ನವದೆಹಲಿ: ರೇಡಿಯೋ, ಟೀವಿಯಲ್ಲಿ ಮನ್ ಕೀ ಬಾತ್ ನಡೆಸುವ ಮೋದಿ ಉತ್ತರಪ್ರದೇಶದಲ್ಲಿ ಕರ್ನಾಮಾಗಳೇ (ಅವ್ಯವಹಾರಗಳೇ) ನಡೆದಿವೆ ಎಂದು ಆರೋಪಿಸುತ್ತಾರೆ. ಮೋದಿ ಯಾವಾಗ ತೂಕದ ಮಾತನಾಡುತ್ತಾರೆನ್ನುವುದು ಪ್ರಶ್ನೆ. ಹೀಗೆಂದು ಮುಖ್ಯಮಂತ್ರಿ ಅಖೀಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಉತ್ತರ ಪ್ರದೇಶದ ಬದೌನ್‌ನಲ್ಲಿ ಚುನಾವಣಾ ಪ್ರಚಾರ ಮಾಡಿದ ಅವರು, ಬದೌನ್‌ನಲ್ಲಿ ನಡೆದ ಅತ್ಯಾಚಾರದ ವಿಚಾರ ವಿಶ್ವಸಂಸ್ಥೆಯಲ್ಲಿಯೂ ಪ್ರಸ್ತಾಪವಾಯಿತು. ಎಲ್ಲ ರಾಜಕೀಯ ಪಕ್ಷಗಳ ನಾಯಕರೂ ಸ್ಥಳಕ್ಕೆ ಭೇಟಿ ನೀಡಿದ್ದರು. ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಲಾಗಿದ್ದರೂ, ರಾಜ್ಯಕ್ಕೆ ಕ್ಲೀನ್ ಚಿಟ್ ನೀಡಿತ್ತು ಎಂದರು. ಈ ಮೂಲಕ ರಾಜ್ಯಕ್ಕೆ ಕೆಟ್ಟ ಹೆಸರು ತರುವ ಹುನ್ನಾರವೂ ಬಯಲಾಯಿತು ಎಂದು ಲೇವಡಿ ಮಾಡಿದ್ದಾರೆ. ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಕಾಮ್ ಬೋಲ್ತಾ ಹೈ (ಕೆಲಸ ಎಲ್ಲವನ್ನೂ ಹೇಳುತ್ತದೆ) ಎಂದು ಅಖೀಲೇಶ್ ಹೇಳುತ್ತಾರೆ.
ಆದರೆ ಇಲ್ಲಿನ ಪ್ರತಿ ಮಗುವಿಗೂ ನಿಮ್ಮ ಕರ್ನಾಮಾಗಳು (ದುವ್ಯìಹಾರಗಳು) ಏನು ಹೇಳುತ್ತವೆ ಎಂದು ಗೊತ್ತು ಎಂದು ಟೀಕಿಸಿದ್ದರು. ಈ ನಡುವೆ ಉತ್ತರಪ್ರದೇಶ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಸೋಮವಾರ ತೆರೆ ಬೀಳಲಿದೆ. ಒಟ್ಟು 11 ಜಿಲ್ಲೆಗಳ 67 ವಿಧಾನಸಭಾ ಕ್ಷೇತ್ರಗಳಿಗೆ ಫೆ.15ರಂದು ಮತದಾನ ನಡೆಯಲಿದೆ. ಇದೇ ವೇಳೆ ನೆರೆ ರಾಜ್ಯ ಉತ್ತರಾಖಂಡದ 70 ಸ್ಥಾನಗಳಿಗೂ ಅದೇ ದಿನ ಚುನಾವಣೆ ನಡೆಯಲಿದೆ.
ಕೊಳ್ಳೆ ಹೊಡೆದವರ ಬಿಡಲ್ಲ: ಈ ನಡುವೆ ಉತ್ತರಾಖಂಡದ ಎರಡು ಸ್ಥಳಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಕೊಳ್ಳೆ ಹೊಡೆದ ವ್ಯಕ್ತಿಗಳನ್ನು ಅದನ್ನು ಹಿಂದಿರುಗಿ ನೀಡುವವರೆಗೆ ತಾನು ವಿರಮಿಸುವುದಿಲ್ಲ ಎಂದು ಗುಡುಗಿದರು. ದೇಶವನ್ನು 70 ವರ್ಷಗಳ ಕಾಲ ಆಳಿದವರ ಅಂತ್ಯ ಸಮೀಪಿಸಿದೆ. ನಾನು ವಿಶ್ರಾಂತಿಯನ್ನೂ ತೆಗೆದುಕೊಳ್ಳುವುದಿಲ್ಲ, ದೇಶವನ್ನು ಕೊಳ್ಳೆ ಹೊಡೆಯಲೂ ಬಿಡುವುದಿಲ್ಲ. ಈಗ ಪ್ರತಿಯೊಬ್ಬರೂ ಲೆಕ್ಕ ನೀಡಲೇಬೇಕಾದ ಸಮಯ ಎಂದು ಮೋದಿ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಸೇನೆ ನಡೆಸಿದ್ದ ಸರ್ಜಿಕಲ್ ದಾಳಿ ಬಗ್ಗೆ ಟೀಕೆ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ಮೋದಿ ಪರೋಕ್ಷವಾಗಿ ಹರಿಹಾಯ್ದರು. ಸೀಮಿತ ದಾಳಿಯನ್ನು ಟೀಕಿಸುವ ಮೂಲಕ ಕಾಂಗ್ರೆಸ್ ಯೋಧರಿಗೆ ಅವಮಾನ ಮಾಡುತ್ತಿದೆ. ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರ ಧಕ್ಕೆ ತಂದಿದ್ದಾರೆ ಎಂದು ಮೋದಿ ಕಿಡಿಕಾರಿದರು.
ರಾಹುಲ್ ರೋಡ್ ಶೋದಲ್ಲಿ ಪ್ರಧಾನಿ ಮೋದಿಗೆ ಜೈಕಾರ
ಉತ್ತರಾಖಂಡದ ಹರಿದ್ವಾರದಲ್ಲಿ ಉ.ಪ್ರ. ಮುಖ್ಯಮಂತ್ರಿ ಅಖೀಲೇಶ್ ಯಾದವ್ ಜತೆಗೆ ಜಂಟಿಯಾಗಿ ನಡೆಸುತ್ತಿದ್ದ ರೋಡ್ ಶೋ ವೇಳೆ ರಾಹುಲ್ ಗಾಂಧಿ ತೀವ್ರ ಮುಖಭಂಗಕ್ಕೀಡಾಗಿದ್ದಾರೆ. ರೋಡ್ ಶೋ ನಡೆಯುತ್ತಿದ್ದ ವೇಳೆಯೇ ಭಾರೀ ಪ್ರಮಾಣದಲ್ಲಿ ನುಗ್ಗಿ ಬಂದ ಬಿಜೆಪಿ ಧ್ವಜ ಹಿಡಿದ ಕಾರ್ಯಕರ್ತರು ಮೋದಿಗೆ ಜೈಕಾರ ಹಾಕಿದ್ದಾರೆ. ಇದರಿಂದ ಕಾಂಗ್ರೆಸ್ ಉಪಾಧ್ಯಕ್ಷ ಇರಿಸು ಮುರುಸಿಗೊಳಗಾಗಿದ್ದಾರೆ. ಈ ವೀಡಿಯೋ ಅಂತರ್ಜಾಲ ತಾಣದಲ್ಲಿ ವೈರಲ್ ಆಗಿದೆ.
2007ರಲ್ಲೂ ಬಿಎಸ್ಪಿ ಅಧಿಕಾರಕ್ಕೆ ಬರುವುದಿಲ್ಲವೆಂದು ಚುನಾವಣೆ ಸಮೀಕ್ಷೆಗಳು ನುಡಿದಿದ್ದವು. ಆದರೆ ಅದನ್ನೆಲ್ಲ ಹುಸಿಗೊಳಿಸಿ ಬಿಎಸ್ಪಿ ಅಧಿಕಾರಕ್ಕೇರಿತ್ತು. ಈ ಬಾರಿಯೂ ಅಂತಹ ಹುಸಿ ಸಮೀಕ್ಷೆಗಳನ್ನು ನಂಬುವ ಅಗತ್ಯವಿಲ್ಲ.
– ಮಾಯಾವತಿ, ಬಿಎಸ್ಪಿ ನಾಯಕಿ