ಅಮ್ಮ ಎನ್ನುವುದು ಕೇವಲ ಒಂದು ಸಂಬಂಧ ಮಾತ್ರವಲ್ಲ. ಆ ಸಂಬಂಧವನ್ನು ಅಕ್ಷರಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಮ್ಮ ಎಂದರೆ ತಾಯಿ, ಮಾತೆ, ಜನನಿ ಎಂಬ ಅರ್ಥಗಳಿರುತ್ತವೆ. ಅಮ್ಮ ಎಂದರೆ ಮಕ್ಕಳ ಪಾಲಿನ ಜೀವಸೆಲೆ. ಅಮ್ಮನ ಬಗೆಗೆ ಬರೆಯುವುದೆಂದರೆ ಅದು ನಮ್ಮೊಳಗೆ ನಾವೇ ಸಂಭ್ರಮಪಟ್ಟ ಹಾಗೆ. ನಾವು ಬೆಳೆದಂತೆಲ್ಲಾ ಅಮ್ಮ ಬೇರೆ ಬೇರೆ ರೂಪದಲ್ಲಿ ಕಾಣಿಸುತ್ತಾ ಹೋಗುತ್ತಾರೆ. ಶಾಲೆಯ ದಿನದಲ್ಲಿ ಒಂದು ತರಹ ಕಟ್ಟುನಿಟ್ಟಿನ ಅಧಿಕಾರಿ, ನಾವು ಬೆಳೆದಂತೆಲ್ಲಾ ಅಮ್ಮ ನಮಗೆ ಮಾರ್ಗದರ್ಶಿ, ಶಿಕ್ಷಕಿ ತರಹ ಕಾಣುತ್ತಾರೆ. ಕಾಲೇಜು ದಿನದಲ್ಲಿ ಗೆಳತಿ ಆಗಿ ಕಾಣುತ್ತಾರೆ.
ನಾವು ಭೂಮಿ ಮೇಲೆ ಇರುವುದಕ್ಕೆ ಕಾರಣವೇ ಅಮ್ಮ. ಭೂಮಿ ಮೇಲಿನ ಅತ್ಯಂತ ಶಕ್ತಿಯುತವಾದ ಜೀವ ಎಂದರೆ ಅದು ಅಮ್ಮ. ಅಮ್ಮ ಎಂದರೆ ಪ್ರೀತಿ, ಮಮತೆ, ಆತ್ಮಸ್ಥೈರ್ಯ. ಹೀಗೆ ಎಲ್ಲವನ್ನೂ ತುಂಬಿಕೊಂಡಿರುವ ಜಗತ್ತು.ನಾವು ಮಾಡುವ ತುಂಟತನವನ್ನು ಸಹಿಸಿಕೊಂಡು ನಮ್ಮನ್ನು ಬೆಳೆಸಿದ್ದಾರೆ. ಬೆಳೆಸಿದರೂ ಅವರ ಕಾಳಜಿ ಇನ್ನೂ ಹೋಗಿಲ್ಲ.
ಅಮ್ಮ ಎಂದರೆ ಏನೋ ಹರುಷವು.ಕಣ್ಣಿಗೆ ಕಾಣುವ ಮೊದಲ ದೇವರು ಅಮ್ಮ. ಅಮ್ಮನ ಮಡಿಲಿಗಿಂತ ಹೆಚ್ಚಿನ ರಕ್ಷಣೆ ಬೇರೆ ಎಲ್ಲೂ ಸಿಗುವುದಿಲ್ಲ. ಅಮ್ಮನ ಆಶೀವಾರ್ದವೇ ನಮಗೆ ಶ್ರೀರಕ್ಷೆ.ಮನೆಯ ಎಂತಹ ಪರಿಸ್ಥಿತಿಯಲ್ಲೂ ಸಹ ಮನೆಯನ್ನು ನಿಭಾಯಿಸುವ ಶಕ್ತಿ ಅಮ್ಮನಲ್ಲಿ ಇರುತ್ತದೆ. ಅದನ್ನು ನಾವು ಮೆಚ್ಚಲೇಬೇಕು. ಮಕ್ಕಳ ಬದುಕನ್ನು ಸುಂದರವಾಗಿ ರೂಪಿಸುವಲ್ಲಿ ಸತತವಾಗಿ ಪರಿಶ್ರಮ ಪಡುವ ಅಮ್ಮನ ಮಮತೆಗೆ ಬೆಲೆ ಕಟ್ಟಲಿಕ್ಕೆ ಆಗುವುದಿಲ್ಲ. ವೈಯಕ್ತಿಕ ಜೀವನದ ಏಳುಬೀಳುಗಳ ನಡುವೆಯೂ ಮಕ್ಕಳಿಗಾಗಿ ಎಂತಹ ತ್ಯಾಗಕ್ಕೂ ಸದಾ ಸಿದ್ದಳಿರುತ್ತಾಳೆ.
ಅಮ್ಮ ಖುಷಿಯಾಗಿದ್ದರೆ ಕುಟುಂಬ ಖುಷಿಯಾಗಿರುತ್ತದೆ. ಕುಟುಂಬ ಖುಷಿಯಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಅಂದರೆ ಅಮ್ಮನ ಪ್ರೀತಿ ವಿಶ್ವದಲ್ಲೇ ದೊಡ್ಡ ಪ್ರೀತಿ.ಸ್ವಾಮಿ ವಿವೇಕಾನಂದರು ಒಂದು ಬಾರಿ ಅವರ ತಾಯಿಯ ಬಗ್ಗೆ ಹೀಗೆ ಹೇಳಿದ್ದಾರೆ. ಈಗ ನಾನು ಏನಾಗಿದ್ದೇನೋ ಅದಕ್ಕೆ ಕಾರಣ ನಮ್ಮ ಅಮ್ಮ. ನಾನು ಇನ್ನೇನೇ ಆದರೂ ಆಕೆಯ ಋಣವನ್ನು ತೀರಿಸುವುದಕ್ಕಂತೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೋಪ ಬಂದಾಗ ಅಡುಗೆ ಮಾಡಿ, ಊಟ ಮಾಡದೆ ಮಲಗುವವಳು ಅಮ್ಮ .
ನನ್ನ ಪ್ರೀತಿಯ ಅಮ್ಮನಿಗೆ ನನ್ನ ಪ್ರೀತಿಯ ನಮನಗಳು.
ರಾಧಾ ಪಿ ಸೋಮಯಾಜಿ
ಸಾಲಿಗ್ರಾಮ