Advertisement

ಉಡುಪಿ ನಗರದಲ್ಲಿ  ಪಾದಚಾರಿಗಳು ನಡೆಯೋದು ಎಲ್ಲಿ ? 

06:00 AM Jun 08, 2018 | |

ಉಡುಪಿ: ನಗರದಲ್ಲಿ ನಡೆದಾಡುವುದೆಂದರೆ ಪಾದಚಾರಿಗಳಿಗೆ ನಿಜಕ್ಕೂ ಸವಾಲು. ಕೆಲವೆಡೆ ಫ‌ುಟ್‌ಪಾತ್‌ಗಳಿಲ್ಲ, ಇನ್ನು ಕೆಲವೆಡೆ ಅಂಗಡಿಗಳು ಫ‌ುಟ್‌ಪಾತ್‌ಗಳನ್ನು ಆಕ್ರಮಿಸಿರುವುದರಿಂದ  ಇಲ್ಲಿನ ರಸ್ತೆಗಳು ಕಿಷ್ಕಿಂಧೆಯಂತಾಗುತ್ತವೆ.

Advertisement

ಬನ್ನಂಜೆ-ಕರಾವಳಿ ಬೈಪಾಸ್‌ 
ರಾಷ್ಟ್ರೀಯ ಹೆದ್ದಾರಿ 169ಎ ಉಡುಪಿ – ಮಣಿಪಾಲ ಮುಖ್ಯ ರಸ್ತೆಯ ಬನ್ನಂಜೆ ಸರ್ಕಲ್‌ನಿಂದ ಕರಾವಳಿ ಬೈಪಾಸ್‌ವರೆಗೆ ಎರಡೂ ಬದಿಗಳಲ್ಲಿಯೂ ಪುಟ್‌ಪಾತ್‌ ಇಲ್ಲ. ಬನ್ನಂಜೆಯಿಂದ ಈಚೆಗೆ ಸಿಟಿಬಸ್‌ ನಿಲ್ದಾಣದವರೆಗೆ ಅಲ್ಲಿಂದ ಮುಂದಕ್ಕೂ ಪುಟ್‌ಪಾತ್‌ ವ್ಯವಸ್ಥೆ ಇದೆ. ಆದರೆ ಕೆಲವು ಕಡೆಗಳಲ್ಲಿ ಸ್ಲಾéಬ್‌ಗಳು ಮುರಿದಿದೆ. ಪುಟ್‌ಪಾತ್‌ ಮೇಲೆಯೇ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ರಾಶಿ ಹಾಕಲಾಗಿದೆ. ವಿದ್ಯುತ್‌ ಕಂಬಗಳೂ ಇವೆ.


ಶಿರಿಬೀಡು-ಬನ್ನಂಜೆ ಮಾರ್ಗದಲ್ಲಿ ಫ‌ುಟ್‌ಪಾತ್‌ನಲ್ಲೇ ಪಾರ್ಸೆಲ್‌ ಸಾಮಾಗ್ರಿ ಇರುತ್ತವೆ. ಇನ್ನು ಸಿಟಿಬಸ್‌ ನಿಲ್ದಾಣದ ಪರಿಸರದಲ್ಲಿ ನಿತ್ಯ ಮತ್ತು ವಾರಾಂತ್ಯಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ  ಕಾರ್ಮಿಕರು ಪುಟ್‌ಪಾತ್‌ನಲ್ಲಿಯೇ ಗುಂಪುಗೂಡುವುದರಿಂದ ಪಾದಚಾರಿಗಳಿಗೆ ಅಡ್ಡಿಯಾಗಿದೆ.  ಬನ್ನಂಜೆಯಿಂದ ಎಸ್‌ಪಿ ಕಚೇರಿ, ತಾಲೂಕು ಕಚೇರಿ, ಪ್ರವಾಸಿ ಮಂದಿರ ಮೂಲಕ ಬ್ರಹ್ಮಗಿರಿಗೆ ಸಂಪರ್ಕಿಸುವ ಮುಖ್ಯರಸ್ತೆಯಲ್ಲೂ ಫ‌ುಟ್‌ಪಾತೇ ಇಲ್ಲ. ಈ ರಸ್ತೆಯಲ್ಲೂ ವಾಹನಗಳು ಅಧಿಕ ಇವೆ.  

ಕಾರ್ಯಗತವಾಗದ ಫ್ಲೈ ಓವರ್‌, ಸ್ಕೈವಾಕ್‌
ಉಡುಪಿ ಸರ್ವೀಸ್‌ ಬಸ್‌ ನಿಲ್ದಾಣದಿಂದ ಸಿಟಿಬಸ್‌ನಿಲ್ದಾಣ ಹಾಗೂ ಉಡುಪಿ- ಮಣಿಪಾಲ ಮುಖ್ಯರಸ್ತೆಗೆ ಬರುವ ಸರ್ಕಲ್‌ (ಐರೋಡಿ ಗಿಫ್ಟ್ ಸೆಂಟರ್‌ ಎದುರು) ರಸ್ತೆ ದಾಟಲು ಪಾದಚಾರಿಗಳು ಸಾಹಸವೇ ಮಾಡಬೇಕಾಗಿದೆ. 

ಅಪರೂಪಕ್ಕೊಮ್ಮೆ ಇಲ್ಲಿ ಪೊಲೀಸ್‌ ಪೇದೆ ಕಾಣಲು ಸಿಗುತ್ತಾರೆ. ಒಂದು ಬದಿಯಲ್ಲಿ ಪುಟ್‌ಪಾತ್‌ ಇದ್ದರೂ ಅದನ್ನು ಬಳಸಲಾಗದ ಸ್ಥಿತಿಯಲ್ಲಿದೆ.ಇಲ್ಲಿ ಸ್ಕೈ ವಾಕ್‌ ಅಥವಾ ಫ್ಲೈ ಓವರ್‌ ನಿರ್ಮಿಸಬೇಕೆಂಬ ಬೇಡಿಕೆ, ಯೋಜನೆಗಳು ಇನ್ನೂ ಕಾರ್ಯಗತ ಗೊಂಡಿಲ್ಲ.


ಅರ್ಧದಲ್ಲಿ ಸ್ಥಗಿತಗೊಂಡ ಕಾಮಗಾರಿ
ಸಂಸ್ಕೃತ ಕಾಲೇಜು ರಸ್ತೆಯಲ್ಲಿಯೂ ಎಲ್ಲಿಯೂ ಫ‌ುಟ್‌ಪಾತ್‌ ಇಲ್ಲ. ಇನ್ನು ಸರ್ವೀಸ್‌ ಬಸ್‌ನಿಲ್ದಾಣದಿಂದ ಕಿದಿಯೂರು ಹೊಟೇಲ್‌ ರಸ್ತೆಯಾಗಿ ಬರುವಲ್ಲಿಯೂ ಫ‌ುಟ್‌ಪಾತ್‌ ಕೊರತೆ ಬಹುವಾಗಿ ಕಾಡುತ್ತಿದೆ. ಬೋರ್ಡ್‌ ಹೈಸ್ಕೂಲ್‌ ಕಂಪೌಂಡ್‌ವರೆಗೆ ಮಾಡಿರುವ ಫ‌ುಟ್‌ಪಾತ್‌ಗೆ ಹೊಂದಿಕೊಂಡೇ ದ್ವಿಚಕ್ರ ವಾಹನಗಳ ಪಾರ್ಕಿಂಗ್‌ ಇದೆ. ಹಾಗಾಗಿ ಇದನ್ನು ಬಳಸುವಂತಿಲ್ಲ. ಮೇಲಾಗಿ ಈ ಫ‌ುಟ್‌ಪಾತ್‌, ಮಳೆನೀರು ತೋಡಿನ ಕಾಮಗಾರಿಯನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸಲಾಗಿದೆ.

ಎಲ್ಲೆಲ್ಲಿ ಸಮಸ್ಯೆ? 
-  ಸಿಟಿ ಬಸ್‌ನಿಲ್ದಾಣದಿಂದ ಕೃಷ್ಣ ಮಠದತ್ತ ತೆರಳುವ ಅಂಜುಮಾನ್‌ ರಸ್ತೆಯಲ್ಲಿ ಪುಟ್‌ಪಾತ್‌ ಇಲ್ಲ. ಬಸ್‌ ಮತ್ತು ಇತರ ವಾಹನಗಳ ನಡುವೆ ಪಾದಚಾರಿಗಳು ದಿಕ್ಕೇ ತೋಚದಂತಾಗುತ್ತಾರೆ. 
-  ಆಭರಣದಿಂದ ಶ್ರೀಕೃಷ್ಣ ಮಠಕ್ಕೆ ಕಾರ್ಪೊರೇಷನ್‌ ಬ್ಯಾಂಕ್‌ ಮಾರ್ಗವಾಗಿ ಹೋಗುವಲ್ಲಿ ಒಂದು ಬದಿಯ ಪುಟ್‌ಪಾತ್‌ನ್ನು ತಳ್ಳುಗಾಡಿಯವರು ಆಕ್ರಮಿಸಿಕೊಂಡಿದ್ದಾರೆ. ಇನ್ನೊಂದು ಬದಿಯಲ್ಲಿ ಫ‌ುಟ್‌ಪಾತೇ ಇಲ್ಲ.
-  ಅಮ್ಮುಂಜೆ ಪೆಟ್ರೋಲ್‌ ಪಂಪ್‌ನಿಂದ ಆಭರಣ-ಕಾರ್ಪೊರೇಷನ್‌ ಬ್ಯಾಂಕ್‌ವರೆಗಿನ ವಿದ್ಯಾಸಮುದ್ರ ರಸ್ತೆ (ಹಳೆ ಗೀತಾಂಜಲಿ ಟಾಕೀಸ್‌ ರಸ್ತೆ) ಸಂಪೂರ್ಣವಾಗಿ ವಾಹನಗಳಿಂದ ತುಂಬಿದೆ.  
-  ಕೆ.ಎಂ. ಮಾರ್ಗ(ಅಲಂಕಾರ್‌)ದಲ್ಲಿ ಒಂದು ಬದಿಯಲ್ಲಿ ಕೆಲವು ಕಡೆ ಅಂಗಡಿಯವರು ತಮ್ಮ ಸಾಮಗ್ರಿಗಳನ್ನು ಪುಟ್‌ಪಾತ್‌ ಮೇಲೆ ಇಟ್ಟಿದ್ದಾರೆ. ತ್ರಿವೇಣಿ ಸರ್ಕಲ್‌ನಿಂದ ಕನಕದಾಸ ರಸ್ತೆ ಕಡೆ ಹೋಗುವಲ್ಲಿ ಪ್ರಧಾನ ಅಂಚೆ ಕಚೇರಿಯ ಮುಂಭಾಗದುದ್ದಕ್ಕೂ ಪುಟ್‌ಪಾತ್‌ ಜಾಗವನ್ನು ವಾಹನ ಪಾರ್ಕಿಂಗ್‌ಗೆ ಬಳಸಲಾಗಿದೆ.
-  ಸರ್ವಿಸ್‌ ಬಸ್‌ನಿಲ್ದಾಣದಿಂದ ಟ್ಯಾಕ್ಸಿ ಸ್ಟಾಂಡ್‌, ಧೂಮಾವತಿ ಕಟ್ಟೆ ಮಾರ್ಗದಲ್ಲಿಯೂ ಪುಟ್‌ಪಾತ್‌ ಇಲ್ಲದೆ ತೊಂದರೆಯಾಗಿದೆ.

Advertisement

ಪುಟ್‌ಪಾತ್‌ನಲ್ಲಿ ವಾಹನವಿದ್ದರೆ ಕೇಸು
“ನೋ ಪಾರ್ಕಿಂಗ್‌ ಪ್ರದೇಶದಲ್ಲಿ ಮಾತ್ರವಲ್ಲ, ಪುಟ್‌ಪಾತ್‌ ಮೇಲೆ ಇದ್ದರೂ ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಗಜೇಂದ್ರ ಟೋ ವಾಹನ ಮೂಲಕ ವಾಹನಗಳನ್ನು ಎಳೆದೊಯ್ಯುವ ಕಾರ್ಯಾಚರಣೆ ನಡೆಯುತ್ತಿದೆ.
– ಉಪನಿರೀಕ್ಷಕರು,ಸಂಚಾರ ಪೊಲೀಸ್‌ ಠಾಣೆ

ಹಿರಿಯ ನಾಗರಿಕರೇನು ಮಾಡವುದು?
ಪುಟ್‌ಪಾತ್‌ಗಳು ಎಲ್ಲಿಯೂ ಸರಿಯಾಗಿಲ್ಲ. ಇರುವ ಪುಟ್‌ಪಾತ್‌ಗಳು ರಸ್ತೆಯಿಂದ ತುಂಬಾ ಎತ್ತರದಲ್ಲಿವೆ. ನಾವು ಈ ಬಗ್ಗೆ ಅನೇಕ ಬಾರಿ ದೂರು ಕೊಟ್ಟಿದ್ದೇವೆ. ರಸ್ತೆಯ ಬದಿ ವಾಹನಗಳ ಪಾರ್ಕಿಂಗ್‌ನಿಂದಾಗಿ ನಡೆಯುವುದು ಸಾಧ್ಯವಿಲ್ಲ.  
– ಲಕ್ಷ್ಮೀ ಬಾೖ,ಸಾಮಾಜಿಕ ಸೇವಾ ಕಾರ್ಯಕರ್ತರು

ಸಂತೋಷ್‌ ಬೊಳ್ಳೆಟ್ಟು 

ಚಿತ್ರಗಳು: ಆಸ್ಟ್ರೋ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next