Advertisement

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

02:51 PM May 01, 2024 | Team Udayavani |

ಬೆಂಗಳೂರು: ನಿಮ್ಮ ಮನೆಗೆ ಯಾವ ದಿನ, ಸಮಯಗಳಲ್ಲಿ ಕಾವೇರಿ ನೀರು ಪೂರೈಕೆಯಾಗಲಿದೆ, ವ್ಯತ್ಯಯವಾಗಲಿದೆ, ಕುಡಿಯುವ ನೀರು, ಒಳಚರಂಡಿ ಸಮಸ್ಯೆಗಳ ಬಗ್ಗೆ ದೂರು ನೀಡುವುದು ಸೇರಿದಂತೆ ಜಲಮಂಡಳಿ ವ್ಯಾಪ್ತಿಯಲ್ಲಿ ಬರುವ ನೀರಿನ ವಿಚಾರಗಳ ಬಗ್ಗೆ ಇನ್ನು ಮುಂದೆ ಕುಳಿತಲ್ಲೇ ಮೊಬೈಲ್‌ ಮೂಲಕ ತಿಳಿದುಕೊಳ್ಳಬಹುದು…!

Advertisement

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಫ‌ಲಾನುಭವಿಗಳಿಗೆ ಸಂಪೂರ್ಣವಾಗಿ ಮಾಹಿತಿ ನೀಡಲೆಂದೇ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಸಾಫ್ಟ್ವೇರ್‌ನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಈ ತಂತ್ರಜ್ಞಾನವು ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಕಾರ್ಯ ರೂಪಕ್ಕೆ ಬರಲಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾದ ಬೆನ್ನಲ್ಲೇ ಕಾವೇರಿ ನೀರನ್ನು ಆಶ್ರಯಿಸುವವರ ಪ್ರಮಾಣ ದುಪ್ಪಟ್ಟಾಗಿದೆ. ಕಳೆದ ಒಂದೂವರೆ ತಿಂಗಳಿಂದ ತಮ್ಮ ಬಡಾವಣೆಗಳಿಗೆ ಕಾವೇರಿ ನೀರಿನ ಪೂರೈಕೆ, ವ್ಯತ್ಯಯ ಹಾಗೂ ದೂರುಗಳನ್ನು ನೀಡಲು ಸಾರ್ವಜನಿಕರು ಪರದಾಡುತ್ತಿದ್ದರು. ಈ ಸಂಗತಿ ಜಲಮಂಡಳಿ ಗಮನಕ್ಕೆ ಬಂದ ಬಳಿಕ ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ಹೊಸ ಸಾಫ್ಟ್ವೇರ್‌ ರೂಪಿಸಲಾಗಿದೆ.

ಮಾಹಿತಿ ಪಡೆದುಕೊಳ್ಳುವುದು ಹೇಗೆ?: ಜಲಮಂಡಳಿಯು ಮೇ ತಿಂಗಳ ಮೊದಲ ವಾರದಲ್ಲಿ ಈ ಸಾಫ್ಟ್ವೇರ್‌ ಬಿಡುಗಡೆಯಾಗುತ್ತಿದ್ದಂತೆ ಮೊಬೈಲ್‌ ನಂಬರ್‌ ಅನ್ನು ನೀಡಲಿದ್ದಾರೆ. ಈ ನಂಬರ್‌ಗೆ ವಾಟ್ಸ್‌ಆಪ್‌ನಲ್ಲಿ ಕೇವಲ ಹಾಯ್‌ ಎಂದು ಕಳುಹಿಸಿದರೆ ಸಾಕು. ಕ್ಷಣ ಮಾತ್ರದಲ್ಲಿ ನಿಮ್ಮ ವಾಟ್ಸ್‌ ಆ್ಯಪ್‌ಗೆ “ನಿಮ್ಮ ಬಡಾವಣೆಗೆ ಕಾವೇರಿ ನೀರಿನ ಪೂರೈಕೆ, ವ್ಯತ್ಯಯ, ಕಾವೇರಿ ನೀರಿಗೆ ಸಂಬಂಧಿಸಿದ ದೂರುಗಳು, ಕುಡಿಯುವ ನೀರು ಹಾಗೂ ಒಳಚರಂಡಿ ಸಮಸ್ಯೆ, ಜಲಮಂಡಳಿಯ ಸಂಸ್ಕರಿಸಿದ ನೀರಿನ ಖರೀದಿ, ನೀರಿನ ಸೋರಿಕೆ, ಕೊಳವೆ ಬಾವಿಗಳ ಕುರಿತ ಮಾಹಿತಿ, ಜಲಮಾಪನ, ನೀರಿನ ಬಿಲ್ಲಿನ ಸಮಸ್ಯೆ, ಒಳಚರಂಡಿಯಿಂದ ತ್ಯಾಜ್ಯ ಹೊರ ಬರುತ್ತಿರುವುದು, ನೀರು ಮತ್ತು ಒಳಚರಂಡಿ ಸಂಪರ್ಕ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆಗೆ ಪರಿವರ್ತನೆಯಲ್ಲಿ ವಿಳಂಬ ಎಂಬಿತ್ಯಾದಿ ವಿಚಾರಗಳ ಕುರಿತ 10ಕ್ಕೂ ಹೆಚ್ಚಿನ ಆಯ್ಕೆಗಳಿರುವ ಸಂದೇಶಗಳು ನಿಮ್ಮ ವಾಟ್ಸ್‌ ಆ್ಯಪ್‌ಗೆ ಬರಲಿವೆ.

ನೀವು ಮಾಹಿತಿ ಪಡೆಯಲು ಇಚ್ಛಿಸುವ ವಿಚಾರಗಳ ಪಕ್ಕದಲ್ಲಿರುವ ನಂಬರ್‌ ಅನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದರೆ ಕೆಲ ಸೆಕೆಂಡ್‌ಗಳಲ್ಲಿ ಅದಕ್ಕೆ ಪೂರಕವಾದ ಸಂಪೂರ್ಣ ಮಾಹಿತಿ ನಿಮ್ಮ ವಾಟ್ಸ್‌ಆ್ಯಪ್‌ಗೆ ಜಲಮಂಡಳಿ ಕಳುಹಿಸಲಿದೆ. ಉದಾಹರಣೆಗೆ ಕಾವೇರಿ ನೀರು ಪೂರೈಕೆ ಎಂಬ ಆಯ್ಕೆಯ ನಂಬರ್‌ ಪ್ರಸ್‌ ಮಾಡಿ, ನಿಮ್ಮ ಬಡಾವಣೆ ಹೆಸರು ಉಲ್ಲೇಖೀಸಿದರೆ ಇಂತಹ ವಾರಗಳಂದು, ಇಷ್ಟು ಸಮಯದಲ್ಲಿ ನಿಮ್ಮ ಬಡಾವಣೆಗೆ ಕಾವೇರಿ ನೀರು ಪೂರೈಕೆಯಾಗಲಿದೆ ಎಂಬ ವಿವರಗಳನ್ನು ಈ ಎಐ ತಂತ್ರಜ್ಞಾನ ನೀಡಲಿದೆ.

ದೂರುಗಳ ಸಮರ್ಪಕ ನಿರ್ವಹಣೆಗೆ ಕ್ರಮ: ಜಲಮಂಡಳಿ ನೀರಿನ ಪೂರೈಕೆ ಸಂಬಂಧಿತ ದೂರುಗಳನ್ನು ಹೊಸ ಸಾಫ್ಟ್ವೇರ್‌ ಮೂಲಕ ನೀಡಿದರೆ ಜಲಮಂಡಳಿಯ ಎಂಜಿನಿಯರ್‌ಗಳು, ಸಿಬ್ಬಂದಿ ಕೂಡಲೇ ಸ್ಪಂದಿಸಲಿದ್ದಾರೆ. ಅಲ್ಲದೆ, ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯಗುವ ಆಯಾ ಬಡಾವಣೆ ನಿವಾಸಿಗಳಿಗೆ ಈ ಸಾಫ್ಟ್ವೇರ್‌ ಮೂಲಕ ಜಲಮಂಡಳಿಯೇ ಮಾಹಿತಿ ಒದಗಿಸಲಿದೆ. ಸಮಯಕ್ಕೆ ಸರಿಯಾಗಿ ನೀರಿನ ಸಮಸ್ಯೆ ನೀಗಿಸಲು, ಸಾರ್ವಜನಿಕರಿಗೆ ನೀರಿನ ಸೌಲಭ್ಯಗಳ ಬಗ್ಗೆ ಅಧಿಕೃತವಾಗಿ ಮಾಹಿತಿ ಪಡೆದುಕೊಳ್ಳಲು ಈ ಸಾಫ್ಟ್ ವೇರ್‌ ಸಹಕಾರಿಯಾಗಿದೆ.

Advertisement

ಪ್ರತಿದಿನ ಕಾವೇರಿ ಮೂಲದಿಂದ ಬೆಂಗಳೂರಿಗೆ 1,470 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, 10.64 ಲಕ್ಷ ಸಂಪರ್ಕಗಳಿವೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಜಲಮಂಡಳಿಯಿಂದಲೇ ಸಾಫ್ಟ್ವೇರ್‌ ನಿರ್ವಹಣೆ :

ಹೊಸ ಸಾಫ್ಟ್ವೇರ್‌ ಅನ್ನು ಜಲಮಂಡಳಿಯ ಐಟಿ ವಿಭಾಗವು ನಿರ್ವಹಣೆ ಮಾಡಲಿದೆ. ವಾಟ್ಸ್‌ಆ್ಯಪ್‌ ಚಾಟ್‌ಬಾಟ್‌ ಮಾದರಿಯಲ್ಲಿ ಸಾಫ್ಟ್ವೇರ್‌ ಕಾರ್ಯ ನಿರ್ವಹಿಸಲಿದೆ. ಈ ವ್ಯವಸ್ಥೆ ವಿನ್ಯಾಸಗೊಳಿಸುವ (ಡಿಸೈನ್‌) ಜವಾಬ್ದಾರಿಯನ್ನು ಖಾಸಗಿ ಸಾಫ್ಟ್ವೇರ್‌ ಕಂಪನಿಯೊಂದಕ್ಕೆ ನೀಡಲಾಗಿತ್ತು. ಈಗಾಗಲೇ ವಿನ್ಯಾಸ ಪ್ರಕ್ರಿಯೆಯು ಮುಗಿದು ಇದನ್ನು ನಿರ್ವಹಣೆ ಮಾಡುವ ಬಗ್ಗೆ ಸಾಫ್ಟ್ವೇರ್‌ ಕಂಪನಿಯು ಜಲಮಂಡಳಿ ಐಟಿ ವಿಭಾಗಕ್ಕೆ ಮಾಹಿತಿ ನೀಡಿದೆ. ಆದರೆ, ನೂತನ ಸಾಫ್ಟ್ವೇರ್‌ಗೆ ಅಧಿಕೃತವಾಗಿ ಹೆಸರಿಡಬೇಕಿದೆ.

ಕಾವೇರಿ ನೀರಿನ ವಿಚಾರಕ್ಕೆ ಸಂಬಂಧಿಸಿದ ಮಾಹಿತಿ ಪಡೆಯು ವುದು, ದೂರು ನೀಡುವ ಬಗ್ಗೆ ಬೆಂಗ ಳೂರಿನ ನಾಗರಿಕರಿಗೆ ಗೊಂದಲಗಳಿದ್ದರೆ ಈ ಸಾಫ್ಟ್ವೇರ್‌ ಸದ್ಬಳಕೆ ಮಾಡಿ ಕೊಳ್ಳಬಹುದು. ಮೇ ಮೊದಲ ವಾರದಲ್ಲಿ ಇದಕ್ಕೆ ಚಾಲನೆ ಸಿಗಲಿದೆ. ಕುಂದು ಕೊರತೆ ನಿವಾರಿಸಲು ಜಲಮಂಡಳಿ ಸದಾ ಸಿದ್ಧ.-ಡಾ.ರಾಮ್‌ ಪ್ರಸಾತ್‌ ಮನೋಹರ್‌, ಅಧ್ಯಕ್ಷ, ಜಲಮಂಡಳಿ

-ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next