ಭೌತಿಕ ಜಗತ್ತಿನಿಂದ ದೂರ ಇದ್ದು, ತಮ್ಮದೇ ಪಾರಮಾರ್ಥಿಕ ಜಗತ್ತನ್ನು ಕಟ್ಟಿಕೊಂಡು ಆನಂದದಿಂದ ಇರುವ ಇವರನ್ನು ಇಲ್ಲಿ ಹಿಡಿದಿಟ್ಟ ಆ ಶಕ್ತಿಯಾದರೂ ಯಾವುದು? ಭೌತಿಕ ಸುಖಕ್ಕೆ ವಿರುದ್ಧವಾದ ಆ ಪಾರಮಾರ್ಥಿಕ ಸುಖದ ಸ್ವರೂಪವೇನು? ಅಧ್ಯಾತ್ಮಕ್ಕೆ ಅಷ್ಟು ಶಕ್ತಿಯಿಲ್ಲದೇ ಹೋಗಿದ್ದರೆ, ಕಗ್ಗಾಡಿನಲ್ಲಿ ಇವರನ್ನು ಕಟ್ಟಿಹಾಕಲು ಸಾಧ್ಯವಿತ್ತೇ?
Advertisement
ಅವರಿಗೆ ಮಾನವ ಸಹಜವಾದ ಬೇಸರ, ಮನೆ- ಮಡದಿ ಸಂಸಾರ ಮೋಹ ಯಾವುದೂ ಇಲ್ಲವೇ? ಇದ್ದರೆ ಅದನ್ನು ಯಾವ ಸ್ತರದಲ್ಲಿ ಇರಿಸಿಕೊಂಡಿದ್ದಾರೆ? ಅವರು ಜೀವನ ಪೂರ್ತಿ ಕಾಡಿನಲ್ಲಿ ಇರಲು ಹೇಗೆ ಸಾಧ್ಯ? ಇಲ್ಲಿ ತಪಸ್ವಿಗಳು ಮಾತ್ರವಲ್ಲ ತಾಪಸಿಯರು, ತಾಪಸ ಕನ್ಯೆಯರೂ ಇರುತ್ತಾರಲ್ಲವೆ? ಸಂಸಾರದಲ್ಲಿದ್ದೂ ಅದನ್ನು ಮೀರಿ ನಿಂತ ಧೀರರಲ್ಲವೇ ಅವರು? ವೇದಾಂತ ಹೇಳುವುದು ಸುಲಭ, ಅನುಷ್ಠಾನ ಕಷ್ಟವೆಂದು ಅಪ್ಪ ಹೇಳುತ್ತಿದ್ದ ಮಾತು ನೆನಪಾಯಿತು.
Related Articles
Advertisement
ಅಂತ ಅಮ್ಮ ಮದುವೆಗೆ ಮೊದಲು ತಮಾಷೆಯಾಗಿ ಎಚ್ಚರಿಸುತ್ತಿದ್ದುದನ್ನು ಒಮ್ಮೊಮ್ಮೆ ನೆನಪಿಸಿಕೊಂಡು ಒಳಗೇ ನಗುತ್ತೇನೆ. ಅಪ್ಪನಿಂದ ಸಿಕ್ಕಿದ ಈ ಅಂತರಂಗಸಂಸ್ಕಾರ ಕೊನೆಯ ಕಾಲದವರೆಗೂ ಗುಪ್ತಗಾಮಿನಿಯಾಗಿ ನನ್ನನ್ನು ಕಾಪಾಡಿತು. ಈ ಎಲ್ಲ ಮೆಲುಕುಗಳ ಸಹಿತ ಮುಂದೆ ಪಂಚವಟಿಗೆ ಬಂದಿಳಿದರೆ ಹೊಸಲೋಕಕ್ಕೆ ಬಂದ ಅನುಭವ. ಜೀವಮಾನ ಪೂರ್ತಿ ಉಳಿಯುವ ನೆನಪುಗಳನ್ನು ಉಡಿಯಲ್ಲಿ ತುಂಬಿ ಕೊಟ್ಟ ರಮ್ಯ ತಾಣವಿದು. ಉಷಃಕಾಲದಲ್ಲಿ ಗೋದೆಯಲ್ಲಿ ಮಿಂದು ಮುಡಿಯುಟ್ಟು ಪ್ರತಿದಿನ ಮಾಡುತ್ತಿದ್ದ ಸೂರ್ಯನಮನ.
ಲಕ್ಷ್ಮಣ ನಿರ್ಮಿಸಿದ್ದ ಕಲಾತ್ಮಕ ಪರ್ಣಶಾಲೆ. ಪ್ರಕೃತಿಮಾತೆ ತನ್ನ ವಿಶ್ರಾಂತಿಗೋಸ್ಕರ ನಿರ್ಮಿಸಿಕೊಂಡಿದೆಯೋ ಎಂಬಂತಿರುವ ಪಂಚವಟ ವೃಕ್ಷಗಳ ಚಪ್ಪರ. ದೂರದಲ್ಲಿ ಕಾಣುವ ಬೃಹತ್ ಕೋಡುಗಲ್ಲುಗುಡ್ಡ. ಅದರ ಪಕ್ಕದಲ್ಲಿಯೇ ಬೆಟ್ಟದ ಮೇಲೆ ಪ್ರಕೃತಿದೇವತೆ ನಿರ್ಮಿಸಿಟ್ಟ ಪುಟ್ಟ ಬಯಲು. ಬಹುಶಃ ಸ್ವರ್ಗವೂ ಬೇಸರವಾದಾಗ ದೇವತೆಗಳು ಬದಲಾವಣೆ ಬಯಸಿ ನೇರವಾಗಿ ಬಂದು ಉಳಿಯುವ ತಾಣವಿರಬೇಕು! ಕೋಗಿಲೆಗಳ ಕುಹೂ ಕುಹೂ. ಗಿಣಿಗಳ ಕೀಚ್ ಕೀಚ್. ನವಿಲುಗಳ ಕೇಕಾರವ.
ದುಂಬಿಗಳ ಜುಂಯ್, ಬಿತ್ತದೆ ಬೆಳೆದ ನವಣೆ, ಆರ್ಕ, ಭತ್ತ, ಗೋದಿ ಸಾಲುಬೆಳೆ. ಕಲ್ಲುಬಾಳೆ. ಎಲ್ಲೆಲ್ಲೂ ಹಸಿರು ಹೊದ್ದ ನೆಲ. ಬೆಳ್ಳಂಬೆಳಗ್ಗೆ ಹುಲ್ಲಿನ ಮೇಲೆ ಎರಕ ಹೊಯ್ದು ಪೋಣಿಸಿಟ್ಟ ನೀರಹನಿಗಳೆಂಬ ಮುತ್ತಿನ ಮಣಿಗಳು. ಮುಳ್ಳುಹಣ್ಣು, ನೇರಲೆ, ಪೇರಲೆ, ಪನಸ, ಕಾಡುಮಾನ ಹಣ್ಣುಗಳು. ಹಿಪ್ಪಲಿಗಿಡಗಳ ಕಟು ವಾಸನೆ. ತಾವು ತಾವೇ ಮಾತಾಡಿಕೊಂಡು ಸ್ಥಳ ನಿಗದಿಮಾಡಿಕೊಂಡಿವೆಯೋ ಎಂಬಂತೆ ಹೂಬಿಟ್ಟ ವಿವಿಧ ಜಾತಿಯ ಗಿಡಗಳು. ಒಂದು ಹೂ ಕೀಳಲು ಹೋದರೆ ಮತ್ತೂಂದಕ್ಕೆ ಮುನಿಸು. ಅನತಿ ದೂರದಲ್ಲಿ ಮರಿಗಳೊಂದಿಗೆ ಆಗಾಗ ಮಿಂಚಿ ಮಾಯವಾಗುವ ಚಿಗರೆ ಮರಿಗಳು.
ಪಂಚವಟಿಯ ಬೆಳಗು- ಬೈಗುಗಳ ಸೌಂದರ್ಯವಂತೂ ವರ್ಣಿಸಲಸದಳ. ಬಾಲಸೂರ್ಯ ದಿಗಂಗನೆಯರ ಮೊಗಗಳಿಗೆ ಗುಲಾಲು ಹಚ್ಚಿ ಓಕುಳಿಯಾಟ ಆಡುತ್ತಿರುವ ಚಂದ. ಉದಯವೂ ರಂಗು ಅಸ್ತಮಾನವೂ ರಂಗು. ಹಸಿರುಟ್ಟ ವನದೇವತೆ ಗೆಜ್ಜೆ ಕಟ್ಟಿ ಮೆಲ್ಲನೆ ಹೆಜ್ಜೆಹಾಕುತ್ತಾ, ನಂದನದ ಚೆಲುವನ್ನು ಚೆಲ್ಲುತ್ತಾ ನಾಟ್ಯವಾಡಲು ಬರುತ್ತಿರುವಂತೆ ಭಾಸವಾಗುತ್ತಿದ್ದ ಆ ದೃಶ್ಯ. ಇನ್ನು ಬೆಳದಿಂಗಳ ರಾತ್ರಿಯ ಸೊಬಗನ್ನು ನೀವೇ ಊಹಿಸಿಕೊಳ್ಳಿ. ನಾನು ಚಿಕ್ಕವಳಿದ್ದಾಗ ಅಮ್ಮ ಕೇಳಿದ ಒಂದು ಒಗಟು ನೆನಪಾಯಿತು.
“ಅಮ್ಮನ ಹಾಸಿಗೆ ಸುತ್ತಕ್ಕಾಗೋಲ್ಲ, ಅಪ್ಪನ ದುಡ್ಡು ಎಣಿಸೋಕೆ ಆಗಲ್ಲ… ಏನು ಹೇಳು ನೋಡೋಣ?’ ಎಂದರು. ಮಹಾಬುದ್ಧಿವಂತೆ ನಾನು… ಆಕಾಶ ನೋಡ್ತಾ “ಗೊತ್ತಾಗ್ಲಿಲ್ಲ’ ಅಂದೆ. “ಅಷ್ಟೂ ಗೊತ್ತಾಗ್ಲಿಲ್ವ ನೀನು ನೋಡ್ತಿದ್ದೀಯಲ್ಲಾ ಅದೇ’ ಅಂದ್ರು. ನಾನು ‘ಹೆಹೆಹೆ’ ಅಂದಿದ್ದೆ. ಇಂತಿರ್ಪ ಪಂಚವಟಿಯಲ್ಲಿ… ವನವಾಸದ ಪೂರ್ಣ ದಿನಗಳನ್ನು ಕಳೆಯುವ ಅದೃಷ್ಟ ನನಗಿರಲಿಲ್ಲ. ಇಲ್ಲೆಲ್ಲೋ ಅವಿತು ವಿಧಿ, ನನ್ನ ಮುಂದಿನ ಬದುಕಿನ ದುರಂತಕ್ಕೆ ಮುನ್ನುಡಿ ಬರೆಯಲು ಹೊಂಚು ಹಾಕುತ್ತಿದ್ದುದು ನನಗೆ ಹೇಗೆ ಗೊತ್ತಾಗಬೇಕು?
* ಸಿ.ಎ. ಭಾಸ್ಕರ ಭಟ್ಟ