ಪ್ರಸಿದ್ದ ಸಾಮಾಜಿಕ ಜಾಲತಾಣ ವಾಟ್ಸಪ್ ತನ್ನ ಕಾರ್ಯಚಟುವಟಿಕೆಯನ್ನು ಸುಗಮಗೊಳಿಸಲು ಮತ್ತು ಜನಸ್ನೇಹಿಯನ್ನಾಗಿಸಲು ಪ್ರಯತ್ನ ಪಡುತ್ತಲೇ ಇರುತ್ತದೆ. ತನ್ನ ಗ್ರಾಹಕರಿಗೆ ಆಗಾಗ್ಗೆ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುತ್ತಿರುತ್ತದೆ. ಇದೀಗ ಗ್ರೂಪ್ ಅಡ್ಮಿನ್ ಗಳಿಗೆ ವಾಟ್ಸಪ್ ಹೊಸ ಸವಲತ್ತು ನೀಡಿದೆ.
ವಾಟ್ಸಪ್ ಗ್ರೂಪ್ ಅಡ್ಮಿನ್ ಗೆ ಆ ಗ್ರೂಪ್ ನಲ್ಲಿ ಬಂದ ಯಾವುದೇ ಸಂದೇಶವನ್ನು ಅಳಿಸುವ ಆಯ್ಕೆಯನ್ನು ವಾಟ್ಸಪ್ ನೀಡಲಿದೆ. ಆ ಗುಂಪಿನಲ್ಲಿ ಯಾವ ಸದಸ್ಯನೇ ಸಂದೇಶ ಕಳುಹಿಸಿರಲಿ ಅದನ್ನು ಎಲ್ಲರಿಗೂ ಡಿಲೀಟ್ ಆಗುವಂತೆ (ಡಿಲೀಟ್ ಎವರಿವನ್) ಅಡ್ಮಿನ್ ಅವಕಾಶ ನೀಡಲಾಗುತ್ತದೆ. ಆ ಗ್ರೂಪ್ ನಲ್ಲಿ ಎಷ್ಟು ಮಂದಿ ಅಡ್ಮಿನ್ ಗಳಿದ್ದರೂ ಅವರಿಗೆಲ್ಲರಿಗೂ ಈ ಆಯ್ಕೆ ಸಿಗಲಿದೆ.
ಈ ಆಯ್ಕೆ ಆಂಡ್ರಾಯ್ಡ್ ಬಳಕೆದಾರರಿಗೆ ಶೀಘ್ರದಲ್ಲಿ ಸಿಗಲಿದೆ ಎಂದು ವರದಿ ತಿಳಿಸಿದೆ. ಗ್ರೂಪ್ ಅಡ್ಮಿನ್ ಸಂದೇಶ ಅಳಿಸಿದಾಗ “ದಿಸ್ ವಾಸ್ ಡಿಲೀಟೆಡ್ ಬೈ ಆನ್ ಅಡ್ಮಿನ್” ಎಂಬ ಸಂದೇಶ ಇತರ ಸದಸ್ಯರಿಗೆ ಕಾಣಿಸುತ್ತದೆ.
ಇದನ್ನೂ ಓದಿ:ಟೆಸ್ಟ್ ನಾಯಕರಾಗಬಲ್ಲ ನಾಲ್ಕೈದು ಆಟಗಾರರು ಭಾರತ ತಂಡದಲ್ಲಿದ್ದಾರೆ: ಬ್ರೆಟ್ ಲೀ
ವಾಟ್ಸಪ್ ಗುಂಪುಗಳಲ್ಲಿ ಹರಿದಾಡುವ ಅಶ್ಲೀಲ ಮತ್ತು ಆಕ್ಷೇಪಾರ್ಹ ಸಂದೇಶಗಳನ್ನು ನಿಯಂತ್ರಿಸಲು ಈ ಆಯ್ಕೆ ಗ್ರೂಪ್ ಅಡ್ಮಿನ್ ಗಳಿಗೆ ಸಹಾಯ ಮಾಡುತ್ತದೆ.