ಹೊಸದಿಲ್ಲಿ: ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ ಬಳಿಕ ಕುಸ್ತಿಪಟುಗಳಾದ ವಿನೇಶ್ ಫೋಗಾಟ್ ಮತ್ತು ಬಜರಂಗ್ ಪೂನಿಯಾ ಅವರು, ಕಾಂಗ್ರೆಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಮಹಿಳಾ ಕುಸ್ತಿಪಟುಗಳ ವಿರುದ್ಧ ಲೈಂಗಿಕ ದೌರ್ಜನ್ಯ ಖಂಡಿಸಿ ಕಳೆದ ವರ್ಷ ನಡೆದ ದಿಲ್ಲಿಯ ಜಂತರ್-ಮಂತರ್ ಪ್ರತಿಭಟನೆ ವೇಳೆ ನಮ್ಮ ನೋವು ಮತ್ತು ಕಣ್ಣೀರು ಅರ್ಥ ಮಾಡಿಕೊಂಡಿದ್ದಕ್ಕೆ ಕಾಂಗ್ರೆಸ್‌ಗೆ ಧನ್ಯವಾದ ಎಂದು ವಿನೇಶ್ ಹೇಳಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ನಮ್ಮನ್ನು ರಸ್ತೆಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಎಲ್ಲ ಪಕ್ಷಗಳು ನಮಗೆ ಬೆಂಬಲ ನೀಡಿದವು. ಮಹಿಳೆಯರ ಪರವಾಗಿ ನಿಂತ ಪಕ್ಷಕ್ಕೆ ನಾನು ಸೇರಿದ್ದಕ್ಕೆ ನನಗೆ ಹೆಮ್ಮೆ ಇದೆ. “ಸಡಕ್ ಸೇ ಸಂಸದ್'(ಬೀದಿಯಿಂದ ಸಂಸತ್‌ವರೆಗೆ) ಹೋರಾಟಕ್ಕೆ ಸಿದ್ಧಳಾಗಿದ್ದೇನೆ ಎಂದರು. ಇದೇ ವೇಳೆ, ಮಾತನಾಡಿದ ಬಜರಂಗ್ ಪೂನಿಯಾ ಅವರು, ಕಳೆದ ವರ್ಷದ ನಮ್ಮ ಪ್ರತಿಭಟನೆಗೆ ಕೇಳದಿದ್ದರೂ ಕಾಂಗ್ರೆಸ್ ಬೆಂಬಲ ನೀಡಿತು. ಬೆಂಬಲ ನೀಡುವಂತೆ ಪತ್ರ ಬರೆದರೂ ಬಿಜೆಪಿ ಬೆಂಬಲಿಸಲಿಲ್ಲ ಎಂದು ಹೇಳಿದರು.
ಕುಸ್ತಿಪಟುಗಳ ಪಕ್ಷ ಸೇರ್ಪಡೆ ಬೆನ್ನಲ್ಲೇ ನಡೆದ ಕಾಂಗ್ರೆಸ್‌ನ ಕೇಂದ್ರ ಚುನಾವಣ ಸಮಿತಿ ಸಭೆಯಲ್ಲಿ ವಿನೇಶ್‌ಗೆ ಹರಿಯಾಣದ ಜುಲಾನಾ ವಿಧಾನಸಭೆ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಬಜರಂಗ್ ಪೂನಿಯಾ ಈ ಬಾರಿ ಸ್ಪರ್ಧಿಸುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ವಿನೇಶ್‌ಗೆ ನೋಟಿಸ್: ವಿನೇಶ್‌ಗೆ ರೈಲ್ವೇ ಇಲಾಖೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಅವರು ಮಾಡಿದ ಅಪರಾಧ ಎಂದರೆ, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ. ವಿನೇಶ್ ರೈಲ್ವೇಯ ಒಎಸ್‌ಡಿ ಹುದ್ದೆಗೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವ ಪ್ರಕ್ರಿಯೆಗಳನ್ನು ಬೇಗನೆ ಪೂರೈಸಲಿ ಎಂದು ಆಗ್ರಹಿಸಿದರು. ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡುವ ಮೂಲಕ ಸೇವಾ ನಿಯಮ ಉಲ್ಲಂ ಸಿದ್ದಾರೆಂದು ನೋಟಿಸ್ ನೀಡಲಾಗಿದೆ ಎನ್ನಲಾಗಿದೆ.