ಬೆಂಗಳೂರು: ದಶಕಗಳಿಂದಲೂ ಎದುರಿಸುತ್ತಿರುವ ಸಮಸ್ಯೆಗಳಿಂದ ಕನ್ನಡಿಗರಿಗೆ ಮುಕ್ತಿಯೇ ಇಲ್ಲದಂತಾಗಿದೆ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ಬೇಸರ ವ್ಯಕ್ತಪಡಿಸಿದರು. ನಗರದ ಕಸಾಪ ಆವರಣದಲ್ಲಿ ಮಂಗಳವಾರ ಬಿಬಿಎಂಪಿ ನೌಕರರ ಕನ್ನಡ ಸಂಘ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಏಕೀಕರಣದ ನಂತರ ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟ ಆಗಬಹುದು ಎಂಬ ಕನಸು ಹೊತ್ತು ಬದುಕುತ್ತಿದ್ದೇವೆ. ಆದರೆ, ಸಮಸ್ಯೆಗಳು ಮಾತ್ರ ಹಾಗೇ ಉಳಿದಿವೆ. ಗಡಿ, ಉದ್ಯೋಗ, ಶಿಕ್ಷಣ ಹೀಗೆ ಕನ್ನಡಿಗರು ಇಂದು ನೂರೆಂಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈ ಬಳಲಿಕೆಗೆ ಕೊನೆಯೇ ಇಲ್ಲ ಎನ್ನುವಂತಾಗಿದೆ. ಬಗೆಹರಿಯುವುದೂ ಇಲ್ಲ. ಹಾಗಂತ, ನಿರಾಶರಾಗುವುದೂ ಬೇಡ. ಚಳವಳಿಗಳ ಮೇಲೆ ನಂಬಿಕೆ ಇರುವವರು ನಾವು. ಹೋರಾಟಗಾರರನ್ನು ನೆನೆಸಿಕೊಂಡು ಈ ಸಮಸ್ಯೆಗಳ ನಡುವೆಯೂ ಕ್ರಿಯಾಶೀಲರಾಗಿರಲು ಸಾಧ್ಯ ಎಂದು ಹೇಳಿದರು.
ಕನ್ನಡ ಮತ್ತು ಕರ್ನಾಟಕ ಎಂದಾಕ್ಷಣ ವಾಟಾಳ್ ನಾಗರಾಜ್ ಕಣ್ಮುಂದೆ ಬರುತ್ತಾರೆ. ಕನ್ನಡಪರ ಹೋರಾಟಗಾರರಿಗೆ ಐಕಾನ್ ಆಗಿದ್ದಾರೆ. ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಇದಕ್ಕೂ ಮುನ್ನ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು.
ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ, ಸದ್ಭಾವಣಾ ಪ್ರತಿಷ್ಠಾನದ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಕೆ. ಲಕ್ಕಣ್ಣ ಅವರಿಗೆ “ಗಾಂಧಿವಾದಿ ಜಿ. ನಾರಾಯಣ ಪ್ರಶಸ್ತಿ’, ಟಿ.ಪಿ. ಪ್ರಸನ್ನಕುಮಾರ್ ಮತ್ತು ಬಿ.ಎನ್. ಅಚ್ಚಪ್ಪ ಅವರಿಗೆ “ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಪ್ರಶಸ್ತಿ’, ಕೃಷ್ಣ ಮತ್ತು ಶ್ರೀನಿವಾಸ ಅವರಿಗೆ “ಪೌರಕಾರ್ಮಿಕರ ನಾಯಕ ಐಪಿಡಿ ಸಾಲಪ್ಪ ಪ್ರಶಸ್ತಿ’ ಪ್ರದಾನ ಮಾಡಲಾಯಿತು.