Advertisement
ಮಾಸ್ ಲೀಡರ್
Related Articles
Advertisement
ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯರಿಗೆ ಗಟ್ಟಿ ನಾಯಕತ್ವ ತಂದುಕೊಟ್ಟಿದ್ದು ಜನತಾ ಪರಿವಾರ. ಇದರ ಲಾಭವನ್ನು ಪ್ರಾರಂಭದಲ್ಲಿ ಜನತಾ ಪರಿವಾರ, ಬಳಿಕ ಕಾಂಗ್ರೆಸ್ ಪಡೆದುಕೊಂಡಿದೆ. ಸಿದ್ದರಾಮಯ್ಯರನ್ನು ಜನತಾ ಪರಿವಾರ ಸಚಿವ, ಉಪ ಮುಖ್ಯಮಂತ್ರಿ ಮಾಡಿದೆ. ಕಾಂಗ್ರೆಸ್ ಎರಡು ಬಾರಿ ವಿಪಕ್ಷ ನಾಯಕ, ಒಮ್ಮೆ ಮುಖ್ಯಮಂತ್ರಿ ಮಾಡಿದೆ. ಈಗ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಸಿದ್ದರಾಮಯ್ಯ ತಾವಿದ್ದ ಪಕ್ಷ ಹಾಗೂ ಸರಕಾರದಲ್ಲಿ ತಮ್ಮ ಸ್ಥಾನವನ್ನು ಹಕ್ಕು, ಪಾಲು, ದುಡಿಮೆಗೆ ಪ್ರತಿಫಲ ಎಂಬಂತೆ ಅಧಿಕಾರಯುತವಾಗಿ ಪಡೆಯುತ್ತಲೇ ಸಾಗಿದ್ದಾರೆ.
ತಾಲೂಕು ಬೋರ್ಡ್ ಸದಸ್ಯತ್ವದಿಂದ ಸಿಎಂ ಸ್ಥಾನಕ್ಕೆ
ಮೈಸೂರು ತಾಲೂಕು ಬೋರ್ಡ್ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಗಾದಿಗೆ ಎರಡನೇ ಬಾರಿಗೆ ಏರುವವರೆಗಿನ ಸಿದ್ದರಾಮಯ್ಯ ಅವರ 45 ವರ್ಷಗಳ ರಾಜಕೀಯ ಜೀವನ ಏಳು-ಬೀಳುಗಳಿಂದ ಕೂಡಿದಂಥದ್ದು. ಇದೇ ವೇಳೆ ಸುಮಾರು 26 ವರ್ಷಗಳ ಕಾಲ ಸಚಿವ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ವಿಪಕ್ಷ ನಾಯಕರಾಗಿದ್ದಾರೆ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಇಷ್ಟೊಂದು ದೀರ್ಘ ಕಾಲ ಅಧಿಕಾರದಲ್ಲಿದ್ದವರು ಅಪರೂಪ.
ಗೌಡರ ಆದೇಶ ಧಿಕ್ಕರಿಸಿ ಪಕ್ಷದಿಂದ ಹೊರಬಿದ್ದರು
ಸಿದ್ದರಾಮಯ್ಯ ಅವರು ಧರ್ಮ ಸಿಂಗ್ ಸಂಪುಟದಲ್ಲಿ ಡಿಸಿಎಂ ಆಗಿದ್ದಾಗ ಅಹಿಂದ ಸಮಾವೇಶ ನಡೆಸಲು ಆರಂಭಿಸಿದರು. ಆಗ ಹುಬ್ಬಳ್ಳಿಯ ಅಹಿಂದ ಸಮಾವೇಶಕ್ಕೆ ಹೋಗಬಾರದೆಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ತಮ್ಮ ಪಕ್ಷದ ಸಿದ್ದರಾಮಯ್ಯರಿಗೆ ತಾಕೀತು ಮಾಡಿದ್ದರು. ಅಹಿಂದ ಸಮಾವೇಶಕ್ಕೆ ಹೋದರೆ ಅಧಿಕಾರದಿಂದ ಕೆಳಗಿಳಿಸುವುದಾಗಿ ಎಚ್ಚರಿಸಿದ್ದರು. ಕಾಂಗ್ರೆಸ್ ಈ ಅಹಿಂದ ಸಮಾವೇಶದಲ್ಲಿ ಭಾಗವಹಿಸಬಾರದೆಂದು ನಿರ್ಣಯ ಅಂಗೀಕರಿಸಿತು. ಸಿದ್ದರಾಮಯ್ಯ ತಮ್ಮ ಕಾಲಿನ ಮೂಳೆ ಮುರಿದಿದ್ದರೂ ಈ ಸಮಾವೇಶದಲ್ಲಿ ಪಾಲ್ಗೊಂಡು ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರ ಕಳೆದುಕೊಂಡರು. ಆಗ ಜೆಡಿಯುನಲ್ಲಿದ್ದ ಬಸವರಾಜ ಬೊಮ್ಮಾಯಿ ಕೂಡ ಈ ಸಮಾವೇಶದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯರನ್ನು ಬೆಂಬಲಿಸಿದ್ದರು.
ಸಿದ್ದರಾಮಯ್ಯರನ್ನು 2006ರಲ್ಲಿ ಜೆಡಿಎಸ್‌ನಿಂದ ಹೊರ ಹಾಕಿದಾಗ ಅವರು ಅಹಿಂದ ಚಳವಳಿಯನ್ನು ಚುರುಕುಗೊಳಿಸಿದರು. ಅಖೀಲ ಭಾರತ ಪ್ರಗತಿಪರ ಜನತಾದಳಕ್ಕೆ ಮತ್ತೆ ಚಾಲನೆ ಕೊಟ್ಟರು. ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಈ ಪಕ್ಷದ ವತಿಯಿಂದಲೇ ಎದುರಿಸಿದರು. ಆದರೆ ಪ್ರಾದೇಶಿಕ ಪಕ್ಷ ಕಟ್ಟುವ ಧೈರ್ಯವನ್ನು ಸಿದ್ದರಾಮಯ್ಯ ಯಾವತ್ತೂ ಮಾಡಲಿಲ್ಲ. ಅವರಿಗೆ ಪ್ರಾದೇಶಿಕ ಪಕ್ಷದ ಮೂಲಕ ರಾಜ್ಯದಲ್ಲಿ ಸ್ವತಂತ್ರವಾಗಿ ಸರಕಾರ ರಚನೆ ಅಷ್ಟು ಸುಲಭದ ಮಾತಲ್ಲ ಎಂಬ ವಾಸ್ತವದ ಅರಿವು ಇದೆ. ಹೀಗಾಗಿಯೇ ಅವರು 2006ರಲ್ಲಿ ಕಾಂಗ್ರೆಸ್ ಕೈ ಹಿಡಿದರು.
ಕನ್ನಡ ಪ್ರೇಮಿ
ಸಿದ್ದರಾಮಯ್ಯ ಎಲ್ಲ ಸಮಾಜವಾದಿಗಳಂತೆ ಭಾಷಾ ಪ್ರೇಮಿ. ಕನ್ನಡ ಭಾಷೆಯ ವಿಚಾರಕ್ಕೆ ಬಂದಾಗ ಅವರ ಬದ್ಧತೆ ಪ್ರಶ್ನಾತೀತ. ಅವರ ಮೊದಲ ಅಧಿಕಾರ, ಹುದ್ದೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನವೇ ಆಗಿತ್ತು.
ಕುಹಕವಾಡಿದ್ದವರ ಬಾಯಿ ಮುಚ್ಚಿಸಿದ ಬಜೆಟ್
ಸಿದ್ದರಾಮಯ್ಯ ಬಿಎಸ್‌ಸಿ ಓದಿದ ಬಳಿಕ ಕಾನೂನು ಪದವಿ ಪಡೆದರು. ಅವರು ರಾಜಕಾರಣಕ್ಕೆ ಬರಲು ಆಗ ಸಮಾಜವಾದಿ ಚಳವಳಿಯಲ್ಲಿದ್ದ ರೈತ ನಾಯಕ ಪ್ರೊ| ಎಂ. ಡಿ. ನಂಜುಂಡಸ್ವಾಮಿ ಕಾರಣ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಖಾತೆ ಹೊತ್ತಾಗ ಸಿದ್ದರಾಮಯ್ಯರಿಗೆ ಕುರಿ ಎಣಿಸಲು ಬರುವುದಿಲ್ಲ. ಇನ್ನು ಹಣಕಾಸು ಇಲಾಖೆ ಹೇಗೆ ನಿಭಾಯಿಸುತ್ತಾರೆ ಎಂದು ಕುಹಕವಾಡಿದವರೂ ಇದ್ದಾರೆ. ಆದರೆ ಸಿದ್ದರಾಮಯ್ಯ ಪ್ರಥಮ ಬಜೆಟ್‌ನಲ್ಲಿಯೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.
ಅಹಿಂದ ಪರವಾಗಿ ಗಟ್ಟಿ ಧ್ವನಿ
ಸಿದ್ದರಾಮಯ್ಯ 2013ರಿಂದ 2018ರ ವರೆಗೆ ನನ್ನದು ಅಹಿಂದ ಸರಕಾರ ಎನ್ನುತ್ತಿದ್ದರು. ಇದಕ್ಕೆ ಕೆಲವು ಸ್ವಪಕ್ಷೀಯರೇ ವಿರೋಧಿಸಿದಾಗಲೂ ಸಿದ್ದರಾಮಯ್ಯ ಜಗ್ಗಲಿಲ್ಲ. ನನ್ನದು ಅಹಿಂದ ಸರಕಾರ ಎಂದು ಕರೆದರೂ ನನಗೆ ಮುಜುಗರ ಇಲ್ಲ. ನಾನು ಅಹಿಂದ ಪರ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಮಸೂದೆಗೆ ಒಳಪಡಿಸುವುದು, ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ ಯೋಜನೆ ಆದೇಶವನ್ನು ಹೊರಡಿಸಿದ್ದರು. ವಿವಾದಕ್ಕೀಡಾದ ಬಳಿಕ ಅದನ್ನು ಹಿಂಪಡೆದರು. ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸಿ ಕಟು ಟೀಕೆಗೆ ಒಳಗಾದರು.
ಉಪನ್ಯಾಸಕರಾಗಿದ್ದರು
ಸಿದ್ದರಾಮಯ್ಯ ಮೈಸೂರಿನ ಕಾನೂನು ಕಾಲೇಜೊಂದರಲ್ಲಿ ಸುಮಾರು ಮೂರು ವರ್ಷಗಳ ಕಾಲ ಪಾರ್ಟ್‌ಟೈಂ ಉಪನ್ಯಾಸಕರಾಗಿದ್ದರು. ಅವರೇ ಹೇಳುವಂತೆ ಅವರಿಗೆ ವಕೀಲಿ ವೃತ್ತಿಗಿಂತ ಕಾನೂನು ಪಾಠ ಮಾಡುವುದೇ ಹೆಚ್ಚು ಇಷ್ಟವಾಗಿತ್ತು.
ಸಮಾಜವಾದಿ ಚಳವಳಿ ಮೂಲಕ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಂಡ ಸಿದ್ದರಾಮಯ್ಯ ಜಾತಿಬದ್ಧ ಪಾಳೆಗಾರಿಕೆ ರಾಜಕಾರಣವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಸುಮಾರು 20 ವರ್ಷಗಳಿಂದ ಕರ್ನಾಟಕದ ರಾಜಕಾರಣವನ್ನು ಅವರಷ್ಟು ಆವರಿಸಿಕೊಂಡ ಮತ್ತೂಬ್ಬರಿಲ್ಲ. ಯಾವುದೇ ರಾಜಕೀಯ ಪಕ್ಷದ ನಡೆ ಇರಲಿ ಅದು ಸಿದ್ದರಾಮಯ್ಯ ಅವರನ್ನು ಗಮನದಲ್ಲಿಟ್ಟುಕೊಂಡೇ ದಾಳ ಉರುಳಿಸಬೇಕಾದ ಪರಿಸ್ಥಿತಿ. ಸಿದ್ದರಾಮಯ್ಯ ಅವರ ಸುತ್ತಲೇ ಕರ್ನಾಟಕದ ರಾಜಕಾರಣ ಗಿರಕಿ ಹೊಡೆದಿದೆ.
ಕೂಡ್ಲಿ ಗುರುರಾಜ