Advertisement

ಮದುಮಗಳೇ ನೀ ಕೇಳು…

10:19 AM Jan 02, 2020 | mahesh |

ಏಪ್ರಿಲ್‌/ ಮೇನಲ್ಲಿ ಮದುವೆ ಇದೆ. ಅಷ್ಟರೊಳಗೆ ಸ್ವಲ್ಪ ತೂಕ ಇಳಿಸಬೇಕು. ಚರ್ಮಕ್ಕೆ ಹೊಳಪು ಬರುವಂತೆ ನೋಡಿಕೊಳ್ಳಬೇಕು. ಮದುವೆ ದಿನ ನಾನು ಚೆಂದ ಕಾಣಬೇಕು- ಈ ವರ್ಷ ಮದುವೆಗೆ ಸಜ್ಜಾಗಿರುವ ಹುಡುಗಿಯರು ಹೀಗೆಲ್ಲಾ ಯೋಚಿಸುತ್ತಾರೆ. ತೂಕ ಇಳಿಸಬೇಕು ಅಂತ ಜಿಮ್‌ ಸೇರುವುದು, ಊಟ ಬಿಡುವುದು, ಯೋಗ ಮಾಡುವುದು ಅಥವಾ ಎಲ್ಲವನ್ನೂ ಒಟ್ಟಿಗೇ ಟ್ರೈ ಮಾಡೋಕೆ ಹೋಗಿ ಸುಸ್ತಾಗಿ ಬಿಡುತ್ತಾರೆ. ಜೊತೆಗೆ, ಒತ್ತಡಕ್ಕೂ ಒಳಗಾಗುತ್ತಾರೆ. ಅದರ ಬದಲು, ಕೆಲವೊಂದಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಉತ್ತಮ.

Advertisement

– ಗುರಿ ವಾಸ್ತವಕ್ಕೆ ಹತ್ತಿರವಿರಲಿ
ನಿಮ್ಮ ಫಿಟ್‌ನೆಸ್‌ ಗೋಲ್‌ ವಾಸ್ತವಕ್ಕೆ ಹತ್ತಿರವಿರಲಿ. ಅಂದ್ರೆ, ಮದುವೆಗೆ ಎರಡು ತಿಂಗಳಿದೆ; ಅಷ್ಟರೊಳಗೆ ನಾನು ಹದಿನೈದು ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದುಕೊಳ್ಳುವುದು ಮೂರ್ಖತನ. (ಎರಡು ಅಥವಾ ನಾಲ್ಕು ತಿಂಗಳಲ್ಲಿ 8-10 ಕೆ.ಜಿ. ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನೆನಪಿರಲಿ) ನಿಮ್ಮ ತೂಕ ಎಷ್ಟು, ಮದುವೆಗೆ ಇನ್ನೂ ಎಷ್ಟು ಸಮಯ ಇದೆ, ಆ ಸಮಯದಲ್ಲಿ ಎಷ್ಟು ತೂಕ ಕಡಿಮೆ ಮಾಡಿಕೊಳ್ಳಬಹುದು ಅಂತ ಲೆಕ್ಕ ಹಾಕಿ. ಆರೋಗ್ಯಕ್ಕೆ ಹಾನಿಯಾಗದಂತೆ (ಡಯಟ್‌, ವ್ಯಾಯಾಮ) ಹೇಗೆ ತೂಕ ಇಳಿಸಬಹುದು ಅಂತ ನ್ಯೂಟ್ರಿಷನಿಸ್ಟ್‌ಗಳ ಸಲಹೆ ಪಡೆದು ಮುಂದುವರಿಯಿರಿ.

– ಯಾವುದು ಸೂಕ್ತ ಅಂತ ಗುರುತಿಸಿ
ತೂಕ ಇಳಿಸಲು ವ್ಯಾಯಾಮ ಮಾಡುವುದಾದರೆ, ಅದರಲ್ಲಿ ಅನೇಕ ವಿಧಾನಗಳಿವೆ. ಜಾಗಿಂಗ್‌, ಯೋಗ, ಜಿಮ್‌, ಇತ್ಯಾದಿ. ನಿಮಗೆ ಯಾವುದು ಸೂಕ್ತ ಅಂತ ಗುರುತಿಸಿಕೊಳ್ಳಿ. ಒಂದೇ ದಿನದಲ್ಲಿ ದೇಹ ದಂಡಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡು, ದಿನದಲ್ಲಿ ಒಂದಷ್ಟು ಗಂಟೆಯನ್ನು ವ್ಯಾಯಾಮಕ್ಕೆ ಮೀಸಲಿಡಿ.

-ಮನಸ್ಸಿಗೂ ವ್ಯಾಯಾಮ ಬೇಕು
ಮದುವೆ ಅಂದಮೇಲೆ, ಸಾವಿರ ಕೆಲಸಗಳಿರುತ್ತವೆ. ನೆಂಟರಿಷ್ಟರನ್ನು ಆಹ್ವಾನಿಸಬೇಕು, ಶಾಪಿಂಗ್‌ ಮಾಡಬೇಕು, ಬಟ್ಟೆ ಹೊಲಿಸಬೇಕು… ಈ ಎಲ್ಲ ಒತ್ತಡಗಳನ್ನು ನಿರ್ವಹಿಸಲು ಮನಸ್ಸಿಗೂ ಶಕ್ತಿ ಬೇಕು. ಹಾಗಾಗಿ, ಪ್ರತಿದಿನ ಕನಿಷ್ಠ 15 ನಿಮಿಷ ಧ್ಯಾನ ಮಾಡಿ. ದಿನಾ ಬೆಳಗ್ಗೆ ಎದ್ದ ನಂತರ ಕಣ್ಮುಚ್ಚಿ, ಆ ದಿನ ಮಾಡಬೇಕಾದ ಕೆಲಸಗಳನ್ನು ಮೆಲುಕು ಹಾಕಿ, ದೀರ್ಘ‌ ಉಸಿರಾಟ ಮಾಡಿದರೆ, ಸ್ವಲ್ಪ ಮಟ್ಟಿಗೆ ಒತ್ತಡ ನಿವಾರಣೆಯಾಗುತ್ತದೆ.

– ಚೆನ್ನಾಗಿ ಊಟ ಮಾಡಿ
ಮದುವೆಯ ಓಡಾಟದ ಮಧ್ಯೆ ಊಟ-ತಿಂಡಿಗೂ ಪುರುಸೊತ್ತು ಸಿಗುವುದಿಲ್ಲ. ಆದರೆ, ಎಷ್ಟೇ ಕೆಲಸವಿದ್ದರೂ ಊಟ ಮಾತ್ರ ಬಿಡಬೇಡಿ. ತೂಕ ಇಳಿಸಬೇಕು ಅನ್ನುವವರೂ ಕೂಡಾ ಊಟ-ತಿಂಡಿ ತಪ್ಪಿಸಬಾರದು. ಜಂಕ್‌ಫ‌ುಡ್‌, ಎಣ್ಣೆ ಪದಾರ್ಥ, ಚಾಕೋಲೇಟ್‌ಗಳನ್ನು ವರ್ಜಿಸಿ, ಹಣ್ಣು-ತರಕಾರಿ, ನೆನೆಸಿದ ಕಾಳು, ಮುಂತಾದ ಪೌಷ್ಟಿಕ ಆಹಾರಕ್ಕೆ ಆದ್ಯತೆ ಕೊಡಿ. ಹೆಚ್ಚೆಚ್ಚು ನೀರು, ಎಳನೀರು, ಜ್ಯೂಸ್‌ ಕುಡಿಯಿರಿ. ಇದರಿಂದ ಶಕ್ತಿಯೂ ಬರುತ್ತದೆ, ಚರ್ಮದ ಹೊಳಪೂ ಹೆಚ್ಚುತ್ತದೆ.

Advertisement

– ನಿದ್ದೆ ಮಾಡಿ…
ಬಹುತೇಕ ಹುಡುಗಿಯರು, ಮದುವೆ ಹತ್ತಿರ ಬರುತ್ತಿದ್ದಂತೆಯೇ ನಿದ್ರಾಹೀನತೆಯಿಂದ ಬಳಲಿ ಹೋಗುತ್ತಾರೆ. ಮದುವೆ ದಿನ ಏನಾಗುತ್ತದೋ ಏನೋ, ಅತ್ತೆ-ಮಾವನ ಮನೆಯಲ್ಲಿ ಹೇಗೆ ಅಡ್ಜಸ್ಟ್‌ ಆಗುವುದು, ಅಪ್ಪ-ಅಮ್ಮನನ್ನು ಬಿಟ್ಟು ಹೋಗಬೇಕಲ್ಲ… ಅಂತೆಲ್ಲಾ ಯೋಚಿಸಿ, ಹೈರಾಣಾಗುತ್ತಾರೆ. ಆದರೆ, ರಾತ್ರಿ ಮಲಗುವ ಮುನ್ನ ಎಲ್ಲ ಒತ್ತಡಗಳನ್ನು ಮೂಟೆ ಕಟ್ಟಿ, ಬದಿಗೆ ಸರಿಸಿ, ಚೆನ್ನಾಗಿ ನಿದ್ರೆ ಮಾಡಿ. ಅದರಿಂದ ಪ್ರಯೋಜನವೇನು ಗೊತ್ತಾ? ಕಣ್ಣಿನ ಸುತ್ತ ಕಪ್ಪುಗಟ್ಟುವುದಿಲ್ಲ, ಚರ್ಮದ ಆರೋಗ್ಯ ಹೆಚ್ಚುತ್ತದೆ, ಮುಖದಲ್ಲಿ ಸುಸ್ತು-ಬಳಲಿಕೆ ಕಾಣುವುದಿಲ್ಲ. ಮದುವೆ ದಿನ ಸುಂದರವಾಗಿ ಕಾಣಬಹುದು.

Advertisement

Udayavani is now on Telegram. Click here to join our channel and stay updated with the latest news.

Next