Advertisement
ಸಾಕಷ್ಟು ರಾಜಕೀಯ ವಿಪ್ಲವಗಳ ನಂತರ 2023ರ ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಪರಿಣಾಮ, ಕಮಲ ಪಾಳಯದಿಂದ ಜಿಗಿದು ಕಾಂಗ್ರೆಸ್ ತೆಕ್ಕೆಗೆ ಸೇರ್ಪಡೆಗೊಂಡಿದ್ದಾರೆ.
Related Articles
Advertisement
ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆ ಕಾಣುವಲ್ಲಿ ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದ ಪ್ರಮುಖ ಘಟನೆಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ತದನಂತರ ಕೆಲವು ಚುನಾವಣೆಗಳಲ್ಲಿ ಈದ್ಗಾ ವಿವಾದ ರಾಜಕಾರಣಿಗಳ ಪ್ರಮುಖ ಅಸ್ತ್ರವಾಗಿ ಪರಿಗಣಿಸಲ್ಪಟ್ಟಿತ್ತು.
ಚುನಾವಣಾ ಅಖಾಡಕ್ಕಿಳಿದ ಶೆಟ್ಟರ್:
ಈದ್ಗಾ ವಿವಾದದ ಕಿಚ್ಚು ಮುಂದುವರಿದ ಚಟುವಟಿಕೆಯ ನಡುವೆಯೇ 1994ರಲ್ಲಿ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಈ ಸಂದರ್ಭದಲ್ಲಿ ಇವರ ಪ್ರತಿಸ್ಪರ್ಧಿಯಾಗಿ ಅಖಾಡಕ್ಕಿಳಿದಿದ್ದು ಜನತಾ ದಳದ ಬಸವರಾಜ ಬೊಮ್ಮಾಯಿ. ಜಿದ್ದಾಜಿದ್ದಿನ ಕಣದಲ್ಲಿ ಜಗದೀಶ್ ಶೆಟ್ಟರ್ ಅವರು ಬೊಮ್ಮಾಯಿ ಅವರನ್ನು 16,000 ಮತಗಳ ಅಂತರದಿಂದ ಪರಾಜಯಗೊಳಿಸಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದರು.
ಬಸವರಾಜ ಬೊಮ್ಮಾಯಿ ಕೂಡಾ ರಾಜಕೀಯ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ಎಸ್ ಆರ್ ಬೊಮ್ಮಾಯಿ 1980ರ ದಶಕದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 2021ರ ಜುಲೈ 28ರಂದು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಯ್ತು. ಅಧಿಕಾರ ಸ್ವೀಕರಿಸಿದ ನಂತರ ಬೊಮ್ಮಾಯಿ ಅವರು ಸಚಿವ ಸಂಪುಟ ವಿಸ್ತರಣೆಗೆ ಮುಂದಾದ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಸಚಿವ ಸಂಪುಟ ಸೇರುತ್ತಾರೆಂಬ ನಿರೀಕ್ಷೆ ಇತ್ತು. ಶೆಟ್ಟರ್ ಅವರು ಬಿ.ಎಸ್.ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ತಾನು ಮುಖ್ಯಮಂತ್ರಿಯಾಗಿದ್ದವ, ಹಾಗಾಗಿ ತನಗಿಂತ ಕಿರಿಯ ವ್ಯಕ್ತಿಯ (ಬೊಮ್ಮಾಯಿ) ಸಂಪುಟದಲ್ಲಿ ಸೇರ್ಪಡೆಗೊಳ್ಳಲಾರೆ ಎಂದು ಅಸಮಾಧಾನ ಹೊರಹಾಕಿದ್ದರು. ಇದರೊಂದಿಗೆ ಶೆಟ್ಟರ್ ಅವರು ತಾನು ಬೊಮ್ಮಾಯಿಗಿಂತ ಹಿರಿಯ ಮುಖಂಡ ಎಂಬ ಸಂದೇಶವನ್ನು ರವಾನಿಸಿದ್ದರು. ಈ ಮುಸುಕಿನ ಗುದ್ದಾಟದ ಬೆಳವಣಿಗೆಯ ಮುಂದುವರಿದ ಪರಿಣಾಮ ಶೆಟ್ಟರ್ ರಾಜಕೀಯ ಪಯಣದ ಹಾದಿ ಮತ್ತೊಂದು ಮಗ್ಗುಲಿಗೆ ಮರಳುವಂತೆ ಮಾಡಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.