ಗುರುಮಠಕಲ್: ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಮೆಟ್ರಿಕ್ ಪೂರ್ವ ನಂತರ ಬಾಲಕರ ವಸತಿ ನಿಲಯದ(ಪ.ಜಾತಿ)ಕಟ್ಟಡ ಕಾಮಗಾರಿ ಪೂರ್ಣಗೊಂಡು ಮೂರು ತಿಂಗಳಾದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಪಟ್ಟಣದ ಚಂಡರಿಕಿ ರಸ್ತೆಯಲ್ಲಿರುವ ಈ ವಸತಿ ನಿಲಯವನ್ನು 2017-18ನೇ ಸಾಲಿನಲ್ಲಿ ಅಂದಾಜು 4.7 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಬೃಹತ್ 4 ಮಹಡಿಗಳ ಹೊಂದಿರುವ ಈ ಕಟ್ಟಡ ಪೂರ್ಣಗೊಂಡಿದ್ದರೂ ಅದರಲ್ಲಿ ವಾಸಿಸುವ ಭಾಗ್ಯ ವಿದ್ಯಾರ್ಥಿಗಳಿಗೆ ಇಲ್ಲದಂತಾಗಿದೆ. ಪಟ್ಟಣದ ಕಾಕಲವಾರ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಬಿಸಿಎಂ ಹಾಸ್ಟೆಲ್ ಕಾರ್ಯ ನಿರ್ವಹಿಸುತ್ತಿದೆ.
ಒಟ್ಟು ತಾಲೂಕಿನಲ್ಲಿ 15 ವಸತಿ ನಿಲಯಗಳಿದ್ದು, ಅದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಒಟ್ಟು ಐದು ವಸತಿ ನಿಲಯಗಳಿವೆ. ಇದರಲ್ಲಿ ಎಲ್ಲವೂ ಸ್ವಂತ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದರೆ, ಇದೊಂದು ಮಾತ್ರ ಬಹಳ ದಿನಗಳಿಂದ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಈ ವಸತಿ ನಿಲಯದ ಬಾಡಿಗೆ ಕರಾರು ಪತ್ರ ಮುಗಿದರೂ, ಹೊಸ ಕಟ್ಟಡ ಹಸ್ತಾಂತರವಾಗದಿರುವುದರಿಂದ ಅನವಶ್ಯಕವಾಗಿ ಬಾಡಿಗೆ ಹಣ ಕಟ್ಟುವಂತಾಗಿದೆ.
ನಮ್ಮ ಕಾಮಗಾರಿ ಸಂಪೂರ್ಣವಾಗಿದೆ. ಸಮಾಜ ಕಲ್ಯಾಣಕ್ಕೆ ಹಸ್ತಾಂತರಿಸಿದ್ದೇವೆ. ಆದರೆ ಸಮಾಜ ಕಲ್ಯಾಣ ಇಲಾಖೆ ಕಟ್ಟಡ ಉದ್ಘಾಟಿಸಿಲ್ಲ ಎಂದು ಕಟ್ಟಡ ನಿರ್ಮಿಸಿದ ಗುತ್ತಿಗೆದಾರರು ಹೇಳುತ್ತಾರೆ.
ಕಟ್ಟಡ ಕಾಮಗಾರಿ ಪೂರ್ಣಗೊಂಡು ಅಲ್ಲಿ ವಿದ್ಯಾರ್ಥಿಗಳು ವಾಸ ಮಾಡಬೇಕೆಂದರೆ ಎಷ್ಟು ವರ್ಷ ಬೇಕಾಗುತ್ತದೆಯೋ ಎಂದು ವಿದ್ಯಾರ್ಥಿಗಳು ಮತ್ತು ಪಾಲಕರು ಪ್ರಶ್ನಿಸುವಂತಾಗಿದೆ.
-ಚೆನ್ನಕೇಶವುಲು ಗೌಡ