Advertisement

ಮರಡಿ ಹಳ್ಳದ ಕಿರುಸೇತುವೆ ನಿರ್ಮಾಣ ಯಾವಾಗ ?

04:45 PM Jun 04, 2018 | |

ತೀರ್ಥಹಳ್ಳಿ: ಮಳೆಗಾಲ ಆರಂಭವಾದರೆ ಸಾಕು ಈ ಊರಿನ ಗ್ರಾಮಸ್ಥರಿಗೆ ಏನೋ ಆತಂಕ, ಭಯ ಕಾಡುತ್ತದೆ. ತಮ್ಮ ಊರಿನ ಗ್ರಾಪಂನ ನ್ಯಾಯಬೆಲೆ ಅಂಗಡಿಗೆ ಹೋಗಬೇಕಾದ ಚಿಂತೆಯಲ್ಲಿ ತೊಡಗುತ್ತಾರೆ. ಏಕೆಂದರೆ ನ್ಯಾಯಬೆಲೆ ಅಂಗಡಿಗೆ ಹತ್ತಿರದಿಂದಲೇ ಹೋಗಬೇಕಾದ ಕಿರು ಸಂಪರ್ಕ
ಸೇತುವೆ ನಿರ್ಮಾಣವಾಗದೆ ಹಲವು ದಶಕಗಳೇ ಕಳೆದಿದೆ. ಈ ಸಮಸ್ಯೆಯ ಬಗ್ಗೆ ಯಾವೊಬ್ಬ ಜನಪ್ರತಿನಿಧಿಗಳು ಕಿವಿಗೊಡದೆ ಇರುವುದು ದುರಂತದ ವಿಚಾರ.

Advertisement

ತಾಲೂಕಿನ ಹೊದಲ ಅರಳಾಪುರ ಗ್ರಾಪಂನ ಹುಣಸೆಬೈಲು ಹಾಗೂ ಮುಂಡಿಗೆಮನೆಯ ಬಿಪಿಎಲ್‌ ಪಡಿತರದಾರರು, ಬಡ ರೈತರು, ಕೂಲಿ ಕಾರ್ಮಿಕರು, ಸಾರ್ವಜನಿಕರು ಗ್ರಾಪಂ ಕೇಂದ್ರಕ್ಕೆ ಮಳೆಗಾಲದಲ್ಲಿ ಹೋಗಬೇಕಾದ ಸಮಸ್ಯೆಯ ಸುಳಿ ಹೇಳ ತೀರದಾಗಿದೆ. 

 ಈ ಗ್ರಾಪಂ ವ್ಯಾಪ್ತಿಯ ಮರಡಿ ಹಳ್ಳಕ್ಕೆ ಕಿರುಸೇತುವೆ ನಿರ್ಮಾಣ ಮಾಡಬೇಕೆಂದು ಕಳೆದ 40 ವರ್ಷಗಳಿಂದ ಈ ಊರಿನ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಹತ್ತಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಉಪಯೋಗವಾಗಿಲ್ಲ. 

ಮರಡಿ ಹಳ್ಳಕ್ಕೆ ಕಿರುಸೇತುವೆ ಬೇಕೆಂದು 1993ರಲ್ಲಿ ಆರಗ ಜ್ಞಾನೇಂದ್ರ ಶಾಸಕರಾಗಿದ್ದಾಗ ಕಿರುಸೇತುವೆಗಾಗಿ ಪಿಲ್ಲರ್‌ ನಿರ್ಮಿಸಿದ್ದರು. ಅಂದಿನಿಂದ ವರ್ಷಪೂರ್ತಿ ಗ್ರಾಮಸ್ಥರು ಆ
ಪಿಲ್ಲರ್‌ ಮೇಲೆ ಹಾಕಿದ ಅಡಕೆ ಸಾರದ ಮೇಲೆ ಓಡಾಡಬೇಕಾದ ಸ್ಥಿತಿ ಬಂದಿದೆ. ನಂತರ ಇದರ ಬಗ್ಗೆ ಯಾವುದೇ ಇಲಾಖೆ ಕಣ್ಣೆತ್ತಿಯೂ ಸಹ ನೋಡಿಲ್ಲ.

ಈ ಸೇತುವೆ ನಿರ್ಮಾಣವಾದರೆ ಈ ಊರಿನ ಗ್ರಾಮಸ್ಥರು ಗ್ರಾಪಂ ಕೇಂದ್ರಕ್ಕೆ ಹೋಗಲು 3 ಕಿಮೀ ಆಗುತ್ತದೆ. ಆದರೆ ಈಗ ಮಳೆಗಾಲದಲ್ಲಿ 5 ಕಿಮೀ ಸುತ್ತಿ ನಡೆದು ಹೋಗಬೇಕಾದ ದುಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.  ಕಳೆದ ವರ್ಷ ಮರಡಿ ಹಳ್ಳದ ಕಿರು ಸೇತುವೆಗಾಗಿ ಲೋಕೋಪಯೋಗಿ ಇಲಾಖೆಯವರು 25ಲಕ್ಷದ ಅಂದಾಜುಪಟ್ಟಿ ತಯಾರಿಸಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಕಳುಹಿಸಿದ್ದರು.

Advertisement

ನಂತರ ಯಾವೊಬ್ಬ ಜನಪ್ರತಿನಿಧಿಯಾಗಲಿ ಹುಣಸೆಬೈಲು ಮುಂಡಿಗೆಮನೆ ಗ್ರಾಮಸ್ಥರಾಗಲಿ ಇದರ ಬಗ್ಗೆ ಹೆಚ್ಚು ಗಮನಹರಿಸದ ಕಾರಣ ಈ ಪ್ರಸ್ತಾವನೆ ಅಲ್ಲಿಗೆ ನಿಂತು ಹೋಯಿತು. ಪ್ರತಿ ಬಾರಿ ಚುನಾವಣೆ ಬಂದಾಗ ಮೂರು ಪಕ್ಷಗಳು ಈ ಕಿರುಸೇತುವೆ ನಿರ್ಮಾಣದ ಬಗ್ಗೆ ಬಣ್ಣ ಬಣ್ಣದ ಭರವಸೆ ನೀಡಿ ಮತ ಯಾಚಿಸುತ್ತಾರೆ. ಆದರೆ ಗ್ರಾಮಸ್ಥರ ಪಾಡು ಮಾತ್ರ ಶೋಚನೀಯವಾಗಿದೆ. 

ಇನ್ನಾದರೂ ಸಂಬಂಧಪಟ್ಟ ಇಲಾಖೆಯವರಾಗಲಿ, ಶಾಸಕರ, ಸಂಸದರ, ಜಿಪಂ ಸದಸ್ಯರ ಅನುದಾನದಿಂದ ಈ ಕಿರು ಸೇತುವೆ ನಿರ್ಮಾಣವಾಗಬಹುದೆಂಬ ಚಿಂತೆ ಗ್ರಾಮಸ್ಥರಲ್ಲಿ
ಕಾಡುತ್ತಿದೆ. ಪ್ರತಿ ಮಳೆಗಾಲದಲ್ಲೂ ಸಹ ಈ ಊರಿನ ಗ್ರಾಮಸ್ಥರು ಪಡಿತರ ಸಾಮಾನುಗಳನ್ನು ತರಲು ಹೋಗುವಾಗಲೆಲ್ಲ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಲೇ ಇದ್ದಾರೆ. ಮುಂದಿನ ದಿನಗಳಲ್ಲಾದರೂ ಮರಡಿ ಹಳ್ಳಕ್ಕೆ ಕಿರುಸೇತುವೆ ನಿರ್ಮಾಣವಾಗಲಿ ಎಂಬುದು ಹುಣಸೆಬೈಲು- ಮುಂಡಿಗೆಮನೆ ಗ್ರಾಮಸ್ಥರ ಆಶಯವಾಗಿದೆ.

„ರಾಂಚಂದ್ರ ಕೊಪ್ಪಲು

Advertisement

Udayavani is now on Telegram. Click here to join our channel and stay updated with the latest news.

Next