Advertisement
ನನ್ನ ಪಾಲಿಗೆ ನನ್ನ ಅಮ್ಮನೇ ನಿಜವಾದ ಹೀರೋಯಿನ್! ಅವಳಿಂದ ನಾನು ಪಡೆದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಮಾನವ ಹುಟ್ಟಿದಾಗ ವಿಶ್ವ ಮಾನವ, ಬೆಳೆಯುತ್ತ ಬೆಳೆಯುತ್ತ ಅಲ್ಪಮಾನವನಾಗುತ್ತಾನೆ- ಎಂದು ಕುವೆಂಪು ಅವರ ಒಂದು ಮಾತಿದೆ. ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆಯೋ ಅವುಗಳು ಹಾಗೆಯೇ ಬೆಳೆಯುತ್ತವೆ ಎಂಬುದು ವಾಸ್ತವ ಸಂಗತಿ. ಮನೆಯೇ ವೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ಜೀವನದಲ್ಲಿ ತಾಯಿಯ ಪ್ರೀತಿಯನ್ನು ಜಗತ್ತಿನಲ್ಲಿ ಬೇರಾರೂ ನೀಡಲು ಸಾಧ್ಯವೇ ಇಲ್ಲ. ನನ್ನ ತಾಯಿ ಕಷ್ಟ ಎಂಬ ಪದಕ್ಕೆ ಸಡ್ಡು ಹೊಡೆದು ತನ್ನ ಇಬ್ಬರು ಮಕ್ಕಳನ್ನು ದಡ ಸೇರಿಸಲು ತುಂಬಾ ಕಷ್ಟ ಪಟ್ಟವಳು. ತಂದೆಯನ್ನು ಕಳೆದುಕೊಂಡ ನಾವುಗಳು ಎಂದೂ ಕೊರಗಬಾರದು, ಯಾವ ಕೊರತೆಯೂ ಅವರಿಗೆ ಉಂಟಾಗಬಾರದೆಂದು ಕೆಲಸಕ್ಕೆ ಹೋಗಲು ಶುರು ಮಾಡಿದಾಗ ನನ್ನ ತಾಯಿಗೆ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಒದಗಿದಾಗಲೂ ಎಂದೂ ಕೊರಗದೆ ನಮ್ಮನ್ನು ದಡ ಸೇರಿಸಬೇಕೆಂದು ಜೀವವನ್ನೇ ತನ್ನ ಮಕ್ಕಳಿಗಾಗಿ ಪಣವಾಗಿಟ್ಟಳು. ತಾಯಿ ಎಂಬ ಕರುಳಿನ ಭಾಂದವ್ಯವೇ ಹಾಗೇ ಅಲ್ಲವೆ, ಯಾವತ್ತೂ ತನ್ನ ಮಕ್ಕಳಿಗಾಗಿ ಮಿಡಿಯುವ ಪ್ರೇರಕವಾದ ಶಕ್ತಿಯವಳು. ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಎಂದಿಗೂ ಕೆಟ್ಟ ತಾಯಿ ಇರಲು ಸಾಧ್ಯವೇ ಇಲ್ಲ ಎಂಬ ಮಾತನ್ನು ತುಂಬ ಸಲ ಕೇಳಿದ್ದೇವೆ.
ಅಂತಿಮ ಬಿ.ಎ, ಶ್ರೀ ಧ. ಮಂ. ಕಾಲೇಜು, ಉಜಿರೆ