ಬೆಂಗಳೂರು: ಪ್ರತಿ ಹದಿನೈದು ದಿನಕ್ಕೆ ಒಂದರಂತೆ 106 ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ, ಕರ್ನಾಟಕದ ಜನರಿಗೆ ಅದರ ಫಲಾನುಭವ ಸಿಗುತ್ತಿಲ್ಲ. ಕಾರಣ ಇಲ್ಲೊಂದು ಭ್ರಷ್ಟ ಹಾಗೂ ನಾಚಿಕೆಗೇಡಿನ ಸರ್ಕಾರದ ಇದೆ. ಎಷ್ಟು ನಾಚಿಗೆ ಗೇಡು ಎಂದರೆ, ಇಲ್ಲಿನ ಸಚಿವರೊಬ್ಬರ ಮನೆ ಮೇಲೆ ದಾಳಿಯಾಗಿ ದೊಡ್ಡ ಸುದ್ದಿಯಾದರೂ, ರಾಜೀನಾಮೆ ಪಡೆಯದಷ್ಟು ನಾಚಿಕೆಗೇಡಿನ ಸರ್ಕಾರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ರಾಜ್ಯ ಬಿಜೆಪಿ ವತಿಯಿಂದ ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಚಿಂತನಾಶೀಲರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ನನ್ನ ರಾಜಕೀಯ ಜೀವನದಲ್ಲಿ ಕಂಡಂತಹ ಅತ್ಯಂತ ಭ್ರಷ್ಟ ಹಾಗೂ ನಾಚಿಕೆಗೇಡಿನ ಸರ್ಕಾರ ಎಂದು ಆರೋಪಿಸಿದರು.
ನಾನಂತೂ ಲೆಕ್ಕ ಕೇಳದೇ ಬಿಡುವುದಿಲ್ಲ: “13ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ 5 ವರ್ಷದಲ್ಲಿ 61,691 ಕೋಟಿ ರೂ. ನೀಡಿದೆ. 14ನೇ ವೇತನ ಆಯೋಗದ ಎನ್‌ಡಿಎ ಅವಧಿಯಲ್ಲಿ 1,86,925 ಕೋಟಿ ಅನುದಾನ ನೀಡಲಾಗಿದೆ. ಹಾಗೆಯೇ ವಿವಿಧ ಯೋಜನೆಯಡಿಯಲ್ಲಿ ಒಟ್ಟಾರೆಯಾಗಿ ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 88,583 ಕೋಟಿ ಅನುದಾನ ಹಾಗೂ ನಮ್ಮ ಸರ್ಕಾರದಿಂದ ಮೂರು ವರ್ಷದಲ್ಲಿ 2,19,506 ಕೋಟಿ ನೀಡಲಾಗಿದೆ. ಅಂದರೆ, ಕೇಂದ್ರ ಅನುದಾನದ ಪ್ರಮಾಣದಲ್ಲಿ ಎರಡೂವರೆ ಪಟ್ಟು ಹೆಚ್ಚಾಗಿದೆ. ಈ ದುಡ್ಡು ಎಲ್ಲಿ ಹೋಗುತ್ತಿದೆ ಎಂಬುದು ತಿಳಿಯುತ್ತಿಲ್ಲ.
ಸಿದ್ದರಾಮಯ್ಯ ಇದರ ಬಗ್ಗೆ ಲೆಕ್ಕ ನೀಡಬೇಕು. ಇಲ್ಲಿನ ಜನರು ಮೂಕ ಪ್ರೇಕ್ಷಕರಾಗಿ ಕೂರಬಾರದು. ನೀವು ಕೇಳಿಲ್ಲ ಅಂದರೆ, ನಾನೇ ಬಂದು ಕೇಳುತ್ತೇನೆ. ನಾನು ಬಿಡುವವನಲ್ಲ” ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ನಾಯಕರು, ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ, ಮಾಜಿ ರಾಜ್ಯಪಾಲ ನ್ಯಾ. ಎಂ. ರಾಮಾಜೋಯಿಸ್, ಸಾಹಿತಿ ಡಾ. ಸುಮತೀಂದ್ರ ನಾಡಿಗ, ಶಿಕ್ಷಣ ತಜ್ಞ ಕೃ. ನರಹರಿ, ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಸಂಪತ್‌ರಾಮನ್, ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ವೈದ್ಯರಾದ ಡಾ.ದೇವಿ ಪ್ರಸಾದ್ ಶೆಟ್ಟಿ, ಡಾ.ಭುಜಂಗ ಶೆಟ್ಟಿ ಸೇರಿ ವಿವಿಧ ಸಂಸ್ಥೆಯ ಮುಖ್ಯಸ್ಥರು, ಸಾಹಿತಿಗಳು, ಶಿಕ್ಷಣ ತಜ್ಞರು, ಆಡಳಿತಾಧಿಕಾರಿಗಳು ಸಾಹಿತಿಗಳು ಸಭೆಯಲ್ಲಿದ್ದರು.