Advertisement
ರಾಜ್ಯದ ಬಹುಭಾಗ ಬರದಿಂದ ತತ್ತರಿಸುತ್ತಿದೆ. 170ಕ್ಕೂ ತಾಲೂಕುಗಳು ಬರಪೀಡಿತವಾಗಿವೆ ಎಂದು ಸರಕಾರವೇ ಹೇಳಿಕೊಂಡಿದೆ. ಕುಡಿಯುವ ನೀರಿಗಾಗಿ ಎಲ್ಲೆಡೆ ಹಾಹಾಕಾರ ಉಂಟಾಗಿದ್ದರೂ ನಮ್ಮನ್ನಾಳುವವರ ಕಿವಿಗೆ ಅದು ಬಿದ್ದಿಲ್ಲ. ಒಂದು ಕಾಲದಲ್ಲಿ ಸಮೃದ್ಧ ನೀರು ಲಭ್ಯವಿದ್ದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಕೂಡಾ ಈ ವರ್ಷ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ಅದರಲ್ಲೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ನಗರ ಪ್ರದೇಶಗಳಲ್ಲಿ ನಾಲ್ಕು ದಿನಕ್ಕೊಮ್ಮೆ -ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ರೇಶನಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಗ್ರಾಮೀಣ ಭಾಗಗಳಲ್ಲೂ ಬಾವಿ, ಕೆರೆಗಳು ಬತ್ತಿ ಹೋಗಿದ್ದು,ಲಭ್ಯವಿರುವ ಅಲ್ಪಸ್ವಲ್ಪ ಜಲಮೂಲಗಳನ್ನು ಜನರು ಆಶ್ರಯಿಸಿಕೊಂಡಿದ್ದಾರೆ.
Related Articles
Advertisement
ಕರ್ನಾಟಕದ ಜತೆಗೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳದಲ್ಲೂ ಬರದ ಸಮಸ್ಯೆಯಿದೆ. ಮಳೆಗಾಲದಲ್ಲಿ ಶತಮಾನದ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಕೇರಳದಲ್ಲಿ ಬೇಸಿಗೆ ಬಂದ ಬೆನ್ನಿಗೆ ನೀರಿನ ಸಮಸ್ಯೆ ತಲೆದೋರಿದೆ. ಮಳೆಯ ಅಸಮರ್ಪಕ ಹಂಚಿಕೆಯಿಂದಾಗಿ ಪ್ರತಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದ್ದರೂ ಸರಕಾರ ಈ ನಿಟ್ಟಿನಲ್ಲಿ ಗಂಭೀರವಾದ ಚಿಂತನೆಯನ್ನು ನಡೆಸುತ್ತಿಲ್ಲ.
ಕರ್ನಾಟಕ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಬರಕ್ಕೆ ತುತ್ತಾಗುತ್ತಿದೆ. ಪ್ರತಿ ವರ್ಷ ಸರಕಾರ ಬರದ ಬೇಗೆ ತಟ್ಟದಿರಲು ಶಾಶ್ವತ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಭರವಸೆ ನೀಡುತ್ತದೆಯಾದರೂ ಯಾವುದೂ ಇನ್ನೂ ಕಾರ್ಯಗತಗೊಂಡಿಲ್ಲ. ಹನಿ ನೀರಾವರಿ, ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಇತ್ಯಾದಿ ನೀರುಳಿಸುವ ವಿಧಾನಗಳ ಬಗ್ಗೆ ಭಾರೀ ಚರ್ಚೆಗಳಾಗಿತ್ತು. ಆದರೆ ಯಾವುದೂ ಕಾರ್ಯಗತವಾಗದೆ ಕಡತಗಳಲ್ಲೇ ಉಳಿದಿವೆ.
ಜನರಿಗೆ ಕುಡಿಯುವ ನೀರು ಒದಗಿಸುವುದು ಸರಕಾರದ ಮೊದಲ ಆದ್ಯತೆಯಾಗಬೇಕು. ಇದಕ್ಕಾಗಿ ಲಭ್ಯವಿರುವ ಎಲ್ಲ ನೀರಿನ ಮೂಲಗಳನ್ನು ಬಳಸಿಕೊಳ್ಳಬೇಕು. ಅನೇಕ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮತ್ತು ಇನ್ನಿತರ ಅಧಿಕಾರಿಗಳು ಒಂದಷ್ಟು ಪ್ರಯತ್ನ ಪಡುತ್ತಿದ್ದಾರೆ ಎನ್ನುವುದು ಸಮಾಧಾನಕೊಡುವ ಅಂಶ. ಂದು ರಾಜ್ಯ ಸತತವಾಗಿ ಬರಕ್ಕೆ ತುತ್ತಾದಾಗ ಅದರಿಂದ ಸಾಕಷ್ಟು ಪಾಠಗಳನ್ನು ಕಲಿತುಕೊಂಡು ಭವಿಷ್ಯದಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಲು ಯೋಜನೆಗಳನ್ನು ಹಾಕಿಕೊಳ್ಳಬೇಕಿತ್ತು. ಆದರೆ ನಾವಿನ್ನೂ ಬರಕ್ಕೆ ತಾತ್ಕಾಲಿಕ ಶಮನ ಕಾರ್ಯಗಳನ್ನು ಕೈಗೊಳ್ಳುವುದರಲ್ಲಿ ನಿರತರಾಗಿದ್ದೇವೆಯೇ ಹೊರತು ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿಲ್ಲ.ತಾಪಮಾನ ಏರಿಕೆಯ ಪರಿಣಾಮ ಋತುಗಳ ಮೇಲಾಗುತ್ತಿದ್ದು, ಪ್ರತಿವರ್ಷ ಮಳೆಯ ಪ್ರಮಾಣದಲ್ಲಿ ವ್ಯತ್ಯಯವಾಗುತ್ತಿ ರುವುದು ನಮ್ಮ ಅನುಭವಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಸಿಗುವ ನೀರನ್ನು ಸಾಧ್ಯವಾದಷ್ಟು ಸದುಪಯೋಗಪಡಿಸಿಕೊಳ್ಳುವ ಯೋಜನೆಗಳನ್ನು ತುರ್ತಾಗಿ ಅನುಷ್ಠಾನಿಸಿಕೊಳ್ಳುವ ಅಗತ್ಯವಿದೆ.