Advertisement

ತಂದೆಯ ಆದರ್ಶ ಮಕ್ಕಳಿಗೆ ಹರಿದಾಗ…

03:16 PM Jun 25, 2022 | Team Udayavani |

ಮೊನ್ನೆ ರವಿವಾರವಷ್ಟೇ ವಿಶ್ವ ತಂದೆಯರ ದಿನ ಆಚರಣೆಯಾಯಿತು. ಮರುದಿನ ಸೋಮವಾರವೇ ಸ್ವಾತಂತ್ರ್ಯ ಹೋರಾಟಗಾರ ಮಲ್ಪೆ ಶಂಕರನಾರಾಯಣ ಸಾಮಗರಿಗೆ ಸರಕಾರ ಕೊಟ್ಟ ಭೂಮಿಯಲ್ಲಿ ಅರ್ಧ ಎಕ್ರೆಯನ್ನು ಯಕ್ಷಗಾನದ ಚಟುವಟಿಕೆಗಳಿಗಾಗಿ ದಾನಪತ್ರವನ್ನು ಪುತ್ರ ನೋಂದಾಯಿಸಿ ನೀಡಿದ ಘಟನೆ ನಡೆಯಿತು. ಆಗರ್ಭ ಶ್ರೀಮಂತರಾಗಿಯೂ ಸಂಪತ್ತು ಇರುವುದು ಪರರಿಗೋಸ್ಕರ ಎಂಬುದನ್ನು ತೋರಿಸಿಕೊಟ್ಟಿದ್ದ ಸ್ವಾತಂತ್ರ್ಯ ಹೋರಾಟಗಾರ ಕೃಷ್ಣರಾಯ ಕೊಡ್ಗಿಯವರ ಪುತ್ರ, ಹಿರಿಯ ರಾಜಕಾರಣಿ ಎ.ಜಿ. ಕೊಡ್ಗಿಯವರು ಹಿಂದಿನ ಸೋಮವಾರ (ಜೂ. 13) ಇಹಲೋಕ ತ್ಯಜಿಸಿ ರಾಜಕೀಯ ಕ್ಷೇತ್ರದಲ್ಲಿ ಒಂದು ಬಗೆಯ ಶೂನ್ಯವನ್ನು ತಂದಿತ್ತರು. ಇವೆರಡೂ ಘಟನೆಗಳು ತಂದೆ ಆದರ್ಶಪ್ರಾಯರಾದರೆ ಅದರ ಪರಿಣಾಮ ಮಕ್ಕಳ ಮೇಲೂ ಬೀರುತ್ತದೆ ಎನ್ನುವುದನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭ ಸ್ಮರಿಸಬೇಕು.

Advertisement

ಸ್ವಾತಂತ್ರ್ಯಪೂರ್ವದಲ್ಲಿ ಬಹುತೇಕ ಸಿರಿವಂತರು ಬ್ರಿಟಿಷ್‌ ಸರಕಾರದ ಪರವಿದ್ದರೆ ಆಗರ್ಭ ಸಿರಿವಂತರಲ್ಲಿ ಒಬ್ಬರಾಗಿದ್ದ ಕೃಷ್ಣರಾಯ ಕೊಡ್ಗಿಯವರು (1893-1957) ಆ ಕಾಲಕ್ಕೆ ವರ್ಷಕ್ಕೆ 8,000 ರೂ. ತೀರ್ವೆ ಪಾವತಿಸುತ್ತಿದ್ದರೂ ಸ್ವಾತಂತ್ರ್ಯ ಚಳವಳಿಗೆ ಪೂರ್ಣ ಬೆಂಬಲ ನೀಡಿದವರು. ವೈಯಕ್ತಿಕ ಜೀವನದಲ್ಲಿ ವೈಭವೋಪೇತ ಆಸಕ್ತಿ, ಅಭಿರುಚಿ ಸ್ವಲ್ಪವೂ ಇರಲಿಲ್ಲ. ದೈವದತ್ತವಾದ ಸಂಪತ್ತನ್ನು ಸಾರ್ವಜನಿಕ ಹಿತಕ್ಕಾಗಿ ಉಪಯೋಗಿಸುವ ಧರ್ಮಸಂಸ್ಕಾರದ ಬುದ್ಧಿ ಇತ್ತು ಎಂದು ಶಂಕರನಾರಾಯಣ ಸಾಮಗರು ಆತ್ಮಕಥನದಲ್ಲಿ ಬಣ್ಣಿಸಿದ್ದಾರೆ. ಲೋಕಹಿತ ಸಾಧನೆಯೇ ಏಕಮಾತ್ರ ಧರ್ಮಾಚಾರ ಎಂಬ ನಿಷ್ಠೆ ಇಟ್ಟುಕೊಂಡವರಾಗಿದ್ದರು. ಪ್ರತಿಫ‌ಲಾಪೇಕ್ಷೆಯೂ ಇದ್ದಿರಲಿಲ್ಲ. ಸ್ವಾತಂತ್ರ್ಯ ಚಟುವಟಿಕೆಗಳಿಗೆ ಮನೆಯ ಮಾಳಿಗೆಯನ್ನು ಬಿಟ್ಟುಕೊಟ್ಟು ಅನ್ನಬಟ್ಟೆ ಒದಗಿಸುತ್ತಿದ್ದರು. ಖಾದಿ ಬಟ್ಟೆಗಳನ್ನು ತರಿಸಿ ಮಾರಾಟ ಮಾಡಿ, ಅದರಿಂದಾಗುವ ನಷ್ಟವನ್ನು ಸಂತೋಷದಿಂದ ವಹಿಸಿಕೊಂಡಿದ್ದರು. “ತಂದೆ ದೊಡ್ಡ ಭೂ ಮಾಲಕರಾಗಿದ್ದರೂ ಗೇಣಿದಾರರಿಗೆ ಯಾವ ತರಹದ ತೊಂದರೆ ನೀಡಿದ್ದಿಲ್ಲ. ಜತೆಗೆ ಸಹಕಾರವನ್ನೂ ನೀಡುತ್ತಿದ್ದ ಕಾರಣ ಒಕ್ಕಲುಗಳಿಗೆ ಅಪಾರ ಅಭಿಮಾನವಿತ್ತು’ ಎಂಬುದನ್ನು ಎ.ಜಿ. ಕೊಡ್ಗಿ (1929-2022) “ನಾನು’ ಆತ್ಮಕಥನದಲ್ಲಿ ತಿಳಿಸಿದ್ದಾರೆ.

“ಎ.ಜಿ. ಕೊಡ್ಗಿಯವರಂತಹ ರಾಜಕಾರಣಿಗಳು ಇದ್ದರೆ ಲೋಕಾಯುಕ್ತದ ಅಗತ್ಯವೇ ಇರುತ್ತಿರಲಿಲ್ಲ’ ಎಂದು ನಿವೃತ್ತ ಲೋಕಾಯುಕ್ತ ನ್ಯಾ| ಸಂತೋಷ್‌ ಹೆಗ್ಡೆಯವರು ಹೇಳಿದ್ದರು. 1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಒಂದು ಗಂಟೆ ಪೊಲೀಸ್‌ ಸ್ಟೇಶನ್‌ನಲ್ಲಿದ್ದ ಕೊಡ್ಗಿಯವರು ಶಾಸಕರಾಗಿ, ಸಕ್ರಿಯ ರಾಜಕಾರಣಿಯಾಗಿ, ರಾಜ್ಯದ ಮೂರನೆಯ ಹಣಕಾಸು ಆಯೋಗದ ಅಧ್ಯಕ್ಷರಾಗಿ -ಹೀಗೆ ಅನೇಕ ಹುದ್ದೆಗಳಲ್ಲಿದ್ದರೂ ರಾಜಕೀಯ ಶುಭ್ರತೆಯನ್ನು ಕಾಯ್ದುಕೊಂಡದ್ದು ಉಲ್ಲೇಖನೀಯ.

ಶಂಕರನಾರಾಯಣ ಸಾಮಗರು (1911 – 1999) “ದೊಡ್ಡ’ ಸಾಮಗರೆಂದು ಚಿರಪರಿಚಿತ. 1928 ರಲ್ಲಿ ಮೆಟ್ರಿಕ್‌ ಮುಗಿಸಿದ ಸಾಮಗರು ಬಳ್ಳಾರಿಗೆ ಹೋಗಿ ಸ್ವಾತಂತ್ರ್ಯ ಸಂಗ್ರಾಮದ  ಚಳವಳಿಯೂ ಲೋಕಸೇವಾ ರೂಪದ ಪರಮಾತ್ಮನ ಸೇವೆ ಎಂದು ಕಂಡುಕೊಂಡರು.

ಬಳ್ಳಾರಿಯಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡು ಬಳ್ಳಾರಿ ಸೆಂಟ್ರಲ್‌ ಜೈಲಿನಲ್ಲಿ ಆರು ತಿಂಗಳ ಜೈಲುವಾಸ ಅನುಭವಿಸಿದರು. ಅಲ್ಲಿಂದ ಮಲ್ಪೆಗೆಬಂದು ಖಾದಿ ಬಟ್ಟೆ ಪ್ರಚಾರದಲ್ಲಿ ನಿರತರಾದರು. ಸಾಮಗರ ಆರ್ಥಿಕ ಕಷ್ಟನೋಡಿ ಅಮಾಸೆಬೈಲು ಹಿ.ಪ್ರಾ. ಶಾಲೆಯ ಶಿಕ್ಷಕರಕೆಲಸವನ್ನು ಕೃಷ್ಣರಾಯ ಕೊಡ್ಗಿ ಕೊಡಿಸಿದರು. ಚಳವಳಿಯ ಕಾವು ಏರಿದಾಗ ಕೆಲಸಕ್ಕೆ ರಾಜೀನಾಮೆ ನೀಡಿ ಚಳವಳಿಗೆ ಧುಮುಕಿದರು. ಕುಂದಾಪುರ ಪೇಟೆ ಮಧ್ಯೆ ಸಾಮಗರೊಬ್ಬರೇ “ಮಹಾತ್ಮಾ ಗಾಂಧೀಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದಾಗ ತಲೆ ಮೇಲೆ ಬಿದ್ದ ಪೊಲೀಸರ ಲಾಠಿ ಪ್ರಹಾರದ ಗುರುತು ಕೊನೆಯವರೆಗೂ ಇತ್ತು.

Advertisement

ಮಂಗಳೂರಿನಲ್ಲಿ ಆರು ತಿಂಗಳು ಜೈಲುವಾಸವಾಯಿತು. ಊರಿಗೆ ಮರಳಿದ ಸಾಮಗರು ಯಕ್ಷಗಾನ, ಹರಿಕಥೆಯ ಉದ್ಯೋಗದಿಂದ ಬದುಕು ಸಾಗಿಸಿದರು, ಜತೆಗೆ ಸ್ವಾತಂತ್ರ್ಯ ಸಂದೇಶ ಬೀರಿದರು. 1942ರ ಚಳವಳಿಯಲ್ಲಿ ಗುಪ್ತ ತಂತ್ರಗಳಿಂದ ಸಕ್ರಿಯರಾಗಿದ್ದರು. 1947ರ ಬಳಿಕ ರಾಜಕೀಯದಲ್ಲಿರದ ಸಾಮಗರು ಖಾದಿ ಬಳಕೆ, ಸ್ವಾವಲಂಬನೆಯಂತಹ ನೀತಿಗಳನ್ನು ಅನುಸರಿಸಿ ಇತರರಿಗೂ ಹೇಳುತ್ತಿದ್ದರು.

ಕಲ್ಯಾಣಪುರ ಸಂತೆಕಟ್ಟೆ-ಕೊಡವೂರು ಮಾರ್ಗದಲ್ಲಿ ಪ್ರೊ|ಎಂ.ಎಲ್‌. ಸಾಮಗರಿಗೆ ಪಾಲಿನಲ್ಲಿಬಂದ 3.33 ಎಕ್ರೆ ಸ್ಥಳದಲ್ಲಿ 50 ಸೆಂಟ್ಸ್‌ ಜಾಗವನ್ನು ಯಕ್ಷಗಾನದ ಸೇವಾ ಚಟುವಟಿಕೆಗಳನ್ನುನಡೆಸುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ಗೆ ದಾನವಾಗಿ ನೀಡಿದ್ದಾರೆ. ದೊಡ್ಡವರ ಜನ್ಮಶತ ಮಾನೋತ್ತರದಲ್ಲಿ ನಡೆದು ಹೋಗಿದೆ. ಸೆಂಟ್ಸ್‌ ಒಂದಕ್ಕೆ 1ರಿಂದ 2 ಲ.ರೂ. ಬೆಲೆ ಇದೆ. ಇದಕ್ಕೆ ಪತ್ನಿ, ಮಕ್ಕಳು ಸಂತೋಷದ ಸಮ್ಮತಿ ನೀಡಿರುವುದೂ ಈ ಕಾಲದಲ್ಲಿ ಅಪೂರ್ವವೇ. “ತಂದೆಯವರು ಮಳೆಗಾಲದಲ್ಲಿ ಕಷ್ಟದಲ್ಲಿದ್ದ ಕಲಾವಿದರನ್ನುಮನೆಯಲ್ಲಿರಿಸಿಕೊಂಡು ಸಹಾಯವೆಸಗುತ್ತಿದ್ದರು. ನಾವು ಅವರ ಸ್ಮರಣೆಗಾಗಿ ಹೆಚ್ಚೇನನ್ನೂ ಮಾಡಿಲ್ಲ. ಯಕ್ಷಗಾನದ ಚಟುವಟಿಕೆ ಈ ಸ್ಥಳದಲ್ಲಿ ನಿರಂತರವಾಗಿರಲಿ ಎಂಬ ಆಶಯ ನಮ್ಮದು’ ಎನ್ನುತ್ತಾರೆ ಕಲಾವಿದ, ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್‌. ಸಾಮಗ.

ಸಪ್ತ ಮಹಾ ಪಾಪಗಳು
-ನೀತಿ ಇಲ್ಲದ ರಾಜಕಾರಣ
-ಶ್ರಮವಿಲ್ಲದ ಆದಾಯ
-ಶೀಲವಿಲ್ಲದ ಜ್ಞಾನ
-ನೈತಿಕತೆ ಇಲ್ಲದ ವ್ಯಾಪಾರ
-ಮಾನವೀಯತೆ ಇಲ್ಲದ ವಿಜ್ಞಾನ
-ಸಾಕ್ಷೀಪ್ರಜ್ಞೆ ಇಲ್ಲದ ಭೋಗ ವಿಲಾಸ
-ತ್ಯಾಗವಿಲ್ಲದ ಧಾರ್ಮಿಕತೆ

ಇವುಗಳನ್ನು ಗಾಂಧೀಜಿ ಉಲ್ಲೇಖೀಸುತ್ತಿದ್ದರು. ಶಂಕರನಾರಾಯಣ ಸಾಮಗರು ಶ್ರಮವಿಲ್ಲದ ಆದಾಯ ಕೂಡದು ಎಂಬ ನೀತಿಯನ್ವಯ ಸರಕಾರ ನೀಡಿದ ಸ್ಥಳದಲ್ಲಿ ನಿರ್ಮಿಸಿದ ಮನೆಗೆ “ಗಾಂಧಿಗುಡಿ’ ಎಂದು ಹೆಸರಿಸಿ ಕೃಷಿ, ತೋಟಗಾರಿಕೆ ನಡೆಸಿ ಬೆವರು ಸುರಿಸಿ ಆ ಆದಾಯದಲ್ಲಿ ದಾನ ಮಾಡುತ್ತಿದ್ದರು ಎಂದು ಎಂ.ಎಲ್‌. ಸಾಮಗ ನೆನಪಿಸಿಕೊಳ್ಳುತ್ತಾರೆ. “ನಾನು ಎರಡೆರಡು ರಾಷ್ಟ್ರೀಯ ಪಕ್ಷಗಳಲ್ಲಿ ಇದ್ದವನು. ನೀತಿರಹಿತ ರಾಜಕೀಯದ ಈ ಕಾಲದಲ್ಲಿ ಗಾಂಧೀಜಿಯ ನೀತಿಯುತ ರಾಜಕಾರಣದ ಬಗೆಗೆ ಗೌರವದೊಂದಿಗೆ ಅಚ್ಚರಿ ಮೂಡುತ್ತದೆ’ ಎಂದು ಎ.ಜಿ. ಕೊಡ್ಗಿ ಯವರು ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿದ್ದಾಗ ಹೇಳುತ್ತಿದ್ದರು ಎಂಬುದನ್ನು ಕೇಂದ್ರದ ಸಂಯೋಜಕ ಯು. ವಿನೀತ್‌ ರಾವ್‌ ಬೆಟ್ಟು ಮಾಡುತ್ತಾರೆ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next