Advertisement

ಅಲ್ಲಿ , ಇಲ್ಲಿ , ಎಲ್ಲೇ ಆಗಲಿ; ನನಗೂ ಒಂದಿರಲಿ ಟಿಕೆಟ್‌!

12:57 PM Apr 14, 2018 | |

ಸದ್ಯ ಎಲ್ಲ ಮಾಧ್ಯಮಗಳ ಪ್ರಧಾನ ಸುದ್ದಿಗಳ ಶೀರ್ಷಿಕೆಯಲ್ಲಿ ‘ಟಿಕೆಟ್‌’ ಎಂಬ ಪದ ಇದ್ದೇ ಇರುತ್ತದೆ. ಇದು ಚುನಾವಣಾ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಎ. 24ರ ವರೆಗೂ ಇರಲಿದೆ! ಈ ಟಿಕೆಟ್‌ ಆಕಾಂಕ್ಷಿಗಳೇ ಎಲ್ಲ ರಾಜಕೀಯ ಪಕ್ಷಗಳಿಗೆ ಈಗ ಆತಂಕ ಅಥವಾ ತಲೆನೋವನ್ನು ತಂದಿದ್ದಾರೆ.

Advertisement

ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಗೆ ಜಾಗತಿಕ ಮನ್ನಣೆ ಇದೆ. 1947ರಲ್ಲಿ ಸ್ವಾತಂತ್ರ್ಯ ದೊರೆತು, 1951-52ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದಾಗ ಸಂಪೂರ್ಣ ಜಗತ್ತೇ ನಿಬ್ಬೆರಗಾಗಿತ್ತು. ಭಾರತದ ಅಪಾರ ಜನಸಂಖ್ಯೆಯನ್ನು ಗಮನಿಸಿದರೆ, ಈ ಆಧುನಿಕ ಕಾಲಘಟ್ಟದ ಚುನಾವಣೆಯೂ ಕೌತುಕಮಯ!

ಕಾಲಾನುಕಾಲಕ್ಕೆ ರಾಜಕೀಯ ನೆಲೆ ವಿಸ್ತಾರವಾಯಿತು. ಅಂತೆಯೇ ರಾಜ್ಯಗಳ ಸಂಖ್ಯೆಯೂ ಹೆಚ್ಚಿತು; ಆಯ್ಕೆಯಾಗ ಬೇಕಾದ ಸ್ಥಾನಗಳ ಸಂಖ್ಯೆ ಕೂಡ. ಇದಕ್ಕೆ ಅನುಗುಣವಾಗಿ ರಾಜಕೀಯ ಪಕ್ಷಗಳ ಸಂಖ್ಯೆಯೂ ಹೆಚ್ಚಲಾರಂಭಿಸಿತು; ಹೆಚ್ಚುತ್ತಲೇ ಇದೆ. ಇದೇ ವೇಳೆ ಪ್ರಾದೇಶಿಕ ಪಕ್ಷಗಳೂ ರಚನೆಯಾದವು, ಸ್ಪರ್ಧಿಗಳ ಸಂಖ್ಯೆಯೂ ಗಣನೀಯವಾಗಿ ಏರಿತು. ಪ್ರಮುಖ ಪಕ್ಷಗಳ ವಿಭಜನೆ ಕೂಡ ಇದಕ್ಕೆ ಕಾರಣವಾದವು. ಸ್ಥಾನಗಳ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಬಂದಿರುವುದು ಈ ಟಿಕೆಟ್‌ ಸಮಸ್ಯೆಗಳಿಗೆ ಮೂಲ ಕಾರಣ.

ನಿಜಕ್ಕಾದರೆ ಈ ಟಿಕೆಟ್‌ ಅನ್ನುವುದು ಯಾವುದೇ ರೀತಿಯ ವಿತರಣೆಯ ವಸ್ತುವಲ್ಲ. ಅದು ಸಾಮಾನ್ಯವಾಗಿ ಚುನಾವಣಾ ಪ್ರಕ್ರಿಯೆಯ ವೇಳೆ ಬಳಕೆಯಾಗುವ ಪದ.

ಆಕ್ಸ್‌ಫರ್ಡ್‌ ನಿಘಂಟಿನ ಪ್ರಕಾರ ಈ ಟಿಕೆಟ್‌ ಅಂದರೆ a piece of paper or card that gives right, especially to enter a place, travel by public transport..  ಟಿಕೆಟ್‌ ಅನ್ನುವುದು ವಿಶೇಷವಾಗಿ ನಿರ್ದಿಷ್ಟವಾದ ಪ್ರದೇಶ ಪ್ರವೇಶಿಸಲು, ಸಾರ್ವಜನಿಕ ಸಾರಿಗೆ ಯಲ್ಲಿ ಪ್ರಯಾಣಿಸಲು ಹಕ್ಕನ್ನು ನೀಡುವ ಕಾಗದದ ತುಣುಕು.

Advertisement

ಹೀಗೆ ಎಲ್ಲ ರಂಗಗಳಲ್ಲಿಯೂ ಟಿಕೆಟ್‌ ಪದದ ಬಳಕೆ ನಡೆಯುತ್ತಿದೆ. ಪ್ರವೇಶಕ್ಕೆ ಸಂಬಂಧಿಸಿ ವಿಶೇಷ ಬಳಕೆಯಾಗುತ್ತಿದೆ. ಹಾಗಾಗಿ, ಚುನಾವಣೆಯ- ಸ್ಪರ್ಧಾಕಣ ಪ್ರವೇಶಿಸಲು ಈ ಟಿಕೆಟ್‌ ಎಂಬ ಶಬ್ದದ ಬಳಕೆ ಸತತವಾಗಿ ನಡೆಯುತ್ತದೆ. ಟಿಕೆಟ್‌ ಅನ್ನುವುದು ಚುನಾವಣಾ ಪೂರ್ವ ರಂಗದಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ, ಪಕ್ಷದ ವರಿಷ್ಠರಿಂದ ಘೋಷಣೆ ಆಗುತ್ತದೆ. ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿಗಳಿಗೆ ಇದು ಅನ್ವಯಿಸುವುದಿಲ್ಲ. ಈ ಟಿಕೆಟ್‌ ಆಕಾಂಕ್ಷಿಗಳು ಎಷ್ಟು ಪ್ರಭಾವಶಾಲಿಗಳೆಂದರೆ – ಕೆಲವು ರಾಜಕೀಯ ಪಕ್ಷಗಳು ಅವರಿಗೆ ಹೆದರಿ, ತಮ್ಮ ಅಧಿಕೃತ ಅಭ್ಯರ್ಥಿ ಗಳ ಘೋಷಣೆಯನ್ನು ನಾಮಪತ್ರ ಸಲ್ಲಿಕೆಯ ಅಂತಿಮ ದಿನದ ಮೊದಲಷ್ಟೇ ಮಾಡುತ್ತಾರೆ!

ನಿಜಕ್ಕಾದರೆ, ನಾಮಪತ್ರ ಸಲ್ಲಿಸುವ ವೇಳೆ, ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳಿಗೆ ನೀಡುವ ಬಿ ಫಾರ್ಮ್ ಮಾತ್ರವೇ ಚುನಾವಣಾ ಆಯೋಗ ಮಾನ್ಯ ಮಾಡುವ ಅಧಿಕೃತ ದಾಖಲೆಯಾಗಿರುತ್ತದೆ.

ಅಂದ ಹಾಗೆ …
ಆ ನಿರ್ದಿಷ್ಟ ಪಕ್ಷದ ನಾಯಕರು ಧಾರಾಳಿ ಮತ್ತು ದಾಕ್ಷಿಣ್ಯ ಪ್ರವೃತ್ತಿಯವರು. ಬಂಡಾಯ ಅಭ್ಯರ್ಥಿಗಳ ಕೋಪ ಶಮನ ಮಾಡಲು, ವಿಧಾನ ಪರಿಷತ್‌ ಸದಸ್ಯತ್ವ ಕೊಡಿಸುವುದಾಗಿ ಅವರು ಭರವಸೆ ನೀಡುತ್ತಿದ್ದರು. ಆ ಅಸೆಂಬ್ಲಿ ಚುನಾವಣೆಯ ವೇಳೆ ಅವರು ಭರವಸೆ ನೀಡಿದ್ದ ಸಂಖ್ಯೆ ವಿಧಾನ ಪರಿಷತ್‌ನ ಒಟ್ಟು ಸದಸ್ಯರ ಸಂಖ್ಯೆಗಿಂತಲೂ ಹೆಚ್ಚಾಗಿತ್ತು!

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next