ಮಲ್ಪೆ: ನನ್ನ ವಿರುದ್ಧ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಹಿಂದಿನ 5 ವರ್ಷದಿಂದ ಯಾರ ಕಷ್ಟ ಸುಖಕ್ಕೂ ಬರಲಿಲ್ಲ. ಈಗ ಚುನಾವಣೆ ಬಂದಾಗ ಮಾತ್ರ ಅವರಿಗೆ ಜನರ ನೆನಪಾಗುತ್ತದೆ. ಆದರೆ ನಾನು ಸೋತಾಗಲೂ ಜನರ ಸೇವೆ ಮಾಡಿದ್ದು ಗೆದ್ದಾಗಲೂ ಜನರ ಸೇವೆ ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಮೂಡಬೆಟ್ಟು ಜಂಕ್ಷನ್‌ಬಳಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ 5 ವರ್ಷದ ಅವಧಿಯಲ್ಲಿ ತಾನು ಎಲ್ಲೂ ತಾರತಮ್ಯ ಮಾಡಿಲ್ಲ . ಯಾವುದೇ ಭ್ರಷ್ಟಾಚಾರ, ಲಂಚ ಪಡೆಯದೇ ದಿನದ 24 ಗಂಟೆ ಜನರ ಸೇವೆಗಾಗಿ ದುಡಿದಿದ್ದೇನೆ. ಈಗಾಗಲೇ ಶೇ.70 ಕೆಲಸಗಳು ಮುಗಿದಿದ್ದು ಇನ್ನು ಕೇವಲ 30 ಶೇ. ಕೆಲಸಗಳು ಇನ್ನೂ ಬಾಕಿ ಇವೆ. ಮತ್ತೆ ಅವಕಾಶ ನೀಡಿದರೆ ಇಡೀ ಉಡುಪಿ ಕ್ಷೇತ್ರವನ್ನು ದೇಶದಲ್ಲೆ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದರು.
ನಿಜ ಹಿಂದೂ ವಿರೋಧಿ ಸರಕಾರ ಯಾವುದು ಇಂದು ಬಿಜೆಪಿಯವರು ಕಾಂಗ್ರೆಸ್ ಸರಕಾರವನ್ನು ಹಿಂದೂ ವಿರೋಧಿ ಸರಕಾರ ಎಂದು ಕರೆಯುತ್ತಿದೆ. ಪ್ರತೀ ದೇವಸ್ಥಾನಕ್ಕೆ ತಸೀ¤ಕು ಅಂತ 24 ಸಾವಿರ ರೂ. ಸಿಗುತ್ತಿತ್ತು. 2008ರಿಂದ 2013ರ ವರೆಗೆ ಬಿಜೆಪಿ ಸರಕಾರ ಒಂದು ಪೈಸೆಯನ್ನೂ ಕೊಡದೇ ಬಾಕಿ ಇಟ್ಟುಕೊಂಡಿತ್ತು. ಕಾಂಗ್ರೆಸ್ ಸರಕಾರ ಬಂದಾಗ 24 ಸಾವಿರ ರೂ. ಇದ್ದ ತಸ್ತೀಕನ್ನು 48 ಸಾವಿರಕ್ಕೆ ಏರಿಸಿದ್ದಲ್ಲದೆ ಹಿಂದಿನ ಸರಕಾರ ಬಾಕಿ ಇಟ್ಟಿರುವ ಎಲ್ಲ ಮೊತ್ತವನ್ನು ಪಾವತಿ ಮಾಡಿದೆ ಎಂದರು. ಈ ಹಿಂದೆ ದೇವಸ್ಥಾನಗಳು ನಡೆಸುವ ಕಲ್ಯಾಣ ಮಂಟಪಕ್ಕೆ ಯಾವುದೇ ತೆರಿಗೆ ಇರುತ್ತಿರಲಿಲ್ಲ. ನರೇಂದ್ರ ಮೋದಿ ಅವರ ಕೇಂದ್ರ ಸರಕಾರ ಬಂದ ಮೇಲೆ ಶೇ. 18 ಜಿಎಸ್‌ಟಿಯನ್ನು ವಿಧಿಸಿದ್ದಾರೆ. ಹಾಗಾಗಿ ನಿಜವಾದ ಹಿಂದೂ ವಿರೋಧಿ ನರೇಂದ್ರ ಮೋದಿ ಸರಕಾರವೋ, ಸಿದ್ದರಾಮಯ್ಯ ಸರಕಾರವೋ ಎಂದು ಜನರೇ ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಉಡುಪಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ, ಕಾಂಗ್ರೆಸ್ ನಾಯಕರಾದ ಉದಯ ಕುಮಾರ್ ಶೆಟ್ಟಿ, ಅಮೃತ್ ಶೆಣೈ, ದಿವಾಕರ ಕುಂದರ್, ಕೀರ್ತಿ ಶೆಟ್ಟಿ, ಎಂ. ಎ. ಗಫೂರ್, ಸತೀಶ್ ಅಮೀನ್ ಪಡುಕರೆ, ಜನಾರ್ದನ ಭಂಡಾರ್‌ಕರ್, ಹಾರ್ಮಿಸ್ ನೊರೋನ್ನಾ ಉಪಸ್ಥಿತರಿದ್ದರು.