ಇತ್ತೀಚೆಗಂತೂ ಕನ್ನಡ ಚಿತ್ರ ರಂಗದಲ್ಲಿ ಹೊಸಬರು ಹೊಸ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅದು ಕಥೆಯಿಂದ ಹಿಡಿದು ಮೇಕಿಂಗ್‌ವರೆಗೂ. ಈಗ ಅದೇ ರೀತಿ ಹೊಸಬರ ತಂಡ ಮಾಡಿದ ಸಿನಿಮಾದ ಟ್ರೇಲರ್‌ವೊಂದು ಗಮನ ಸೆಳೆಯುತ್ತಿದೆ. ಅದು “ವೀಲ್‌ಚೇರ್ ರೋಮಿಯೋ’.
ಹೌದು, ಹೀಗೊಂದು ಚಿತ್ರ ಸದ್ದಿಲ್ಲದೇ ಆರಂಭವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರಿಗೆ ಚಿತ್ರದಲ್ಲಿ ನಿರ್ದೇಶಕರು ಹೊಸ ಬಗೆಯ ಕಥೆ ಹೇಳಲು ಹೊರಟಿರೋದು ಎದ್ದು ಕಾಣುತ್ತದೆ.
ವೀಲ್‌ಚೇರ್ ನಲ್ಲಿರುವ ವಿಕಲಚೇತನೊಬ್ಬನ ಆಸೆ ಒಂದು ಕಡೆಯಾದರೆ, ಅಂಧ ಯುವತಿಯೊಬ್ಬಳ ಕಥೆ ಈ ಚಿತ್ರದಲ್ಲಿ ಹೇಳಲಾಗಿದೆ. ನಟರಾಜ್ ಜಿ ಈ ಚಿತ್ರದ ನಿರ್ದೇಶಕರು.
ಚಿತ್ರದ ಬಗ್ಗೆ ಮಾತನಾಡುವ ಅವರು, “ಇದು ಕಾಮಿಡಿ ಹಾಗೂ ಎಮೋಶನ್ ಇರುವಂತಹ ಸಿನಿಮಾ. ಒಬ್ಬ ತಂದೆ ತನ್ನ ಮಗನ ಬಯಕೆಯನ್ನು ಈಡೇರಿಸಲು ಯೋಚನೆ ಮಾಡುವ ರೀತಿ ಹಾಗೂ ಅದಕ್ಕೆ ಆತ ಹುಡುಕುವ ಮಾರ್ಗವನ್ನು ಇಲ್ಲಿ ಹೇಳಲಾಗಿದೆ. ಇಡೀ ತಂಡದ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ’ ಎನ್ನುತ್ತಾರೆ.
ಚಿತ್ರದಲ್ಲಿ ರಾಮ್ ಚೇತನ್ ನಾಯಕರಾಗಿ ನಟಿಸಿದ್ದಾರೆ. ಮಯೂರಿ ಈ ಚಿತ್ರದ ನಾಯಕಿ. ಉಳಿದಂತೆ ಚಿತ್ರದಲ್ಲಿ ಸುಚೇಂದ್ರಾ ಪ್ರಸಾದ್, ರಂಗಾಯಣ ರಘು, ತಬಲಾ ನಾಣಿ, ಗಿರಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ, ಬಿ.ಜೆ.ಭರತ್ ಸಂಗೀತವಿದೆ. ಚಿತ್ರವನ್ನು ಟಿ.ವೆಂಕಟಾಚಲಯ್ಯ ಹಾಗೂ ಭಾರತಿ ವೆಂಕಟೇಶ್ ನಿರ್ಮಿಸಿದ್ದಾರೆ. ಚಿತ್ರ ಮೇನಲ್ಲಿ ತೆರೆ ಕಾಣಲಿದೆ.