ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅವರ ಬಲಗೈ ಬಂಟನ ಮನೆ ಮೇಲೆ ಐಟಿ ದಾಳಿ ನಡೆದು ಹೈಕಮಾಂಡ್‌ಗೆ 1,000 ಕೋಟಿ ರೂ. ಕಪ್ಪ ಕೊಟ್ಟ ವಿಚಾರ ಬೆಳಕಿಗೆ ಬಂತು. ಸಿದ್ದರಾಮಯ್ಯನವರು ಈ ಹಣವನ್ನು ತಮ್ಮ ಬಜೆಟ್‌ನಲ್ಲಿ ನಿಗದಿ ಮಾಡಿ ಕೊಟ್ಟಿದ್ದರಾ ಎಂದು ಆರೋಗ್ಯ ಸಚಿವ ಡಾ| ಕೆ.ಸುಧಾಕರ್ ಪ್ರಶ್ನೆ ಮಾಡಿದ್ದಾರೆ
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ರಾತೋರಾತ್ರಿ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ, ಎಸಿಬಿ ರಚನೆ ಮಾಡಿತು. ಲೋಕಾ ಯುಕ್ತವನ್ನು ಮುಚ್ಚಿದ್ದಕ್ಕೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಅಂದಿನ ಸಿಎಂ ವಿರುದ್ಧ 50-60 ದೂರು ಬಂದ ಮೇಲೆ ತನಿಖೆ ಆಗುತ್ತೆ ಅನ್ನುವ ಭಯದಿಂದ ಹೀಗೆಲ್ಲ ಮಾಡಿತು ಎಂದರು.
ಸಿಎಜಿ ವರದಿ ಪ್ರಕಾರ 2013- 2018ರಲ್ಲಿ 35 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ. ಡಿ ನೋಟಿಫಿಕೇಷನ್ ಅನ್ನುವುದಕ್ಕೆ ರೀಡೂ ಅನ್ನುವ ಹೊಸ ಪದವನ್ನೇ ಸೃಷ್ಟಿ ಮಾಡಿದ್ದಾರೆ. 10 ಸಾವಿರ ಬೆಂಗಳೂರು ನಿವಾಸಿಗಳಿಗೆ ಅನ್ಯಾಯವಾಗಿದೆ. 900 ಎಕ್ರೆಗೂ ಹೆಚ್ಚು ಜಾಗವನ್ನು ರೀಡೂ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಕೆ.ಜೆ ಜಾರ್ಜ್ ಕಾಂಗ್ರೆಸ್‌ನ ಭ್ರಷ್ಟಾಚಾರಗಳಿಗೆ ನೆರವಾಗಿದ್ದರು. 292 ಕೋಟಿ ರೂ. ವೈಟ್ ಟಾಪಿಂಗ್ ಅಂದಾಜು ಇತ್ತು, ಅದನ್ನ 374 ಕೋಟಿಗೆ ಹೆಚ್ಚಿಸಿದರು. ಯಾಕೆ ಶೇ.25 ಹೆಚ್ಚಳಕ್ಕೆ ಅನುಮತಿ ನೀಡಿದ್ದರು? ಯಾವ ಉದ್ದೇಶಕ್ಕೆ ಹೆಚ್ಚಿಗೆ ಕೊಟ್ಟಿರಿ ಎಂದು ಪ್ರಶ್ನಿಸಿದರು.
ಡಾ| ಕೆ.ಸುಧಾಕರ್ ಈ ಹಿಂದೆ ಯಾವ ಪಕ್ಷದಲ್ಲಿ ಇದ್ದರು? ಕೊರೊನಾ ಸಮಯದಲ್ಲಿ ಲೂಟಿ ಮಾಡಿದ್ದು ಸುಧಾಕರ್ ತಾನೆ? ನಮ್ಮ ಮುಖ ಚೆನ್ನಾಗಿದೆ, ಕನ್ನಡಿಯಲ್ಲಿ ನಿಮ್ಮ ಮುಖನೋಡಿಕೊಳ್ಳಿ. 60 ವರ್ಷ ನಾವು ಲೂಟಿ ಮಾಡಿದ್ದರೆ ತನಿಖೆ ಮಾಡಿಸಿ.
-ಸಿದ್ದರಾಮಯ್ಯ, ವಿಪಕ್ಷ ನಾಯಕ