Advertisement
ಒಂದು ನಗರದಲ್ಲಿ, ಅಂದಾಜು 70 ವರ್ಷ ವಯಸ್ಸಿನ ಒಬ್ಬ ಸಂಭಾವಿತ ವ್ಯಕ್ತಿ ತೀವ್ರ ಖನ್ನತೆಯಿಂದ ಬಳಲುತ್ತಿದ್ದರು, ಎಲ್ಲದರಲ್ಲೂ ನಿರಾಸಕ್ತಿ, ಯಾವಗಲೂ ಯೋಚನೆ ಮಾಡುವುದು, ಆ ಸಮಸ್ಯೆ, ಈ ಸಮಸ್ಯೆ ಅಂತ ಗೊಣಗಾಡುವುದು ನಡೆದಿತ್ತು. ವಯಸ್ಸಾಯ್ತು, ಆರಾಮಾಗಿರಿ ಎಂದು ಮನೆಯವರು ಹೇಳಿದರು, ಕೇಳುತ್ತಿರಲಿಲ್ಲ. ಇವರ ಅವಸ್ಥೆ ಕಂಡ ಅವರ ಪತ್ನಿ, ಅವರಿಗೆ ಆಪ್ತ ಸಮಾಲೋಚನೆ ಕೊಡಿಸಲು ಕೌನ್ಸೆಲಿಂಗ್ ಸಲಹೆಗಾರರೊಂದಿಗೆ ಮಾತನಾಡಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ಒಂದು ದಿನ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ಇವರನ್ನ ಭೇಟಿ ಮಾಡಿದ ವೈದ್ಯರು, ಏನು ಸಮಸ್ಯೆ? ಎಂದು ಕೇಳುತ್ತಾರೆ.
Related Articles
Advertisement
ಆ ಹಿರಿಯರು ತಾವು ಓದಿದ ಶಾಲೆಗೆ ಹೋಗಿ, ಅಲ್ಲಿನ ಮುಖ್ಯೋಪಾಧ್ಯಯರನ್ನು ಭೇಟಿ ಮಾಡಿ, ಅಂದಿನ ರಿಜಿಸ್ಟರ್ ಅನ್ನು ಪಡೆದು, ತನ್ನ ಪ್ರತೀ ಸಹಪಾಠಿಗಳ ಹೆಸರನ್ನು ಬರೆದುಕೊಂಡರು. ಅದರಲ್ಲಿ ಒಟ್ಟು 120 ಹೆಸರುಗಳಿದ್ದವು. ಅವರು ಒಂದು ತಿಂಗಳು ಹಗಲಿರುಳು ಪ್ರಯತ್ನಿಸಿ ಸಾಧ್ಯವಾದಷ್ಟು ಜನರ ಸ್ಥಿತಿಗತಿಯನ್ನು ದಾಖಲಿಸುತ್ತ ಹೋದರು.▪️ ಅವರಲ್ಲಿ 20 ಮಂದಿ ಈಗಾಗಲೇ ಮರಣ ಹೊಂದಿದ್ದರು
▪️ 4 ಜನರು ವಿಧವೆಯರಾಗಿದ್ದರು
▪️ 4 ಜನರು ವಿದುರರಾಗಿದ್ದರು
▪️13 ಮಂದಿ ವಿಚ್ಛೇದನ ಪಡೆದಿದ್ದರು
▪️10 ಮಂದಿ ಕುಡುಕರು ಮತ್ತು ಮಾದಕ ವ್ಯಸನಿಗಳಾಗಿದ್ದರು
▪️ 5 ಜನರ ಬದುಕು ಶೋಚನೀಯವಾಗಿತ್ತು
▪️ 6 ಜನರು ನಂಬಲು ಸಾಧ್ಯವಾಗದಷ್ಟು ಶ್ರೀಮಂತರಾಗಿದ್ದರು
▪️ಕೆಲವು ಕ್ಯಾನ್ಸರ್‌ನಿಂದ ಮೃತ ಪಟ್ಟಿದ್ದರು
▪️ಕೆಲವರು ಪಾರ್ಶ್ವವಾಯುವಿಗೆ ಒಳಗಾಗಿದ್ದರು
▪️ಕೆಲವರು ಮಧುಮೇಹಿಗಳು
▪️ಕೆಲವರು ಆಸ್ತಮಾ ರೋಗಿಗಳು
▪️ಕೆಲವರು ಹೃದ್ರೋಗ ರೋಗಿಗಳು
▪️ಕೆಲವರು ಕೈ/ಕಾಲು ಅಥವಾ ಬೆನ್ನುಹುರಿಗೆ ಗಾಯಗಳಾಗಿ ಹಾಸಿಗೆಯಲ್ಲಿದ್ದರು
▪️ಕೆಲವರ ಮಕ್ಕಳು ಮಾದಕವ್ಯಸನಿಗಳು, ಅಲೆಮಾರಿಗಳು, ಕೆಲವರು ಮನೆಬಿಟ್ಟು ಹೋಗಿದ್ದರು
▪️ಒಬ್ಬರು ಜೈಲಿನಲ್ಲಿದ್ದರು
▪️ಮತ್ತೊಬ್ಬ ಎರಡು ವಿಚ್ಛೇದನದ ಅನಂತರ ಒಬ್ಬ ವ್ಯಕ್ತಿಯು ಮೂರನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದನು
ಇಷ್ಟು ವಿವರ ಮಾತ್ರ ಪಡೆಯಲು ಸಾಧ್ಯವಾಯಿತು. ಕೇವಲ ಎಪ್ಪತ್ತು ಎಂಬತ್ತು ಜನರ ಸ್ಥಿತಿಗತಿ ಹೀಗಿತ್ತು. ಎಲ್ಲವನ್ನ ದಾಖಲಿಸಿಕೊಂಡು ವೈದ್ಯರನ್ನ ಭೇಟಿ ಮಾಡಿದರು. ವೈದ್ಯರು ಪಟ್ಟಿಯನ್ನು ನೋಡಿ, ವಾವ್ಹ್ ಅದ್ಭುತವಾದ ಕೆಲಸ ಮಾಡಿದ್ದೀರಿ, ಎಷ್ಟೆಲ್ಲ ಶ್ರಮವಹಿಸಿ ಮಾಹಿತಿ ಸಂಗ್ರಹಿಸಿದ್ದೀರಿ. ನೀವು ತುಂಬಾ ಗ್ರೇಟ್ ಎಂದು ಹೊಗಳಿದರು. “ಈಗ ನಿಮ್ಮ ಖಿನ್ನತೆ ಹೇಗಿದೆ’ ಎಂದು ಪ್ರಶ್ನೆ ಹಾಕಿದರು. ಆ ಹಿರಿಯರಿಗೆ ಸಂಪೂರ್ಣವಾಗಿ ಅರಿವಾಯಿತು,
▪️ ಅವರಿಗೆ ಯಾವುದೇ ಕಾಯಿಲೆ ಇರಲಿಲ್ಲ
▪️ ಅವರು ಹಸಿವಿನಿಂದ ಬಳಲುತ್ತಿರಲಿಲ್ಲ
▪️ ಅವರ ಮನಸ್ಸು ಪರಿಪೂರ್ಣವಾಗಿತ್ತು
▪️ ಅವರು ದುರದೃಷ್ಟವಂತನಾಗಿರಲಿಲ್ಲ
▪️ ಅವರ ಹೆಂಡತಿ ಮತ್ತು ಮಕ್ಕಳು ತುಂಬಾ ಒಳ್ಳೆಯವರು ಮತ್ತು ಆರೋಗ್ಯವಂತರಾಗಿದ್ದಾರೆ
▪️ ತಾವು ತುಂಬಾ ಅದೃಷ್ಟವಂತರು ಎಂದು ಭಾವಿಸಿದರು
▪️ ಸ್ವತಃ ಅವರು ಸಹ ಆರೋಗ್ಯವಾಗಿದ್ದರು, ಅವರು ದಿನಕ್ಕೆ ಮೂರು ಊಟವನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳವರಾಗಿದ್ದರು
▪️ ತಮ್ಮ ಸ್ನೇಹಿತರ ಮುಂದೆ ಇವರ ಸಮಸ್ಯೆಗಳು ಪೇಲವವಾಗಿದ್ದವು. ಜಗತ್ತಿನಲ್ಲಿ ಕೆಲವು ಜನರು ನಿಜಕ್ಕೂ ಕಷ್ಟ ಅನುಭವಿಸುತ್ತಿದ್ದಾರೆ. ಕೆಲವರು ಬಹಳಷ್ಟು ದುಃಖಿಗಳು. ಅವರಿಗೆ ಹೋಲಿಸಿದರೆ ತಾನು ತುಂಬಾ ಸಂತೋಷದಿಂದ್ದೇನೆ ಮತ್ತು ತಾನು ನಿಜಕ್ಕೂ ಅದೃಷ್ಟಶಾಲಿ ಎಂದು ಆ ವ್ಯಕ್ತಿ ಅರಿತುಕೊಳ್ಳುತ್ತಾನೆ. ಅರ್ಥ ಆಯಿತು ಡಾಕ್ಟ್ರೇ, ನನಗೆ ಯಾವುದೇ ಸಮಸ್ಯೆ ಇಲ್ಲ. ಏನೇನೋ ಯೋಚಿಸಿ, ಮನಸ್ಸನ್ನು ಕೆಡಿಸಿಕೊಳ್ಳುತ್ತಿದ್ದೆ. ಜೀವನ ಬಂದಹಾಗೆ ಸ್ವೀಕರಿಸುತ್ತ ಹೋಗಬೇಕು ಎನ್ನುವುದನ್ನ ಮರೆತಿದ್ದೆ. ಏನು ಆಗಬೇಕು ಅಂತ ಭಗವಂತ ನಿರ್ಧರಿಸಿರುತ್ತಾನೋ, ಅದು ಹಾಗೆಯೇ ನಡೆಯುತ್ತ ಹೋಗುತ್ತೆ. ಚಿಂತೆ ಮಾಡಿ ಪ್ರಯೋಜನವಿಲ್ಲ, ಬರ್ತೀನಿ ಡಾಕ್ಟ್ರೆ. ಧನ್ಯವಾದಗಳು ಎಂದು ಅಲ್ಲಿಂದ ಹೊರಟರು. ***
ಜೀವನ ಪಾಠ ಏನೆಂದರೆ, ನಮ್ಮ ಜೀವನವನ್ನು ಇತರರೊಂದಿಗೆ ಹೋಲಿಸಬಾರದು. ಇನ್ನೊಬ್ಬರ ತಟ್ಟೆಗಳಲ್ಲಿ ಇಣುಕಿ ನೋಡುವ ಅಭ್ಯಾಸವನ್ನು ಬಿಡಿ, ನಮ್ಮ ತಟ್ಟೆಯಲ್ಲಿನ ಆಹಾರವನ್ನು ಪ್ರೀತಿಯಿಂದ ತೆಗೆದುಕೊಂಡು ಸೇವಿಸಬೇಕು. ಪ್ರತಿಯೊಬ್ಬರೂ ಅವರವರ ಹಣೆಬರಹದ ಪ್ರಕಾರ ಜೀವನ ನಡೆಸುತ್ತಿದ್ದಾರೆ. ನಾವು ಸಹ ಅಷ್ಟೆ, ಅದೇ ಸಮಾನಗತಿಯಲ್ಲಿ ಜೀವಿಸುತ್ತಿದ್ದೇವೆ, ನಾವು ಬೇರೆಯವರಿಗಿಂತ ತಡವಾಗಿ ಅಥವಾ ಮುಂಚೆ ಎನ್ನುವ ಭಾವ ಇಲ್ಲವೇ ಇಲ್ಲ. ಪಾಲಿಗೆ ಬಂದದ್ದು ಪಂಚಾಮೃತ, ಒಳ್ಳೆಯದು ಅಥವಾ ಕೆಟ್ಟದ್ದು, ದೊಡ್ಡದು ಅಥವಾ ಚಿಕ್ಕದು, ಭೇದಭಾವ ಸಲ್ಲದು. ಇವತ್ತು ದೇವರು ಕೊಟ್ಟಿರುವ ಉತ್ತಮ ಜೀವನಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಮುಂದೆ ಸಾಗೋಣ. ಈ ಜಗತ್ತಿಗೆ ನಾವು ಒಬ್ಬ ಪ್ರಯಾಣಿಕನಿದ್ದಂತೆ, ಪ್ರಯಾಣದಲ್ಲಿ ಎಲ್ಲವನ್ನ ಅನುಭವಿಸುತ್ತ ಸಾಗಬೇಕು, ನಮ್ಮ ನಿಲ್ದಾಣ ಬಂದಾಗ ಇಳಿದು ಹೋಗುತ್ತಿರಬೇಕು. ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದಂತೆ,
“ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’
ಮಾ ಕರ್ಮಫಲಹೇತುರ್ಭೂ ಮಾ ತೇ ಸಂಗೋಸ್ತ್ವ ಕರ್ಮಣಿ’
ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡುವ ಕೆಲಸದಲ್ಲಿ ಮಾತ್ರ ಹಕ್ಕನ್ನು ಹೊಂದಿರುತ್ತಾನೆ ವಿನಃ, ಅದರ ಫಲಿತಾಂಶಗಳಲ್ಲಿ ಅಲ್ಲ. ಆದ್ದರಿಂದ ನಿಮ್ಮ ಕ್ರಿಯೆಗಳ ಫಲಿತಾಂಶಗಳ ಬಗ್ಗೆ ಹೆಚ್ಚು ಯೋಚಿಸಬೇಡಿ ಅಥವಾ ನೀವು ಮಾಡುವ ಕೆಲಸದಲ್ಲಿ ಫಲ ಸಿಗುತ್ತದೆಯೇ? ಅಥವಾ ಇಲ್ಲವೇ? ಎಂಬುದರ ಬಗ್ಗೆ ಯೋಚಿಸದಿರಿ. ಇಷ್ಟು ಅರ್ಥ ಮಾಡಿಕೊಂಡರೆ ಜೀವನ ತುಂಬಾ ಸರಳ.
(ಮೂಲ ಇಂಗ್ಲಿಷ್, ಕನ್ನಡಕ್ಕೆ ಭಾವಾನುವಾದ ಮಾಡಲಾಗಿದೆ.)