Advertisement

ಪ್ರೀತಿ ಹತ್ತಿರವಾದಾಗ ಮತ್ಸರ ದೂರ: ಎಚ್ಚೆಸ್ವಿ

12:41 AM Jun 23, 2019 | Lakshmi GovindaRaj |

ಬೆಂಗಳೂರು: ನಿರ್ಮಾಣ ಸಮೂಹ ಸಂಸ್ಥೆಗಳು ಮತ್ತು ಉಪಾಸನಾ ಟ್ರಸ್ಟ್‌ ನೀಡುವ ಕಾವ್ಯೋಪಾಸಕ ಪ್ರಶಸ್ತಿಗೆ ಹಿರಿಯ ಕವಿ ಡಾ.ಎಚ್‌.ಎಸ್‌.ವೆಂಕಟೇಶ ಮೂರ್ತಿ ಭಾಜನರಾದರು.

Advertisement

ಶನಿವಾರ ಜಯನಗರದ ಡಾ.ಕೆ.ಎಚ್‌.ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಎಚ್ಚೆಸ್ವಿ-75 ಕಾರ್ಯಕ್ರಮದಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಹಾಗೂ ಬಿ.ಆರ್‌.ಲಕ್ಷ್ಮಣರಾವ್‌ ಅವರು ಎಚ್‌. ಎಸ್‌. ವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ಈ ವೇಳೆ ಎಚ್‌.ಎಸ್‌. ವೆಂಕಟೇಶಮೂರ್ತಿ ಮಾತನಾಡಿ, ಬರೆಯದೇ ಕವಿ ಬದುಕಲಾರ ಹಾಡದೇ ಸಂಗೀತಗಾರ ಜೀವಿಸಲಾರ. ನನ್ನ ಕವಿತೆಗಳಿಗಳಿಗೆ ಹಲವರು ಹಲವು ರೀತಿಯಲ್ಲಿ ಪ್ರೇರಣೆಯಾಗಿದ್ದು ಅವರನ್ನು ಸದಾ ನೆನಪಿಸಿಕೊಳ್ಳುವುದಾಗಿ ಹೇಳಿದರು.

ಬದುಕಿನಲ್ಲಿ ಹೊಂದಾಣಿಕೆ ಕಂಡುಕೊಂಡಿದ್ದೇನೆ. ಪ್ರೀತಿಯನ್ನು ಹತ್ತಿರದಿಂದ ಕಂಡಾಗ ಮತ್ಸರ ದೂರವಾಗುತ್ತದೆ. ಹೀಗಾಗಿ ಬದಕನ್ನು ಪ್ರೀತಿಸಿ ಎಂದರು.ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ, ನವ್ಯ ಸಾಹಿತ್ಯದ ಕಾಲ ಘಟ್ಟದಲ್ಲಿ ವೈವಿಧ್ಯಮಯ ಕೃತಿಗಳನ್ನು ನೀಡಿದ ಶ್ರೇಯಸ್ಸು ವೆಂಕಟೇಶ ಮೂರ್ತಿ ಅವರಿಗೆ ಸಲ್ಲುತ್ತದೆ. ಯಾವ ಆಧುನಿಕ ಕವಿಯು ಇವರಷ್ಟು ಪ್ರಯೋಗ ಮಾಡಿಲ್ಲ ಎಂದು ಪ್ರಶಂಸಿಸಿದರು.

ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ರೀತಿಯ ಕವಿತೆಗಳನ್ನು ರಚನೆ ಮಾಡಿ ಸಾಹಿತ್ಯಾಸಕ್ತರ ಮನಮುಟ್ಟಿದರು.ನವ್ಯ ಸಾಹಿತ್ಯ ಲೋಕದ ಕೊಂಡಿಯಾಗಿ ಎಲ್ಲ ಪ್ರಕಾರದ ಸಾಹಿತ್ಯವನ್ನು ರಚಿಸಿದರು. ಕವಿತೆ ರಚನೆ ಜೊತೆಗೆ ಚಿತ್ರ ನಿರ್ದೇಶನಕ್ಕೂ ಹೆಜ್ಜೆ ಇರಿಸಿದರು. ಕೇವಲ ಒಂದೇ ಒಂದು ಕ್ಷೇತ್ರಕ್ಕೆ ಸೀಮಿತವಾಗದ ವ್ಯಕ್ತಿತ್ವ ಎಚ್ಚೆಸ್ವಿ ಅವರದ್ದು ಎಂದು ಬಣ್ಣಿಸಿದರು.

Advertisement

ಕವಿ ಲಕ್ಷ್ಮಣ್‌ ರಾವ್‌ ಮಾತನಾಡಿ, ನಾನು ಮತ್ತು ಎಚ್‌.ಎಸ್‌ .ವಿ ಅವರು ಒಂದೇ ಕಾಲದಲ್ಲಿ ಭಾವಗೀತೆಗಳ ಯಾನ ಆರಂಭಿಸಿದೆವು. ಆದರೆ, ಇವರು ಭಾವಗೀತೆಗಳ ಮೂಲಕ ಹೊಸ, ಹೊಸ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಹಿರಿಯ ಕವಿ ಎಂ.ಎಸ್‌ ಲಕ್ಷೀನಾರಾಯಣ ಭಟ್ಟ ಅವರು ಎಚ್‌.ಎಸ್‌.ವಿ ಮತ್ತು ನನಗೆ ಕವಿತೆ ರಚಿಸಲು ಪ್ರೇರಣೆ. 75 ರ ಸಂಭ್ರಮದಲ್ಲಿರುವ ಎಚ್‌.ಎಸ್‌.ವಿ ಮತ್ತಷ್ಟು ಉತ್ತಮ ಕವಿತೆ ರಚಿಸಲಿ ಎಂದು ಆಶಿಸಿದರು.

ಇದೇ ವೇಳೆ ಡಾ.ಎಚ್‌.ಎಸ್‌.ವೆಂಕಟೇಶ್‌ಮೂರ್ತಿ ಅವರ ಹೊಸ ಭಾವಗೀತೆಗಳ ಗುತ್ಛ ಚಂದ್ರಮ ಲೋಕಾರ್ಪಣೆ ಮಾಡಲಾಯಿತು. ಜತೆಗೆ ಅವರ ನಿರ್ದೇಶದ ಹಸಿರು ರಿಬ್ಬನ್‌ ಚಲನಚಿತ್ರ ಪ್ರದರ್ಶಿಸಲಾಯಿತು. ವಿದ್ವಾನ್‌ ವಿದ್ಯಾಭೂಷಣ, ನಿರ್ಮಾಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ವಿ. ಲಕ್ಷೀನಾರಾಯಣ, ಚಿತ್ರ ನಿರ್ದೇಶಕ ನಿಖೀಲ್‌ ಮಂಜು, ಉಪಾಸನಾ ಮೋಹನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next