Advertisement

ಅನ್ನ ಮೂಲದ ಆರ್ಥಿಕತೆ ಮುನ್ನೆಲೆಗೆ ಬಂದಾಗ ನೆಮ್ಮದಿ; ಬರಗೂರು

05:57 PM Apr 29, 2022 | Team Udayavani |

ಧಾರವಾಡ: ಬಡವರ ತುತ್ತಿಗೆ ಕನ್ನ ಹಾಕುವ ಆರ್ಥಿಕತೆಗಿಂತ ಅನ್ನಮೂಲದ ಆರ್ಥಿಕತೆ ಮುನ್ನೆಲೆಗೆ ಬಂದಾಗ ಮಾತ್ರ ರೈತರ ಬದುಕು ನೆಮ್ಮದಿ ಕಾಣಲು ಸಾಧ್ಯವಿದೆ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

Advertisement

ನಗರದ ಕಲಾಭವನ ಆವರಣದಲ್ಲಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಹಮ್ಮಿಕೊಂಡಿದ್ದ ಎರಡನೇ ರಾಜ್ಯಮಟ್ಟದ ರೈತ ಕೃಷಿ ಕಾರ್ಮಿಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಅನ್ನದಾತರ ಎಲ್ಲ ಸಂಕಷ್ಟಗಳಿಗೆ ಸರ್ಕಾರಗಳು ಮಾತ್ರ ಕಾರಣವಲ್ಲ. ಅವು ತರುವ ಬಂಡವಾಳಶಾಹಿಗಳ ಪರವಾದ ನೀತಿಗಳೂ ಕಾರಣವಾಗಿವೆ. ಹೀಗಾಗಿ ಇಂದಿನ ಆರ್ಥಿಕ ನೀತಿಗಳು ಗ್ರಾಮೀಣರು, ಬೆವರು ಸುರಿಸಿ ದುಡಿಯುವವರ ಪರವಾಗಿಲ್ಲ. ಉಳ್ಳವರ ಉದ್ಧಾರಕ್ಕಾಗಿರುವ ಈ ಆರ್ಥಿಕ ನೀತಿಗಳನ್ನು ತೊಲಗಿಸಲು ಪ್ರಬಲ ಹೋರಾಟಗಳನ್ನು ಕಟ್ಟಬೇಕು ಎಂದರು.

ಗ್ರಾಮೀಣ ಆರ್ಥಿಕ ಚಲನೆಗೆ ಕಾರಣವಾಗಿರುವ ನರೇಗಾ ಯೋಜನೆಯ ಅನುದಾನವನ್ನು ಪ್ರತಿವರ್ಷ ಕಡಿತ ಮಾಡಲಾಗುತ್ತಿದೆ. ದೇಶದ ಶೇ.69 ಕೂಲಿಕಾರ್ಮಿಕರು ಮಾಸಿಕ 5000 ರೂ. ಆದಾಯದಲ್ಲಿ ಬದುಕುತ್ತಿದ್ದಾರೆ ಎಂಬುದನ್ನು ಸರ್ಕಾರದ ಅಂಕಿ-ಅಂಶಗಳೇ ಹೇಳುತ್ತವೆ. ಪ್ರತಿಯೊಂದು ವಸ್ತುವಿನ ಬೆಲೆಯೇರಿಕೆಯಾಗಿರುವಾಗ ಈ ಆದಾಯದಲ್ಲಿ ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬೇಂದ್ರೆಯವರ ಕವಿತೆಯಲ್ಲಿ ಉಲ್ಲೇಖಿಸಿದಂತೆ
ಕುರುಡು ಕಾಂಚಾಣದ ಕುಣಿತ ಮಿತಿ ಮೀರಿದೆ.

ದೇಶದ ಶೇ.74 ಸಂಪತ್ತು ಕೇವಲ ಶೇ.1 ಜನರಲ್ಲಿ ಶೇಖರವಾಗಿದೆ. ಕೊರೊನಾ ಸಾಂಕ್ರಾಮಿಕದಂತಹ ವಿಪತ್ತಿನ ಕಾಲದಲ್ಲೂ ಬಂಡವಾಳಶಾಹಿಗರು 13 ಲಕ್ಷ ಕೋಟಿಗಳಷ್ಟು ಲಾಭ ಗಳಿಸಿದರು. ಆದರೆ ಕೂಲಿ ಕಾರ್ಮಿಕರು ಮಾತ್ರ ಬರಿಗಾಲಿನಿಂದ ನಡೆ ನಡೆದು ಸತ್ತರು. ಹೀಗಾಗಿ ರೈತ ಕೂಲಿ ಕಾರ್ಮಿಕರು ಒಂದಾಗಿ ಹೋರಾಡಿ ಈ ಬಂಡವಾಳವಾದವನ್ನು ಸೋಲಿಸಬೇಕಿದೆ ಎಂದರು.

Advertisement

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸತ್ಯವಾನ್‌ ಮಾತನಾಡಿ, ಮೂರು ಕರಾಳ ಕೃಷಿ ಕಾನೂನುಗಳ ವಿರುದ್ಧ 13 ತಿಂಗಳು ಕಾಲ ರೈತರು ದೆಹಲಿಯ ಗಡಿಗಳಲ್ಲಿ ನಡೆಸಿದ ಅವಿರತ ಹೋರಾಟದ ಫಲವಾಗಿ ಮೋದಿ ಸರ್ಕಾರದ ವಿರುದ್ಧ ಜಯ ದೊರೆಯಿತು. ಪ್ರಭುತ್ವ ಎಷ್ಟೇ ಬಲಿಷ್ಟವಾಗಿರಲಿ ಸಂಘಟಿತ ಹೋರಾಟದಿಂದ ಅದನ್ನು ಮಣಿಸಲು ಸಾಧ್ಯ ಎಂಬುದನ್ನು ನಮ್ಮ ದೇಶದ ರೈತರು ಜಗತ್ತಿಗೆ ತೋರಿಸಿಕೊಟ್ಟರು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ವಿಶ್ವಗುರುವಾಗಿಸಬೇಕೆಂದು ಬಯಸುತ್ತಾರೆ. ಆದರೆ ನಮ್ಮ ರೈತರು ಹೋರಾಟದ ಕಣದಲ್ಲಿ ವಿಶ್ವಗುರುವಾಗಿ ಮಾದರಿಯಾದರು ಎಂದರು.

ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಎಸ್‌ಯುಸಿಐ ಕಮ್ಯೂನಿಸ್ಟ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿದರು. ಹೋರಾಟಗಾರ ಎಸ್‌.ಆರ್‌. ಹಿರೇಮಠ ಅವರು ರೈತ ಹೋರಾಟದ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಚ್‌.ವಿ. ದಿವಾಕರ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಅಧ್ಯಕ್ಷ ಟಿ.ಎಸ್‌. ಸುನೀತಕುಮಾರ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಕಾರ್ಯದರ್ಶಿ ಶಂಕರ್‌ ಘೋಷ್‌, ಅಮರನಾಥ್‌, ವಿ.ಶಶಿಧರ್‌ ಇನ್ನಿತರರಿದ್ದರು. ಬಹಿರಂಗ ಸಭೆಗೂ ಮುನ್ನ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ರೈತರು ನಗರದಲ್ಲಿ ಬೃಹತ್‌ ರ್ಯಾಲಿ ನಡೆಸಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಈ ನೆಲದ ಕವಿ ವರಕವಿ ಬೇಂದ್ರೆಯವರು ರೈತನನ್ನು ಭೂಮಿ ತಾಯಿಯ ಚೊಚ್ಚಲ ಮಗನೆಂದರು. ಕುವೆಂಪು ಅವರು ನೇಗಿಲಯೋಗಿಯಾಗಿ ಕರೆದರು. ಆದರೆ ಇದು ಬೇರೆಯದೇ ಯೋಗಿಗಳ ಕಾಲವಾಗಿದ್ದು, ಸತ್ಯಕ್ಕೆ ಸಾಕ್ಷಿ ಕೇಳುವ ಕಾಲವಾಗಿದೆ.
ನಾಡೋಜ ಬರಗೂರು ರಾಮಚಂದ್ರಪ್ಪ,
ಹಿರಿಯ ಸಾಹಿತಿ

ಇಡೀ ಜಗತ್ತಿನ ರೈತರು ಭಾರತದ ರೈತರ ಹೋರಾಟದಿಂದ ಸ್ಪೂರ್ತಿ ಪಡೆದಿದ್ದಾರೆ. ಇದು ಭಗತ್‌ ಸಿಂಗ್‌ರಂತಹ ಮಹಾನ್‌ ಕ್ರಾಂತಿಕಾರಿಗಳಿಂದ ಸ್ಪೂರ್ತಿ ಪಡೆದ ಎಲ್ಲ ದಮನಿತ ರೈತರ ಹೋರಾಟದ ಫಲ. ರಾಜ್ಯ ಸರ್ಕಾರಗಳೂ ಈ ಕಾನೂನುಗಳನ್ನು ವಾಪಸ್‌ ಪಡೆಯಬೇಕು. ಅಲ್ಲಿಯವರೆಗೆ ರೈತರು ಹೋರಾಟ ಮುಂದುವರಿಸಬೇಕು.
ಸತ್ಯವಾನ್‌, ರಾಷ್ಟ್ರೀಯ ಅಧ್ಯಕ್ಷ,
ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ

Advertisement

Udayavani is now on Telegram. Click here to join our channel and stay updated with the latest news.

Next