Advertisement

ಗೂಡು ಸೇರದ ಬಾಲಕಿಗೆ ಬಿಡುಗಡೆ ಎಂದು?

12:25 AM Nov 27, 2019 | Lakshmi GovindaRaj |

ಬೆಂಗಳೂರು: ಬಾಲಕಾರ್ಮಿಕ ಮಾಫಿಯಾದ ಹಿಡಿತದಿಂದ ಪಾರಾಗಿ ಹೆತ್ತವರ ಮಡಿಲು ಸೇರಲು ಆಸೆ ಕಂಗಳಿಂದ ಎದುರು ನೋಡುತ್ತಿರುವ ಮಗಳನ್ನು ಆಲಂಗಿಸಬೇಕು ಎಂದು ತೋಳು ಚಾಚಿರುವ ಪೋಷಕರು. ಕಳೆದ ಎಂಟು ತಿಂಗಳಿನಿಂದ ಹೊರ ರಾಜ್ಯದ ಬಾಲಕಿ, ಆಕೆಯ ಪೋಷಕರು ಅಸಹಾಯಕ ಪರಿಸ್ಥಿತಿ. ಈ ಸ್ಥಿತಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್‌ ಇಲಾಖೆಯ ವಿಳಂಬ ಧೋರಣೆ ಎಂಬ ಆರೋಪ ಕೇಳಿ ಬಂದಿದೆ.

Advertisement

ಏಜೆಂಟರೊಬ್ಬರ ಮೂಲಕ ನಗರಕ್ಕೆ ಬಂದು ಉದ್ಯಮಿಯೊಬ್ಬರ ಮನೆಯಲ್ಲಿ ಬಾಲಕಾರ್ಮಿಕಳಾಗಿ ಜೀತಕ್ಕಿದ್ದ ಅಪ್ರಾಪ್ತ ಬಾಲಕಿಯನ್ನು ಹನ್ನೊಂದು ತಿಂಗಳ ಹಿಂದೆ 1098 ಚೈಲ್ಡ್‌ಲೈನ್‌ ಸದಸ್ಯರು ರಕ್ಷಿಸಿ ಬೆಂಗಳೂರು ನಗರದ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿತ್ತು. ಸಮಿತಿ ಬಾಲಕಿ ಕುಟುಂಬಸ್ಥರ ಮಾಹಿತಿ ಸಂಗ್ರಹಿಸಿ ಅವರಿಗೆ ಮಾಹಿತಿ ನೀಡಿದೆ. ಪ್ರಕರಣದ ವಿಚಾರಣೆ ನಡೆಸಿದ ಸಮಿತಿ, ಬಾಲಕಿಯನ್ನು ಪೋಷಕರ ವಶಕ್ಕೆ ನೀಡಲು ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ್ಕೆ ಆದೇಶ ನೀಡಿತ್ತು.

ಮಕ್ಕಳ ನ್ಯಾಯ ಕಾಯ್ದೆ ಪ್ರಕಾರ ಮಕ್ಕಳನ್ನು ಗರಿಷ್ಠ ನಾಲ್ಕು ತಿಂಗಳಲ್ಲಿ ಎಲ್ಲ ತನಿಖೆ ನಂತರ ಅವರ ಹುಟ್ಟು ಸ್ಥಳಗಳಿಗೆ ಕಳುಹಿಸಬೇಕು ಎಂದು ತಿಳಿಸುತ್ತದೆ. ಬಾಲಕಿ ಸಿಕ್ಕು 11 ತಿಂಗಳಾಗಿದೆ. ಸಮಿತಿ ಆದೇಶಿಸಿ 8 ತಿಂಗಳಾಗಿದೆ. ಆದರೆ, ಬಾಲಕಿ ಮಾತ್ರ ಪೋಷಕರ ಮಡಿಲು ಸೇರಿಸಲು ಸಾಧ್ಯವಾಗಿಲ್ಲ.

ಸಮಿತಿ ಆದೇಶದ ಅನ್ವಯ ಮಕ್ಕಳ ರಕ್ಷಣಾ ಘಟಕ ವರದಿ ಪರಿಶೀಲಿಸಿ ಸಂತ್ರಸ್ತ ಬಾಲಕಿಯನ್ನು ಆಕೆ ಹುಟ್ಟೂರಿಗೆ ಬಿಟ್ಟು ಬರಲು ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಶಿಫಾರಸು ಮಾಡಿದೆ. ಆದರೆ, ಅಲ್ಲಿಂದ ಯಾವುದೇ ಪ್ರಕ್ರಿಯೆ ಬಂದಿಲ್ಲ. ಸಿಬ್ಬಂದಿ ಕೊರತೆಯಿಂದ ಸದ್ಯಕ್ಕೆ ಬಾಲಕಿಯನ್ನು ಕರೆದೊಯ್ಯಲು ಆಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹೇಳುತ್ತಿದ್ದಾರೆ.

ಮಡಿಲು ಸೇರಲು ತಾಯಿ ಇಲ್ಲ!: ಹೆಣ್ಮು ಮಕ್ಕಳಿಗೆ ತಾಯಿಯ ಮಡಿಲೇ ಶ್ರೇಷ್ಠ. ಆದರೆ, ಈ ಬಾಲಕಿಗೆ ತಾಯಿ ಮಡಿಲು ಸೇರುವ ಭಾಗ್ಯವಿಲ್ಲ. ದುರಂತವೆಂದರೆ ಬೆಂಗಳೂರಿಗೆ ಬರುವ ಮುನ್ನ ತಾಯಿಯನ್ನು ಅಪ್ಪಿಕೊಂಡಿದ್ದ ಬಾಲಕಿ, ಮರಳಿ ತನ್ನ ಗೂಡಿಗೆ ಹೋದರೆ ತಾಯಿಯಿಲ್ಲ. ಹನ್ನೊಂದು ವರ್ಷ ತಾಯಿ ಜತೆ ಇದ್ದ ಮಗು, 2016ರಲ್ಲಿ ಬೆಂಗಳೂರಿಗೆ ಬಂದಿದ್ದು, 2018 ಅಕ್ಟೋಬರ್‌ವರೆಗೆ ಬಾಲಕಾರ್ಮಿಕಳಾಗಿ ಕೆಲಸ ಮಾಡಿದೆ.

Advertisement

ಇದರಿಂದೀಚೆಗೆ ಮಕ್ಕಳ ಕಲ್ಯಾಣ ಇಲಾಖೆ ಮಕ್ಕಳ ಅನುಸರಣ ಗೃಹದಲ್ಲಿ ಸುರಕ್ಷಿತವಾಗಿದ್ದು, ಇದೀಗ ಬಾಲಕಿಗೆ 14 ವರ್ಷವಾಗಿದೆ. ಆದರೆ, ಮೂರು ವರ್ಷದ ಹಿಂದೆ ಇದ್ದ ತಾಯಿ ಈಗ ಮೃತರಾಗಿದ್ದಾರೆ. ಈಗಲಾದರೂ ಕುಟುಂಬ ಸದಸ್ಯರೊಡನೆ ಸೇರಲಿ ಎಂದರೆ ಅದೂ ವಿಳಂಬವಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಮಕ್ಕಳ ನ್ಯಾಯ ಕಾಯ್ದೆ ಪ್ರಕಾರ ಮಕ್ಕಳನ್ನು ಗರಿಷ್ಠ 4 ತಿಂಗಳಲ್ಲಿ ಎಲ್ಲಾ ತನಿಖೆ ನಂತರ ಅವರ ಹುಟ್ಟು ಸ್ಥಳಗಳಿಗೆ ಕಳುಹಿಸಬೇಕಾಗಿರುತ್ತದೆ. ಆದರೆ, ಸರಿಯಾದ ವಿಳಾಸ ಸಿಗದೆ, ಗೃಹ ತನಿಖಾ ವರದಿ ಬರುವಲ್ಲಿ ತಡವಾಗುವುದು ಮತ್ತು ವರ್ಗಾವಣೆ ಮಾಡಲು ಬೇಕಾದ ಸಿಬ್ಬಂದಿ ಕೊರತೆಯಿಂದಾಗಿ ವರ್ಗಾವಣೆ ವಿಳಂಬವಾಗಿದೆ.
-ಅಂಜಲಿ ರಾಮಣ್ಣ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ

ಸಿಬ್ಬಂದಿ ಕೊರತೆ ನೆಪದಲ್ಲಿ ಬಹಳಷ್ಟು ವರ್ಷದಿಂದ ಮಕ್ಕಳು ಬಾಲಮಂದಿರ, ಮಕ್ಕಳ ಅನುಸರಣ ಗೃಹದಲ್ಲಿಯೇ ಇದ್ದಾರೆ. ಮಕ್ಕಳ ಕಲ್ಯಾಣ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಮಕ್ಕಳ ನ್ಯಾಯ ಕಾಯ್ದೆ ಪ್ರಕಾರ ಮಕ್ಕಳನ್ನು 4 ತಿಂಗಳಲ್ಲಿಯೇ ಕಳುಹಿಸುವ ವ್ಯವಸ್ಥೆ ಮಾಡಬೇಕು.
-ವಾಸುದೇವ ಶರ್ಮಾ, ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ನ ಕಾರ್ಯಕಾರಿ ನಿರ್ದೇಶಕ

* ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next