ಮಕ್ಕಳ ಜೀವನ ಸುಂದರ ಜೀವನವಾಗಬೇಕು. ಅದು ಸಾಧನೆಯ ಮೂಲವಾಗಬೇಕು. ಆದರೆ ಇಂದಿನ ಮಕ್ಕಳ ಜೀವನ ಪ್ರಗತಿಯಲ್ಲಿದೆಯೇ? ಇದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. ಯಂತ್ರಗಳಿಲ್ಲದೆ ಜೀವನವಿಲ್ಲ, ಮೊಬೈಲ್ ಇಲ್ಲದ ದಿನವಿಲ್ಲ, ಇದೇ ಇಂದಿನ ಮಕ್ಕಳ ಜೀವನವಾಗಿದೆ.
ಶನಿವಾರ, ರವಿವಾರ ಬಂದರೆ ಸಾಕು ಕಾಲಹರಣ ಮಾಡುವುದಕ್ಕಾಗಿ ಸ್ನೇಹಿತರೊಡನೆ ಸೇರಿ ಆನ್‌ಲೈನ್ ಗೇಮ್ಸ್, ಪಾರ್ಟಿ, ಧೂಮಪಾನ, ಮದ್ಯಪಾನ, ಕೆಟ್ಟ ಲೈಂಗಿಕ ವಿಡಿಯೋಗಳನ್ನು ನೋಡುವುದು, ಹೀಗೆ ಕೆಟ್ಟ ಅಭ್ಯಾಸಗಳಿಗೆ ವ್ಯಾಸನರಾಗುತ್ತಿದ್ದಾರೆ.
ಹಿಂದೆ, ಮಕ್ಕಳು ತಮ್ಮ ಹಿರಿಯರಿಂದ ನೈತಿಕ ಕಥೆಗಳನ್ನು ಕೇಳುತ್ತಿದ್ದರು. ಅವರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಶಾಲಾ ರಜೆಯಲ್ಲಿ ಮಕ್ಕಳು ತಮ್ಮ ಬೌದ್ಧಿಕ ಮಟ್ಟ, ಸದೃಢ ದೇಹ, ಉತ್ತಮ ಗಾಳಿ ಸೇವನೆ ಹಾಗೂ ಹೊರಗೆ ಆಟವಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಕ್ರಿಯಾಶೀಲರಾಗಿದ್ದರು.
ಆದರೆ ಪ್ರಸ್ತುತ ದಿನಗಳಲ್ಲಿ ಶಾಲೆಗೆ ರಜೆಯಿದ್ದರೆ ಮಕ್ಕಳು ಮೊಬೈಲ್ ನÇÉೇ ಎಲ್ಲ ಆಟ ಆಡುತ್ತಾರೆ. ಕಥೆಗಳು ಮೊಬೈಲ್ ನಲ್ಲೂ ಕೇಳುತ್ತಾರೆ. ಶಾಲೆಯ ಪಾಠಕ್ಕೆ ಪುಸ್ತಕಗಳ ಅಗತ್ಯವೇ ಇಲ್ಲ ಎನ್ನುತ್ತಾರೆ. ಮೊಬೈಲ್ ನೋಡಿ ಬರೆಯುವ ಪರಿಪಾಠ ಇಂದಿನ ಮಕ್ಕಳಲ್ಲಿ ಕಾಣುತ್ತಿದ್ದೇವೆ. ಅದೇ ರೀತಿ ರಜಾ ದಿನಗಳಲ್ಲಿ ಮನೆಯವರೆಲ್ಲ ಸೇರಿ ಊಟ ಮಾಡುವುದೂ ಮರೆತುಹೋಗಿದೆ.
ವಾರದ ಕೊನೆಯ ದಿನ ಅಪ್ಪ, ಅಮ್ಮ, ಮಕ್ಕಳು ಹೋಟೆಲ್ ಗೆ ಹೋಗಿ ಊಟ ಮಾಡುವುದು ಫ್ಯಾಶನ್ ಆಗಿದೆ. ಮಕ್ಕಳ ಮುಂದಿನ ಬದುಕಿಗೆ ಪಾಲಕರ ಪಾತ್ರ ಬಹುಮುಖ್ಯ, ಶಿಕ್ಷಣದ ಜತೆಗೆ ಮಕ್ಕಳಿಗೆ ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಬೇಕು. ಈ ಎಲ್ಲ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಸಂಬಂಧಗಳಿಗೆ ಅರ್ಥ ಬರುತ್ತದೆ. ಇಲ್ಲವಾದರೆ ವೃದ್ಧಾಶ್ರಮವನ್ನೇ ಅವಲಂಭಿಸಬೇಕಾಗುತ್ತದೆ. ಭಾರತ ಸಂಸ್ಕೃತಿಯ ನಾಡು. ಅದನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅದರಿಂದ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕಿದೆ.
-ಗಿರೀಶ ಜೆ.
ವಿ.ವಿ., ತುಮಕೂರು