Advertisement

ಸಾಲಿಗ್ರಾಮ-ಪಾರಂಪಳಿ ನಡುವಿನ ಸೇತುವೆಗೆ ಮುಕ್ತಿ ಯಾವಾಗ?

06:05 PM Jun 14, 2024 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಪಾರಂಪಳ್ಳಿ, ಕೋಡಿ ಕನ್ಯಾಣದಿಂದ ಸಾಲಿಗ್ರಾಮ ಸಂಪರ್ಕಿಸುವ ಪ್ರಮುಖ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಹೀಗಾಗಿ ಹೊಸ ಸೇತುವೆ ನಿರ್ಮಾಣ ತುರ್ತು ಅಗತ್ಯವಿದೆ. ಆದರೆ ಕಾಮಗಾರಿ ನಡೆಸಲು ಅನುದಾನ ಬಿಡುಗಡೆ ಯಾದರೂ ಸಿ.ಆರ್‌.ಝಡ್‌. ಅನುಮತಿ ಬಾಕಿ ಇದೆ ಎಂದು ಲೋಕೋಪಯೋಗಿ ಇಲಾಖೆ ಹೇಳುತ್ತದೆ. ಸೇತುವೆ ಕುಸಿದು ಅನಾಹುತ ಉಂಟಾಗುವ, ಸಂಪರ್ಕ ಕಡಿತಗೊಳ್ಳುವ ಮುನ್ನ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕಿದೆ.

Advertisement

ಮೂರು ದಶಕಗಳ ಹಿಂದೆ ಪಾರಂಪಳ್ಳಿ, ಪಡುಕರೆ, ಕೋಡಿ ಕನ್ಯಾಣ ನಿವಾಸಿಗಳು ಸಾಲಿಗ್ರಾಮಕ್ಕೆ ಬರಬೇಕಾದರೆ ಒಂದೋ ದೋಣಿ ಮೂಲಕ ಹೊಳೆ ದಾಟಿ ಗದ್ದೆ ಬಯಲಿನಲ್ಲಿ ನಡೆದು ಬರಬೇಕಿತ್ತು ಅಥವಾ ಕೋಟದ ಮೂಲಕ ಸುತ್ತುವರಿದು ಬರಬೇಕಿತ್ತು. ಈ ಸಮಸ್ಯೆ ಪರಿಹರಿ ಸುವ ಸಲುವಾಗಿ ಮೂರು ದಶಕಗಳ ಹಿಂದೆ ಈ ಸೇತುವೆ ನಿರ್ಮಿಸಲಾಗಿತ್ತು. ಅನಂತರದಲ್ಲಿ ಕೃಷಿ, ಮೀನುಗಾರಕೆ ಸೇರಿ ದಂತೆ ಸ್ಥಳೀಯರ ದೈನಂದಿನ ಚಟುವಟಿಕೆಗೆ ಸೇತುವೆ ಪ್ರಮುಖ ಕೊಂಡಿಯಾಗಿತ್ತು.

ಸಿ.ಆರ್‌.ಝಡ್‌. ವಿಘ್ನ
ಹೊಸ ಸೇತುವೆಯ ನಿರ್ಮಾಣಕ್ಕೆ 6 ಕೋ.ರೂ. 2023ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಶಾಸಕರಾಗಿ ದ್ದಾಗಲೇ ಬಿಡುಗಡೆಯಾಗಿತ್ತು. ಆದರೆ ಸಿ.ಆರ್‌.ಝಡ್‌. ಅನುಮತಿ ಸಿಗುವುದು ತಡವಾಗಿತ್ತು. ಅನಂತರದಲ್ಲಿ ಕೇವಲ 4 ಮೀಟರ್‌ ಸೇತುವೆ ರಚಿಸಲಷ್ಟೇ ಅವಕಾಶ ವಿದ್ದು ಲೋಕೋಪಯೋಗಿ ಇಲಾಖೆಯ ಅಂದಾಜುಪಟ್ಟಿಯಂತೆ 10 ಮೀಟರ್‌ ಅಗಲಗೊಳಿಸಬೇಕಾದರೆ ಉನ್ನತ ಮಟ್ಟದಲ್ಲಿ ಅನುಮೋದನೆ ಅಗತ್ಯ ಎಂದು ತಡೆ ಹಿಡಿಯಲಾಗಿತ್ತು. 10 ಮೀಟರ್‌ ಸೇತುವೆಯೇ ಅಗತ್ಯವಿರುವುದರಿಂದ ಉನ್ನತ ಮಟ್ಟದ ಅನುಮತಿಗೆ ಕಾಯಲಾಗುತ್ತಿದೆ.

ತಡೆಗೋಡೆಗೆ ಹಾನಿ
ಶಿಥಿಲಗೊಂಡ ಸೇತುವೆಯ ತಡೆಗೋಡೆಯನ್ನು ಇತ್ತೀಚೆಗೆ ರಾತ್ರಿ ವೇಳೆ ಕಿಡಿಗೇಡಿಗಳು ಕೆಡವಿ ಹಾಕಿದ್ದಾರೆ. ಕಿಡಿಗೇಡಿಗಳಿಗೆ
ಸೂಕ್ತ ಶಿಕ್ಷೆಯಾಗಬೇಕು ಎನ್ನುವುದು ಸ್ಥಳೀಯರ ಮನವಿಯಾಗಿದೆ. ಆದರೆ ಈ ರೀತಿ ಕೃತ್ಯವೆಸಗುವುದಕ್ಕೆ ಹೊಸ ಸೇತುವೆ
ನಿರ್ಮಿಸುತ್ತಿಲ್ಲ ಎನ್ನುವ ಆಕ್ರೋಶ ಕೂಡ ಕಾರಣವಿರಬಹುದು ಎನ್ನುವ ಅನುಮಾನ ಸ್ಥಳೀಯರದ್ದು.

ಹಳೆ ಸೇತುವೆ ಹಿಂದಿದೆ ದೊಡ್ಡ ಹೋರಾಟ
1989ರಲ್ಲಿ ಬಸವರಾಜ್‌ ಅವರು ಬ್ರಹ್ಮಾವರ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಈ ಸೇತುವೆಗೆ ಮಂಜೂರಾತಿ ದೊರೆತಿತ್ತು. ಅಂದು ಬೆಂಗಳೂರು ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿದ್ದ ಪಾರಂಪಳ್ಳಿ ಮೂಲದ ಪಿ. ರಾಮದೇವ ಅವರು ಸೇತುವೆ ಮಂಜೂರಾತಿಗೆ ಸರಕಾರಕ್ಕೆ ಒತ್ತಡ ತಂದಿದ್ದರು.

Advertisement

ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆಯವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಎಚ್‌.ಡಿ. ದೇವೇಗೌಡ ಅವರೇ ಖುದ್ದು ಸೇತುವೆಯ ಶಿಲಾನ್ಯಾಸಕ್ಕೆ ಮಾಡಿದ್ದರು. ಅನಂತರಎರಡು ವರ್ಷ ಕಳೆದರೂ ಕಾಮಗಾರಿ
ಪ್ರಗತಿ ಕಾಣಲಿಲ್ಲ. ಆಗ ದ.ಕ. ಜಿಲ್ಲಾ ಪರಿಷತ್‌ ಅಧ್ಯಕ್ಷರಾಗಿದ್ದ ದಿ| ಕೆ.ಸಿ.ಕುಂದರ್‌ ಅವರು ಜಿಲ್ಲಾ ಪರಿಷತ್‌ ಅನುದಾನದಲ್ಲಿ ಕಾಮಗಾರಿ ಮುಂದುವರಿಸಿದ್ದರು. ಬಳಿಕ ತಾಂತ್ರಿಕ ಕಾರಣದಿಂದ ಕಾಮಗಾರಿ ಮತ್ತೆ ಸ್ಥಗಿತವಾಗಿತ್ತು. ಅನಂತರ ಊರಿನವರ ಮನವಿ ಮೇರೆಗೆ ಸಾಹಿತಿ ಡಾ| ಶಿವರಾಮ ಕಾರಂತರು ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಧ್ವನಿ ಎತ್ತಿದ್ದರು.

ಅಂದು ವಿಧಾನಸಭೆಯಲ್ಲೂ ಈ ವಿಷಯ ಪ್ರಸ್ತಾಪವಾಗಿತ್ತು. ಅದಾಗಲೇ ರಾಜಕೀಯ ಪ್ರವೇಶಿಸುತ್ತಿದ್ದ ಜಯಪ್ರಕಾಶ್‌ ಹೆಗ್ಡೆಯವರು ವಿಧಾನಪರಿಷತ್‌ ವಿಪಕ್ಷ ನಾಯಕ ಎಂ.ಸಿ.ನಾಣಯ್ಯ ಅವರಲ್ಲಿ ಮನವಿ ಮಾಡಿ ವಿಧಾನಪರಿಷತ್‌ನಲ್ಲಿ ಈ ವಿಷಯ
ಪ್ರಸ್ತಾಪಿಸಿದ್ದರು. ಎಲ್ಲರ ಹೋರಾಟ ಫಲವಾಗಿ 1993ರಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಂಡಿತ್ತು. ಎರಡು ವರ್ಷಗಳಲ್ಲಿ ಸಂಪರ್ಕ ರಸ್ತೆ ಕಾಮಗಾರಿಯೂ ಪೂರ್ಣಗೊಂಡು ಎರಡು ಊರುಗಳ ಮಧ್ಯೆ ಸಂಪರ್ಕ ಬೆಸೆದಿತ್ತು ಎಂದು ಸೇತುವೆ ನಿರ್ಮಾಣದ ಹಿಂದಿನ ಹೋರಾಟವನ್ನು ಸ್ಥಳೀಯರಾದ ಕೋಡಿ ಚಂದ್ರಶೇಖರ್‌ ನಾವಡರು ನೆನಪಿಸಿಕೊಳ್ಳುತ್ತಾರೆ.

ತತ್‌ಕ್ಷಣ ಕಾಮಗಾರಿ
ಕಾಮಗಾರಗೆ 6ಕೋಟಿ ಟೆಂಡರ್‌ ನಡೆದಿದೆ. ಸಿ.ಆರ್‌.ಝಡ್‌. ಅನುಮತಿ ಬಾಕಿ ಇದ್ದು, ಅನುಮತಿ ದೊರೆತ ತತ್‌ಕ್ಷಣ ಕೆಲಸ ಆರಂಭವಾಗಲಿದೆ.
ಮಂಜುನಾಥ, ಸಹಾಯಕ ಎಂಜಿನಿಯರ್‌,
ಪಿ.ಡಬ್ಲ್ಯೂಡಿ. ಇಲಾಖೆ

*ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next