Advertisement
ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಎಷ್ಟು ನಿಷ್ಕಾಳಜಿ ಇದೆ ಎನ್ನುವುದಕ್ಕೆ ಕನ್ನಡಿ ಹಿಡಿಯುವಂತಿದೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಬಿಡುಗಡೆಗೊಳಿಸಿರುವ ಒಂದು ವರದಿ. 1990 2017ರವರೆಗಿನ ಈ ಅಧ್ಯಯನ ಮಾಪನದ ಪ್ರಕಾರ ಭಾರತದಲ್ಲಿ ಪ್ರತಿ 7 ಜನರಲ್ಲಿ ಒಬ್ಬರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಉತ್ತರ ಭಾರತದಲ್ಲಿ ಮಕ್ಕಳು ಹದಿಹರೆಯದವರಲ್ಲಿ ಮಾನಸಿಕ ಸಮಸ್ಯೆಅಧಿಕವಿದ್ದರೆ, ದಕ್ಷಿಣದಲ್ಲಿ, ಅಂದರೆ ಕರ್ನಾಟಕ, ಕೇರಳ, ಆಂಧ್ರ, ತಮಿಳುನಾಡು, ತೆಲಂಗಾಣದಲ್ಲಿ ಪ್ರೌಢರು ಮಾನಸಿಕ ಸಮಸ್ಯೆಗಳಿಂದ ಹೆಚ್ಚು ಬಳಲುತ್ತಿದ್ದಾರೆ.
Related Articles
Advertisement
ಆದಾಗ್ಯೂ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರಕಾರವು ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಕೆಲಸ ಆರಂಭಿಸಿರುವುದು ಸಕಾರಾತ್ಮಕ ನಡೆ ಎನ್ನಬಹುದು. ಆದರೆ ಸಾಗಬೇಕಾದ ದಾರಿ ಬಹಳ ಇದೆ. ಇತ್ತೀಚೆಗೆ ನೀತಿ ಆಯೋಗ ಕೂಡ, ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳಿಗೂ ಮಾನಸಿಕ ಖನ್ನತೆಗಳಿಗೂ ನೇರಾನೇರ ಸಂಬಂಧ ಕಂಡುಬರುತ್ತಿದೆ ಎಂದಿದೆ. ಈ ಅಂಶಗಳನ್ನು ಅವಲೋಕಿಸಿದಾಗ, ಮಾನಸಿಕ ಆರೋಗ್ಯದ ವಿಚಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ನೀತಿ ನಿರೂಪಿತವಾಗುವ ತುರ್ತು, ಗೋಚರಿಸುತ್ತಿದೆ.
ಪ್ರತಿ ಆಸ್ಪತ್ರೆಗಳಲ್ಲಿ ಮಾನಸಿಕ ಚಿಕಿತ್ಸಕರು, ಶಾಲೆಗಳಲ್ಲಿ ಆಪ್ತ ಸಮಾಲೋಚಕರು ಇರುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಬೇಕಿದೆ. ಇನ್ನು ಮಾನಸಿಕ ಸಮಸ್ಯೆ ಎಂದಾಕ್ಷಣ “ಹುಚ್ಚು’ ಎಂದು, ಮಾನಸಿಕ ಆಸ್ಪತ್ರೆ ಎಂದರೆ “ಹುಚ್ಚಾಸ್ಪತ್ರೆ’ ಎಂಬ ತಪ್ಪುಕಲ್ಪನೆ ದೂರಮಾಡುವತ್ತಲೂ ಪ್ರಯತ್ನ ನಡೆಯಬೇಕಿದೆ. ಸತ್ಯವೇನೆಂದರೆ, ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಲೇ ಇರುತ್ತಾರೆ, ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದಷ್ಟೇ. ಜನರು ಹಿಂಜರಿಕೆಯಿಲ್ಲದೇ ತಮ್ಮ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವಂಥ ವಾತಾವರಣ ಮನೆಯಲ್ಲಿ ಮತ್ತು ಸಮಾಜದಲ್ಲಿ ಸೃಷ್ಟಿಯಾದಾಗ ಮಾತ್ರ ಸ್ವಸ್ಥ ಭಾರತ ನಿರ್ಮಾಣವಾಗಲು ಸಾಧ್ಯ.