Advertisement

ಮನೆಯಿಂದ ಹೊರಟ್ರೆ ಹೆಂಡ್ತಿ, ಮಕ್ಳು ಅನುಮಾನ ಪಡ್ತಾರೆ

12:30 AM Feb 13, 2019 | Team Udayavani |

ವಿಧಾನಸಭೆ: ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ!’ ಮಂಗಳವಾರ ವಿಧಾನಸಭೆಯ ಬೆಳಗಿನ ಕಲಾಪ ಮುಂದೂಡಿಕೆಯಾಗಿ ಮತ್ತೆ ಆರಂಭವಾದಾಗ ಜೆಡಿಎಸ್‌ನ ಶಿವಲಿಂಗೇಗೌಡ ಅವರು ಮೇಲಿನ ಸಾಲು ಉಲ್ಲೇಖೀಸುವ ಮೂಲಕ ಶಾಸಕರ ಸ್ಥಿತಿ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದ್ದು, ಚರ್ಚೆಗೆ ಗ್ರಾಸವಾಯಿತು.

Advertisement

“ಈ ಹಿಂದೆ ಶಾಸಕರ ಬಗ್ಗೆ ಅಪಾರ ಗೌರವವಿತ್ತು.ಇಂದು ಅದು ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಮನೆಯಿಂದ ಹೊರಟರೆ ಹೆಂಡತಿ, ಮಕ್ಕಳು ಅನುಮಾನದಿಂದ ನೋಡುತ್ತಾರೆ. ಏನೇನೋ ಡೀಲ್‌ ನಡೆಯುತ್ತಿದೆ ಎಂದು ಅಪಪ್ರಚಾರ ನಡೆಯುತ್ತಿದೆ. ಗೌರವದಿಂದ ಹೋಗಿ ಬನ್ನಿ ಎನ್ನುತ್ತಾರೆ. ಇವರು ಯಾರೊಬ್ಬರನ್ನೂ ಬಿಟ್ಟಿಲ್ಲ. ತರಹೇವಾರಿ ಆಮಿಷ ಒಡ್ಡಲಾಗುತ್ತಿದೆ’ ಎಂದು ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.

ಮುಂಬೈನಲ್ಲಿ ರಕ್ತದೊತ್ತಡ ಪರೀಕ್ಷೆಗೆಂದು ಹೋದ ಜೆಡಿಎಸ್‌ ಶಾಸಕ ನಾರಾಯಣಗೌಡ ಅವರನ್ನು ಬಂಧನದಲ್ಲಿಟ್ಟಿದ್ದಾರೆ. ಯಾರು ಬಂಧನದಲ್ಲಿಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಅಲ್ಲಿಂದ ಬಂದ ಬಳಿಕ ಗೊತ್ತಾಗಲಿದೆ. ಅವರ ಸಂಬಂಧಿಕರನ್ನೂ ಒಳಗೆ ಬಿಟ್ಟಿಲ್ಲ’ ಎಂದು ಹೇಳಿದರು. ಆಗ ಆಡಳಿತ ಪಕ್ಷದ ಸದಸ್ಯರೊಬ್ಬರು ಅಲ್ಲಿ ಬಿಜೆಪಿ ಸರ್ಕಾರವಿದೆ ಎಂದಿದ್ದು, ಗದ್ದಲಕ್ಕೆ ಕಾರಣವಾಯಿತು. ಬಿಜೆಪಿಯ ರೇಣುಕಾಚಾರ್ಯ,”ಸರ್ಕಾರದ ಮೇಲೆ ನಂಬಿಕೆ ಇಲ್ಲದೇ ಹೋಗಿರಬಹುದು’ ಎಂದು ಟಾಂಗ್‌ ನೀಡಿದರು.

ನಂತರ ಮಾತನಾಡಿದ ಶಿವಲಿಂಗೇಗೌಡ, “ಸಮ್ಮಿಶ್ರ ಸರ್ಕಾರವನ್ನು ತೆಗೆಯಲು ಎಷ್ಟು ವಿದ್ಯಮಾನ ನಡೆಸು ವುದು? ಇದಕ್ಕೆ ಇತಿಮಿತಿ ಇಲ್ಲವೇ? ಧಾರಾವಾಹಿ ಯಂತೆ 8 ತಿಂಗಳಿನಿಂದ ನಡೆಯುತ್ತಲೇ ಇದೆ. ಸ್ವಲ್ಪ ವಾದರೂ ಆತ್ಮಗೌರವ ಇಲ್ಲವೇ? ಶಾಸಕರನ್ನು ಅಪಾಪೋಲಿ ಮಾಡಲು ಹೋಗುತ್ತಿದ್ದೀರಾ? ಅಧಿಕಾರಿ ಗಳು ನಮಗೆ ಬೆಲೆ ಕೊಡುತ್ತಾರಾ. 113 ಶಾಸಕರ ಬೆಂಬಲ ಇರುವುದರಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಲ್ಲಿರುವುದು’ ಎಂದರು.

15 ದಿನಕ್ಕೊಂದು ಸಿಎಂ: ಪಕ್ಷಾಂತರ ನಿಷೇಧ ಕಾಯ್ದೆ ಇಲ್ಲದಿದ್ದರೆ 15 ದಿನಕ್ಕೊಬ್ಬರನ್ನು ಸಿಎಂ ಮಾಡುತ್ತಿದ್ದರು. ಈ ಎಲ್ಲ ಬೆಳವಣಿಗೆಯಿಂದ ಎಷ್ಟು ನೋವಾಗಿದೆ ಗೊತ್ತೆ. ಏನೇನು ಆಮಿಷ ಒಡ್ಡುತ್ತಿದ್ದಾರೆ ಗೊತ್ತೆ? 8 ತಿಂಗಳಿನಿಂದ ಮುಖ್ಯಮಂತ್ರಿಗಳು ಇಷ್ಟೊಂದು ಗೋಳು ಹೊಯ್ದುಕೊಂಡರೆ ಶಾಪ ತಟ್ಟದೇ ಬಿಡುತ್ತದೆಯೇ? ನಿಮಗೆ ಶಾಪ ತಟ್ಟಲಿದೆ. ನಿಮ್ಮ ನಾಟಕಕ್ಕೆ ತೆರೆ ಎಳೆಯಿರಿ. ಕೆಟ್ಟ ಕೆಲಸ ವಿರೋಧಿಸಿ ಎಂದು ಶಿವಲಿಂಗೇಗೌಡ ಮನವಿ ಮಾಡಿದರು.

Advertisement

ಇದು ದುಬಾರಿ ಆರೋಪ : ಬಿಜೆಪಿಯ ಎಸ್‌.ಸುರೇಶ್‌ ಕುಮಾರ್‌ ಮಾತನಾಡಿ, ಬಿಜೆಪಿ ಶಾಸಕ ರಾಜೇಶ್‌ ನಾಯಕ್‌ ಅವರು ಭಾನುವಾರ ವಿಮಾನದಲ್ಲಿ ಪ್ರಯಾಣಿಸುವಾಗ ಅವರ ಪಕ್ಕದಲ್ಲಿ ಕುಳಿತಿದ್ದ ವಿಧಾನ ಪರಿಷತ್‌ ಸದಸ್ಯರೊಬ್ಬರು ಆಡಿಯೋ ಪ್ರಕರಣವನ್ನು ಸೋಮವಾರ ಎಸ್‌ಐಟಿ ತನಿಖೆಗೆ ವಹಿಸಲು ನಿರ್ಧಾರವಾಗಿದೆ ಎಂದುಹೇಳಿದರಂತೆ. ಆ ವಿಧಾನ ಪರಿಷತ್‌ ಸದಸ್ಯರು ಜ್ಯೋತಿಷಿ ಇರಬಹುದು ಎಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ಜೆಡಿಎಸ್‌ನ ಶ್ರೀನಿವಾಸಗೌಡ, ಎಲ್ಲೋ ಮಾತನಾಡಿದ್ದನ್ನು ಇಲ್ಲಿ ಉಲ್ಲೇಖೀಸುವ ಅಗತ್ಯವೇನು ಎಂದು ಪ್ರಶ್ನಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸ್ಪೀಕರ್‌, ವಿಮಾನದಲ್ಲಿ ಪ್ರಯಾಣಿಸುವಾಗ ಈ ರೀತಿ ಹೇಳಿದ ವಿಧಾನ ಪರಿಷತ್‌ ಸದಸ್ಯ ಜ್ಯೋತಿಷಿ ಇರಬಹುದು, ಮುಖ್ಯಮಂತ್ರಿಗಳಿಗೂ ಆಪ್ತರಿರಬಹುದು. ಆದರೆ ಎಸ್‌ಐಟಿಗೆ ವಹಿಸುವ ಬಗ್ಗೆ ನಿರ್ಧಾರವಾಗಿದೆ ಎಂದು ಹೇಳುವುದಾದರೆ ಮುಖ್ಯಮಂತ್ರಿಗಳು ಹೇಳಿದಂತೆ ನಾನು ಕೇಳುತ್ತೇನೆ ಎಂದಾಗುವುದಿಲ್ಲವೇ. ಇದು 50 ಕೋಟಿ ರೂ. ಹಣ ಪಡೆದಿದ್ದಾರೆ ಎಂಬ ಮಾತಿಗಿಂತಲೂ ದುಬಾರಿ ಆಪಾದನೆ ಎಂದು ಹೇಳಿದರು.

ಮಸಾಲೆ ಕಡಿಮೆ ತಿನ್ರಪ್ಪಾ…
“ಈ ಹಿಂದೆ ಬೋಪಯ್ಯ ಸಭಾಧ್ಯಕ್ಷರಾಗಿದ್ದಾಗಲೂ ಆರೋಪ ಕೇಳಿಬಂದಿತ್ತು. ಅವರ ಅವಧಿಯಲ್ಲಿ ನಡೆದ ಘಟನೆ ಸೇರಿ ಸಮಗ್ರ ತನಿಖೆ ನಡೆಯಬೇಕು. ಸಿದ್ದರಾಮಯ್ಯ, ಕುಮಾರಸ್ವಾಮಿಯವರನ್ನೂ ಅದರಲ್ಲಿ ಸೇರಿಸಬೇಕು” ಎಂದು ಬಿ.ಶ್ರೀರಾಮುಲು ಮನವಿ ಮಾಡಿದ್ದು, ಗದ್ದಲಕ್ಕೆ ಕಾರಣವಾಯಿತು. ಹಲವು ಸಚಿವರು, ಕಾಂಗ್ರೆಸ್‌, ಜೆಡಿಎಸ್‌ ಶಾಸಕರು, ಶ್ರೀರಾಮುಲು ವಿರುದಟಛಿ ಹರಿಹಾಯ್ದರು. ಕೆಲ ಶಾಸಕರು “ಸಿದ್ದರಾಮಯ್ಯ ಅವರು ಗಣಿ ಲೂಟಿ ಮಾಡಿದ್ದಾರೆಯೇ’ ಎಂದು ಶ್ರೀರಾಮುಲುಗೆ ಟಾಂಗ್‌ ನೀಡಿದರು. ಸಚಿವರಾದ ಜಮೀರ್‌ ಅಹಮ್ಮದ್‌ ಖಾನ್‌, ವೆಂಕಟರಾವ್‌ ನಾಡಗೌಡ ಏರುದನಿಯಲ್ಲಿ ಟೀಕಿಸಿಲಾರಂಭಿಸಿದರು. ಆಗ ಕೆ.ಎಸ್‌.ಈಶ್ವರಪ್ಪ, “ಇವರೇನು ಕುಸ್ತಿ ಆಡಲು ಬಂದಿದ್ದಾರೆಯೇ? ನಾವೂ ಕುಸ್ತಿಗೆ ಸಿದ್ಧ ರಿದ್ದೇವೆ. ಆದರೆ ಇದು ಕುಸ್ತಿ ಅಖಾಡವಲ್ಲ’ ಎಂದರು. ಮಧ್ಯ ಪ್ರವೇಶಿಸಿದ ಸ್ಪೀಕರ್‌, ನೀವೆಲ್ಲಾ (ಕಾಂಗ್ರೆಸ್‌ ಸಚಿವರು, ಶಾಸಕರು) ಸಿದ್ದರಾಮಯ್ಯ ಅಭಿಮಾನಿಗಳಾಗಿರಬಹುದು. ಸದಸ್ಯರು ತಮ್ಮ ಅಭಿಪ್ರಾಯ ಹೇಳಲು ಅವಕಾಶ ನೀಡಬೇಕು. ಜಮೀರ್‌ ಅಹಮ್ಮದ್‌, ವೆಂಕಟರಾವ್‌ ನಾಡಗೌಡರೆ ನೀವೆಲ್ಲಾ ಸ್ವಲ್ಪ ಮಸಾಲೆ ಕಡಿಮೆ ತಿನ್ರಪ್ಪಾ ಎಂದು ಚಟಾಕಿ ಹಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next