂದಿಗೆ ಸೇರಿಕೊಂಡು ಘಟಕಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ವ್ಯಾಪಾರಸ್ಥರು, ಪ್ರಯಾಣಿಕರು ಎಚ್ಚರಿಸಿದ್ದಾರೆ.