ಮಲ್ಪೆ: ಸಮಾಜದ ಮೂಲಬೇರು ಕುಟುಂಬ, ಸಂಸ್ಕಾರ ಯುಕ್ತ ಕುಟುಂಬದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಮನೆಯೇ ಮೊದಲ ಪಾಠಶಾಲೆಯಾಗಬೇಕು. ತಂದೆ ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರಯುಕ್ತ ಶಿಕ್ಷಣವನ್ನು ಮನೆ ಯಲ್ಲಿ ನೀಡಬೇಕು. ಮನೆಯೇ ದೇವಾಲಯವಾದಾಗ ಉತ್ತಮ ವ್ಯಕ್ತಿ ನಿರ್ಮಾಣವಾಗಲು ಸಾಧ್ಯ ಎಂದು ಮಂಗಳೂರು ವಿಭಾಗದ ಕುಟುಂಬ ಪ್ರಭೋಧಿನಿ ಪ್ರಮುಖ್ ಗಜಾನನ ಪೈ ಹೇಳಿದರು.
ಅವರು ಗುರುವಾರ ಮಲ್ಪೆ ಕಡಲತೀರ ಜ್ಞಾನಜ್ಯೋತಿ ಭಜನಾ ಮಂದಿರದ 43ನೇ ವಾರ್ಷಿಕ ಮಂಗಲೋತ್ಸವದ ಪ್ರಯುಕ್ತ ಮಂದಿರದಲ್ಲಿ ನಡೆದ ಕುಟುಂಬ ಪ್ರಭೋಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉಡುಪಿ ಕಿದಿಯೂರು ಹೋಟೆಲಿನ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಮಾಜಿ ಮೊಕ್ತೇಸರ ರಾಘವೇಂದ್ರ ರಾವ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಲ್ಪೆ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಜನಾರ್ದನ ತಿಂಗಳಾಯ, ಉಡುಪಿ ಹಸಿಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಕೊಡವೂರು ನಗರಸಭಾ ಸದಸ್ಯ ವಿಜಯ ಕೊಡವೂರು, ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಮತ್ಸ್ಯೋದ್ಯಮಿ ಸಂತೋಷ್ ಸಾಲ್ಯಾನ್, ಮಲ್ಪೆ ಸಿದ್ಧ ಸಮಾಧಿಯೋಗ ಬಾಲಕೃಷ್ಣ ಮೆಂಡನ್ ಉಪಸ್ಥಿತರಿದ್ದರು.
ಭಜನಾ ಮಂದಿರದ ಅಧ್ಯಕ್ಷ ಧನಂಜಯ ಕುಂದರ್, ಮಾತೃ ಮಂಡಳಿಯ ಅಧ್ಯಕ್ಷೆ ಚಂದ್ರಾವತಿ ಗಂಗಾಧರ್ ವೇದಿಕೆಯಲ್ಲಿದ್ದರು. ಮಂದಿರದ ಗೌರವಾಧ್ಯಕ್ಷ ಪಾಂಡುರಂಗ ಮಲ್ಪೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶೇಖರ ತಿಂಗಳಾಯ ವಂದಿಸಿದರು.