Advertisement

ಮೊಯ್ಲಿ ಸಚಿವರಾಗಿದ್ದಾಗ ಅಭಿವೃದ್ಧಿಗೆ ಶ್ರಮಿಸಲಿಲ್ಲ

06:05 PM Apr 16, 2019 | Team Udayavani |

ವಿಜಯಪುರ: ಕಳೆದ ಐದು ವರ್ಷಗಳ ಕೇಂದ್ರದ ಬಿಜೆಪಿ ಆಡಳಿತದಲ್ಲಿ ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಸಮಗ್ರವಾಗಿ ಬದಲಾವಣೆಯಾಗಿದೆ. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ವೀರಪ್ಪ ಮೊಯ್ಲಿ ಸಚಿವರಾಗಿದ್ದಾಗ ಚಿಕ್ಕಬಳ್ಳಾಪುರಕ್ಕೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಜಾರಿ ಮಾಡಲಿಲ್ಲ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಶರತ್‌ ಬಚ್ಚೇಗೌಡ ತಿಳಿಸಿದರು.

Advertisement

ಪಟ್ಟಣದ ಶ್ರೀಮತಿ ಬಸಮ್ಮ ಯಜಮಾನ್‌ ಮರಿಚನ್ನಪ್ಪ ಸಮುದಾಯ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬಿಜೆಪಿ ಯುವ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬೆಂಗಳೂರು ನಗರಕ್ಕೆ ಹೊಂದಿಕೊಂಡಿದ್ದರೂ ಕಳೆದ 10 ವರ್ಷಗಳಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾಣಲಿಲ್ಲ. ಗ್ರಾಮ, ಹೋಬಳಿ, ತಾಲೂಕು ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಸಂಸದರ ನಿಧಿಯಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ದೊರೆತಿಲ್ಲ ಎಂದು ದೂರಿದರು.

ತಂದೆ, ತಾಯಿಯರು ಕುಟುಂಬದ ಸದಸ್ಯರಿಗೆ ಭಾರತದ ರಕ್ಷಣೆ ಕುರಿತು ಮನವರಿಕೆ ಮಾಡಿಕೊಟ್ಟು, ಬಿಜೆಪಿಗೆ ಮತ ಹಾಕಲು ಅರಿವು ಮೂಡಿಸಬೇಕು. ಆ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಮೋದಿ ಕೈ ಬಲಪಡಿಸಬೇಕೆಂದರು.

ಸ್ಮಾರ್ಟ್‌ ಸಿಟಿಯಾಗಿ ಅಭಿವೃದ್ಧಿ: ಈ ಭಾಗದಲ್ಲಿ ಯಾವುದೇ ಕೈಗಾರಿಕಾ ವಲಯಗಳನ್ನು ಸ್ಥಾಪಿಸದ ಹಾಗೂ ಉದ್ಯೋಗ ಸೃಷ್ಟಿಗೆ ಗಮನ ನೀಡದೇ ಸಂಸದರು ಕಾಲಹರಣ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ವಿಜಯಪುರ ನೂತನ ತಾಲೂಕು ಘೋಷಣೆಯಾಗುತ್ತದೆ. ದೇವನಹಳ್ಳಿ ಮತ್ತು ವಿಜಯಪುರ ಪಟ್ಟಣಗಳನ್ನು ಸಾರ್ಟ್‌ ಸಿಟಿ ರೀತಿ ಅಭಿವೃದ್ಧಿಪಡಿಸಲಾಗುವುದು ಎಂದರು.

Advertisement

ರಾಜ್ಯ ಬಿಜೆಪಿ ಮುಖಂಡ ಬಿ.ಎನ್‌.ಗೋಪಾಲಗೌಡ ಮಾತನಾಡಿ, ಬಿ.ಎನ್‌.ಬಚ್ಚೇಗೌಡರು 5 ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿದ್ದರು. ಆ ವೇಳೆ ಹೊಸಕೋಟೆ ಪಟ್ಟಣದಲ್ಲಿ ಕೊಳವೆಬಾವಿಗಳನ್ನು ಕೊರೆಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಿದ್ದಾರೆ. ವಿಜಯಪುರ ಪಟ್ಟಣದಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ 80 ಕೊಳವೆಬಾವಿಗಳನ್ನು ಕೊರೆಸಿದ್ದರು.

ಅಲ್ಲಿಂದೀಚೆಗೆ ಕೊಳವೆಬಾವಿಗಳ ನೀರು ಬಳಸಲಾಗದೇ ಪಟ್ಟಣದ ಜನತೆ ನೀರಿನ ಸಮಸ್ಯೆ ಎದುರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಚ್ಚಿದಾನಂದಮೂರ್ತಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಇಡೀ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಸ್ಥಾಪಿಸಿ, ಆರ್ಥಿಕತೆಯನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ದರು.

ನೆರೆಹೊರೆ ರಾಷ್ಟ್ರಗಳ ಉಪಟಳ ನಿವಾರಣೆಯಲ್ಲಿ ಮೋದಿಯವರ ನಡೆ ಉತ್ತಮವಾಗಿದ್ದು, ರಾಷ್ಟ್ರದ ರಕ್ಷಣಾ ವಿಚಾರದಲ್ಲಿ ಬಿಜೆಪಿ ಉತ್ತಮ ಕ್ರಮಗಳನ್ನು ಅನುಸರಿಸಿದೆ ಎಂದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌ಎಲ್‌ಎನ್‌ ಅಶ್ವತ್ಥನಾರಾಯಣ್‌, ರಾಮಚಂದ್ರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ನಾಗರಾಜಗೌಡ, ಉಪಾಧ್ಯಕ್ಷ ಎನ್‌.ಕನಕರಾಜು, ಪುರಸಭಾ ಸದಸ್ಯ ಬಲಮುರಿ ಜಿ.ಶ್ರೀನಿವಾಸಮೂರ್ತಿ,

ಟೌನ್‌ ಬಿಜೆಪಿ ಅಧ್ಯಕ್ಷ ಚ.ವಿಜಯಬಾಬು, ಕಾರ್ಯದರ್ಶಿ ರವಿಕುಮಾರ್‌, ಮಾಜಿ ಅಧ್ಯಕ್ಷ ಜಿ.ಕೆ.ರಾಮು ಭಗವಾನ್‌, ರಾಮಕೃಷ್ಣ ಹೆಗಡೆ, ನರಸಿಂಹಮೂರ್ತಿ ಮತ್ತಿತರರಿದ್ದರು. ಇದೇ ವೇಳೆ ಅನೇಕ ಮಂದಿ ಯುವಕರು ವಿವಿಧ ಪಕ್ಷಗಳನ್ನು ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾದರು. ಕೆಲವರು ಉಚಿತ ಕರೆ ಮಾಡಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next