ಹೊಸದಿಲ್ಲಿ : ಬಿಲಿಯಾಧಿಪತಿ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಅವರಿಂದ ಸಾವಿರಾರು ಕೋಟಿ ರೂ. ವಂಚನೆಗೆ ಗುರಿಯಾಗಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಿಂದ 1965ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಫಿಯೆಟ್ ಕಾರೊಂದನ್ನು ಕೊಳ್ಳಲು 5,000 ರೂ. ಸಾಲ ತೆಗೆದುಕೊಂಡಿದ್ದರು. ಅವರ ನಿಧನಾನಂತರವೂ ಉಳಿದುಕೊಂಡಿದ್ದ ಸಾಲವನ್ನು ಅವರ ಪತ್ನಿ ಲಲಿತಾ ಶಾಸ್ತ್ರೀ ಅವರು ಫ್ಯಾಮಿಲಿ ಪೆನ್‌ಶನ್ ಹಣದಿಂದ ತೀರಿಸಿದ್ದರು ಎಂಬ ಪ್ರಾಮಾಣಿಕತೆಯ ವಿಷಯ ಈಗ ಎಲ್ಲರಿಗೂ ಒಂದು ಪಾಠವಾಗಿ ಬೆಳಕಿಗೆ ಬಂದಿದೆ.
ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತೀ ಅವರ ಬಳಿ ಸ್ವಂತ ಕಾರು ಇರಲಿಲ್ಲ. ಕಾರು ಖರೀದಿಸಬೇಕೆಂಬ ಒತ್ತಡ ಮನೆಯವರಿಂದ ತೀವ್ರವಾಗಿತ್ತು. ಆಗ ಶಾಸ್ತ್ರೀ ಅವರು ತಮ್ಮ ಕಾರ್ಯದರ್ಶಿ ಫಿಯೆಟ್ ಕಾರು ಖರೀದಿಸಲು ಎಷ್ಟು ಹಣ ಬೇಕು ಎಂದು ಕೇಳಿದ್ದರು. ಅದಕ್ಕೆ 12,000 ರೂ. ತಗಲುವುದೆಂದು ಅವರಿಗೆ ತಿಳಿಸಲಾಯಿತು. ಶಾಸ್ತ್ರೀ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 7,000 ರೂ. ಇತ್ತು. ಉಳಿದ 5,000 ರೂ. ಗಳನ್ನು ಅವರು ಪಂಜಾಬ್ ನ್ಯಾಶನಲ್ ಬ್ಯಾಂಕಿನಂದ ಸಾಲವಾಗಿ ಪಡೆಯಲು ಮುಂದಾದರು.
ಬ್ಯಾಂಕಿನವರು ಪ್ರಧಾನಿ ಶಾಸ್ತ್ರೀ ಅವರಿಗೆ ಎರಡೇ ತಾಸೊಳಗೆ ಸಾಲ ಮಂಜೂರು ಮಾಡಿದರು. ಆಗ ಶಾಸ್ತ್ರೀಜೀ ಅವರು “ನೀವು ನಿಮ್ಮ ಸಾಮಾನ್ಯ ಗ್ರಾಹಕರಿಗೂ ಇಷ್ಟೇ ಸುಲಭದಲ್ಲಿ ಸಾಲ ನೀಡುತ್ತೀರಾ?’ ಎಂದು ಪ್ರಶ್ನಿಸಿದ್ದರು. ಎಲ್ಲ ಗ್ರಾಹಕರಿಗೂ ಸಮಾನ ಆದ್ಯತೆಯನ್ನು ನೀವು ನೀಡಬೇಕು ಎಂದು ಪಿಎನ್‌ಬಿ ಅಧಿಕಾರಿಗಳಿಗೆ ಶಾಸ್ತ್ರೀ ಸಲಹೆ ನೀಡಿದ್ದರು.
5,000 ರೂ. ಸಾಲವನ್ನು ಪೂರ್ತಿಯಾಗಿ ಪಾವತಿಸುವ ಮುನ್ನವೇ ಶಾಸ್ತ್ರೀ ಅವರು ತಾಷ್‌ಕೆಂಟ್‌ನಲ್ಲಿ ನಿಧನ ಹೊಂದಿದರು. ಅವರ ನಿಧನಾನಂತರ ಸಾಲ ಮರುಪಾವತಿಸುವಂತೆ ಬ್ಯಾಂಕಿನವರು ಶಾಸ್ತ್ರೀ ಅವರ ಪತ್ನಿಗೆ ನೊಟೀಸ್ ಕಳುಹಿಸಿದರು. ಶಾಸ್ತ್ರೀ ಅವರ ಪತ್ನಿ ಉಳಿದ ಸಾಲ ಮೊತ್ತವನ್ನು ಕಂತು ಕಂತಿನಲ್ಲಿ ಫ್ಯಾಮಿಲಿ ಪೆನ್‌ಶನ್ ಹಣದಿಂದ ಪಾವತಿಸಿದರು.
ಶಾಸ್ತ್ರೀ ಅವರು ಅಂದು 5,000 ರೂ. ಸಾಲ ಮಾಡಿ ಖರೀದಿಸಿದ್ದ 1964ರ ಮಾಡೆಲ್‌ನ ಕ್ರೀಮ್ ಕಲರ್‌ನ ಫಿಯೆಟ್ ಕಾರನ್ನು (ಡಿಇಎಲ್ 6) ಈಗ ದಿಲ್ಲಿ ಯ ನಂ.1, ಮೋತಿಲಾಲ್ ನೆಹರೂ ಮಾರ್ಗದಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರೀ ಮೆಮೋರಿಯಲ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಇಂದಿನ ದಿನಗಳಲ್ಲಿ ಬ್ಯಾಂಕುಗಳಿಂದ ಕೋಟಿಗಟ್ಟಲೆ ಸಾಲ ಪಡೆಯುವ ಸಿರಿವಂತ ಉದ್ಯಮಿಗಳಲ್ಲಿ , ರಾಜಕೀಯ ಮುಖಂಡರಲ್ಲಿ ಸಾಲ ಮರುಪಾವತಿಸುವ ನೈತಿಕತೆಯೇ ಇಲ್ಲವಾಗಿದೆ. ಬ್ಯಾಂಕುಗಳು ಸಿರಿವಂತ ಗ್ರಾಹಕರ ಸುಸ್ತಿ ಸಾಲದ ಹೊರೆ ತಾಳಲಾರದೆ ಕುಸಿಯುವ ಭೀತಿಗೆ ಗುರಿಯಾಗಿದೆ.