Advertisement

ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ ಮತ್ತು ಪ್ರತಿಕ್ರಿಯೆ ಆಗುತ್ತದೆ: ಸಿಎಂ ಬಸವರಾಜ್ ಬೊಮ್ಮಾಯಿ

11:28 AM Oct 13, 2021 | Team Udayavani |

ಮಂಗಳೂರು : ಸಮಾಜದಲ್ಲಿ ಹಲವಾರು ಭಾವನೆಗಳು ಇದ್ದು,ಅವುಗಳಿಗೆ ಧಕ್ಕೆ ಬಾರದ ರೀತಿ ನಡೆದುಕೊಳ್ಳಬೇಕು. ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ ಮತ್ತು ಪ್ರತಿಕ್ರಿಯೆ ಆಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬುಧವಾರ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ.

Advertisement

ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಹಾಗೂ ಮಂಗಳೂರಿನ ಕುದ್ರೋಳಿ ದೇವಸ್ಥಾನದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿ’ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಸಮಾಜದಲ್ಲಿ ನಾವೆಲ್ಲ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ,ಇದು ಬಹಳ ಸೂಕ್ಷ್ಮವಾಗಿರುವ ವಿಚಾರ. ಸಮಾಜದಲ್ಲಿ ಹಲವಾರು ಭಾವನೆಗಳು ಇದ್ದು, ಅವುಗಳಿಗೆ ಧಕ್ಕೆ ಬಾರದ ರೀತಿ ನಡೆದುಕೊಳ್ಳಬೇಕು. ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ ಮತ್ತು ಪ್ರತಿಕ್ರಿಯೆ ಆಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಕಾನೂನು ಸುವ್ಯವಸ್ಥೆ ಜೊತೆ ಸಾಮಾಜಿಕ ಸಾಮರಸ್ಯ ಕಾಪಾಡೋದು ಸರಕಾರದ ಕರ್ತವ್ಯ. ಯುವಕರು ಸಹ ಸಾಮಾಜಿಕ ಭಾವನೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ನೈತಿಕತೆ ಇಲ್ಲದೆ ಸಮಾಜದಲ್ಲಿ ಬದುಕುವುದಕ್ಕೆ ಆಗುವುದಿಲ್ಲ. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ನಮ್ಮ ನೈತಿಕತೆ ಮೇಲೆ ಇದೆ. ಇಲ್ಲಿ ಪ್ರತಿಯೊಬ್ಬರದ್ದು ಹೊಣೆಗಾರಿಕೆ ಇದೆ’ ಎಂದರು.

Advertisement

ಹೆಚ್ಚಿನ ಕಲ್ಲಿದ್ದಲು ಕೇಳಿದ್ದೇವೆ

ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಕಳೆದ ವಾರ ಎಂಟು ರೇಖ್ ಕಲ್ಲಿದ್ದಲು ಬಂದಿದ್ದು,ಕೇಂದ್ರ ಕಲ್ಲಿದ್ದಲು ಸಚಿವರ ಜೊತೆ ಮಾತನಾಡಿದ್ದೇವೆ. ಇನ್ನೂ ಮೂರು ರೇಖ್ ಕಲ್ಲಿದ್ದಲು ಬಂದರೆ ಹೆಚ್ಚು ಅನುಕೂಲ ಆಗುತ್ತದೆ, ಅದಕ್ಕೆ ವ್ಯವಸ್ಥೆಗಳನ್ನು‌ ಮಾಡುತ್ತಿದ್ದೇವೆ’ ಎಂದರು.

‘ಗಡಿ ಭಾಗದಲ್ಲಿ ಕೋವಿಡ್ ನಿಯಂತ್ರಣ ‌ಮಾರ್ಗಸೂಚಿ ಸಡಿಲಿಕೆ ಬಗ್ಗೆ ದಸರಾ ಬಳಿಕ ತಜ್ಞರ ಸಭೆ ಕರೆದು ಸ್ಥಿತಿಗತಿಗಳ ಬಗ್ಗೆ ಚರ್ಚಿಸುತ್ತೇವೆ ಹಾಗೂ‌ ಗಡಿ ಭಾಗದ ಲಸಿಕೆ ಪ್ರಗತಿ ಬಗ್ಗೆ ವಿಚಾರಿಸಿ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ. ಪ್ರಾಥಮಿಕ ಶಾಲೆಗಳನ್ನ ತೆರೆಯುವ ಬಗ್ಗೆಯೂ ಅದೇ ಸಭೆಯಲ್ಲಿ ಚರ್ಚಿಸುತ್ತೇವೆ’ ಎಂದು ತಿಳಿಸಿದರು.

ಆತ್ಮೀಯ ಸ್ವಾಗತ

ಜಿಲ್ಲಾಡಳಿತದ ವತಿಯಿಂದ ಮುಖ್ಯಮಂತ್ರಿ ಅವರನ್ನು ಆತ್ಮೀಯವಾಗಿ ಸ್ವಾಗತಸಲಾಯಿತು. ಸಚಿವರಾದ ಸುನೀಲ್ ಕುಮಾರ್, ಶಾಸಕರಾದ ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಸೇರಿದಂತೆ ಹಿರಿಯ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next